Site icon Vistara News

Assembly Session: ದೋಖಾ ಎಂದ ಬಿಜೆಪಿ, ಬಂಡಲ್‌ ಎಂದ ಸರ್ಕಾರ: ದಿನವಿಡೀ ಗಲಾಟೆಗೆ ಕಲಾಪ ಢಮಾರ್‌ !

Siddaramaiah ut khader basavaraj bommai in karnataka assembly session

ವಿಧಾನಸಭೆ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕದ ಕುರಿತು ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಕಾರಣದಿಂದಾಗಿ ವಿಧಾನಸಭೆ (Assembly Session) ರಣರಂಗವಾಯಿತು. ವಿಧಾನಸಭೆಯಲ್ಲೂ ಇದೇ ಗದ್ದಲ ಮುಂದುವರಿದು ಸದನದ ಎರಡನೇ ದಿನವೇ ಕಾರ್ಯಕಲಾಪಗಳು ಬಲಿಯಾದವು. ವಿಧಾನಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಶಾಸಕರಿಗೆ ಮೂರು ದಿನ ತರಬೇತಿ ಕೊಡಿಸಿ ಪೀಠದಲ್ಲಿ ಆಸೀನರಾಗಿದ್ದ ಸ್ಪೀಕರ್‌ ಯು.ಟಿ. ಖಾದರ್‌, ಸದಸ್ಯರನ್ನು ನಿಭಾಯಿಸಲು ಮೊದಲ ದಿನವೇ ಹೈರಾಣಾದರು.

ಬೆಳಗ್ಗೆ ಹಗ್ಗಜಗ್ಗಾಟದಿಂದಾಗಿ ವಿಧಾನಸಭೆ ಮುಂದೂಡಿಕೆ ಆಗಿತ್ತು. ಎರಡನೇ ಬಾರಿ ಸಭೆ ಸೇರುವುದಕ್ಕೂ ಮುನ್ನ ಸಭಾಧ್ಯಕ್ಷರ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯಿತು. ಸಂಧಾನ ಸಭೆಯ‌ ನಂತರ ಬಿಜೆಪಿ ಶಾಸಕರ ಸಭೆ ನಡೆಯಿತು. ವಿಧಾನಸಭೆಯ ಪ್ರತಿಪಕ್ಷ ನಾಯಕರ ಕಚೇರಿಯಲ್ಲಿ ಸಭೆಯಲ್ಲಿ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಸುನಿಲ್‌ಕುಮಾರ್, ಮಾಜಿ ಗೃಹ ಸಚಿವ ಅರಗ ಜ್ಙಾನೇಂದ್ರ ಉಪಸ್ಥಿತರಿದ್ದರು. ಪ್ರತಿಭಟನೆ ಮುಂದುವರಿಕೆ ಮಾಡಲು ಈ ಸಭೆಯಲ್ಲಿ ನಿರ್ಧರಿಸಲಾಯಿತು.

ಮತ್ತೆ ಸದನ ಆರಂಭ ಆಗುತ್ತಿದ್ದಂತೆ ಬಿಜೆಪಿ ಧರಣಿ ಮುಂದುವರಿಕೆಯಾಯಿತು. ದೋಖಾ‌ ದೋಖಾ ಎಂದು ಸಭಾಧ್ಯಕ್ಷರ ಎದುರು ತೆರಳಿ ಬಿಜೆಪಿ‌ ಸದಸ್ಯರ ಘೋಷಣೆ ಮುಂದುವರಿಯಿತು. ಇತ್ತ ಬಿಜೆಪಿ ವಿರುದ್ಧ ಆಡಳಿತ ಪಕ್ಷದ ಸದಸ್ಯರೂ ಧಿಕ್ಕಾರ ಕೂಗಿದರು. ಬಂಡಲ್ ಬಿಜೆಪಿ ಎಂದು ಕಾಂಗ್ರೆಸ್ ಸದಸ್ಯರು ಕೂಗಿದರೆ ಇತ್ತ ಕಡೆಯಿಂದ ಕಾಂಗ್ರೆಸ್ ಮೋಸ ಎಂದು ಬಿಜೆಪಿ ಸದಸ್ಯರು ಕೂಗಿದರು.

ಎಲ್ಲರೂ ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳಿ ಎಂದು ಸ್ಪೀಕರ್ ಹೇಳಿದರೂ ಬಿಜೆಪಿ ಸದಸ್ಯರು ಕೇಳದೆ ಪ್ರತಿಭಟನೆ ಮುಂದುವರಿಸಿದರು. ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ಆರಂಭ ಮಾಡಲಾಯಿತು. ಬಿಜೆಪಿ ನಾಯಕರಿಂದ ಘೋಷಣೆ ಮುಂದುವರಿಯಿತು.

ಹಳೇ ಫ್ರೆಂಡ್‌ ವಿರುದ್ಧ ತಿರುಗಿಬಿದ್ದ ಎಚ್‌ಡಿಕೆ

ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ಕಾರದ ಡಿಎನ್ಎಯಲ್ಲಿಯೇ ದೋಖಾವಿದೆ. ಸ್ಪೀಕರ್ ಅವರೇ ನಿಮಗೂ ದೋಖಾ ಮಾಡಿದ್ದಾರೆ, ನಿಮಗೂ ಮೇಲೆ ಕೂರಿಸಿದ್ದಾರೆ ಎಂದರು. ಬಿಜೆಪಿ ಧರಣಿಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಜನರೇ ಸುಮ್ಮನೆ ಇದ್ದಾರೆ, ರೈತರಿಗೆ ಬೆಂಬಲ ಬೆಲೆ ಕೊಡೋಕೆ ಆಗಿಲ್ಲ ನಿಮಗೆ. ಕೊಬ್ಬರಿಗೆ ಬೆಂಬಲ ಬೆಲೆ ಸಿಕ್ಕಿಲ್ಲ ಅಂತ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಇಲ್ಲಿಗೆ ಬಂದು ಕೂಗಾಡ್ತೀರಾ ಎಂದು ಗರಂ ಆದರು.

ಶಿವಲಿಂಗೇಗೌಡ ಮಾತಿಗೆ ಕೆರಳಿದ ಎಚ್‌.ಡಿ. ಕುಮಾರಸ್ವಾಮಿ, ಅವರು ಪ್ರತಿಭಟನೆ ಮಾಡ್ತಿದ್ದಾರೆ, ಈ ಶಾಸಕರು (ಶಿವಲಿಂಗೇಗೌಡ) ನಾಚಿಕೆ ಬಗ್ಗೆ ಮಾತಾಡ್ತಾರೆ ಎಂದು ಶಿವಲಿಂಗೇಗೌಡ ವಿರುದ್ಧ ಕುಮಾರಸ್ವಾಮಿ ಮಾತನಾಡಿದರು.

ಪರಿಷತ್‌ನಲ್ಲೂ ಗದ್ದಲ

ಇತ್ತ ವಿಧಾನ ಪರಿಷತ್‌ನಲ್ಲೂ ಗದ್ದಲ ಮುಂದುವರಿದಿದ್ದರಿಂದ ಸಭಾಪತಿ ಕಚೇರಿಯಲ್ಲಿ ಸಂಧಾನ ಸಭೆ ನಡೆಸಲಾಯಿತು. ಕಾಂಗ್ರೆಸ್, ಬಿಜೆಪಿ ಸದಸ್ಯರೊಂದಿಗೆ ಬಸವರಾಜ ಹೊರಟ್ಟಿ ಸಂಧಾನ ಸಭೆ ನಡೆಸಿದರು. ಸಭೆಯಲ್ಲಿ ಸಲೀಂ ಅಹಮ್ಮದ್, ಕೋಟ ಶ್ರೀನಿವಾಸ ಪೂಜಾರಿ, ವೈ. ಎ. ನಾರಾಯಣಸ್ವಾಮಿ, ಶಶೀಲ್‌ ನಮೋಶಿ ಭಾಗಿಯಾಗಿದ್ದರು. ಮತ್ತೆ ಸದನ ಸೇರಿದಾಗಲೂ ಗದ್ದಲ ಮುಂದುವರಿದಾಗ ಕಲಾಪವನ್ನು ಮುಂದೂಡಲಾಯಿತು.

ಇದನ್ನೂ ಓದಿ: Assembly Session: ನಿಲುವಳಿಗೆ ʼಮೊಂಡಾಟʼ ಮಾಡಿದ ಬಿಜೆಪಿ: ಇಂತಹ ಸಂಪ್ರದಾಯವೇ ಇಲ್ಲ ಎಂದ ಸಿಎಂ

ಮೊದಲ ದಿನವೇ ದೋಖಾ

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಗೃಹ ಲಕ್ಷ್ಮಿ ಮನೆಯಲ್ಲಿ ಯಾರು ಯಜಮಾನಿ ಅಂತ ಹೇಳಿ ಮನೆಗಳಲ್ಲಿ ಗಲಾಟೆ ಶುರುವಾಗುವಂತೆ ಮಾಡಿದ್ದಾರೆ. ಗೃಹ ಜ್ಯೋತಿ ಯೋಜನೆ ಘೋಷಿಸಿ ಮೂರು ಪಟ್ಟು ಬಿಲ್ ಏರಿಸಿ ಜನರಿಗೆ ಭಾರ ಮಾಡಿದ್ದಾರೆ. ಬಸ್ ಗಳಲ್ಲಿ ಗೊಂದಲ ಹೆಚ್ಚಾಗಿದೆ. ಶಾಲಾ ಮಕ್ಕಳಿಗೆ ಬಸ್ ಇಲ್ಲ. ಕಿಟಕಿಯಲ್ಲಿ ಬಸ್ ಹತ್ತುವಂತಾಗಿದೆ.

ಯುವ ನಿಧಿ ಏನಾಗಿದೆ ಗೊತ್ತಿಲ್ಲ. ಅಕ್ಕಿಯಲ್ಲಿ ದೊಡ್ಡ ಗೋಲ್‌ಮಾಲ್ ನಡೆಯುತ್ತಿದೆ. ಎಷ್ಟು ಅಕ್ಕಿ ಕೊಡುತ್ತಾರೆ ಗೊತ್ತಿಲ್ಲ. ಈ ಸರ್ಕಾರದ ಮುಖವಾಡ ಬಯಲಾಗಿದೆ. ಇವರ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ‌ನಡೆಸಿದರು.
ಗ್ಯಾರಂಟಿ ಯೋಜನೆಗಳ ಗೊಂದಲಗಳ ಕುರಿತು ಚರ್ಚಿಸಲು ನಾವು ಅವಕಾಶ ಕೇಳಿದ್ದೇವೆ. ಅದಕ್ಕೆ ಅವಾಕಶ ಕೊಡದೇ ಸರ್ಕಾರ ಹಠಮಾರಿತನ, ಮೊಂಡತನ ಮಾಡುತ್ತಿದೆ. ಸಭಾಧ್ಯಕ್ಷರ ಮೇಲೆ ಒತ್ತಡ ತಂದು ಅವಕಾಶ ಕೊಡದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬರ ಬಂದಿದೆ. ಕುಡಿಯುವ ನೀರಿನ ಸಮಸ್ಯೆ ಇದೆ.‌ ಇದೆಲ್ಲದರ ಬಗ್ಗೆ ಚರ್ಚೆ ಮಾಡಬೇಕಿದೆ. ಸರ್ಕಾರ ಮೊದಲ ದಿನವೇ ವಿರೋಧ ಪಕ್ಷವನ್ನು ಬಾವಿಗೆ ತಳ್ಳುವ ಕೆಲಸ ಮಾಡಿದೆ. ಸರ್ಕಾರ ದೊಖಾ ಮಾಡಿದೆ. ನಮ್ಮ ಬೇಡಿಕೆ ಇಷ್ಟೆ ನೀವು ಕೊಟ್ಟ ಭರವಸೆ ಈಡೇರಿಸಿ ಎಂದು ಆಗ್ರಹಿಸಿದ್ದೇವೆ.

ಈ ಸರ್ಕಾರ ಮುಂದಿನ ಕಲಾಪದ ಬಗ್ಗೆ ಚರ್ಚೆ ಮಾಡುವ ಕುರಿತು ಕಲಾಪ ಸಲಹಾ ಸಮಿತಿ ಸಭೆ ಕರೆದಿದೆ. ಈಗಿನ ಗೊಂದಲ ಬಗೆಹರಿಸದೇ ಮುಂದಿನ ಕಲಾಪದ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಹೀಗಾಗಿ ನಾವು ಬಿಎಸ್ ಸಿ ಬಹಿಷ್ಕಾರ ಮಾಡಿದ್ದೇವೆ. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಇನ್ನು ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುವ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನಪರ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ ಅವು ಕಾಂಗ್ರೆಸ್‌ನವರಿಗೆ ಬೇಡವಾಗಿರಬಹುದು. ಜನ ಬಯಸಿದ್ದನ್ನು ನಾವು ಮಾಡಿದ್ದೆವು ಎಂದು ಹೇಳಿದರು.

Exit mobile version