ಬೆಂಗಳೂರು: ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ (Assembly Session) ನಡೆಯಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ಆರೋಪ – ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಲಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬಿಟ್ಟಿರುವ 40 ಪರ್ಸೆಂಟ್ ಕಮಿಷನ್ (40 percent commission) ಬಾಣವು ವಿಪಕ್ಷಗಳಿಗೆ ಅಸ್ತ್ರವಾದರೆ, ಈಗಾಗಲೇ ಕೇಂದ್ರ ಸರ್ಕಾರದಿಂದ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ಅದನ್ನೇ ಪುನರುಚ್ಚಾರ ಮಾಡಲು ಸಿದ್ಧವಾಗಿದೆ.
ಬೆಳಗ್ಗೆ ಹನ್ನೊಂದು ಗಂಟೆಗೆ ವಿಧಾನ ಸಭೆಯಲ್ಲಿ ಜಂಟಿ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಗುಣಗಾನ ಮಾಡಲಿದ್ದು, ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ.
ಮೇ ತಿಂಗಳಿಂದ ಇಲ್ಲಿಯವರೆಗಿನ ಸರ್ಕಾರದ ಸಾಧನೆಗಳ ಬಗ್ಗೆ ಪ್ರಸ್ತಾಪ ಮಾಡಲಿರುವ ರಾಜ್ಯಪಾಲರು, ಸರ್ಕಾರ ಬಂದ ಬಳಿಕ ಯಶಸ್ವಿಯಾಗಿ ಐದು ಗ್ಯಾರಂಟಿ ಯೋಜನೆಗಳ ಅಂಕಿ – ಅಂಶಗಳನ್ನು ತೆರೆದಿಡಲಿದ್ದಾರೆ. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ, ಯುವನಿಧಿ ಫಲಾನುಭವಿಗಳ ಮಾತನಾಡುವ ರಾಜ್ಯಪಾಲರು, ಪ್ರತಿ ಯೋಜನೆಗಳ ಫಲಾನುಭವಿಗಳ ಬಗ್ಗೆ ಪ್ರಸ್ತಾಪಿಸಲಿದ್ದಾರೆ.
ಭವಿಷ್ಯದ 1 ವರ್ಷದ ಬಗ್ಗೆಯೂ ಉಲ್ಲೇಖ
ಒಂದು ವರ್ಷದ ಸಾಧನೆ ಬಗ್ಗೆ ಹೇಳಲಿರುವ ರಾಜ್ಯಪಾಲರು, ಮುಂದಿನ ಒಂದು ವರ್ಷದಲ್ಲಿ ಸರ್ಕಾರದ ಕಾರ್ಯವೈಖರಿ ಹೇಗಿರಲಿದೆ? ಯಾವೆಲ್ಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂಬ ಬಗ್ಗೆ ನೀಲಿನಕ್ಷೆಯನ್ನು ತೆರೆದಿಡಲಾಗುತ್ತದೆ.
ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಅದನ್ನು ಎದುರಿಸಲು ಸರ್ಕಾರ ಕೈಗೊಂಡ ನಿರ್ಧಾರಗಳ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಹೊಸ ಸರ್ಕಾರ ಬಂದ ಬಳಿಕ ವೈದ್ಯಕೀಯ ಕಾಲೇಜುಗಳಿಗೆ ನೀಡಿದ ಹೆಚ್ಚುವರಿ ಅನುದಾನದ ಬಗ್ಗೆಯೂ ಪ್ರಸ್ತಾಪವಾಗಲಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದರ ಬಗ್ಗೆಯೂ ಪ್ರಸ್ತಾಪ ಮಾಡಲಿರುವ ರಾಜ್ಯಪಾಲರು, ಕಳೆದ ಒಂಬತ್ತು ತಿಂಗಳಲ್ಲಿ ರಾಜ್ಯಕ್ಕೆ ಇತರೆ ದೇಶಗಳ ಕಂಪನಿಗಳು ಮಾಡಿದ ಹೂಡಿಕೆ ಬಗ್ಗೆ ಹೇಳಲಿದ್ದಾರೆ.
ಉದ್ಯೋಗ ಸೃಷ್ಟಿ ಬಗ್ಗೆ ಪ್ರಸ್ತಾಪ?
ರಾಜ್ಯದಲ್ಲಿ ಆದ ಉದ್ಯೋಗ ಸೃಷ್ಟಿ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಹೆಚ್ಚಿದೆ. ಗ್ಯಾರಂಟಿಗಳ ನಡುವೆಯೂ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಕಾಪಾಡಿಕೊಂಡಿದ್ದು, ತೆರಿಗೆ ಸಂಗ್ರಹದಲ್ಲಿ ಸರ್ಕಾರ ಗುರಿ ಮುಟ್ಟಿರುವ ಬಗ್ಗೆ ಪ್ರಸ್ತಾಪ ಮಾಡಬಹುದು ಎಂದು ಹೇಳಲಾಗಿದೆ.
ಪ್ರತಿಪಕ್ಷಗಳಿಗೆ ಅಸ್ತ್ರ ಕೊಟ್ಟಿರುವ ಕೆಂಪಣ್ಣ
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಪ್ರಸ್ತಾಪ ಮಾಡಿದ್ದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ, ಈಗ ಈ ಸರ್ಕಾರದ ಬಗ್ಗೆಯೂ ಅದೇ ಆರೋಪ ಮಾಡಿದ್ದಾರೆ. ಈಗ ಸರ್ಕಾರ ಹಾಗೂ ಸಚಿವರ ಬಗ್ಗೆ ಹೇಳದೆ, ಅಧಿಕಾರಿಗಳು 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಈಗ ಪ್ರತಿಪಕ್ಷಗಳಿಗೆ ಅಸ್ತ್ರವಾಗಿದ್ದು, ಸರ್ಕಾರದ ವಿರುದ್ಧ ಗುಡುಗಲು ಸಜ್ಜಾಗಿವೆ. ಇದರ ಜತೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ತಗಾದೆ ತೆಗೆಯಲೂ ಸಿದ್ಧವಾಗಿರುವ ಬಿಜೆಪಿ, ನ್ಯೂನತೆಗಳನ್ನು ಎತ್ತಿ ಹಿಡಿಯಲು ಹೊರಟಿದೆ.
ಕಾಂಗ್ರೆಸ್‌ನಿಂದ ಅನುದಾನ ತಾರತಮ್ಯದ ಪ್ರತ್ಯಸ್ತ್ರ
ಇನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಅನುದಾನ ತಾರತಮ್ಯದ ಪ್ರತ್ಯಸ್ತ್ರವನ್ನು ಬಿಡಲು ಸಜ್ಜಾಗಿದೆ. ಈಗಾಗಲೇ ಕೇಂದ್ರದ ವಿರುದ್ಧ ಹರಿಹಾಯುತ್ತಲೇ ಬಂದಿರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ತಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಐದೂ ಗ್ಯಾರಂಟಿ ಯೋಜನೆಗಳನ್ನು ಒಂದು ತಿಂಗಳೂ ತಪ್ಪದೆ ಜನರಿಗೆ ತಲುಪಿಸುತ್ತಿರುವ ಬಗ್ಗೆ ಹೇಳಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: Amit Shah: ಲೋಕಸಭೆಗೆ ಬಿಜೆಪಿ ಟಿಕೆಟ್; ಫೆ. 20-21ಕ್ಕೆ ಮಹತ್ವದ ಸಭೆ ನಡೆಸಲು ಅಮಿತ್ ಶಾ ನಿರ್ಧಾರ!
ಇಲ್ಲಾಗಲಿದೆಯೇ ಲೋಕಸಭಾ ಚುನಾವಣಾ ಪ್ರಚಾರ ಭಾಷಣ?
ಅಲ್ಲದೆ, ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಈಗಾಗಲೇ ಆರೋಪ ಮಾಡಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ಈ ಅವಕಾಶವನ್ನು ಬಳಸಿಕೊಳ್ಳಲಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣಾ ಪ್ರಚಾರ ಭಾಷಣವಾಗಿ ಮಾರ್ಪಡುವ ಸಾಧ್ಯತೆಯೇ ಹೆಚ್ಚಿದೆ.