Site icon Vistara News

Assembly Session : ಜಮೀರ್‌ ಮುಸ್ಲಿಂ ಸ್ಪೀಕರ್‌ ಹೇಳಿಕೆ ಚರ್ಚೆಗೆ ಅವಕಾಶ; ನಾಳೆ ನಡೆಯಲಿದೆ ಬಿಗ್‌ ಫೈಟ್‌

Speaker UT Khader

ಬೆಂಗಳೂರು: ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmad Khan) ಅವರ ವಿವಾದಿತ ಮುಸ್ಲಿಂ ಸ್ಪೀಕರ್‌ ಹೇಳಿಕೆ ಬಗ್ಗೆ ವಿಧಾನಸಭೆಯಲ್ಲಿ (Assembly Session)AssS ಚರ್ಚೆ ನಡೆಸಲು ಸ್ಪೀಕರ್‌ ಯು.ಟಿ. ಖಾದರ್‌ (Speaker UT Khader) ಅವಕಾಶ ನೀಡಿದ್ದಾರೆ. ಸೋಮವಾರ ದಿನವಿಡೀ ಈ ಬಗ್ಗೆ ಬಿಜೆಪಿ ಶಾಸಕರು ಸದನದಲ್ಲಿ ಗದ್ದಲ ನಡೆಸಿದ ಬಳಿಕ ಅಂತಿಮವಾಗಿ ಸದನದ ಕಲಾಪಗಳು ಮುಗಿಯುವ ಹೊತ್ತಿನಲ್ಲಿ ಸ್ಪೀಕರ್‌ ಖಾದರ್‌ ಅವರು ಜಮೀರ್‌ ಹೇಳಿಕೆಯ ಬಗ್ಗೆ ಮಂಗಳವಾರ ಚರ್ಚೆಗೆ ಅವಕಾಶ ನೀಡುವುದಾಗಿ (Permission granted for debate) ಭರವಸೆ ನೀಡಿದರು.

ಮುಸ್ಲಿಂ ಶಾಸಕರೊಬ್ಬರು ನಡೆದುಬರುತ್ತಿದ್ದಂತೆಯೇ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಕೂಡಾ ಎದ್ದು ನಿಂತು ನಮಸ್ಕಾರ್‌ ಸಾಬ್‌ ಎಂದು ಹೇಳುವ ಹಾಗೆ ಕಾಂಗ್ರೆಸ್‌ ಮಾಡಿದೆ ಎಂದು ಸ್ಪೀಕರ್‌ ಸ್ಥಾನದ (Speaker post) ಬಗ್ಗೆ ಮಾತನಾಡಿದ್ದ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer ahmad Khan) ಅವರು ಹಿಂದುಗಳಿಗೆ, ಸ್ಪೀಕರ್‌ ಹುದ್ದೆಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಜತೆಗೆ ಜಮೀರ್‌ ಅಹಮದ್‌ ಖಾನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ (BJP urges for Dissmissal of Zameer Khan) ನೀಡಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ (Assembly Session) ಕೋಲಾಹಲವೆಬ್ಬಿಸಿತ್ತು.

ಅಧಿವೇಶನದ ಎರಡನೇ ವಾರದ ಮೊದಲ ದಿನವೇ ಬಿಜೆಪಿ ಕಾರ್ಯತಂತ್ರವನ್ನು ರೂಪಿಸಿಕೊಂಡು ಬಂದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿತು. ಜಮೀರ್‌ ಪ್ರಕರಣವನ್ನು ಉಲ್ಲೇಖಿಸಿ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಯಿತು.

ಜಮೀರ್‌ ಖಾನ್‌ ಅವರು ಸಚಿವರಾಗಿ‌ ಒಂದು ಪ್ರಶ್ನೆಗೆ ಉತ್ತರ ನೀಡಲು ಮುಂದಾದಾಗ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಆರ್‌. ಅಶೋಕ್‌ ಮತ್ತು ಇತರರು ಆಕ್ಷೇಪಿಸುವಲ್ಲಿಂದ ಪ್ರತಿಭಟನೆ ಆರಂಭಗೊಂಡಿತು. ಆದರೆ, ಸ್ಪೀಕರ್‌ ಖಾದರ್‌ ಅವರು ಇದಕ್ಕೆ ಸೊಪ್ಪು ಹಾಕಲಿಲ್ಲ. ಅದರ ನಡುವೆ ಕಾಂಗ್ರೆಸ್‌ ಹಾಗೂ ಬಿಜೆಪಿ ಶಾಸಕರ ನಡುವೆ ಭಾರಿ ಜಗಳವೇ ನಡೆಯಿತು.

ಇದನ್ನೂ ಓದಿ: Assembly Session: ಹಿಂದುಗಳು ಮುಸ್ಲಿಮರ ಅಡಿಯಾಳುಗಳು ಎಂದೇ ಜಮೀರ್‌ ಹೇಳಿದ್ದು; ಆರ್‌ ಅಶೋಕ್‌

ಒಂದು ಹಂತದಲ್ಲಿ ಕಲಾಪ ಮುಂದೂಡಿದ ಸ್ಪೀಕರ್‌ ಖಾದರ್‌ ಅವರು ಸಂಧಾನ ಸಭೆ ನಡೆಸಿದರೂ ಫಲ ನೀಡಲಿಲ್ಲ. ಬಿಜೆಪಿ ಶಾಸಕರು ಇಡೀ ದಿನ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಸ್ಪೀಕರ್‌ ಖಾದರ್‌ ಅವರು ನೋಟಿಸ್‌ ನೀಡಿದರೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು. ಬಿಜೆಪಿ ಗದ್ದಲದ ನಡುವೆಯೇ ಬರ ಚರ್ಚೆ, ಉತ್ತರಗಳು ನಡೆದವು. ಇದರ ನಡುವೆ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಆಕ್ರೋಶವನ್ನು ತೆರೆದಿಟ್ಟರು.‌ ಜಮೀರ್‌ ಅಹಮದ್‌ ಖಾನ್‌ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಸಿಎಂ ಸಿದ್ದರಾಮಯ್ಯ ಕೂಡಾ ಜಮೀರ್‌ ಬೆನ್ನಿಗೆ ನಿಂತರು.

ಇದೆಲ್ಲವೂ ನಡೆದು ಕಲಾಪ ಅಂತ್ಯಗೊಳ್ಳುತ್ತಿದ್ದಂತೆಯೇ ಮಂಗಳವಾರ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್‌ ಯು.ಟಿ. ಖಾದರ್‌ ಭರವಸೆ ನೀಡಿದರು. ಅಲ್ಲಿಗೆ ಬಿಜೆಪಿಯವರ ಪ್ರತಿಭಟನೆ ಅಂತ್ಯಗೊಂಡಿತು. ಮಂಗಳವಾರದ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

Exit mobile version