Site icon Vistara News

B.S. Yediyurappa: ಇದು ನನ್ನ ಕೊನೆಯ ಅಧಿವೇಶನ ಎಂದು ಗದ್ಗದಿತರಾದ ಬಿ.ಎಸ್‌. ಯಡಿಯೂರಪ್ಪ: ಶುಕ್ರವಾರ ವಿದಾಯ ಭಾಷಣ

Narendra Modi appriciates bs yediyurappa speech in assembly

#image_title

ವಿಧಾನಸಭೆ: ತಾವಿನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ (B.S. Yediyurappa), ಬಿಜೆಪಿ ತಮಗೆ ಎಲ್ಲ ಅವಕಾಶಗಳನ್ನೂ ನೀಡಿದೆ ಎನ್ನುತ್ತ ವಿಧಾನಸಭೆಯಲ್ಲಿ ಗದ್ಗದಿತರಾದರು.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಯಡಿಯೂರಪ್ಪ ಮಾತನಾಡುತ್ತಿದ್ದರು. ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ಅನ್ನು ನಾನು ಸ್ವಾಗತಿಸುತ್ತೇನೆ. ಮುಖ್ಯಮಂತ್ರಿಗಳು ಉತ್ತಮ ಬಜೆಟ್ ಮಂಡಿಸಿದ್ದಾರೆ. ರಾಜಕೀಯವಾಗಿ ಮಾತಾಡೋದಿಕ್ಕೆ ಯಾರಾದರೂ ಮಾತಾಡಬಹುದು. ನಾನೂ ಕೂಡಾ ಹಣಕಾಸು ಮಂತ್ರಿಯಾಗಿ ಹಲವು ಬಜೆಟ್ ಮಂಡಿಸಿದ್ದೇನೆ. ರಾಜ್ಯದ ಹಣಕಾಸು ಸ್ಥಿತಿ, ಸಂಪನ್ಮೂಲ ಕ್ರೋಢೀಕರಣ, ಜನರ ನಿರೀಕ್ಷೆ, ಪ್ರಾದೇಶಿಕವಾರು ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಬೇಕಾಗುತ್ತದೆ. ಬಜೆಟ್ ವಿಶ್ಲೇಷಣೆ ವೇಳೆ ಇವೆಲ್ಲ ಗಮನಿಸಿ ಮಾತಾಡಬೇಕು ಎಂದರು.

ಮುಖ್ಯಮಂತ್ರಿಗಳು ಒಳ್ಳೆಯ ಬಜೆಟ್ ಕೊಟ್ಟಿದಾರೆ ಅಂತ ಹೇಳಲು ಹೆಮ್ಮೆ ಪಡುತ್ತೇನೆ. ಕೋವಿಡ್ ನಿಂದ ಆದ ಆರ್ಥಿಕ ಹಿಂಜರಿತ ಬಳಿಕ ಆರ್ಥಿಕ ಸ್ಥಿತಿ ಉತ್ತಮವಾಗಿ ಸುಧಾರಿಸಿದ್ದಾರೆ. ಸಂಪನ್ಮೂಲಗಳ ಕ್ರೋಢೀಕರಣ ಅನುಕರಣನೀಯ. ಸಂಪನ್ಮೂಲಗಳ ಕ್ರೋಢೀಕರಷದಲ್ಲಿ 17% ಬೆಳವಣಿಗೆ ಆಗಿದೆ. ಕೋವಿಡ್ ನಿಂದಾದ ಆರ್ಥಿಕ ಹೊಡೆತ ಸರಿಯಾಗಲು ಮೂರ್ನಾಲ್ಕು ವರ್ಷ ಬೇಕು ಅಂತ ತಜ್ಞರು ಹೇಳಿದ್ರು. ಆದ್ರೆ ಬೊಮ್ಮಾಯಿಯವರು ಉಳಿತಾಯ ಬಜೆಟ್ ಕೊಟ್ಟಿದಾರೆ, ಸೋರಿಕೆ ತಡೆದಿದ್ದಾರೆ ಎಂದರು.
ಬಿಜೆಪಿ ಸಿದ್ಧಾಂತ, ಮೋದಿ ಹಾಗೂ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ವಿರೋಧಿಸಿದರೆ ಜನರು ಗುರುತಿಸುತ್ತಾರೆ ಎನ್ನುವುದು ಕೆಲವರ ಭ್ರಮೆ. ಅವರಿಗೆ ಸದ್ಯದಲ್ಲೆ ಭ್ರಮನಿರಸನವಾಗುತ್ತದೆ ಎಂದರು.

ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ ಎಂದು ಪ್ರಸ್ತಾಪಿಸಿದ ಯಡಿಯೂರಪ್ಪ, ಬಿಜೆಪಿ ಹಾಗೂ ಮೋದಿ ನನ್ನನ್ನು ಎಂದೂ ಕಡೆಗಣಿಸಿಲ್ಲ. ಯಡಿಯೂರಪ್ಪ ಅವರಿಗೆ ನೀಡಿರುವ ಗೌರವ, ಸ್ಥಾನವಮಾನಕ್ಕಾಗಿ ನಾನು ಮೋದಿಯವರಿಗೆ ಋಣಿಯಾಗಿದ್ದೇನೆ. ಎಲ್ಲರೂ ಮೆಚ್ಚುವ ರೀತಿಯಲ್ಲಿ ಅವಕಾಶ, ಸ್ಥಾನಮಾನ ನೀಡಿರುವುದನ್ನು ಮರೆಯಲು ಸಾಧ್ಯವಿಲ್ಲ. ಪಕ್ಷ ಅವಕಾಶ ಮಾಡಿಕೊಟ್ಟಿದ್ದರಿಂದ ನಾಲ್ಕು ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ನನಗೆ ಸಿಕ್ಕಷ್ಟು ಅವಕಾಶ ಇನ್ನಾರಿಗೂ ಸಿಕ್ಕಿಲ್ಲ.

ಕೆಲವು ಮಾತು ಆಡಿ ಯಡಿಯೂರಪ್ಪನನ್ನು ಸುಮ್ಮನೆ ಕೂರಿಸಬಹುದು ಎಂಬ ಭ್ರಮೆ ಬೇಡ. ನಾನು ಸುಮ್ಮನೆ ಕೂರುವುದಿಲ್ಲ. ಸೂರ್ಯಚಂದ್ರರಷ್ಟೆ ಸತ್ಯವಾಗಿ ನಾವು ಅಧಿಕಾರಕ್ಕೆ ಬರುವವರಿದ್ದೇವೆ. ಪ್ರತಿಪಕ್ಷಗಳು ಅಲ್ಲಿಯೇ ಕೂಲಿತಿರುತ್ತವೆ. ನಾಡಿನ ಉದ್ದಗಲಕ್ಕೂ ಸಂಚಾರ ಮಾಡುತ್ತೇನೆ, ಎರಡು ತಿಂಗಳಲ್ಲಿ ಕರ್ನಾಟಕದಲ್ಲಿ ಪರಿವರ್ತನೆ ಹೇಗೆ ಆಗುತ್ತದೆ, ಬಿಜೆಪಿ ಗಾಳಿ ಬೀಸುತ್ತದೆ ಎನ್ನುವುದನ್ನು ನೀವೇ ನೋಡುವವರಿದ್ದೀರಿ.

ಇದನ್ನೂ ಓದಿ: B.S. Yediyurappa: ರಾಜ್ಯದ ಧೀಮಂತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಕೊನೆಯ ಅಧಿವೇಶನ ಇದು: ಗೌರವದ ಬೀಳ್ಕೊಡುಗೆ ನೀಡುವುದೇ ವಿಧಾನ ಮಂಡಲ?

ನಮ್ಮ ನಮ್ಮ ಕ್ಷೇತ್ರಕ್ಕೆ ಹೋಗಿ ಜನರ ವಿಶ್ವಾಸ ಗಳಿಸಿ ಎಂದು ಆಡಳಿತ ಪಕ್ಷದ ಶಾಸಕರಿಗೆ ಕರೆ ನೀಡಿದ ಯಡಿಯೂರಪ್ಪ, ಎಸ್‌ಸಿಎಸ್‌ಟಿ ಸಮುದಾಯಕ್ಕೆ ಇಲ್ಲಿವರೆಗೆ ನೀಡದಷ್ಟು ಸವಲತ್ತನ್ನು ಈ ಬಾರಿ ನೀಡಿದ್ದೇವೆ. ಅದನ್ನು ಜನರಿಗೆ ತಲುಪಿಸಬೇಕು. ಈ ಮೂಲಕ ಶೇ. 100 ಬಿಜೆಪಿ ಅಧಿಕಾರಕ್ಕೆ ಬರುವವರಿದ್ದೇವೆ ಎಂದರು.

ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದೇನೆ. ಮೋದಿಯವರು ನನಗೆ ನೀಡಿರುವ ಅವಕಾಶಕ್ಕೆ ಧನ್ಯವಾದ. ಆದರೆ ಪಕ್ಷವನ್ನು ಅಧಿಕಾರಕ್ಕೆ ತರಲು ಕೊನೆಯ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ. ಒಂದು ರೀತಿ ವಿದಾಯ ಇದು. ಮತ್ತೆ ಈ ಸದನಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದು ಗದ್ಗದಿತರಾದರು.

ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ ಒತ್ತಾಯ ಮಾಡಿದರು. ಆದರೆ ತಮ್ಮದು ಇದು ವಿದಾಯದ ಭಾಷಣ ಎಂದು ಯಡಿಯೂರಪ್ಪ ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಇವತ್ತು ವಿದಾಯದ ಭಾಷಣ ಇಲ್ಲ. ನಾಡಿದ್ದು(ಶುಕ್ರವಾರ) ಅದಕ್ಕೆ ವ್ಯವಸ್ಥೆ ಇದೆ. ಅವತ್ತು ನೀವು ಮಾತನಾಡಬೇಕಾಗುತ್ತದೆ ಎಂದು ತಿಳಿಸಿದರು.

Exit mobile version