Site icon Vistara News

B.S. Yediyurappa: ಬಾದಾಮಿಯಲ್ಲಿ ಸ್ಪರ್ಧೆ ಮಾಡದೇ ಇರುವುದು ಜನರಿಗೆ ಮಾಡುವ ದ್ರೋಹ; ಅಲ್ಲೇ ಸ್ಪರ್ಧಿಸಿ: ಸಿದ್ದರಾಮಯ್ಯಗೆ ಬಿ.ಎಸ್‌. ಯಡಿಯೂರಪ್ಪ ಸಲಹೆ

b-s-yediyurappa-suggests-siddaramaiah-to-contest-from-badami

#image_title

ವಿಧಾನಸಭೆ: ಒಮ್ಮೆ ಬಾದಾಮಿಯ ಜನರು ನಿಮ್ಮನ್ನು ಗೆಲ್ಲಿಸಿದ ಮೇಲೆ ಅಲ್ಲಿಂದ ಬೇರೆ ಕ್ಷೇತ್ರಕ್ಕೆ ಹುಡುಕಾಟ ನಡೆಸುವುದು ಜನರಿಗೆ ಬಗೆಯುವ ನಂಬಿಕೆ ದ್ರೋಹವಾಗಿದ್ದು, ಬಾದಾಮಿಯಿಂದಲೇ ಸ್ಪರ್ಧೆ ಮಾಡಿ ಎಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ (B.S. Yediyurappa) ಸಲಹೆ ನೀಡಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಬಜೆಟ್‌ ಕುರಿತು ಭಾಷಣ ಮಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಗೆದ್ದು ಬಂದಿರುವ ಕ್ಷೇತ್ರದಲ್ಲಿ ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎನ್ನುವುದರಲ್ಲಿ ಏನರ್ಥ? ಅಲ್ಲಿ ಅಭಿವೃದ್ಧಿ ಮಾಡಿಲ್ಲವೇ? ನಿಮಗೆ ಮತ್ತೆ ಚುನಾವಣೆಗೆ ನಿಲ್ಲಲು ಧೈರ್ಯ ಇಲ್ಲ ಎಂದ ಮೇಲೆ ಬೇರೆ ಕ್ಷೇತ್ರದಲ್ಲಿ ಜನರು ಹೇಗೆ ನಂಬುತ್ತಾರೆ? ನೀವು ಅಲ್ಲಿನ ಜನರ ಋಣ ತೀರಿಸಬೇಕು ಎಂದರೆ ಅಲ್ಲಿಯೇ ನಿಂತು ಗೆದ್ದು ಬರಬೇಕು. ನೀವು ಯಾವುದೇ ಕ್ಷೇತ್ರದಲ್ಲಿ ನಿಂತರೂ ನಿಮಗೆ ಯಾವ ಲಾಭವೂ ಆಗುವುದಿಲ್ಲ ಎಂದರು.

ಈ ಸಮಯದಲ್ಲಿ ಸಿದ್ದರಾಮಯ್ಯ ಸದನದಲ್ಲಿರಲಿಲ್ಲ. ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್‌ ಮಾತನಾಡಿ, ಹಿರಿಯ ಸಚಿವರು ಯಡಿಯೂರಪ್ಪಜಿ ಅವರಿಂದ ಕಲಿಯಬೇಕು. ಬಹಳಷ್ಟು ನಾಯಕರು ಬೇರೆ ಬೇರೆ ಕಡೆ ಸ್ಪರ್ಧೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋತಿರಬಹುದು. ಆದರೆ ರಾಜ್ಯದ ಜನರು ಸಿದ್ದರಾಮಯ್ಯ ಅವರನ್ನು ನೆನಪಿಟ್ಟುಕೊಂಡಿದ್ದಾರೆ. ಈ ಬಾರಿ ಚಾಮುಂಡೇಶ್ವರಿ, ಬಾದಾಮಿಯಲ್ಲಿ ಸೇರಿ 224ಕ್ಷೇತ್ರದಲ್ಲಿ ಎಲ್ಲಿ ನಿಂತರೂ ಗೆಲ್ಲುತ್ತಾರೆ ಎಂದರು.

ಇದನ್ನೂ ಓದಿ: Siddaramaiah CM | ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸಬೇಕು, ವರಿಷ್ಠರು ಸಿಎಂ ಮಾಡ್ಲೇಬೇಕು: ರಮೇಶ್‌ ಕುಮಾರ್‌ ವಾದ

ಮತ್ತೆ ಮಾತು ಮುಂದುವರಿಸಿದ ಬಿ.ಎಸ್‌. ಯಡಿಯೂರಪ್ಪ, ನೀವು ಆ ಕಡೆ ಕುಳಿತು ಸಿದ್ದರಾಮಯ್ಯ ಪರವಾಗಿ ಮಾತಾಡುವುದು ಸ್ವಾಭಾವಿಕ. ಬಾದಾಮಿ ಕ್ಷೇತ್ರದ ಜನರು ಒತ್ತಾಯ ಮಾಡಿದರೂ ಬೇರೆ ಕ್ಷೇತ್ರ ಹುಡುಕುವುದು ಏನರ್ಥ? ಆತ್ಮ ವಿಶ್ವಾಸ ಇಲ್ಲ. ಆ ಭಾಗದ ಜನರಿಗೆ ವಿಶ್ವಾಸದ್ರೋಹ ಮಾಡುತ್ತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. 224ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಗೆಲ್ಲುವುದಾದರೆ ಚಾಮುಂಡೇಶ್ವರಿಯಲ್ಲಿ ಸೋತಿದ್ದೇಕೆ? ಬಾದಾಮಿಯಲ್ಲಿ ಸ್ಪರ್ಧೆಗೆ ಹಿಂಜರಿಕೆ ಏಕೆ? ಎಂದರು.

Exit mobile version