Site icon Vistara News

B.S. Yediyurappa: ಜನ ಬಿಡಲ್ಲ, ಮತ್ತೆ ಚುನಾವಣೆಗೆ ನಿಲ್ತೀನಿ ಅಂದ್ರ ಯಡಿಯೂರಪ್ಪ?: ವಿಧಾನಸಭೆಯಲ್ಲಿ ಯತ್ನಾಳ್‌ ಹೇಳಿದ್ದೇನು?

#image_title

ವಿಧಾನಸಭೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವುದಿಲ್ಲ, ಇದೇ ಕೊನೆಯ ಅಧೀವೇಶನ ಎಂದು ಬಿ.ಎಸ್‌. ಯಡಿಯೂರಪ್ಪ ( B.S. Yediyurappa) ಹೇಳುತ್ತಿರುವುದರ ನಡುವೆಯೇ ಮಾಜಿ ಸಚೊವ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ವಿಚಾರ ಹರಿಬಿಟ್ಟಿದ್ದಾರೆ. ತಾವು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾಗಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಯತ್ನಾಳ್‌, ಅನಂತಕುಮಾರ್ ಯಡಿಯೂರಪ್ಪ ಕೃಷ್ಣಾ ಅರ್ಜುನ ರೀತಿ ಪಕ್ಷ ಕಟ್ಟಿದ್ರು. ಯಡಿಯೂರಪ್ಪ, ಅನಂತಕುಮಾರ್ ಅವರು ನನಗೆ ಕೇಂದ್ರ ಸಚಿವರನ್ನಾಗಿ ಮಾಡಿದ್ರು. ಯಡಿಯೂರಪ್ಪ ಅವರು ನಾನು ಮುಂದೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಆದೇ ರೀತಿ ನಮ್ಮ ಹಿರಿಯ ಸಚಿವರು ಇನ್ನ ಮುಂದೆ ನಮ್ಮ ಮಗನನ್ನ ನಿಲ್ಲಿಸ್ತೀವಿ ಅಂತ ಹೇಳಿದ್ರು.

ಆದ್ರೆ ನಿನ್ನೆ ಅವರ ಬಳಿ ಹೋಗಿ ಕುಳಿತುಕೊಂಡು ಮಾತನಾಡಿದೆ. ಇಲ್ಲ ರೀ ಜನ ಬಿಡ್ತಿಲ್ಲ..ನಾನೇ ನಿಲ್ತೀನಿ ಎಂದು ಹೇಳಿದ್ರು. ಸಾಯುವಾಗ ಶಾಸಕರಾಗಿ ಸಾಯಬೇಕು ಅನ್ನೋ ನಿರ್ಧಾರ ಮಾಡಿದ್ದಾರೆ ಎಂದರು.

ನಿಮ್ಮನ್ನ ಮತ್ತು ನಮ್ಮನ್ನ ಸಚಿವರನ್ನಾಗಿ ಮಾಡಬೇಕಿತ್ತು ಎಂದು ಸ್ಪೀಕರ್‌ ವಿಶ್ವೇಶ್ವರ ಕಾಗೇರಿಯವರಿಗೆ ತಿಳಿಸಿದ ಯತ್ನಾಳ್‌, ಯಡಿಯೂರಪ್ಪ ಆ ಕೆಲಸ ಮಾಡಲಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಸ್ಪೀಕರ್‌, ಇಲ್ಲ ನಿಮ್ಮನ್ನ ಕೇಂದ್ರ ಮತ್ತು ನನ್ನನ್ನು ರಾಜ್ಯದಲ್ಲಿ ಸಚಿವರನ್ನಾಗಿ ಮಾಡಿದ್ದಾರೆ ಎಂದರು. ನಾನು ಸಚಿವನಾದ್ರೆ ಸಿಎಂ ಆಗ್ತೀನಿ ಅನ್ನೋ ಕಾರಣಕ್ಕೆ ಸಚಿವರನ್ನಾಗಿ ಮಾಡಲಿಲ್ಲ.

ಏನೇ ಇರಲಿ ಯಡಿಯೂರಪ್ಪ ನಮ್ಮ ನಾಯಕ. ಪಕ್ಷವನ್ನ ಕಟ್ಟಿದ ಶ್ರಮ ಯಡಿಯೂರಪ್ಪ ಅವರದ್ದು. ಪಕ್ಷ ಇಂದು ಈ ಸ್ಥಾನದಲ್ಲಿ ಇರಲು ಅವರೇ ಕಾರಣ. ನಾನು ಆಡಳಿತ ಪಕ್ಷದ ಶಾಸಕನಾದ್ರು ವಿರೋಧ ಪಕ್ಷದ ಶಾಸಕನಾಗಿ ಕೆಲಸ ಮಾಡಿದ್ದೇನೆ ಎಂದರು.

ಇದಕ್ಕೂ ಮೊದಲು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಆಲೂರು ವೆಂಕಟರಾವ್‌ ಅವರಿಂದ ಕುವೆಂಪು ಅವರವರೆಗೆ ಎಲ್ಲ ಮಹನೀಯರು ಮನಸ್ಸುಗಳನ್ನು ಒಂದು ಮಾಡಿದ್ದ ನಂತರ ಕರ್ನಾಟಕ ಸ್ಥಾಪನೆಯಾಯಿತು. ಈ ವಿಧಾನಸೌಧ ಕಟ್ಟಡವನ್ನು ನಿರ್ಮಿಸಿದ ಕೆಂಗಲ್‌ ಹನುಮಂತಯ್ಯ ಅವರಿಗೂ ವಂದನೆಗಳು. ಈ ವಿಧಾನಸೌಧಕ್ಕೆ ಬಂದ ತಕ್ಷಣ ಸದಸ್ಯರ ಕರ್ತವ್ಯವನ್ನು ನೆನಪು ಮಾಡಿಕೊಡುವಂತಿದೆ.

ಈ ಐದು ವರ್ಷದ ಕಾಲಘಟ್ಟವು, ಪ್ರಜಾಪ್ರಭುತ್ವದಲ್ಲಿರುವ ಅವಕಾಶಗಳನ್ನು ನಾವು ಯಾವ ರೀತಿ ಬಳಕೆ ಮಾಡುತ್ತೇವೆ ಎನ್ನುವುದನ್ನು ತೋರಿಸಿಕೊಡುತ್ತದೆ. ವಿರೋಧಾಭಾಸವಿರುವ ಪಕ್ಷಗಳು ಹೇಗೆ ಒಂದಾದವು ಎನ್ನುವುದನ್ನೂ ತೋರಿಸಿಕೊಡುತ್ತವೆ. ಈ ಅವಧಿಯಲ್ಲಿಯೇ ಕೋವಿಡ್‌ ಕಂಡಿದ್ದೇವೆ. ವಿಧಾನಸಭೆಯೊಳಗೂ ಗಾಜಿನ ಪರದೆ ಹಾಕಿಕೊಂಡು ಕುಳಿತಿದ್ದೆವು, ಅದನ್ನು ಮರೆಯುವಂತಿಲ್ಲ. ಅದೆಲ್ಲದರ ನಡುವೆಯೂ ವಿಧಾನಸಭೆಯನ್ನು ನಡೆಸಿದ್ದೇವೆ. ಎಷ್ಟೇ ಕಷ್ಟವಾದರೂ ಕರ್ತವ್ಯವನ್ನು ನಿರ್ವಹಿಸಲು ನಮ್ಮಿಂದ ಸಾಧ್ಯವಾಗಿದೆ.

ಕೋವಿಡ್‌ನಿಂದ ಹೊರಗೆ ಬರುತ್ತೇವೆಯೋ ಇಲ್ಲವೊ ಎಂಬ ಭಯದ ವಾತಾವರಣ ಒಂದು ಸಂದರ್ಭದಲ್ಲಿ ಇತ್ತು. ನಮ್ಮ ವಿಜ್ಞಾನಿಗಳು, ವೈದ್ಯರ ಪರಿಶ್ರಮದಿಂದ ಹೊರಬಂದೆವು. ಕೋವಿಡ್‌ನಿಂದ ಹೊರಬಂದ ನಂತರ ಮತ್ತೆ ದೇಶವನ್ನು ಕಟ್ಟುವ ಕೆಲಸ ಮುಂದುವರಿಸಬೇಕು ಎಂಬ ಚಿಂತನೆಯಲ್ಲಿ ಕೆಲಸ ಮಾಡಿದೆವು. ಪ್ರತಿಪಕ್ಷಗಳೂ ತಮ್ಮ ಕರ್ತವ್ಯವನ್ನು ಮಾಡಿದವು. ಟೀಕೆ ಟಿಪ್ಪಣಿಗಳಿದ್ದವು, ಅದು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆ. ಅನೇಕ ಗಟ್ಟಿ ನಿರ್ಧಾರ ಕೈಗೊಂಡಿರಬಹುದು, ಆದರೆ ಮನಸ್ಸುಗಳು ಒಂದಾಗಿವೆ.

ಈ ಅವಧಿಯಲ್ಲಿ ಅನೇಕ ಕಾಯ್ದೆಗಳನ್ನು ರೂಪಿಸಿದ್ದೇವೆ, ಅನೇಕ ಮಸೂದೆಗಳನ್ನು ಹಿಂಪಡೆದಿದ್ದೇವೆ. ನಾವು ರೂಪಿಸಿದ ಶಾಸನಗಳಿಂದ ಕರ್ನಾಟಕದ ಕನಿಷ್ಠ 2-3 ಕೋಟಿ ಜನರಿಗೆ ಬೇರೆ ಬೇರೆ ರೀತಿಯಲ್ಲಿ ಆಗಿದೆ. ಎಸ್‌ಸಿಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈ ನಿರ್ಧಾರವು ದೇಶದ ಇತಿಹಾಸದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ ಎಂಬ ವಿಶ್ವಾಸವಿದೆ.

ಸಂಪುಟದ ಸಹೋದ್ಯೋಗಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಅನೇಕರು ತಮ್ಮ ಅನುಭವವನ್ನು ಧಾರೆಯೆರೆದಿದ್ದಾರೆ. ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿಯವರು ಹೊಸ ಆಯೋಮವನ್ನು ತಂದುಕೊಟ್ಟಿದ್ದಾರೆ. 13 ಬಾರಿ ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ ಅನುಭವವೂ ಈ ಸದನಕ್ಕೆ ಲಭ್ಯವಾಗಿದೆ.

ಇದನ್ನೂ ಓದಿ: B.S. Yediyurappa: ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ; ಕಾಗೇರಿ ಮತ್ತೆ ಮಂತ್ರಿಯಾಗಬೇಕಿದೆ: ಬಿ.ಎಸ್‌. ಯಡಿಯೂರಪ್ಪ ವಿದಾಯ ಭಾಷಣ

ಬಿ.ಎಸ್‌. ಯಡಿಯೂರಪ್ಪ ಅವರ ಅನುಭವ ಅಪಾರ. ಅವರು ನಡೆದು ಬಂದ ದಾರಿ, ಹೋರಾಟ ನಮಗೆ ಮಾರ್ಗದರ್ಶಕ. ಅವರು ಸಂಕಲ್ಪಿಸಿದ್ದನ್ನು ಎಂದೂ ಸಾಧಿಸದೇ ಬಿಟ್ಟವರಲ್ಲ. ಶಿಕಾರಿಪುರದ ಮುನ್ಸಿಪಲ್‌ ಸದಸ್ಯ, ಅಧ್ಯಕ್ಷರಾಗಿ, ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಜೀವನದ ಸತ್ಯ ಗೊತ್ತು, ಸಿಹಿ ಕಹಿ ಗೊತ್ತು. ಆದರೆ ಎಂದಿಗೂ ಆ ಹಿರಿತನವನ್ನು, ಅನುಭವದ ದೊಡ್ಡ ಬುತ್ತಿಯನ್ನೂ ತೋರಿಸಿಕೊಳ್ಳದೆ ಇನ್ನೊಬ್ಬರ ಜತೆಗೆ ಸರಿಸಮಾನವಾಗಿ ಇರುವುದು ನನ್ನ ಅನುಭವದಿಂದ ತಿಳಿದುಬಂದಿದೆ.

ಅವರು ರೈತ ಬಜೆಟ್‌ ಮಂಡಿಸಿದ್ದು ನೆನಪಿದೆ. ಅವರು ಬಡವರಿಗೆ, ರೈತರಿಗೆ ಅನೇಕ ಕಾರ್ಯಕ್ರಮ ನೀಡಿದ್ದರು. ಸಿಎಂ ಆಗಿ ಮೊದಲ ದಿವಸವೇ ರೈತರಿಗೆ 10 ಎಚ್‌.ಪಿ. ವಿದ್ಯುತ್‌ ನೀಡುವ ಘೋಷಣೆ ಮಾಡಿದರು. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ 6 ಸಾವಿರ ರೂ.ಗೆ ನಾಲ್ಕು ಸಾವಿರ ಸೇರಿಸಿ ಕೊಟ್ಟರು. ನಮಗೆಲ್ಲರಿಗೂ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಅವರ ಕಾರ್ಯಕ್ರಮಗಳ ವಿಚಾರಣೆಯ ಪ್ರೇರಣೆಯಿಂದ ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

Exit mobile version