ಬೆಂಗಳೂರು: ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎಂಬ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra), ಈ ಬಗ್ಗೆ ಯಡಿಯೂರಪ್ಪ ಅವರು ಸೂಕ್ತ ಸಮಯದಲ್ಲಿ ಸರಿಯಾದ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ವಿಜಯೇಂದ್ರ, ಈ ಕುರಿತು ಪ್ರಶ್ನೆಗೆ ಉತ್ತರ ನೀಡಿದರು. ವಿಪಕ್ಷ ನಾಯಕರು ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡ್ತಿದಾರೆ. ಆ ಮೂಲಕ ಮತದಾರರನ್ನು ತಪ್ಪುದಾರಿಗೆ ತಗೊಂಡ್ ಹೋಗ್ತಿದಾರೆ. ಯಡಿಯೂರಪ್ಪ ಅವರು ಸೂಕ್ತ ಸಂದರ್ಭದಲ್ಲಿ ಸರಿಯಾದ ಉತ್ತರ ಕೊಡ್ತಾರೆ ಎಂದರು.
ಈ ಚುನಾವಣೆ ಗೆಲ್ಲುವುದು ಬಹಳ ಸವಾಲಾಗಿದೆಯೇ ಎಂಬ ಕುರಿತು ಪ್ರತಿಕ್ರಿಯಿಸಿ, ಯಾವುದೇ ಚುನಾವಣೆ ಎಲ್ಲ ಪಕ್ಷಗಳಿಗೂ ಸವಾಲು. ಆಡಳಿತ ಪಕ್ಷಕ್ಕೆ ಹೆಚ್ಚಿನ ಸವಾಲು ಇರುತ್ತವೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ನೈಪುಣ್ಯತೆ ನಮ್ಮ ಪಕ್ಷಕ್ಕೆ ಇದೆ ಎಂದರು.
ತಮ್ಮನ್ನು ಪಕ್ಷ ಕಡೆಗಣಿಸಿದೆಯೇ ಎಂಬ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಲಕ್ಷಾಂತರ ಕಾರ್ಯಕರ್ತರು ಯಾವುದೇ ಸ್ಥಾನಮಾನದ ನಿರೀಕ್ಷೆ ಇಲ್ಲದೇ ಪಕ್ಷ ಬಲಪಡಿಸುತ್ತಿದ್ದಾರೆ. ಇದರಲ್ಲಿ ವಿಜಯೇಂದ್ರ ಸಹ ಒಬ್ಬ, ವಿಜಯೇಂದ್ರ ಏನೂ ಹೊರತಲ್ಲ. ಹಿಂದೆ ನಾನು ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಗಿದ್ದೆ. ಈಗ ಪಕ್ಷದ ಉಪಾಧ್ಯಕ್ಷನಾಗಿ ಕೆಲಸ ಮಾಡ್ತಿದ್ದೇನೆ. ಈಗ ಚುನಾವಣೆ ವೇಳೆ ಮೋರ್ಚಾ ಸಮಾವೇಶಗಳ ಸಂಚಾಲಕ ಸ್ಥಾನ ಕೊಟ್ಟಿದ್ದಾರೆ. ಏನೂ ನಿರೀಕ್ಷೆ ಇಲ್ಲದೇ ಪಕ್ಷ ಸಂಘಟನೆಗೆ ಬಲ ತುಂಬುವ ಕೆಲಸ ಮಾಡ್ತೇನೆ ಎಂದರು.
ಇದನ್ನೂ ಓದಿ: Karnataka Election: ಫೆ.20ರಂದು ಮಂಡ್ಯದಲ್ಲಿ ಯುವ ಮೋರ್ಚಾದ ಮೊದಲ ಸಮಾವೇಶ: ಬಿ.ವೈ. ವಿಜಯೇಂದ್ರ
ಮಂಡ್ಯದಲ್ಲಿ ನಡೆಯುವ ಯುವ ಮೋರ್ಚಾ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರು ಆಗಮಿಸುತ್ತಾರೆಯೇ ಎಂಬ ಕುರಿತು ಉತ್ತರಿಸಿ, ಮಂಡ್ಯ ಸಮಾವೇಶಕ್ಕೆ ವರಿಷ್ಠರು ಯಾರು ಬರ್ತಾರೆ ಅನ್ನೋ ಚರ್ಚೆ ನಡೀತಿದೆ. ಮುಂದಿನ ದಿನಗಳಲ್ಲಿ ನಿರ್ಧಾರ ಆಗುತ್ತೆ. ನಿರ್ಮಲಾ ಸೀತಾರಾಮನ್, ಸ್ನೃತಿ ಇರಾನಿ, ಅನುರಾಗ್ ಠಾಕೂರ್, ಧರ್ಮೇಂದ್ರ ಪ್ರಧಾನ್ ಅವರನ್ನು ಮೋರ್ಚಾಗಳ ಸಮಾವೇಶದಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿದ್ದೇವೆ ಎಂದರು.