Site icon Vistara News

Basavaraj Bommai Birthday Special : ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಾತ್ಮದ ಮಾತು ಅದ್ಭುತ: ಇಲ್ಲಿವೆ ಒಂದಷ್ಟು ಉದಾಹರಣೆ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಾಜಕಾರಣಿಯಾಗಿ ವಿವಿಧ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬೊಮ್ಮಾಯಿ, ಎದುರಾಳಿಗಳ ವಿರುದ್ಧ ಸಿಡಿದು ಬೀಳುತ್ತಾರೆ. ಆದರೆ ಅತಿ ಹೆಚ್ಚು ಪುಸ್ತಕ ಓದುವ ರಾಜಕಾರಣಿಗಳಲ್ಲಿ ಒಬ್ಬರಾದ ಬೊಮ್ಮಾಯಿ ಅಧ್ಯಾತ್ಮ ಜೀವಿಯೂ ಹೌದು. ರಾಜಕೀಯವಲ್ಲದ ಕಾರ್ಯಕ್ರಮಗಳಲ್ಲಿ ಅವರ ಈ ಸುಪ್ತ ಪ್ರತಿಭೆ ಹೊರಬೀಳುತ್ತದೆ.

ರಾಜಕೀಯ ಕಾರ್ಯಕ್ರಮಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇರುತ್ತಾರೆ. ಹೆಚ್ಚಿನ ಬಾರಿ ಅಲ್ಲಿ ಗಂಭೀರ ವಿಚಾರಗಳೇ ಚರ್ಚೆ ಆಗುತ್ತವೆ. ಎದುರಾಳಿ ಪಕ್ಷಗಳ ಮೇಲೆ ವಾಗ್ದಾಳಿ, ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳುವುದು ಅನಿವಾರ್ಯ. ಇಂತಹ ಕಾರ್ಯಕ್ರಮಗಳಲ್ಲಿ ಕೇಳಿ ಬರುವ ಮಾತುಗಳು ಹೀಗಿರುತ್ತವೆ: ʻಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ನಾನೊಂದು ತೀರ, ನೀನೊಂದು ತೀರವಾಗಿದ್ದಾರೆʼ, ʻಮೊದಲು ತಮ್ಮ ಪ್ಲೇಟ್‌ನಲ್ಲಿ ಏನು ಇದೆ ಎನ್ನುವುದನ್ನು ಕಾಂಗ್ರೆಸ್‌ನವರು ನೋಡಿಕೊಳ್ಳಬೇಕುʼ, ʻಕಾಂಗ್ರೆಸ್ ನವರು ಕಾಯಂ ಆಗಿ ಪ್ರತಿಭಟನೆ ಮಾಡುವಂಥ ಪರಿಸ್ಥಿತಿ ಇದೆʼ…

ಅದೇ ರೀತಿ, ಆಡಳಿತಾತ್ಮಕ ಸಭೆಗಳಲ್ಲಿ ಬೊಮ್ಮಾಯಿ ಭಾಗವಹಿಸುತ್ತಾರೆ. ಅಲ್ಲಿ ಅಧಿಕಾರಿಗಳನ್ನು ಚುರುಕುಗೊಳಿಸುವುದೇ ಧ್ಯೇಯ. ಸರಿಯಾಗಿ ಕೆಲಸ ಮಾಡಲು ಏಕೆ ಆಗುವುದಿಲ್ಲ? ಇನ್ನೊಂದು ವಾರದೊಳಗೆ ವರದಿ ನೀಡಬೇಕು… ಈ ರೀತಿ ಸೂಚನೆ ನೀಡುವಲ್ಲೇ ಸಭೆಗಳು ಮುಕ್ತಾಯವಾಗಿಬಿಡುತ್ತವೆ.

ಆದರೆ ರಾಜಕೀಯ ಹಾಗೂ ಆಡಳಿತಾತ್ಮಕವಲ್ಲದ ಸಭೆಗಳಲ್ಲಿ ಬೊಮ್ಮಾಯಿ ಅವರೊಳಗಿನ ತತ್ವಜ್ಞಾನಿ, ಆರ್ಥಿಕ ತಜ್ಞ, ಇಂಜಿನಿಯರ್‌… ಎಲ್ಲರೂ ಹೊರಬರುತ್ತಾರೆ.

ಬೊಮ್ಮಾಯಿ ಅವರು ನವೋದ್ಯಮ ಕಾರ್ಯಕ್ರಮದಲ್ಲಿಯೂ ಮಾನವ ಜೀವವಿಕಾಸದ ಬಗ್ಗೆ ಮಾತನಾಡಬಲ್ಲರು. ನವೋದ್ಯಮ ಹಾಗೂ ತತ್ವಜ್ಞಾನವನ್ನು ಒಟ್ಟಿಗೆ ಸೇರಿಸಬಲ್ಲರು. “ನವೋದ್ಯಮ ಪ್ರಪಂಚದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಯಾವುದೇ ರಂಗದಲ್ಲಿ ಯೂನಿಕಾರ್ನ್‍ಗಳು ಬರಬಹುದಾಗಿದೆ. ಅವಶ್ಯಕತೆಯೇ ಆವಿಷ್ಕಾರದ ಜೀವಾಳ. ಆವಿಷ್ಕಾರದ ಹಸಿವು ನಮ್ಮಲ್ಲಿರಬೇಕು. ಮನುಷ್ಯ ಬೆಳೆದಂತೆ ಅಗತ್ಯತೆಗಳು ಬೆಳೆದಿದ್ದು, ನಾಗರಿಕತೆಯೂ ಬೆಳೆದಿದೆ. ಆಧುನಿಕತೆಯ ನಾಗರಿಕತೆಗೆ ಒಗ್ಗಿಕೊಂಡಿರುವ ಜನರು ಡಿಜಿಟಲೀಕರಣವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸುತ್ತಿದ್ದಾರೆ. ನಮ್ಮಲ್ಲೇನಿದೆ ಎಂಬುದು ನಾಗರಿಕತೆ , ನಾವೇನಾಗಿದ್ದೇವೆ ಎಂಬುದು ನಮ್ಮ ಸಂಸ್ಕೃತಿ. ಮಾನವೀಯ ಸ್ಪಂದನೆ ಹಾಗೂ ಸಾಮಾಜಿಕ ಕಳಕಳಿಯಂತಹ ಮೌಲ್ಯಗಳನ್ನು ಸ್ಟಾರ್ಟ್‍ಅಪ್‍ಗಳು ಹೊಂದಿರಬೇಕು”.

ಪರಿಸರ ಸಂರಕ್ಷಣೆ ಮಾಡಬೇಕು ಎಂಬ ಸಾಮಾನ್ಯ ಕ್ಲೀಷೆಯಿಂದ ಮೇಲೆದ್ದು ಬೊಮ್ಮಾಯಿ ಮಾತನಾಡಬಲ್ಲರು. “ಮಾನವನ ಜೀವನಶೈಲಿಯಿಂದ ಪರಿಸರ ಅಸಮತೋಲನವಾಗುತ್ತಿದೆ. ಭೂಮಿಯನ್ನು ಉಳಿಸದಿದ್ದರೆ, ಮಾನವಕುಲದ ಉಳಿಯುವಿಕೆಯೇ ಅಸಾಧ್ಯ. ಕೇವಲ ಹವಾಮಾನ ಬದಲಾವಣೆಯಿಂದ ವಿಕೋಪಗಳು ಆಗುತ್ತಿಲ್ಲ. ಅದು ನಮ್ಮ ಜೀವನಶೈಲಿಯಿಂದಲೂ ಹಾಳಾಗುತ್ತಿದೆ. ಮಾನವ ನಿರ್ಮಿತ ವಿಕೋಪಗಳನ್ನು ತಡೆಗಟ್ಟಲು ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ವಿಕೋಪಗಳು ಘಟಿಸುವುದನ್ನು ಸನ್ನದ್ಧತೆಯಿಂದ ತಡೆಯಬಹುದು” ಎನ್ನುತ್ತಾರೆ.

ಇದನ್ನೂ ಓದಿ : Parashurama Theme Park : ಕರಾವಳಿಯ ಪ್ರವಾಸೋದ್ಯಮಕ್ಕೆ ಇಂಬು: ಸಿಎಂ ಬಸವರಾಜ ಬೊಮ್ಮಾಯಿ

ಮೂಲತಃ ರಾಜಕಾರಣಿಯಾಗಿದ್ದರೂ ಮಾಧ್ಯಮ ಕ್ಷೇತ್ರವನ್ನೂ ಅತ್ಯಂತ ಹತ್ತಿರದಿಂದ ಕಂಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಾಧ್ಯಮಗಳ ಕುರಿತು ಹೊಸ ಹೊಳಹನ್ನು ನೀಡಬಲ್ಲರು. ಜುಲೈ 23ರಂದು ʻವಿಸ್ತಾರ ನ್ಯೂಸ್‌ʼ ಲೋಗೊ ಹಾಗೂ ವೆಬ್‌ಸೈಟ್‌ ಅನಾವರಣದಲ್ಲಿ ಮಾತನಾಡಿದ ಬೊಮ್ಮಾಯಿ, “ಮಾಧ್ಯಮ ಉದ್ಯಮವಾಗಿ ಬೆಳೆಯುತ್ತಿದ್ದರೆ, ಪತ್ರಿಕೋದ್ಯಮ ಜನಪರ ದನಿಯಾಗಿ ಬೆಳೆಯುತ್ತದೆ. ವಾಹಿನಿಗಳು ಸುದ್ದಿಗಳನ್ನು ವಿಶ್ಲೇಷಣೆ ಮಾಡುತ್ತವೆ. ಆದರೆ ಮಾಧ್ಯಮಗಳನ್ನು ಜನರು ವಿಶ್ಲೇಷಣೆ ಮಾಡುತ್ತಾರೆ. ಆದ್ದರಿಂದ ಸುದ್ದಿಗಳು ಪಾರದರ್ಶಕವಾಗಿ, ಸತ್ಯನಿಷ್ಟುರವಾಗಿ ಇರಬೇಕಾಗುತ್ತದೆ” ಎಂದಿದ್ದರು.

Exit mobile version