Site icon Vistara News

Basavaraja Bommai: ಇದು ಸಾರಾಯಿ ಗ್ಯಾರಂಟಿ ಸರಕಾರ; ಹೆಂಡ್ತಿಗೆ ನೀಡಿದ ಹಣ ಗಂಡನಿಂದ ವಸೂಲಿ ಎಂದ ಬೊಮ್ಮಾಯಿ!

Bommai against liqour Shops

Bommai against liqour Shops opening

ಬೆಂಗಳೂರು: ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಜನರಿಗೆ ಯಥೇಚ್ಛ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರಂಟಿ (Arrack Guarantee) ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಆರೋಪಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಕೊಟ್ಟ ಹಣವನ್ನು ಇದರ ಮೂಲಕ ವಸೂಲಿ ಮಾಡಲು ಮುಂದಾಗಿದೆ ಎಂದಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ (Arrack Shops at panchayat level) ತೆರೆಯಲು ಮುಂದಾಗಿರುವುದು ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ಒಂದೆಡೆ ಗ್ಯಾರಂಟಿ ಹೆಸರಲ್ಲಿ ಮಹಿಳೆಯರಿಗೆ 2000 ರೂ. ನೀಡುವುದಾಗಿ ಹೇಳುವ ಸರ್ಕಾರ ಅದೇ ಹಣವನ್ನು ಅವರ ಗಂಡಂದಿರಿಂದ ವಸೂಲಿ ಮಾಡಲು ಮದ್ಯ ಮಾರಾಟದ ಮಾರ್ಗ ಹುಡುಕಿಕೊಂಡಂತಿದೆ. ಹೆಂಡತಿಯ ದುಡ್ಡು ಗಂಡಂದಿರಿಂದ ಪಡೆಯುವ ಮನಿ ರಿಟರ್ನ್ ಪಾಲಿಸಿ ಹಾಕಿಕೊಂಡ ಹಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಸರ್ಕಾರಿ ಮದ್ಯದಂಗಡಿ ತೆರೆಯುತ್ತಿರುವುದಾಗಿ ಅಬಕಾರಿ ಸಚಿವರು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅಕ್ರಮ ತಡೆಯಲಾಗದಿದ್ದರೆ ನಿಮ್ಮ ಇಲಾಖೆ ಮಾಡುವುದಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಗ್ಯಾರೆಂಟಿ ಯೋಜನೆಯಲ್ಲಿ ಮನೆ ಯಜಮಾನಿ ಹುಡುಕುವ ಹೆಸರಲ್ಲಿ ಅತ್ತೆ ಸೊಸೆ ನಡುವೆ ಜಗಳ ಹಚ್ಚಿರುವ ಸರ್ಕಾರ ಇನ್ನು ಸಾರಾಯಿ ಕುಡಿಯಲು ಹಣಕ್ಕಾಗಿ ಗಂಡ ಹೆಂಡಿರ ನಡುವೆ ಜಗಳ ಹಚ್ಚಲು ಮುಂದಾಗಿದೆ. ಸರ್ಕಾರ ಆದಾಯ ಗಳಿಸಲು ಮದ್ಯ ಮಾರಾಟ ಮೊರೆ ಹೋದರೆ, ಸರ್ಕಾರದ ಗ್ಯಾರೆಂಟಿ ಪಡೆಯುವ ಮಹಿಳೆಯರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BY Vijayendra : ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಡಿದ ಡಿಕೆ ಶಿವಕುಮಾರ್‌ ನಿಜ ಬಣ್ಣ ಬಯಲು; ಬಿವೈ ವಿಜಯೇಂದ್ರ ಕಿಡಿ

ನಾಲ್ಕು ತಿಂಗಳಲ್ಲಿ ದಾಖಲೆ ಬಂದ್‌- ಬಿಜೆಪಿ ಲೇವಡಿ

ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದ ಮೇಲೆ ದಾಖಲೆ ಬಂದ್‌ ನಡೆದಿದೆ ಎಂದು ಲೇವಡಿ ಮಾಡಿರುವ ಬಿಜೆಪಿ ಈ ಬಗ್ಗೆ ಲೆಕ್ಕ ಕೊಟ್ಟಿದೆ.

ಕಾಂಗ್ರೆಸ್‌ನ ನಾಲ್ಕು ತಿಂಗಳ ಕಳಪೆ ಆಡಳಿತದಲ್ಲಿ ಕರ್ನಾಟಕದಲ್ಲಿ ದಾಖಲೆ ಬಂದ್‌ಗಳು ನಡೆದಿವೆ.
1. ವಿದ್ಯುತ್ ದರ ಏರಿಕೆಯನ್ನು ಪ್ರತಿಭಟಿಸಿ, ಕೈಗಾರಿಕೋದ್ಯಮಿಗಳಿಂದ ಕೈಗಾರಿಕೆಗಳ ಬಂದ್!
2.ಸ್ಟಾಲಿನ್ ಮುಲಾಜಿಗೆ ಬೇಕಾಬಿಟ್ಟಿ ನೀರು ಹರಿಸಿದ ಪರಿಣಾಮ, ಮಂಡ್ಯ ಬಂದ್ – ಬೆಂಗಳೂರು ಬಂದ್ – ಕರ್ನಾಟಕ ಬಂದ್!
3.ಸರ್ಕಾರದ ನಿರ್ಲಕ್ಷ್ಯ ಮಿತಿಮೀರಿ ಖಾಸಗಿ ಬಸ್, ಕ್ಯಾಬ್, ಆಟೋ ಚಾಲಕ- ಮಾಲೀಕರಿಂದ ಖಾಸಗಿ ಸಾರಿಗೆ ಬಂದ್!
4.ಚುನಾವಣೆಗೆ ಮುನ್ನ ಹೇಳಿದ್ದ ಬೊಗಳೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಂದ ಸಾರಿಗೆ ಬಂದ್!
5.ಅಂಗನವಾಡಿ ಸಿಬ್ಬಂದಿಗಳ ವೇತನ ವಂಚಿಸಿದ ಸರ್ಕಾರದ ‌ವಿರುದ್ಧ ಎಲ್ಲಾ ಅಂಗನವಾಡಿಗಳು ಬಂದ್!
6.ಭದ್ರಾ ನೀರು ಪೂರೈಕೆಯ ವೈಫಲ್ಯವನ್ನು ಖಂಡಿಸಿ ದಾವಣಗೆರೆ ಬಂದ್!
ರಾಜ್ಯದ ಅಭಿವೃದ್ಧಿಯಂತೂ ಈಗಾಗಲೇ ಬಂದ್ ಮಾಡಿರುವ ಕಾಂಗ್ರೆಸ್ ಸರ್ಕಾರ, ತಾವು ಅಧಿಕಾರಕ್ಕೆ ಬಂದಿರುವುದೇ ಬಂದ್ ಮಾಡಿಸಲು ಎಂಬುದನ್ನು ಪದೇಪದೇ ಸಾಬೀತುಪಡಿಸುತ್ತಿದೆ ಎಂದು ಬಿಜೆಪಿ ಹೇಳಿದೆ.

Exit mobile version