Site icon Vistara News

Basavaraja Bommai : ಸಿದ್ದರಾಮಯ್ಯಗೆ ಉತ್ತರ ಕೊಡಲು ಬಿಜೆಪಿ ಐಟಿ ಸೆಲ್‌ ಹುಡುಗ್ರು ಸಾಕು ಎಂದ ಬೊಮ್ಮಾಯಿ!

CM Siddaramaiah and Basavaraja Bommai

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಮೋದಿ ಫೋಬಿಯಾ (Modi Phobia) ಇದೆ.‌ ಇಡಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷ ಆಡಳಿತ ನೀಡುತ್ತಿದ್ದಾರೆ. ಎಲ್ಲ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ‌. ಮತ್ತೆ ಮೂರನೆ ಬಾರಿಗೆ ಪ್ರಧಾನಿ ಆಗಲಿದ್ದಾರೆ. ಹೀಗಾಗಿ ಅದನ್ನು ಸಹಿಸಿಕೊಳ್ಳಲಾಗದೇ ಸಿದ್ದರಾಮಯ್ಯ ಅವರ ವಿರುದ್ಧ ಅನಗತ್ಯ ಆರೋಪ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಹೇಳಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೇಂದ್ರದ ಅನುದಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ತಿರುಗೇಟನ್ನೂ ನೀಡಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ಜೊತೆ ಚರ್ಚೆ ಮಾಡಲು ಆಗಲ್ಲ ಅನ್ನುವುದು ಗೊತ್ತಿದೆ. ಅವರು ಮೊದಲು ನಮ್ಮ ಐಟಿ ಸೆಲ್ ಹುಡುಗರ ಜೊತೆ ಚರ್ಚೆ ಮಾಡಲಿ. ನಮ್ಮ ಐಟಿ ಸೆಲ್ ಹುಡುಗರು ಎಲ್ಲ ಮಾಹಿತಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.

15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಅನುದಾನ ಶೇ 4.7 ನಿಂದ ಶೇ 3.6ಗೆ ಇಳಿಯಲು ಸಿದ್ದರಾಮಯ್ಯ ಅವರೇ ಕಾರಣ. ಅವರು ಸರಿಯಾಗಿ ರಾಜ್ಯದ ವಸ್ತು ಸ್ಥಿತಿ ಬಗ್ಗೆ ಮಾಹಿತಿ ನೀಡಿಲ್ಲ. ನಮ್ಮ ಅವಧಿಯಲ್ಲಿಯೂ ಪ್ರವಾಹ ಬಂದಾಗ ಹಿಂದಿನ ಯುಪಿಎ ಸರ್ಕಾರ ಪರಿಹಾರ ನೀಡಿತ್ತಾ ? ನಾವು ಕೇಂದ್ರದ ಅನುದಾನಕ್ಕಾಗಿ ಕಾಯದೇ 2500 ಕೋಟಿ ರೂ. ಪರಿಹಾರ ನೀಡಿದ್ದೆವು ಎಂದು ವಿವರಿಸಿದರು.

ಕರ್ನಾಟಕದ ಜನರು ನಿಮಗೆ ಮತ ಹಾಕಿದ್ದು, ಒಳ್ಳೆಯ ಆಡಳಿತ ನೀಡಲಿ ಎಂದು ಆದರೆ, ನೀವು ಅವೈಜ್ಞಾನಿಕ ಗ್ಯಾರಂಟಿ ಜಾರಿ ಮಾಡಿ ಆರ್ಥಿಕತೆ ಹಳಿ ತಪ್ಪಿಸುತ್ತಿದ್ದೀರಿ. ಗ್ಯಾರೆಂಟಿ ಯೋಜನೆಗಳ ಜಾರಿಗೆ 30 ಸಾವಿರ ಕೋಟಿ ಖರ್ಚು ಮಾಡಲು ಹೊರಟಿದ್ದೀರಿ, ಆದರೆ, ಅದಕ್ಕೆ ಹಣ ಮೀಸಲಿಟ್ಟಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಅದನ್ನು ಅವರ ಶಾಸಕರೇ ಹೇಳುತ್ತಿದ್ದಾರೆ. ಅವರ ಶಾಸಕರನ್ನು ಸಮಾಧಾನ ಮಾಡಲು ಪ್ರತಿಯೊಬ್ಬರಿಗೂ 25 ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್ ಶಾಸಕರಿಗೂ 25 ಕೋಟಿ ಕೊಟ್ಟಿದ್ದೆ. ನಮಗೂ 25 ಕೋಟಿ ಕೊಡಬೇಕಾಗುತ್ತದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಶಾಸಕರಾದವರದು ದೌರ್ಭಾಗ್ಯ ಎಂದರು ಬೊಮ್ಮಾಯಿ.

ಇದನ್ನೂ ಓದಿ: CM Siddaramaiah: ಯತೀಂದ್ರ ಸಿದ್ದರಾಮಯ್ಯ ಉದ್ಭವ ಆಗುತ್ತಿರುವ ನಾಯಕ; ಡಿ.ಕೆ. ಶಿವಕುಮಾರ್‌ ವ್ಯಂಗ್ಯ

ಗ್ಯಾಂಗ್‌ ರೇಪ್‌ ಎಸ್‌ಐಟಿ ತನಿಖೆ ಆಗ್ರಹಿಸಿ 20ರಂದು ಪ್ರತಿಭಟನೆ

ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ನಡೆದ ಮುಸ್ಲಿಂ ಮಹಿಳೆಯ ಗ್ಯಾಂಗ್ ರೇಪ್ ಪ್ರಕರಣವನ್ನು ಎಸ್‌ಐಟಿಗೆ ವಹಿಸುವಂತೆ ಆಗ್ರಹಿಸಿ ಜನವರಿ 20ರಂದು ಹಾವೇರಿ ಎಸ್ಪಿ ಕಚೇರಿ ಎದುರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕ ನಾಯಕರು ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಹಾವೇರಿಯಲ್ಲಿ ನೈತಿಕ ಪೊಲಿಸ್ ಗಿರಿ ಮಾಡಿ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣವನ್ನು ಪೊಲಿಸರು ಮುಚ್ಚಿ ಹಾಕುವ ಯತ್ನ ಮಾಡಿದ್ದರು. ಹಾವೇರಿ ಎಸ್ಪಿ, ಹೊಮ್‌ಮಿನಿಸ್ಟರ್ ಅದನ್ನು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಆದರೆ, ಈಗ ಹಾನಗಲ್ ಪೊಲಿಸರನ್ನು ಅವರೇ ಅಮಾನತು ಮಾಡಿದ್ದಾರೆ‌. ಹೀಗಾಗಿ ಪೊಲಿಸರಿಂದ ಲೋಪವಾಗಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಕಾಪಾಡುವಲ್ಲಿ ರಾಜಕಾರಣ ಬಹಳ ಪಾತ್ರ ವಹಿಸುತ್ತಿದೆ. ಹಾನಗಲ್ ಪೊಲಿಸರು ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಆ ಹೆಣ್ಣು ಮಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಈ ಬಗ್ಗೆ ಸಿಎಂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಎಸ್ ಐಟಿ ತನಿಖೆ ನಡೆಸುವಂತೆ ಆಗ್ರಹಿಸಿ ಜನವರಿ 20ರಂದು ಹಾವೇರಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದೇವೆ. ಸಿಎಂ ಎಸ್ ಐಟಿ ತನಿಖೆಗೆ ನಿರಾಕರಿಸಿರುವುದು ಅಪರಾಧ ಮಾಡುವವರಿಗೆ ಪುಷ್ಟಿ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.

ಕಡಿಮೆ ಸೀಟು ಬಂದರೆ ಸಿದ್ದರಾಮಯ್ಯ ಸೀಟು ಖೋತಾ!

ಸಿಎಂ ಪುತ್ರ ಯತೀಂದ್ರ ಅವರೇ ಹೇಳಿರುವುದನ್ನು ಕೇಳಿದರೆ, ಕಾಂಗ್ರೆಸ್ ಹೆಚ್ಚು ಸೀಟು ಬಂದರೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ ಅಂತ ಹೇಳಿದ್ದಾರೆ. ಕಡಿಮೆ ಸೀಟು ಬಂದರೆ ಸಿಎಂ ಸ್ಥಾನ ಹೋಗುವ ಆತಂಕ ಅವರಿಗೆ ಕಾಡುತ್ತಿದೆ. ಅದಕ್ಕಾಗಿ ರಾಜ್ಯಕ್ಕೆ ಮೋದಿ ಬಂದಾಗೊಮ್ಮೆ ಸುಳ್ಳು ದಾಖಲೆಗಳನ್ನು ನೀಡಿ ಜನರ ದಾರಿ ತಪ್ಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೆ ಸರ್ಕಾರ ಮತ್ತೆ ಪ್ರಯತ್ನ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಅವಧಿಯಲ್ಲಿಯೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಅದರಲ್ಲಿ ಅವೈಜ್ಞಾನಿಕ ಏನಿದೆ ಎಂದು ಪ್ರಶ್ನಿಸಿದರು.

ಅನಂತ ಕುಮಾರ್‌ ಹೇಳಿಕೆಗೆ ಸಮರ್ಥನೆ ಇಲ್ಲ

ಸಂಸದ ಅನಂತಕುಮಾರ್ ಹೆಗಡೆ ಅವರ ಮಾತಿನ ಕುರಿತು ಪ್ರತಿಕ್ರಿಯಿಸಿ, ಯಾರೂ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಯಾರದಾದರೂ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ಭೂಮಿ ಮೇಲೆ ಇರುವ ಎಲ್ಲರ ಬಗ್ಗೆಯೂ ಏಕ ವಚನದಲ್ಲಿ ಮಾತನಾಡುತ್ತಾರೆ. ಆದರೆ, ಅವರ ಬಗ್ಗೆ ಬೇರೆಯವರು ಮಾತನಾಡಿದರೆ ಅದು ತಪ್ಪು ಎನ್ನುತ್ತಾರೆ. ಅದೇ ಈಗ ಪ್ರಶ್ನೆಯಾಗಿದೆ ಎಂದು ಹೇಳಿದರು.

Exit mobile version