Site icon Vistara News

Basavaraja Bommai : ಅಮಿತ್‌ ಶಾ ಭೇಟಿಯಾದ ಬಸವರಾಜ ಬೊಮ್ಮಾಯಿ; ವಿರೋಧ ಪಕ್ಷ ನಾಯಕ ಸ್ಥಾನ ಫಿಕ್ಸಾ?

Basavaraja Bommai meets Amit Shah

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಮಂಗಳವಾರ ದಿಲ್ಲಿಯಲ್ಲಿ ಗೃಹ ಸಚಿವ ಅಮಿತ್‌ ಶಾ (Home Minister Amit shah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸೋಮವಾರವೇ ದಿಲ್ಲಿಗೆ ಆಗಮಿಸಿದ್ದ ಅವರು ಪೂರ್ವ ನಿಯೋಜಿತವಾದಂತೆ ಅಮಿತ್‌ ಶಾ ಅವರನ್ನು (Bommai Meets Amit Shah) ಭೇಟಿಯಾದರು. ಸುಮಾರು ಹೊತ್ತು ಅವರಿಬ್ಬರೂ ಖಾಸಗಿಯಾಗಿ ಮಾತುಕತೆ ನಡೆಸಿದರು.

ಬಸವರಾಜ ಬೊಮ್ಮಾಯಿ ಮತ್ತು ಅಮಿತ್‌ ಶಾ ಅವರ ನಡುವೆ ರಾಜ್ಯದ ಸಮಕಾಲೀನ ರಾಜಕೀಯ, ಪಕ್ಷದ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಅದರ ಜತೆಗೆ ಲೋಕಸಭಾ ಚುನಾವಣೆಯ (Parliament Elections 2024) ಪರಿಸ್ಥಿತಿಯ ಅವಲೋಕನವೂ ನಡೆದಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು (BJP State President) ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನವನ್ನು (Opposition Party Leader) ತುಂಬುವ ಅನಿವಾರ್ಯತೆಯನ್ನು ಬೊಮ್ಮಾಯಿ ವಿವರಿಸಿದರು ಎಂದು ಹೇಳಲಾಗಿದೆ. ರಾಜ್ಯದ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು ಎಂದು ಬೊಮ್ಮಾಯಿ ಅವರೇ ಹೇಳಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ದಿಲ್ಲಿಯಲ್ಲಿ ಅಮಿತ್‌ ಶಾ ಅವರನ್ನು ಭೇಟಿಯಾದರು.

ಜೆ.ಪಿ. ನಡ್ಡಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ ರಾಜ್ಯದ ರಾಜಕೀಯ ಘಟನಾವಳಿಗಳ ಮೇಲುಸ್ತುವಾರಿಯನ್ನು ಅಮಿತ್‌ ಶಾ ಅವರೇ ಹೊತ್ತುಕೊಂಡಿರುವಂತೆ ಕಾಣುತ್ತಿದೆ. ಹೀಗಾಗಿಯೇ ಅವರು ಹಂತಹಂತವಾಗಿ ರಾಜ್ಯದ ನಾಯಕರನ್ನು ಕರೆಸಿ ಮಾತುಕತೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ. ರವಿ ಅವರನ್ನು ಕರೆಸಿಕೊಂಡು ಮಾತುಕೆ ನಡೆಸಿದ್ದರು.

ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಬಂದ ಸಿ.ಟಿ. ರವಿ ಅವರು ನೇರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅವರ ಕಾಲುಗಳಿಗೆ ನಮಸ್ಕರಿಸಿದ್ದರು. ಈ ರೀತಿ ಮಾಡುವಂತೆ ಅಂದರೆ ಬಿಎಸ್‌. ಯಡಿಯೂರಪ್ಪ ಅವರ ಆಶೀರ್ವಾದ ಪಡೆಯುವಂತೆ ಅಮಿತ್‌ ಶಾ ಅವರೇ ಸೂಚಿಸಿದ್ದರು ಎಂದು ಹೇಳಲಾಗಿತ್ತು. ಸಿ.ಟಿ ರವಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಸುದ್ದಿಗೆ ಈ ಭೇಟಿ ಪುಷ್ಟಿ ನೀಡಿತ್ತು.

ಅದಾದ ಬಳಿಕ ಅಮಿತ್‌ ಶಾ ಅವರು ಬಿ.ಎಸ್‌ ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ ಅವರನ್ನು ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಈ ಭೇಟಿಯೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಒಂದೊಮ್ಮೆ ಸಿ.ಟಿ. ರವಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಬೆಂಬಲ ನೀಡಬೇಕು ಎಂದು ಅಮಿತ್‌ ಶಾ ಅವರು ವಿಜಯೇಂದ್ರ ಅವರಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಸಿ.ಟಿ. ರವಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂಬ ಸುದ್ದಿಗೆ ಪೂರಕವಾಗಿಯೇ ಇತ್ತೀಚೆಗೆ ನಡೆದ ಸಂಘಟನಾತ್ಮಕ ಪುನರ್ರಚನೆಯಲ್ಲಿ ರವಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಿ ನೀಡಲಾಗಿತ್ತು. ಅದರ ಬೆನ್ನಿಗೇ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಲಾಗುತ್ತದೆ ಎಂಬ ನಿರೀಕ್ಷೆ ಇತ್ತು.

ಸಿ.ಟಿ. ರವಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಮತ್ತೊಬ್ಬ ಫೈರ್‌ ಬ್ರಾಂಡ್‌ ಲೀಡರ್‌ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಮಾಡಲಾಗುತ್ತದೆ ಎಂಬ ಸುದ್ದಿ ಹರಡಿತ್ತು. ಆದರೆ, ಈಗ ಆ ಸುದ್ದಿಯಲ್ಲಿ ಸ್ವಲ್ಪ ಬದಲಾವಣೆಯಾಗಿದ್ದು ಮತ್ತೆ ಬಸವರಾಜ ಬೊಮ್ಮಾಯಿ ಹೆಸರು ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: CT Ravi : ಡಿಕೆಶಿ ಗುರಿ ಇರುವುದು ಬೆಂಗಳೂರು ಅಭಿವೃದ್ಧಿಯಲ್ಲ, ತಮ್ಮ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಎಂದ ಸಿ.ಟಿ ರವಿ

ಬಿಎಸ್‌ವೈ ದಾಳ ಗುರಿ ತಲುಪಿತಾ?

ಈ ನಡುವೆ, ಅಮಿತ್‌ ಶಾ ಅವರು ಬಸವರಾಜ ಬೊಮ್ಮಾಯಿ ಅವರನ್ನು ದಿಲ್ಲಿಗೆ ಕರೆಸಿಕೊಳ್ಳಲು ಬಿ.ಎಸ್‌ ಯಡಿಯೂರಪ್ಪ ಅವರ ಆ ಒಂದು ನಡೆ ಕಾರಣವಾಯಿತಾ ಎಂಬ ಪ್ರಶ್ನೆಯೂ ಎದ್ದು ನಿಂತಿದೆ. ಬಿಎಸ್‌ವೈ ಅವರು ಹಿಂದಿನಿಂದಲೂ ವಿಪಕ್ಷ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಹೆಸರೇ ಹೇಳಿಕೊಂಡು ಬಂದಿದ್ದರು ಎನ್ನಲಾಗಿದೆ. ಆದರೆ, ಯಾವಾಗ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೆಸರು ಕೇಳಿಬಂತೋ ಆಗ ಬಿಎಸ್‌ವೈ ಅವರು ವಿದೇಶ ಪ್ರಯಾಣಕ್ಕೆ ಹೊರಟು ನಿಂತರು ಎನ್ನಲಾಗಿದೆ. ಏನು ಬೇಕಾದರೂ ಮಾಡಿಕೊಳ್ಳಿ ಎನ್ನುವ ಸಂದೇಶವನ್ನು ಬಿಎಸ್‌ವೈ ನೀಡಿದ್ದಾರೆ ಎನ್ನಲಾಗಿದೆ.

ಇದೀಗ ಈ ಸಂದೇಶವನ್ನು ಅರ್ಥ ಮಾಡಿಕೊಂಡ ಹೈಕಮಾಂಡ್‌ ಮತ್ತೆ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಪರಿಗಣಿಸಿದೆ ಎಂದು ಹೇಳಲಾಗಿದೆ. ಹೀಗಾಗಿ ವಿಪಕ್ಷ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರ ಹೆಸರೇ ಫೈನಲ್‌ ಆಗುವ ಸಾಧ್ಯತೆ ಇದೆ.

ಆದಷ್ಟು ಬೇಗ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ವಿಪಕ್ಷ ನಾಯಕನ ನೇಮಕ ಆಗಬೇಕು ಎಂಬ ಕೂಗು ಬಿಜೆಪಿಯಲ್ಲಿ ಜೋರಾಗಿರುವುದರಿಂದ ಹೈಕಮಾಂಡ್‌ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

Exit mobile version