Site icon Vistara News

Karnataka Budget 2023: ʼಸಬ್‌ ಕಾ ಸಾಥ್‌ʼ ಬಜೆಟ್‌ಗೆ ಸಿಎಂ ಬೊಮ್ಮಾಯಿ ಪ್ರಯತ್ನ; ಚುನಾವಣೆ ಹೊಸ್ತಿಲಲ್ಲಿ ಜಾರಿಯೇ ಅನುಮಾನ

basavaraja-bommai-tried-to-propose-all-inclusive-bugdet-karnataka-budget-2023

#image_title

ಬೆಂಗಳೂರು: ಚುನಾವಣೆಗೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ ( Karnataka Budget 2023) ಘೋಷಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕದ ಬಜೆಟ್‌ ಗಾತ್ರವು 3 ಲಕ್ಷ ಕೋಟಿ ರೂ. ಗಡಿ ದಾಟಿದೆ. ಸುಮಾರು ಎರಡೂವರೆ ಗಂಟೆ ಮಾಡಿದ ಭಾಷಣದಲ್ಲಿ ಅನೇಕ ಹೊಸ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.

ಸ್ವತಃ ಹಣಕಾಸು ವಿಚಾರವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಇತಿಮಿತಿಯಲ್ಲಿ ಅನೇಕ ಘೋಷಣೆಗಳನ್ನು ಮಾಡಿದ್ದಾರೆ. ನೌಕರರ ವೇತನ, ಪಿಂಚಣಿಗಳು, ಬಡ್ಡಿ ಪಾವತಿಗಳು ಹಾಘೂ ಆಡಳಿತ ವೆಚ್ಚದಂತಹ ಯೋಜನೇತರ ಬದ್ಧ ವೆಚ್ಚಗಳು ಹಾಗೂ ಪ್ರೋತ್ಸಾಹ ಧನ, ಸಾಮಾಜಿಕ ಭದ್ರತಾ ಪಿಂಚಣಿಗಳು, ಹಣಕಾಸು ನೆರವಿನಂತಹ ಯೋಜನೆ ಆಧಾರಿತ ಬದ್ಧತಾ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಈ ವರ್ಷದ 3.09 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ಈ ಬದ್ಧತಾ ವೆಚ್ಚಗಳೇ 2.25 ಲಕ್ಷ ಕೋಟಿ ರೂ. ದಾಟುತ್ತದೆ. ಮುಖ್ಯವಾಗಿ ರಾಜ್ಯದಲ್ಲಿ ಆರ್ಥಿಕ ಪ್ರಗತಿಗೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಅತ್ಯಗತ್ಯವಾದ ಬಂಡವಾಳ ವೆಚ್ಚವು ಕೇವಲ 61 ಸಾವಿರ ಕೋಟಿ ರೂ. ಇದೆ. ಇದಿಷ್ಟರಲ್ಲೂ ಕಳೆದ ವರ್ಷಗಳಲ್ಲಿ ಒಪ್ಪಿದ ವೆಚ್ಚಗಳೂ ಸೇರಿ ಹೊಸ ಯೋಜನೆಗಳನ್ನು ಘೋಷಿಸಲು ಯಾವುದೇ ಮುಖ್ಯಮಂತ್ರಿಗೆ ಸಿಗುವುದು ಬಹಳ ಕಡಿಮೆ ಸ್ಥಳಾವಕಾಶ. ಅಷ್ಟು ಕಡಿಮೆ ಸ್ಥಳಾವಕಾಶದಲ್ಲಿ, ಚುನಾವಣಾ ಬಜೆಟ್‌ ಮಂಡಿಸುವ ಹರಸಾಹಸವನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ರಾಜ್ಯ ತೆರಿಗೆ ಸಂಗ್ರಹವನ್ನು ಅಗಾಧ ಹೆಚ್ಚಿಸುವ (ಶೇ. 26) ಮಹತ್ವಾಕಾಂಕ್ಷಿ ಗುರಿಯನ್ನೂ ಹೊಂದಿದ್ದಾರೆ.

ಪ್ರಮುಖವಾಗಿ ಕೃಷಿ ಕ್ಷೇತ್ರದಲ್ಲಿ ರೈತರ ಬಂಡವಾಳ ನಿಧಿಯನ್ನು ಹೆಚ್ಚಿಸುವ ಕ್ರಮ ಕೈಗೊಂಡಿದ್ದಾರೆ. “ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂ. ಗಳಿಂದ 5 ಲಕ್ಷ ರೂ. ಗಳಿಗೆ ಹೆಚ್ಚಿಸಲು ನಿರ್ಧಾರ” ಮಾಡಲಾಗಿದೆ. “ಇದರಿಂದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ರೈತರಿಗೆ ಸುಲಭವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ ದೊರಕಿಸಿದಂತಾಗುತ್ತದೆ. ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂ. ಗಳಷ್ಟು ಸಾಲ ವಿತರಿಸಲಾಗುವುದು” ಎಂದಿದ್ದಾರೆ.

ರೈತರಿಗೆ ಹೆಚ್ಚಿನ ಪ್ರಮಾಣದ ಸಾಲವನ್ನು ದೊರಕಿಸಿಕೊಡುವ ಮೂಲಕ ಅವರು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ಪ್ರೋತ್ಸಾಹಿಸಿದಂತಾಗುತ್ತದೆ ಎನ್ನುವುದು ಸರ್ಕಾರದ ಉದ್ದೇಶ. ಆದರೆ ಈ ರೀತಿ ಕೃಷಿ ಚಟುವಟಿಕೆಗೆ ಪಡೆದುಕೊಂಡ ಸಾಲವನ್ನು ನಿಜವಾಗಿಯೂ ಕೃಷಿಗೇ ಬಳಸುತ್ತಿರುವವರೆಷ್ಟು ಎನ್ನುವ ಕುರಿತೇ ಅನುಮಾನಗಳಿವೆ.

ಚುನಾವಣಾ ವರ್ಷವಾದ್ಧರಿಂದ ಪ್ರಮುಖವಾಗಿ ಹಳೆ ಮೈಸೂರು ಭಾಗದತ್ತ ಹೆಚ್ಚು ಗಮನ ನೀಡಿದ್ದಾರೆ. “ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಏಷ್ಯಾದಲ್ಲಿಯೇ 2ನೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಹೊಂದಿರುವ ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆಯಡಿ 75 ಕೋಟಿ ರೂ. ಗಳ ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಿಸಲಾಗುವುದು” ಎಂದಿದ್ದಾರೆ. ರೇಷ್ಮೆ ಬೆಳೆಗಾರರು ಈ ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿರುವುದರ ಲಾಭವನ್ನು ಪಡೆಯಲು ಮುಂದಾಗಿದ್ದಾರೆ.

ಸರ್ಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪ್ರಮುಖ ಯೋಜನೆಯನ್ನು ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. “ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಇದರಡಿಯಲ್ಲಿ ಸರ್ಕಾರಿ ಪದವಿಪೂರ್ವ(ಪಿಯು) ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ(ಡಿಗ್ರಿ) ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು. ಈ ಉಚಿತ ಉನ್ನತ ಶಿಕ್ಷಣದಿಂದ ರಾಜ್ಯದ 8 ಲಕ್ಷ ವಿದ್ಯಾರ್ಥಿಗಳು ಅನುಕೂಲ ಪಡೆಯಲಿದ್ದಾರೆ” ಎಂದಿದ್ದಾರೆ. “ರಾಜ್ಯದ ಶಿಕ್ಷಣ ವಲಯದಲ್ಲಿ ಈ ದಿನ ಅವಿಸ್ಮರಣೀಯ ದಿನವಾಗಲಿದೆ” ಎಂದು ಬೊಮ್ಮಾಯಿ ಹೇಳಿದ್ದಾರೆ. ಶಿಕ್ಷಣ ಶುಲ್ಕ ನೀಡಲು ಕಷ್ಟ ಪಡುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

ಕನ್ನಡ ಭಾಷೆಗೆ ಉನ್ನತ ಶಿಕ್ಷಣದಲ್ಲಿ ಒತ್ತು ನೀಡಲು ಬೊಮ್ಮಾಯಿ ಮುಂದಾಗಿದ್ದಾರೆ. “ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವೃತ್ತಿಪರ ಕೋರ್ಸುಗಳಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್ ಪುಸ್ತಕಗಳು ಹಾಗೂ ಪಠ್ಯ ವಿಷಯಗಳನ್ನು ಮುಂದಿನ ಒಂದು ವರ್ಷದಲ್ಲಿ ಭಾಷಾಂತರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.

ಇಲ್ಲಿಯವರೆಗೆ ಕರ್ನಾಟಕದ ಜಿಲ್ಲಾ ಆಸ್ಪತ್ರೆಗಳಲ್ಲಿ ಹೆರಿಗೆಯಾದ ನಂತರ ತಾಯಿ ಮತ್ತು ಮಗುವನ್ನು ಉಚಿತವಾಗಿ ವಾಹನದಲ್ಲಿ ಮನೆಗೆ ಕಳಿಸುವ ನಗು ಮಗು ಯೋಜನೆ ಜಾರಿಯಲ್ಲಿತ್ತು. ಇದೀಗ ತಾಲೂಕು ಆಸ್ಪತ್ರೆಗಳಿಗೂ ಯೋಜನೆಯನ್ನು ವಿಸ್ತರಿಸಲು ಮುಂದಾಗಲಾಗಿದೆ. “ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆರಿಗೆಯಾದ ತಾಯಂದಿರು ಮತ್ತು ನವಜಾತ ಶಿಶುಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಸಾರಿಗೆ ಸೌಲಭ್ಯ ಕಲ್ಪಿಸಲು 12.5 ಕೋಟಿ ರೂ. ವೆಚ್ಚದಲ್ಲಿ ಹೊಸ ‘ನಗು ಮಗು’ ವಾಹನಗಳನ್ನು ಒದಗಿಸಲಾಗುವುದು” ಎಂದಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಕುರಿತು ಸಾರ್ವಜನಿಕರಲ್ಲಿರುವ ಮನೋಭಾವವನ್ನು ಬದಲಾಯಿಸಲು ಇದು ಸಹಕಾರಿ ಆಗಬಹುದಾಗಿದೆ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದನ್ನು ಪ್ರೋತ್ಸಾಹಿಸಲು ಬೊಮ್ಮಾಯಿ ಮುಂದಾಗಿದ್ದಾರೆ. ಸ್ವಸಹಾಯ ಗುಂಪುಗಳಿಗೆ ಬಂಡವಾಳ ನಿಧಿ ನೀಡಲು ಈಗಾಗಲೆ ಅವಕಾಶ ನೀಡಲಾಗಿದೆ. ಇದೀಗ ‘ಗೃಹಿಣಿ ಶಕ್ತಿ’ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಕುಟುಂಬ ನಿರ್ವಹಣೆಯೊಂದಿಗೆ ಮನೆಯ ಆರ್ಥಿಕ ಸುಧಾರಣೆಗಾಗಿ ಶ್ರಮಿಸುವ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ. ಸಹಾಯ ಧನವನ್ನು ಡಿ.ಬಿ.ಟಿ. ಮೂಲಕ ನೀಡಲಿದೆ” ಎಂದಿದ್ದಾರೆ. ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ಎಲ್ಲ ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹ ಲಕ್ಷ್ಮೀ ಯೋಜನೆಯನ್ನು ಘೋಷಣೆ ಮಾಡಿದೆ. ಗೃಹ ಲಕ್ಷ್ಮಿ ಯೋಜನೆಯ ಜನಪ್ರಿಯತೆಗೆ ಗೃಹಿಣಿ ಶಕ್ತಿ ಯೋಜನೆ ಎದುರಾಳಿ ಆಗುವುದೇ ಎನ್ನುವುದು ಕಾದುನೋಡಬೇಕು.

ಈಗಾಗಲೆ ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS) 10% ಮೀಸಲಾತಿಯನ್ನು ಜಾರಿ ಮಾಡಿದೆ. ರಾಜ್ಯದಲ್ಲಿ ಮೀಸಲಾತಿ ಇನ್ನೂ ಜಾರಿಯಾಗಿಲ್ಲ. ಈ ವರ್ಗವನ್ನು ಒಲಿಸಿಕೊಳ್ಳಲು ‘ನಮ್ಮ ನೆಲೆ’ ಎಂಬ ಹೊಸ ಯೋಜನೆಯನ್ನು ಬೊಮ್ಮಾಯಿ ಘೋಷಿಸಿದ್ದಾರೆ. “ಕರ್ನಾಟಕ ಗೃಹ ಮಂಡಳಿಯಿಂದ ಅಭಿವೃದ್ಧಿಪಡಿಸುವ ನಿವೇಶನಗಳ ಪೈಕಿ ಮೂರನೇ ಒಂದು ಭಾಗವನ್ನು, ಅಂದರೆ 10,000 ನಿವೇಶನಗಳನ್ನು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (EWS) ಹಂಚಿಕೆ ಮಾಡಲಾಗುವುದು” ಎಂದಿದ್ದಾರೆ.

ನೀತಿ ಆಯೋಗದ ಮಾದರಿಯಂತೆ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ (SITK) ಎಂದು ಪುನರ್‌ ರಚಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಈಗಾಗಲೆ ರಾಜ್ಯ ಯೋಜನಾ ಆಯೋಗವಿದ್ದು, ಅದರ ಪರಿಣಾಮಕಾರಿತ್ವ ಕಡಿಮೆಯಾಗುತ್ತ ನಾಮ್‌ ಕೆ ವಾಸ್ತೆ ಎನ್ನುವಂತಾಗಿದೆ. ಇದೀಗ ಹೊಸ ಸಂಸ್ಥೆಯಿಂದ ಎಷ್ಟು ಲಾಭವಾಗಲಿದೆ ಎನ್ನುವುದು ತಿಳಿಯಬೇಕಷ್ಟೆ.

ಆರ್ಥಿಕವಾಗಿ ಗಂಭೀರ ಯೋಜನೆಗಳ ಜತೆಗೆ ಕೆಲ ಜನಪ್ರತಿಯ ಯೋಜನೆಗಳನ್ನೂ ಬೊಮ್ಮಾಯಿ ಹಮ್ಮಿಕೊಂಡಿದ್ದಾರೆ. ಉದಾಹರಣೆಗೆ, “ನಗರ ಮತ್ತು ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ ಖ್ಯಾತ ನಟರಾದ ದಿವಂಗತ ಶಂಕರ್‌ನಾಗ್ ರವರ ಹೆಸರಿನಲ್ಲಿ ಟ್ಯಾಕ್ಸಿ ಮತ್ತು ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.

ಪ್ರವಾಸೋದ್ಯಮದ ಜತೆಗೆ ಜಾತಿ ಸಮೀಕರಣ

ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಜಾತಿ ಸಮೀಕರಣ ಮಾಡುವ ಯೋಜನೆಯನ್ನು ಬೊಮ್ಮಾಯಿ ಹಾಕಿಕೊಂಡಿದ್ದಾರೆ. ರಾಮನಗರದ ರಾಮದೇವರ ಬೆಟ್ಟದಲ್ಲಿ ಒಂದು ಭವ್ಯವಾದ ರಾಮಮಂದಿರವನ್ನು ನಿರ್ಮಿಸಲಾಗುವುದು ಎಂದಿದ್ದಾರೆ. ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಕುರುಹುಗಳಿರುವ ತಾಣಗಳ ಪ್ರವಾಸಿ ಸರ್ಕಿಟ್ ಒಂದನ್ನು ಈ ವರ್ಷದಲ್ಲಿ ಪ್ರಾರಂಭಿಸಲಾಗುವುದು. ಸಂತ ಸೇವಾ ಲಾಲ್ ರವರ ಜನ್ಮಸ್ಥಳವಾದ ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಸೌಲಭ್ಯವನ್ನು 5 ಕೋಟಿ ರೂ. ಗಳ ವೆಚ್ಚದಲ್ಲಿ ಕಲ್ಪಿಸಲಾಗುವುದು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿರುವ ಷಹಾಜಿ ಮಹಾರಾಜ್ ಸಮಾಧಿ ಸ್ಥಳವನ್ನು 5 ಕೋಟಿ ರೂ. ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ, ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದಿದ್ದಾರೆ.

ಒಂದೊಂದು ಯೋಜನೆಯೂ ಒಂದೊಂದು ಸಮುದಾಯವನ್ನು ಗಮನದಲ್ಲಿರಿಸಿಕೊಂಡಿರುವುದು ನೇರವಾಗಿಯೇ ತಿಳಿಯುತ್ತದೆ. ರಾಮ ಮಂದಿರವು ಒಂದು ಸಮುದಾಯದ ಬದಲಿಗೆ ಒಟ್ಟಾರೆ ಹಿಂದುತ್ವ ಓಟ್‌ ಬ್ಯಾಂಕ್‌ ಹಾಗೂ ರಾಮನಗರ ಜಿಲ್ಲೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿದೆ.

ರಾಮನ ದೇವಸ್ಥಾನ ಒಂದೆಡೆಯಾದರೆ, ರಾಮ ಭಕ್ತನಿಗೂ ಪ್ರಾಶಸ್ತ್ಯ ನೀಡಲಾಗಿದೆ. “ಆಂಜನೇಯ ಜನ್ಮಸ್ಥಳವೆಂದು ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗಳಿಗೆ ಮೂಲಸೌಕರ್ಯ ಒದಗಿಸಲು 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಒಳಗೊಂಡ ವಿಸ್ತ್ರತವಾದ ಯೋಜನೆಯನ್ನು ತಯಾರಿಸಿ, ಟೆಂಡರ್ ಕರೆಯಲಾಗಿದೆ” ಎಂದಿದ್ದಾರೆ.

“ನಗರದ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ವಿವಿಧ ಹೆಚ್ಚುವರಿಯಾಗಿ 2,000 ಹುದ್ದೆಗಳನ್ನು ಹಂತಗಳಲ್ಲಿ ಸೃಜಿಸಲಾಗುವುದು” ಎಂದಿರುವ ಬೊಮ್ಮಾಯಿ, ಪೊಲೀಸ್‌ ಕೆಲಸಕ್ಕಾಗಿ ಕಾದು ಕುಳಿತವರಿಗೆ ಅಲ್ಪಮಟ್ಟದ ನಿರಾಳ ನೀಡಿದ್ದಾರೆ.

ಹೆಚ್ಚುತ್ತಿರುವ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಪ್ರಯತ್ನ ಮಾಡಿದ್ದಾರೆ. “ರಾಜ್ಯದಲ್ಲಿನ ಆಟೋ ಚಾಲಕರು, ಚಾಲಕರು ಮತ್ತು ಲಾರಿ ಚಾಲಕರಿಗೆ ಹಾಗೂ ಡೆಲಿವರಿ ಸೇವೆಯನ್ನು ನೀಡುತ್ತಿರುವವರ ಇ-ಕಾಮರ್ಸ್‌ನಡಿ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ, ಅವಲಂಬಿತರಿಗೆ ಇಂತಹವರು ಮರಣ ಹೊಂದಿದಲ್ಲಿ 2 ಲಕ್ಷ ರೂ. ಗಳ ವಿಮಾ ಸೌಲಭ್ಯ ನೀಡಲಾಗುವುದು. ಅಂಥವರು ಅಪಘಾತದಲ್ಲಿ ಮರಣ ಹೊಂದಿದಲ್ಲಿ 2 ಲಕ್ಷ ರೂ. ನೀಡಲಾಗುವುದು. ಒಟ್ಟಾರೆ 4 ಲಕ್ಷ ರೂ.ವರೆಗಿನ ವಿಮಾ ಸೌಲಭ್ಯ ಕಲ್ಪಿಸಲು ‘ಮುಖ್ಯಮಂತ್ರಿ ವಿಮಾ ಯೋಜನೆ’ ಯನ್ನು ಜಾರಿಗೊಳಿಸುವ ಘೋಷಣೆ ಮಾಡಿದ್ದಾರೆ. ಇದರಿಂದ ಒಟ್ಟು 16.50 ಲಕ್ಷ ಜನರಿಗೆ ಸಹಾಯವಾಗುತ್ತದೆ ಎಂದಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವಧಿಯಲ್ಲಿ ಮಠ ಮಾನ್ಯಗಳಿಗೆ ಹಣ ನೀಡಲಾಗಿತ್ತು. ಮುಂದಿನ 2 ವರ್ಷಗಳಲ್ಲಿ ರಾಜ್ಯದಲ್ಲಿನ ವಿವಿಧ ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರಕ್ಕಾಗಿ 1,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.

ಕರ್ನಾಟಕ ರಾಜ್ಯದ ಕನ್ನಡ ಮಾತೆಯಾದ ‘ಶ್ರೀ ಭುವನೇಶ್ವರಿ’ ತಾಯಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಅನ್ನು ಬೆಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸಲಾಗುವುದು. “ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ’ ಎಂಬ ಕಾರ್ಯಕ್ರಮದಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡಂತೆ ಜಾನಪದ ಹಬ್ಬವನ್ನು ಆಯೋಜನೆ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: Karnataka Budget 2023: ಮಹಿಳಾ ಸಬಲೀಕರಣ ಯೋಜನೆಗಳಿಗಾಗಿ 46,278 ಕೋಟಿ ರೂ.ಮೀಸಲು; ಏನೆಲ್ಲ ಸೌಲಭ್ಯಗಳು?

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವುದಾಗಿ ಮತ್ತೊಮ್ಮೆ ಘೋಷಣೆ ಮಾಡಿದ್ದಾರೆ. 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗುವುದು ಎಂದಿದ್ದಾರೆ. ಈಗಾಗಲೆ ಅನೇಕ ಬಾರಿ ಘೋಷಣೆಯಾಗಿದ್ದರೂ ಇದು ಜಾರಿಯಾಗಿಲ್ಲ. ಈ ಬಾರಿಯಾದರೂ ಜಾರಿ ಆಗುತ್ತದೆಯೇ ನೋಡಬೇಕು.

ಇರುವ ಕಡಿಮೆ ಅವಕಾಶದಲ್ಲಿ ಅನೇಕ ಯೋಜನೆಗಳನ್ನು ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಅದರಲ್ಲೂ ರಾಜ್ಯದ ಸ್ವಂತ ತೆರಿಗೆಯನ್ನು ಶೇ.26 ಹೆಚ್ಚಳ ಮಾಡುವ ಮಹತ್ವಾಕಾಂಕ್ಷೆಯೂ ಇದೆ. ಪರಿಣಾಮಕಾರಿಯಾಗಿ ತೆರಿಗೆ ಸಂಗ್ರಹಣೆ ಹಾಗೂ ಬದ್ಧತೆಯನ್ನು ಹೊಂದಿದ್ದರೆ ಈ ಯೋಜನೆಗಳ ಜಾರಿ ಅಸಾಧ್ಯವಲ್ಲ ಎನ್ನುವಂತೆ ಕಾಣುತ್ತಿದೆ. ಆದರೆ ಈ ಘೋಷಣೆಗಳನ್ನು ಈಡೇರಿಸಲು ಸಮಯ ಸಾಕಷ್ಟಿಲ್ಲ. ಕಳೆದ ಬಜೆಟ್‌ನಲ್ಲಿ ಘೋಷಿಸಿದ ಅರ್ಧಕ್ಕೂ ಹೆಚ್ಚು ಪ್ರಸ್ತಾವನೆಗಳಿಗೆ ಆದೇಶಗಳಷ್ಟೇ ಆಗಿದೆ. ಅತ್ಯಂತ ಸಾಮಾನ್ಯ ಯೋಜನೆಗಳನ್ನೂ ʼಕ್ರಮ ವಹಿಸಲಾಗುತ್ತಿದೆʼ ಎಂದು ಕಾರ್ಯಾನುಷ್ಠಾನ ವರದಿಯಲ್ಲಿ ತಿಳಿಸಲಾಗಿದೆ. ಒಂದಿಡೀ ವರ್ಷ ಸಮಯ ಸಿಕ್ಕಾಗಲೇ ಪೂರ್ಣ ಬಜೆಟ್‌ ಅನುಷ್ಠಾನ ಆಗದೆ ಇರುವಾಗ, ಚುನಾವಣೆ ಹೊಸ್ತಿಲಲ್ಲಿ ಅದರ ಕಥೆ ಏನು ಎನ್ನುವುದು ಪ್ರಶ್ನೆ. ಚುನಾವಣೆ ನಂತರ ಸರ್ಕಾರ ಯಾವುದು ರಚನೆ ಆಗುತ್ತದೆ? ಸಿಎಂ ಯಾರಾಗುತ್ತಾರೆ? ಎನ್ನುವುದರ ಆಧಾರದಲ್ಲಿ ಈ ಯೋಜನೆಗಳ ಜಾರಿ ಅನ್ವಯವಾಗುತ್ತದೆ.

Exit mobile version