Site icon Vistara News

Basavaraja Bommai : ಸಿಎಂ ಜತೆ ಐಸಿಸ್‌ ಸಂಪರ್ಕಿತ ಮೌಲ್ವಿ ; NIA ತನಿಖೆಗೆ ಬೊಮ್ಮಾಯಿ ಆಗ್ರಹ

Tanveer Peera Cm Siddaramaiah Basavaraja Bommai

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಐಸಿಸ್ ಉಗ್ರ ಸಂಘಟನೆ (ISIS Terror Organization) ಜೊತೆ ಸಂಪರ್ಕ ಇರುವ ಮುಸ್ಲಿಂ ಮೌಲ್ವಿ (Muslim Moulvi) ಕುಳಿತಿರುವ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎನ್ಐಎಗೆ (NIA Investigation) ಒಪ್ಪಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯ ಜೊತೆ ವೇದಿಕೆ ಹಂಚಿಕೊಂಡ ಮೌಲ್ವಿಯ ವಿರುದ್ದ ವಿಜಯಪುರದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಅವರಿಗೆ ಐಎಸ್ ಐ ಸಂಪರ್ಕ ಇರುವ ಬಗ್ಗೆ ನಮ್ಮ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿಗಳು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಕುಕ್ಕರ್ ಬಾಂಬ್ ಪ್ರಕರಣದ ಬಗ್ಗೆ ಕಾಂಗ್ರೆಸ್‌ನವರು ಲಘುವಾಗಿ ಪರಿಗಣಿಸಿದ್ದರು. ಆದರೆ, ಅವರಲ್ಲಿ ಐದಾರು ಜನರು ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ ಎನ್ನುವುದನ್ನು ನೆನಪಿಸಿದರು.

ಮುಖ್ಯಮಂತ್ರಿಗಳು ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿರುವುದು ಓಲೈಕೆ ರಾಜಕಾರಣದ ಮುಂದುವರೆದ ಭಾಗ, ಅಲ್ಲದೇ ಪ್ರಚೋದನಾಕಾರಿಯಾಗಿಯೂ ಇದೆ. ಅವರ ಸಚಿವ ಸಂಪುಟದ ಸಹೋದ್ಯೋಗಿಯೊಬ್ಬರು ಅಲ್ಪ ಸಂಖ್ಯಾತರನ್ನು ಸ್ಪೀಕರ್‌ ಮಾಡಿದ್ದೇವೆ, ಎಲ್ಲರೂ ಅವರ ಮುಂದೆ ಜೀ ಹುಜೂರ್ ಅನಬೇಕು ಎನ್ನುತ್ತಾರೆ. ಇದೊಂದು ಪ್ರಚೋದನೆ. ಸಿಎಂ ಆದವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು. ದೇಶದ ಸಂಪತ್ತನ್ನು ಬೆಳೆಸಲು ಎಲ್ಲರೂ ದುಡಿಯಬೇಕು. ಅದು ದೇಶಕ್ಕೆ ಇರುತ್ತದೆ. ಅದನ್ನು ಹೇಳುವ ಬದಲು ಒಂದು ಸಮುದಾಯಕ್ಕೆ ಸಂಪತ್ತು ಹಂಚಿಕೆ ಮಾಡುವ ಬಗ್ಗೆ ಹೇಳುತ್ತಾರೆ‌. ಇದು ಸಮಾಜ ಒಡೆಯುವ ಕೆಲಸ ಎಂದು ಹೇಳಿದರು.

ರೈತರ ಸಾಲ ವಸೂಲಿ ನಿಲ್ಲಿಸಲಿ ಎಂದ ಬೊಮ್ಮಾಯಿ

ರಾಜ್ಯದಲ್ಲಿ ಬರದಿಂದ ರೈತರು ಕಂಗಾಲಾಗಿದ್ದಾರೆ. ಬರಗಾಲಕ್ಕೆ ಹಣ ಬಿಡಿಗಡೆ ಮಾಡಿಲ್ಲ. ರೈತರಿಗೆ ಬೆಳೆ ಇಲ್ಲ, ಕುಡಿಯುವ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಸರ್ಕಾರ ಇದುವರೆಗೂ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಕೇಂದ್ರದ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ಹಿಂದೆ ಪ್ರವಾಹ ಬಂದಾಗ ನಾವು ಒಂದು ತಿಂಗಳಲ್ಲಿ ಡಿಬಿಟಿ ಮುಖಾಂತರ ರೈತರಿಗೆ ಸುಮಾರು 2000 ಕೋಟಿ ರೂ. ಬಿಡುಗಡೆ ಮಾಡಿದ್ದೆವು. ಅವರು ಕೇವಲ 2000 ಸಾವಿರ ನೀಡುತ್ತೇನೆ ಎನ್ನುತ್ತಾರೆ. ಇದು ರೈತರಿಗೆ ಅವಮಾನ ಮಾಡಿದಂತೆ. ಕೇಂದ್ರದ ನಿಯಮಂತಾದರೂ ಒಣ ಬೇಸಾಯಕ್ಕೆ ಪ್ರತಿ ಹೆಕ್ಟೇರ್‌ಗೆ ಕನಿಷ್ಠ 6000 ರೂ., ನೀರಾವರಿಗೆ 18 ಸಾವಿರ ರೂ. ನೀಡುವ ಕೆಲಸ ಮಾಡಬೇಕು. ನಾವು ರೈತರಿಗೆ ಕಿಸಾನ್ ಸಮ್ಮಾನ್ ನೀಡುತ್ತಿದ್ದೆವು. ಅದನ್ನು ನಿಲ್ಲಿಸಿದ್ದಾರೆ. ರೈತರಿಂದ ಸಾಲ ವಸೂಲಿ ನಿಲ್ಲಿಸಬೇಕು. ಕೂಡಲೇ ಹೊಸ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಆನೆ ಅರ್ಜುನ ಸಾವಿನ ತನಿಖೆಯಾಗಲಿ

ಆನೆ ಅರ್ಜುನ ಸಾವಿನ ಬಗ್ಗೆ ಸರ್ಕಾರ ಸತ್ಯ ಮುಚ್ಚಿಡುವ ಕೆಲಸ ಮಾಡುತ್ತಿದೆ. ಅದೇ ಕಾರಣಕ್ಕೆ ತರಾತುರಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಅರಣ್ಯ ಇಲಾಖೆಯಲ್ಲಿ ಅರಾಜಕತೆ ನಡೆಯುತ್ತಿದೆ. ಐಎಫ್ಎಸ್ ಅಧಿಕಾರಿಗಳ ಹಿಂಡು ಬೆಂಗಳೂರಿನಲ್ಲಿ ಆನೆ ಹಿಂಡಿನಂತಿದ್ದಾರೆ. ಅವರನ್ನು ನಾನು ಕಾಡಿಗೆ ಕಳುಹಿಸುವ ಕೆಲಸ ಮಾಡಿದ್ದೆ, ಈಗ ಮತ್ತೆ ವಾಪಸ್ ಬರುವ‌ ಕೆಲಸ ಮಾಡುತ್ತಿದ್ದಾರೆ. ಐಎಫ್ಎಸ್ ಅಧಿಕಾರಿಗಳು ಬೆಂಗಳೂರಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಅವರಿಗೆ ಅರಣ್ಯದ ಜವಾಬ್ದಾರಿ ನೀಡಿ ಕಾಡಿಗೆ ಕಳುಹಿಸಬೇಕು. ಆನೆ ಅರ್ಜುನ ಹಾಗೂ ಬೆಂಗಳೂರಿನ ಚೀತಾ ಸಾವಿನ ಪ್ರಕರಣದಲ್ಲಿ ಸರಿಯಾದ ತರಬೇತಿ‌ ಇಲ್ಲದೆ ಕಾರಣವಾಗಿದೆ ಎಂದು ಹೇಳಿದರು.

ಸೋಮಣ್ಣ ಅವರ ಬಗ್ಗೆ ಹೈಕಮಾಂಡ್ ಮಾತನಾಡುತ್ತದೆ

ಪಕ್ಷದ ಹಿರಿಯ ನಾಯಕ ಸೋಮಣ್ಣ ಅವರ ನಡೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೋಮಣ್ಣ ಅವರು ಹಿರಿಯ ನಾಯಕರು. ಅವರ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ. ಅವರು ಚುನಾವಣೆ ಮುಗಿದ ನಂತರ ದೆಹಲಿಗೆ ಹೋಗುವುದಾಗಿ ಹೇಳಿದ್ದಾರೆ. ಹೈಕಮಾಂಡ್ ಅವರನ್ನು ಕರೆದು ಮಾತನಾಡುತ್ತಾರೆ ಎನ್ನುವ ವಿಶ್ವಾಸ ಇದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಷಯಕ್ಕೂ ಹೈಕಮಾಂಡ್ ಮಾತನಾಡುತ್ತದೆ ಎಂದರು.

ಮಾಜಿ ಸಚಿವ ಗೂಳುಹಟ್ಟಿ ಶೇಖರ್ ಅವರ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆ ತಪ್ಪು ಕಲ್ಪನೆಯಿಂದ ಕೂಡಿದೆ. ಸಂಘದಲ್ಲಿ ದಲಿತ ಸಮುದಾಯವರೂ ಎತ್ತರ ಮಟ್ಟದಲ್ಲಿದ್ದಾರೆ ಎಂದರು.

Exit mobile version