ಬೆಂಗಳೂರು: ಜೆಡಿಎಸ್ ಹಿರಿಯ ನಾಯಕ ಹಾಗೂ ಐದು ಬಾರಿ ವಿಧಾನ ಪರಿಷತ್ ಸದಸ್ಯರಾದ ಅನುಭವ ಹೊಂದಿರುವ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಉಪಸಭಾಪತಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಷ್ಟೆ ತಿಳಿಸಿದ್ದಾರೆ.
ಜಾತ್ಯಾತೀತ ಜನತಾದಳದೊಂದಿಗೆ ದಶಕಗಳ ಕಾಲ ಗುರುತಿಸಿಕೊಂಡಿದ್ದ ಹಿರಿಯ ರಾಜಕೀಯ ಮುಖಂಡ ಹೊರಟ್ಟಿ ಸದ್ಯದಲ್ಲೆ ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಉದ್ದೇಶ ಹೊಂದಿದ್ದಾರೆ. ಈ ಕುರಿತು ಮಾತುಕತೆ ನಡೆಸಿದ್ದ ಅವರು, ಮೇ 3ರಂದು ಕೇಂದ್ರ ಗೃಹಸಚಿವ ಅಮಿತ್ ಷಾ ಎದುರು ಅನೌಪಚಾರಿಕವಾಗಿ ಪಕ್ಷಕ್ಕೆ ಸೇರ್ಪಡೆ ಆಗಿದ್ದರು.
ಆದರೆ ಸಭಾಪತಿ ಸ್ಥಾನದಲ್ಲಿರುವವರು ಯಾವುದೇ ಪಕ್ಷಕ್ಕೆ ಅಧಿಕೃತವಾಗಿ ಸೇರಲು ಅವಕಾಶವಿಲ್ಲ. ಹೀಗಾಗಿ, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸೇರ್ಪಡೆ ಆಗುವುದಾಗಿ ತಿಳಿಸಿದ್ದರು. ಅಮಿತ್ ಷಾ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಕಂದಾಯ ಸಚಿವ ಆರ್. ಅಶೋಕ್ ಮುಂತಾದವರು ಜತೆಗಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹೊರಟ್ಟಿ, ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದೇನೆ. ಅಧಿಕೃತವಾಗಿ ಸೇರ್ಪಡೆ ಆಗಲು ಕೆಲವು ತೊಂದರೆಗಳಿವೆ. ಮೊದಲಿಗೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸದ್ಯ ಉಪಸಭಾಪತಿ ಯಾರೂ ಇಲ್ಲ. ಹಾಗಾಗಿ ರಾಜೀನಾಮೆಗೆ ಕೆಲವು ತಾಂತ್ರಿಕ ತೊಂdರೆ ಇವೆ. ಇವುಗಳನ್ನು ಬಗೆಹರಿಸಿಕೊಂಡು ರಾಜೀನಾಮೆ ನೀಡುತ್ತೇನೆ. ನಂತರ ಪಕ್ಷ ನಿಗದಿ ಮಾಡುವ ದಿನಾಂಕದಲ್ಲಿ ಸೇರ್ಪಡೆ ಆಗುತ್ತೇನೆ ಎಂದಿದ್ದರು.
ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮೂಲಕ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದ ಹೊರಟ್ಟಿ, ಈ ಬಾರಿ ತಮಗೇ ಟಿಕೆಟ್ ಲಭಿಸುತ್ತದೆ ಎಂದು ತಿಳಿಸಿದ್ದ ಬಿಜೆಪಿ ಹಿರಿಯ ನಾಯಕ ಮೋಹನ್ ಲಿಂಬಿಕಾಯಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.
ಇದನ್ನೂ ಓದಿ | ಬಿ.ವೈ ವಿಜಯೇಂದ್ರಗೆ ಪರಿಷತ್ ಟಿಕೆಟ್ ಪಕ್ಕಾ