Site icon Vistara News

BBMP Property Tax Hike: ಬೆಂಗಳೂರು ಜನರಿಗೆ ಬಿಗ್‌ ರಿಲೀಫ್; ಬಿಬಿಎಂಪಿ ಆಸ್ತಿ ತೆರಿಗೆ ಜಾರಿಗೆ ಬ್ರೇಕ್!

BBMP Property Tax Hike postpone

ಬೆಂಗಳೂರು: ಬೆಂಗಳೂರಿನ ಜನರಿಗೆ ಸದ್ಯಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ಬಿಬಿಎಂಪಿ ವ್ಯಾಪ್ತಿಯ ಸ್ಥಿರ ಆಸ್ತಿಗಳಿಗೆ (BBMP Property Tax Hike) 8 ವರ್ಷಗಳ ಬಳಿಕೆ ಆಸ್ತಿ ತೆರಿಗೆ ಹೆಚ್ಚಳ (property Tax hike) ಮಾಡಲು ಮುಂದಾಗಿದ್ದ ಕ್ರಮಕ್ಕೆ ತಾತ್ಕಾಲಿಕವಾಗಿ ತಡೆ ಬಿದ್ದಿದೆ. ಬೆಂಗಳೂರಿನಲ್ಲಿ ಎಲ್ಲ ಬಗೆಯ ಆಸ್ತಿಗಳಿಗೆ ಸರಾಸರಿ ಶೇ. 6.5ರಷ್ಟು ತೆರಿಗೆ ಏರಿಕೆ ಮಾಡಲು ಪ್ರಸ್ತಾವನೆ ಸಿದ್ಧವಾಗಿತ್ತು. ಇದಕ್ಕೆ ಅಧಿಸೂಚನೆಯನ್ನು ಹೊರಡಿಸುವುದು ಮಾತ್ರವೇ ಬಾಕಿ ಇತ್ತು. ಆದರೆ, ಕಾಂಗ್ರೆಸ್‌ ಶಾಸಕರು ಮತ್ತು ಸಚಿವರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಈ ಪ್ರಸ್ತಾವನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ.

ಗೈಡ್‌ಲೈನ್ಸ್ ವ್ಯಾಲ್ಯೂ (Guidelines Value) ಮೇಲೆ ತೆರಿಗೆ ಹೆಚ್ಚಳಕ್ಕೆ ತಾತ್ಕಾಲಿಕ ಅಧಿಸೂಚನೆಯನ್ನು ಈಚೆಗೆ ಬಿಬಿಎಂಪಿ ಹೊರಡಿಸಿತ್ತು. ಆದರೆ, ಲೋಕಸಭಾ ಚುನಾವಣೆಯ (Lok Sabha Election 2024) ಹೊಸ್ತಿಲಲ್ಲಿ ಇರುವುದರಿಂದ ಈಗ ಬಿಬಿಎಂಪಿಯಿಂದ ಆಸ್ತಿ ತೆರಿಗೆ ಹೆಚ್ಚಳ ಮಾಡಿದರೆ ಜನರ ವಿರೋಧವನ್ನು ಎದುರಿಸಬೇಕಾದೀತು. ಜತೆಗೆ ಪ್ರತಿಪಕ್ಷಗಳಿಗೂ ಇದೇ ದೊಡ್ಡ ಅಸ್ತ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಕೆಲ ಸಚಿವರಿಂದ ಹಾಗೂ ಶಾಸಕರಿಂದ ವಿರೋಧ ವ್ಯಕ್ತವಾಗಿದೆ. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳ ಪ್ರಸ್ತಾವನೆ ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದು ವಿಸ್ತಾರ ನ್ಯೂಸ್‌ಗೆ ಬಿಬಿಎಂಪಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಹೊಸ ಪದ್ಧತಿ ಹೇಗಿತ್ತು?

ಹೊಸ ಪದ್ಧತಿಯಂತೆ ಆಸ್ತಿಗಳ ತೆರಿಗೆ ಸರಾಸರಿ ಶೇ 6.5ರಷ್ಟು ಹೆಚ್ಚಾಗಲಿದೆ. ಇದರ ಪ್ರಕಾರ ಖಾಲಿ ನಿವೇಶನದ ಆಸ್ತಿ ತೆರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಧಿಕವಾಗಲಿದೆ. ಆಸ್ತಿ ತೆರಿಗೆಯನ್ನು 2016ರಲ್ಲಿ ಪರಿಷ್ಕರಿಸಲಾಗಿದ್ದು, ಆಗ ವಸತಿ ಆಸ್ತಿಗಳಿಗೆ ಶೇ.20 ಹಾಗೂ ವಸತಿಯೇತರ ಆಸ್ತಿಗಳಿಗೆ ಶೇ.25ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಹೊಸ ಪದ್ದತಿಯಂತೆ ಆಸ್ತಿ ತೆರಿಗೆ ಹೆಚ್ಚಳದ ಸರಾಸರಿ ಶೇ. 6.5ರಷ್ಟಿದ್ದು, ಎಂಟು ವರ್ಷಗಳಿಗೆ ಹೋಲಿಸಿದರೆ ವಾರ್ಷಿಕ ಶೇ.1ಕ್ಕಿಂತ ಕಡಿಮೆ ಹೆಚ್ಚಳವಾಗಿದೆ. ಈಗ ಇದನ್ನು ಮುಂದೂಡಲಾದರೂ ಚುನಾವಣೆ ಬಳಿಕ ಇದು ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಆದರೆ, ಮಾರ್ಗಸೂಚಿ ದರದ ಆಧಾರದಲ್ಲಿ ತೆರಿಗೆ ವಿಧಿಸುವ ಹೊಸ ಪದ್ಧತಿಯಲ್ಲಿ ಅಲ್ಪ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ. ಹೊಸ ಆಸ್ತಿ ತೆರಿಗೆ ವ್ಯವಸ್ಥೆಯಿಂದ ತೆರಿಗೆ ಹೊರೆಯನ್ನು ಹೆಚ್ಚಿಸುವುದಿಲ್ಲ. ಆದರೆ, ವಿಧಾನವನ್ನು ಸರಳಗೊಳಿಸಲಾಗುತ್ತದೆ. ಪ್ರತಿ ಆಸ್ತಿಗೆ ತೆರಿಗೆಯ ಗರಿಷ್ಠ ಹೆಚ್ಚಳವನ್ನು ಶೇ.10ಕ್ಕೆ ಮಿತಿಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು.

ಆರು ವರ್ಗಗಳಲ್ಲಿ ವರ್ಗೀಕರಣ

2008ರಲ್ಲಿ ಯುನಿಟ್ ವಿಸ್ತೀರ್ಣ ಮೌಲ್ಯ (ಯುಎವಿ) ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಈ ಪದ್ಧತಿಯಲ್ಲಿ 18 ವಿವಿಧ ವರ್ಗಗಳಲ್ಲಿ ಇಡೀ ನಗರವನ್ನು ಆರು ವಲಯಗಳಾಗಿ ವಿಂಗಡಿಸಿ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ. ನಾಗರಿಕರಿಗೆ ಸ್ವಯಂಘೋಷಣೆ ಸಲ್ಲಿಸಲೂ ಗೊಂದಲವಾಗಿದೆ. ಹೀಗಾಗಿ ಹೊಸ ಆಸ್ತಿ ತೆರಿಗೆ ಪದ್ಧತಿಯಲ್ಲಿ ಆರು ವರ್ಗಗಳಲ್ಲಿ ಮಾತ್ರ ಆಸ್ತಿಗಳನ್ನು ವರ್ಗೀಕರಿಸಿ, ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು.

ಮಾರ್ಗಸೂಚಿಯನ್ವಯ ತೆರಿಗೆ ಲೆಕ್ಕಾಚಾರ

ವಸತಿ (ಸ್ವಂತ ಮತ್ತು ಬಾಡಿಗೆ), ವಾಣಿಜ್ಯ, ಕೈಗಾರಿಕೆ, ಸ್ಟಾರ್‌ ಹೋಟೆಲ್, ವಿನಾಯಿತಿ ಕಟ್ಟಡಗಳು, ಸಂಪೂರ್ಣ ಖಾಲಿ ನಿವೇಶನಗಳು ಎಂಬ ಆರು ವರ್ಗಗಳಲ್ಲಿ ನಿವೇಶನ ವಿಸ್ತೀರ್ಣ, ಕಟ್ಟಡ ಪ್ರದೇಶ, ಸ್ವತ್ತಿನ ಬಳಕೆ, ಸ್ವತ್ತಿಗೆ ಅನ್ವಯವಾಗುವ ಪ್ರಸ್ತುತ ಮಾರ್ಗಸೂಚಿ ದರವನ್ನು ಆಧರಿಸಿ ಆಸ್ತಿ ತೆರಿಗೆ ಲೆಕ್ಕಹಾಕಲಾಗುವುದು. ನಾಗರಿಕರು ಮಾರ್ಗಸೂಚಿ ದರ ನಮೂದಿಸಬಹುದು. ಒಂದು ವೇಳೆ ಕಡಿಮೆ ಕ್ಲೇಮ್‌ ಮಾಡಿದ್ದರೆ ಆನ್‌ಲೈನ್‌ನಲ್ಲಿಯೇ ಮೂರು ತಿಂಗಳೊಳಗೆ ಬಿಬಿಎಂಪಿ ಅದನ್ನು ಸರಿಪಡಿಸುತ್ತದೆ. ಈ ಅವಧಿಯಲ್ಲಿ ನಿರ್ಧಾರವಾಗದಿದ್ದರೆ ನಾಗರಿಕರ ಕ್ಲೇಮ್ ಸ್ವೀಕರಿಸಿ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಚುನಾವಣೆ ಘೋಷಣೆ ಬೆನ್ನಲ್ಲೇ ಕುರುಡು ಕಾಂಚಾಣದ ಕುಣಿತ; ಬೆಂಗಳೂರಲ್ಲಿ 13 ಲಕ್ಷ ರೂ. ಜಪ್ತಿ

ಯಾವಾಗಿನಿಂದ ಜಾರಿ?

ಹೊಸ ಆಸ್ತಿ ತೆರಿಗೆ ಯಾವಾಗಿನಿಂದ ಜಾರಿಯಾಗಲಿದೆ ಎಂಬುದರ ಬಗ್ಗೆ ಸಚಿವರೂ ತಿಳಿಸಿಲ್ಲ, ಬಿಬಿಎಂಪಿಯೂ ಈ ಬಗ್ಗೆ ಪ್ರಕಟಣೆ ನೀಡಿಲ್ಲ. ಹೀಗಾಗಿ ಈ ಏಪ್ರಿಲ್‌ನಿಂದ ಅದು ಜಾರಿಯಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಹೊಸ ಆಸ್ತಿ ತೆರಿಗೆ ಪದ್ಧತಿಯ ಕರಡು ಅಧಿಸೂಚನೆ ಫೆ.15ರಂದು ಪ್ರಕಟವಾಗಿತ್ತು. ನಾಗರಿಕರ ಆಕ್ಷೇಪಣೆಗೆ 15 ದಿನಗಳ ಅವಕಾಶ ನೀಡಲಾಗಿತ್ತು. ಅಂತಿಮ ಅಧಿಸೂಚನೆ ಇನ್ನೂ ಹೊರಬಿದ್ದಿಲ್ಲ. ಇಷ್ಟರಲ್ಲಿಯೇ ಸದ್ಯಕ್ಕೆ ಅಧಿಸೂಚನೆಯನ್ನು ಹೊರಡಿಸುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

Exit mobile version