ಬೆಂಗಳೂರು: ಸನಾತನ ಧರ್ಮ (Sanatan Dharma) ಕೊರೊನಾ, ಡೆಂಘೀ (Corona and dengue disease) ಇದ್ದ ಹಾಗೆ ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Tamil Nadu Minister Udhayanidhi Stalin) ಹೇಳಿಕೆ ವಿರುದ್ಧ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Adichunchanagiri Mutt Seer Sri Nirmalanandanatha Swamiji) ಗುಡುಗಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜಾಗೃತವಾಗಿ ಮಾತನಾಡಬೇಕು. ಬಳಸುವ ಪದಗಳ ಬಗ್ಗೆ ನಿಗಾ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ” ಎಂದು ಮಹಾಭಾರತದ ಸಂದೇಶವನ್ನು ಉಲ್ಲೇಖಿಸಿದ್ದಾರೆ. ಸನಾತನ ಪದಕ್ಕೆ ಶಾಶ್ವತ ಎನ್ನುವ ಅರ್ಥವಿದೆ ಎಂದು ಹೇಳಿದರು.
ಇದನ್ನೂ ಓದಿ: Lok Sabha Election 2024 : ಬಿಜೆಪಿ ಟಿಕೆಟ್ ಪಾಲಿಟಿಕ್ಸ್; 3 ಕ್ಷೇತ್ರ, 3 ನಾಯಕರು! ಏನಿದೆ ಬೊಮ್ಮಾಯಿ ಲೆಕ್ಕಾಚಾರ?
ಧರ್ಮದ ಬಗ್ಗೆ ತಿಳಿದುಕೊಂಡವರು ಹೀಗೆ ಮಾತನಾಡುವುದಿಲ್ಲ. ಧರ್ಮದ ಬಗ್ಗೆ ತಿಳಿದುಕೊಳ್ಳದವನು ತಮ್ಮ ಧರ್ಮದ ಬಗ್ಗೆಯೂ ಮಾತನಾಡುತ್ತಾನೆ. ಇತರೆ ಧರ್ಮಗಳ ಬಗ್ಗೆಯೂ ಮಾತನಾಡುತ್ತಾನೆ. ನಾಡನ್ನು ಆಳುವ ನಾಸ್ತಿಕನಾದರೂ ಪ್ರಜೆಗಳ ಆಸ್ತಿಕತೆಯನ್ನು ಗೌರವಿಸಬೇಕು. ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಬೇರೊಂದು ಧರ್ಮಕ್ಕೆ ಸೆಳೆಯಲು ಸಾಧ್ಯವಿಲ್ಲ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಅವರು ಉದಯನಿಧಿ ಸ್ಟಾಲಿನ್ಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿಂದು ಧರ್ಮದ ಪರ ಸ್ವಾಮೀಜಿಗಳ ಹೋರಾಟ?
ಇದೇ ವೇಳೆ ಹಿಂದು ಧರ್ಮದ ಪರ ಸ್ವಾಮೀಜಿಗಳು ಹೋರಾಟಕ್ಕೆ ಮುಂದಾಗುವ ಸುಳಿವನ್ನು ಸಹ ನಿರ್ಮಲಾನಂದನಾಥ ಸ್ವಾಮೀಜಿ ನೀಡಿದ್ದಾರೆ. ಇದೇ ವಿಚಾರಕ್ಕೆ ಪ್ರತ್ಯೇಕವಾಗಿ ಸಭೆ ಕರೆಯುವ ಅನಿವಾರ್ಯತೆ ಬರಬಹುದು. ಬಂದಾಗ ಅದನ್ನು ಮುಖ್ಯವಾಗಿ ಇಟ್ಟುಕೊಂಡು ಚರ್ಚಿಸೋಣ ಎಂದು ಹೇಳಿದರು.
ಭಾರತ ಮರುನಾಮಕರಣ ಚರ್ಚೆ ಅನಗತ್ಯ
ಭಾರತ ಮರುನಾಮಕರಣ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಇಂಗ್ಲಿಷ್ನಲ್ಲಿ ಇಂಡಿಯಾ, ಹಿಂದಿಯಲ್ಲಿ ಭಾರತ ಅಂತ ಬಳಸುತ್ತಿದ್ದೇವೆ. ಈ ಚರ್ಚೆ ಯಾವಾಗ? ಹೇಗೆ ಶುರುವಾಯ್ತು ಎಂಬುದು ಗೊತ್ತಿಲ್ಲ. ಹಿಂದಿ, ಕನ್ನಡದಲ್ಲಿ ಬರೆಯುವಾಗ ಭಾರತ ಸರ್ಕಾರ ಎಂದೇ ಬರೆಯುತ್ತೇವೆ. ಕೆಲವೊಮ್ಮೆ ಇಂಡಿಯನ್ ಗವರ್ನಮೆಂಟ್ ಎಂದು ಬಳಸುತ್ತೇವೆ. ಕೇಂದ್ರ ಸರ್ಕಾರವೇ ಮರುನಾಮಕರಣ ಚರ್ಚೆ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ಚರ್ಚೆ ಅನಗತ್ಯ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಇದನ್ನೂ ಓದಿ: No Government Rules : ಸಿದ್ದು ಸರ್ಕಾರದಲ್ಲಿ ಬೇಕಾಬಿಟ್ಟಿ ಅಧಿಕಾರಿಗಳ ನಿಯೋಜನೆ; IAS ಜಾಗದಲ್ಲಿ KAS ಅಧಿಕಾರಿ!
ಅ.10 ಮತ್ತು 11ರಂದು ಮಠದ ನೂತನ ಕಟ್ಟಡ ಉದ್ಘಾಟನೆ
ಶ್ರೀಮಠದಿಂದ ಮೈಸೂರಿನಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಮಠದ ನೂತನ ಕಟ್ಟಡವನ್ನು ಅ.10 ಮತ್ತು 11ರಂದು ಉದ್ಘಾಟನೆ ಮಾಡಲಾಗುವುದು. ಬಿ.ಜಿ.ಎಸ್. ಸಾಂಸ್ಕೃತಿಕ ಭವನ, ಉಚಿತ ವಿದ್ಯಾರ್ಥಿ ನಿಲಯದ ಕಟ್ಟಡವನ್ನೂ ಉದ್ಘಾಟನೆ ಮಾಡಲಾಗುವುದು. ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗುವುದು. ಅದ್ವೈತ ಪರಂಪರೆಗೆ ಗೋರಕ್ಷನಾಥರ ಉಪದೇಶಗಳನ್ನು ಒಳಗೊಂಡ ಎರಡು ಗ್ರಂಥ, ಸಾಹುಕಾರ್ ಚನ್ನಯ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮೇಗೌಡ ಕುರಿತ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.