Site icon Vistara News

Belagavi Winter Session: ರೈತರ ಸಾಲ ಮನ್ನಾಕ್ಕೆ ಬಿಜೆಪಿ ಆಗ್ರಹ; ಇದು ದಿವಾಳಿ ಸರ್ಕಾರ ಎಂದ ಅಶೋಕ್‌

CM Siddaramaiah and R Ashok karnataka assembly live

ಬೆಳಗಾವಿ: ರಾಜ್ಯ ಸರ್ಕಾರ ದಿವಾಳಿ (Karnataka government is bankrupt) ಆಗಿದೆ. ಬರ ಪರಿಹಾರ ಹಣ (Drought Relief Money) ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದೆ. ಬರ ಪರಿಹಾರ ನೆರವು ನೀಡುವ ವಿಷಯದಲ್ಲಿ ದಿನಕ್ಕೊಂದು ಹೇಳಿಕೆ ನೀಡಿ ಕಾಲಹರಣ ಮಾಡುತ್ತಿರುವುದನ್ನು ಗಮನಿಸಿದರೆ ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ (Leader of the Opposition R Ashok) ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಆರೋಪಿಸಿದ್ದಾರೆ.

ವಿಧಾನಸಭೆಯಲ್ಲಿ ಬರಗಾಲ ಕುರಿತ ವಿಶೇಷ ಚರ್ಚೆ ಮುಂದುವರಿಸಿ ಗುರುವಾರ ಮಾತನಾಡಿದ ಆರ್.‌ ಅಶೋಕ್, ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.‌ ಬರಗಾಲದಿಂದ ಕಂಗಾಲಾಗಿರುವ ರೈತ ಸಮುದಾಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಬೆಳೆಗಾರರ ಎರಡು ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಬೇಕು, ಶಾಸಕರ ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್‌ಗಳಿಗೆ ಪರಮಾಧಿಕಾರ ನೀಡಿ ಪ್ರತಿ ತಾಲೂಕಿಗೆ ಐದು ಕೋಟಿ ರೂ. ನೀಡಬೇಕು, ಸ್ಥಗಿತಗೊಳಿಸಿರುವ ವಿದ್ಯಾನಿಧಿ ಯೋಜನೆ ಮತ್ತೆ ಆರಂಭಿಸಬೇಕು. ಕುಡಿಯುವ ನೀರು, ಮೇವು ಖರೀದಿ, ಗೋಶಾಲೆ ಆರಂಭಿಸಲು ಅನುದಾನ ನಿಗದಿ ಮಾಡಿ ಆದೇಶಗಳನ್ನು ತಕ್ಷಣವೇ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ನೆರವಿನ ಕಿಸಾನ್ ಸಮ್ಮಾನ್ ಯೋಜನೆಗೆ ಕೇಂದ್ರದ ಆರು ಸಾವಿರಕ್ಕೆ ನಮ್ಮ ಸರ್ಕಾರ ನಾಲ್ಕು ಸಾವಿರ‌ ರೂ. ಸೇರಿಸಿ ಹತ್ತು ಸಾವಿರ ರೂ. ನೀಡುತ್ತಿತ್ತು. ಅದನ್ನು ಮತ್ತೆ ಆರಂಭಿಸಬೇಕು. ಬರಗಾಲದ ವೇಳೆ ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು, ಜಾನುವಾರುಗಳಿಗೆ ಬರಗಾಲದಲ್ಲಿ ಬರಬಹುದಾದ ಕಾಯಿಲೆಗಳಿಂದ ರಕ್ಷಿಸಲು ಲಸಿಕೆ ಹಾಕಬೇಕು, ಬಡವರು, ಕೃಷಿ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ನಮ್ಮ ಸರ್ಕಾರ ಇದ್ದಾಗ ವಿತರಣೆ ಮಾಡಿದಂತೆ ಆಹಾರ ಕಿಟ್ ವಿತರಿಸಬೇಕು ಎಂದು ಆರ್.‌ ಅಶೋಕ್‌ ಆಗ್ರಹಿಸಿದರು.

ಇದನ್ನೂ ಓದಿ: NPS Cancellation: ರಾಜ್ಯದಲ್ಲಿ ಹಳೇ ಪಿಂಚಣಿ ಶೀಘ್ರ ಜಾರಿ? 10 ದಿನದಲ್ಲಿ ಸಮಿತಿ ಪುನಾರಚನೆ: ಕೃಷ್ಣ ಬೈರೇಗೌಡ

ನಾವು ಪರಿಹಾರ ನೀಡಿರುವಾಗ ನೀವು ಕೊಡಲು ಏನು ದಾಡಿ?

ಪದೇ ಪದೆ ಕೇಂದ್ರದ ಕಡೆ ಬೊಟ್ಟು ಮಾಡಬೇಡಿ. ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ್ದಂತೆ ಮಳೆ ಆಶ್ರಿತ, ನೀರಾವರಿ ಮತ್ತು ಬಹು ವಾರ್ಷಿಕ ಬೆಳೆಗಳಿಗೆ ದುಪ್ಪಟ್ಟು ಪರಿಹಾರ ವಿತರಿಸಬೇಕು. ನಮ್ಮ ಕಾಲದಲ್ಲಿ ಮೇ ತಿಂಗಳಲ್ಲಿ ನೆರೆ ಬಂದಾಗ ಜುಲೈನಲ್ಲಿ ಪರಿಹಾರವನ್ನು ಕೊಟ್ಟಿದ್ದೆವು. ಒಂದೇ ತಿಂಗಳಲ್ಲಿ ನಾವು ಪರಿಹಾರ ನೀಡಿರುವಾಗ ನೀವು ಕೊಡಲು ಏನು ದಾಡಿ? ಬರ ಪರಿಹಾರ ವಿತರಣೆ ವಿಷಯದಲ್ಲಿ ರಾಜಕೀಯ ಬೆರೆಸಬಾರದು. ಈಗ ನೀವು ನೆರವಿಗೆ ಮುಂದಾಗದಿದ್ದರೆ ರೈತರು ಆತ್ಮಹತ್ಯೆ ಹಾದಿ ತುಳೆಯುವ ಅಪಾಯ ಎದುರಾಗುತ್ತದೆ. ಗುಳೇ ಹೋಗುವ ಅನಿವಾರ್ಯ ಸ್ಥಿತಿ ಬರುತ್ತದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಿ ರೋಗ ರುಜಿನಗಳ ಹಾವಳಿ ಹೆಚ್ಚಾಗುತ್ತದೆ ಎಂದು ಆರ್.‌ ಅಶೋಕ್‌ ಕಳವಳ ವ್ಯಕ್ತಪಡಿಸಿದರು.

ನಿಮ್ಮ ವರ್ತನೆ ನೋಡಿದರೆ ಕಟುಕರ ರೀತಿ ಕಾಣುತ್ತಿದೆ

ನಾವು ಅಧಿಕಾರದಲ್ಲಿ ಇದ್ದಾಗ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತಾಯಿ ಹೃದಯದಿಂದ ಸ್ಪಂದಿಸುವ ಕೆಲಸ ಮಾಡಿದ್ದೇವೆ. ನಿಮ್ಮ ವರ್ತನೆ ನೋಡಿದರೆ ಕಟುಕರ ರೀತಿ ಕಾಣುತ್ತಿದೆ. ನಿಮಗೆ ತೆಲಂಗಾಣ ಚುನಾವಣೆಯಲ್ಲಿ ಇರುವ ಆಸಕ್ತಿ ಬರಪರಿಸ್ಥಿತಿ ನಿಭಾಯಿಸುವ ವಿಷಯದಲ್ಲಿ ಇಲ್ಲ. ಅನೇಕ ಸಚಿವರು ಇನ್ನೂ ಹೈದರಾಬಾದ್‌ನಲ್ಲೇ ವಾಸ್ತವ್ಯ ಹೂಡಿದ್ದಾರೆ ಎಂದು ಆರ್.‌ ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ನಿರೀಕ್ಷೆ ತಲೆಕೆಳಗಾಗಿದೆ

ಹದಿನಾಲ್ಕು ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ನಮ್ಮ ನಿರೀಕ್ಷೆ ತಲೆಕೆಳಗಾಗಿದೆ. ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವುದರಲ್ಲೇ ಹೆಚ್ಚು ಸಾಧನೆ ಮಾಡಿದಂತೆ ಅವರ ಆರ್ಥಿಕ ಚಾಣಾಕ್ಷತೆ ಕಾಣುತ್ತದೆ. ಗ್ಯಾರಂಟಿ ಹೆಸರಿನಲ್ಲಿ ಕೊಟ್ಟು ಹಾಲಿನಿಂದ ಆಲ್ಕೋಹಾಲ್‌ವರೆಗೆ, ಮಾರ್ಗಸೂಚಿ ದರ ಸೇರಿದಂತೆ ಎಲ್ಲದರ ಮೇಲೂ ಹೆಚ್ಚಳದ ಬರೆ ಹಾಕಿದ್ದಾರೆ. ಮತ್ತೆ ಈಗ ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಆರ್.‌ ಅಶೋಕ್‌ ಕಿಡಿಕಾರಿದರು.

ಅನುದಾನದ ಬಗ್ಗೆ ಆದೇಶಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ

ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದಾಗ ಯುಪಿಎ ಸರ್ಕಾರದ ಅವಧಿಗಿಂತ ಎನ್‌ಡಿಎ ಅವಧಿಯಲ್ಲೇ ಅತಿ ಹೆಚ್ಚು ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಿರುವುದನ್ನು ದಾಖಲೆಗಳು ಸಾಬೀತುಪಡಿಸಿವೆ. ತಾಲೂಕುವಾರು ಪರಿಹಾರಕ್ಕೆ ಎಷ್ಟು ಹಣ ಬಿಡುಗಡೆ ಮಾಡುತ್ತೀರಿ? ಅದನ್ನು ಯಾವುದಕ್ಕೆ ಬಳಸಬೇಕು? ಅದಕ್ಕೆ ಸಂಬಂಧಿಸಿದ ಆದೇಶಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಆರ್.‌ ಅಶೋಕ್‌ ಆಗ್ರಹಿಸಿದರು.

ಇದನ್ನೂ ಓದಿ: ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ; ಉ.ಕ ಜಿಲ್ಲಾ ಶಾಸಕರಲ್ಲೇ ಒಡಕು! ತಮ್ಮ ತಾಲೂಕಿಗೇ ಬೇಕೆಂದು ಸದನದಲ್ಲಿ ಕಿತ್ತಾಟ

ಕೋಣನೆಂದು ತಿಳಿಯುವವರೆಗೂ ಜಾಣನಿಗೆ ಅಹಂಕಾರ!

ರಾಜ್ಯದ ಜನತೆ ಸಂಕಷ್ಟದ ಸಮಯದಲ್ಲಿ ಇರುವಾಗ ನೀವು ಸ್ಪಂದಿಸದಿದ್ದರೆ ಅವರ ಶಾಪ ನಿಮಗೆ ತಟ್ಟುತ್ತದೆ. ಈಗಲಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಿ. ಈ ಸಂದರ್ಭದಲ್ಲಿ ಬೀಚಿ ಅವರು ಹೇಳಿರುವ ಮಾತು ನೆನಪಿಗೆ ಬರುತ್ತಿದೆ, “ಪ್ರತಿಯೊಬ್ಬ ಜಾಣನಿಗೂ ಅಹಂಕಾರ ಇದ್ದೇ ಇರುತ್ತದೆ, ತಾನೊಬ್ಬ ಕೋಣನೆಂದು ತಿಳಿಯುವವರೆಗೂ” ಎಂದು ಸರ್ಕಾರವನ್ನು ಆರ್.‌ ಅಶೋಕ್‌ ತಿವಿದರು.

Exit mobile version