Site icon Vistara News

Belagavi Winter Session: ಸದನದಲ್ಲಿ ಕದನ; ಬಿಜೆಪಿ ನಾಯಕರ ಸಿಟ್ಟು, ಜಮೀರ್‌ ರಾಜೀನಾಮೆಗೆ ಪಟ್ಟು!

Belagavi Winter Session BJP members protest demanding Jamir Ahmad resignation

ಬೆಳಗಾವಿ: ಬಿಜೆಪಿಯವರು ಮುಸ್ಲಿಂ ಸ್ಪೀಕರ್‌ಗೆ ಬಗ್ಗಿ ನಮಸ್ಕಾರ ಮಾಡುವಂತೆ ಮಾಡಿದ್ದು ನಮ್ಮ ಕಾಂಗ್ರೆಸ್‌ನವರು ಎಂದು ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmed Khan) ಕ್ಷಮೆ ಕೇಳುವಂತೆ ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಬಿಜೆಪಿ ಪಟ್ಟುಹಿಡಿದಿದೆ. ವಿಧಾನ ಪರಿಷತ್‌ (Legislative Council) ಕಲಾಪಕ್ಕೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಆಗಮಿಸುತ್ತಿದ್ದಂತೆ ಅವರು ಕ್ಷಮೆ ಕೇಳಬೇಕೆಂದು ಬಿಜೆಪಿ (BJP Karnataka) ಆಗ್ರಹಿಸಿತು. ಆದರೆ, ‌ಜಮೀರ್‌ ಕ್ಷಮೆ ಕೇಳದೆ ಸ್ಪಷ್ಟೀಕರಣ ನೀಡಲು ಮುಂದಾಗುತ್ತಿದ್ದಂತೆ ಬಿಜೆಪಿ ಗದ್ದಲ ನಡೆಸಿದೆ. ಜತೆಗೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದೆ. ಈ ನಡುವೆ ಸಭಾಪತಿಗಳು ನಡೆಸಿದ ಸಂಧಾನ ಸಭೆಯೂ ವಿಫಲವಾಗಿದೆ. ಇನ್ನು, ಜಮೀರ್‌, ನಾನು ಸಲಾಂ ಮಾಡ್ತಾರೆ ಎಂಬ ಪದ ಬಳಸಿಲ್ಲ. ಹಾಗೆ ಪದ ಬಳಸಿದ್ದರೆ ರಾಜಕೀಯ ನಿವೃತ್ತಿ (Political retirement) ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಪರಿಷತ್ ಕಲಾಪಕ್ಕೆ ಜಮೀರ್ ಅಹಮದ್ ಹಾಜರಾಗುತ್ತಿದ್ದಂತೆ ಅವರ ವಿರುದ್ಧ ಬಿಜೆಪಿ ಸದಸ್ಯರು ಗದ್ದಲ ಮಾಡಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ಉತ್ತರ ನೀಡಲು ಎದ್ದು ಜಮೀರ್ ಎದ್ದುನಿಂತರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಆಗ ಸಭಾನಾಯಕ ಭೋಸ್ ರಾಜು, ಈ ಸದನದ ಪೀಠಕ್ಕೆ ಜಮೀರ್ ಅಗೌರವ ತೋರಿಸಿಲ್ಲ ಎಂದು ಹೇಳಿದರು. ಅದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಈ ಸದನಕ್ಕೆ ಸಂಬಂಧ ಇಲ್ಲದ ವಿಷಯ ಅದು. ಪ್ರತಿಭಟನೆ ಕೈಬಿಟ್ಟು ಚರ್ಚೆ ಮಾಡಿ ಎಂದು ಹೇಳಿದರು.

ಇದನ್ನೂ ಓದಿ: BS Yediyurappa: ಬಿ.ಎಸ್.‌ ಯಡಿಯೂರಪ್ಪ ಮತ್ತೆ ಸ್ಪರ್ಧಿಸಿ ಸದನಕ್ಕೆ ಬರಲಿ: ಡಿ.ಕೆ. ಶಿವಕುಮಾರ್

ಆದರೆ, ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ತೀವ್ರ ಗದ್ದಲ ನಡೆಸಿದರು. ಗದ್ದಲದ ನಡುವೆಯೂ ಪ್ರಶ್ನೋತ್ತರ ಮುಂದುವರಿದಿದ್ದು, ಜಮೀರ್‌ ಅಹ್ಮದ್‌ ಉತ್ತರ ನೀಡಿದ್ದಾರೆ.

ಸಭಾಪತಿ ಸಂಧಾನ ವಿಫಲ

ಇದಾದ ಬಳಿಕ ಸಭಾಪತಿ ಕೊಠಡಿಯಲ್ಲಿ ಬಸವರಾಜ ಹೊರಟ್ಟಿ ಅವರು ಸಭಾ ನಾಯಕ ಭೋಸ್ ರಾಜು ಜತೆಗೂಡಿ ಕೋಟ ಶ್ರೀನಿವಾಸ್ ಪೂಜಾರಿ, ಎನ್. ರವಿಕುಮಾರ್ ಅವರೊಂದಿಗೆ ಸಂಧಾನ ಸಭೆಯನ್ನು ನಡೆಸಲಾಯಿತು. ಮೇಲ್ಮನೆಯಲ್ಲಿ ಕೆಳಮನೆಯ ವಿಚಾರ ತರುವುದು ಬೇಡ ಎಂದು ಸಭಾಪತಿ ಬಸವರಾಜ ಹೊರಟ್ಟಿ ಮನವೊಲಿಸಲು ಪ್ರಯತ್ನ ಮಾಡಿದರು. ಆದರೆ, ಕೋಟ ಶ್ರೀನಿವಾಸ್ ಪೂಜಾರಿ, ಎನ್. ರವಿಕುಮಾರ್ ಮನವೊಲಿಕೆಗೆ ಒಪ್ಪಿಲ್ಲ. ಸಭೆಯಿಂದ ವಾಪಸ್ ಆದ ಬಿಜೆಪಿ ಸದಸ್ಯರು ಕೆಲಕಾಲ ಸಮಾಲೋಚನೆ ನಡೆಸಿದ್ದು, ಜಮೀರ್ ರಾಜೀನಾಮೆಗೆ ಆಗ್ರಹಿಸಲು ನಿರ್ಧಾರ ಮಾಡಿದರು. ಹೀಗಾಗಿ ಧರಣಿಯನ್ನು ವಾಪಸ್ ಪಡೆಯದಿರಲು ತೀರ್ಮಾನಿಸಿದರು.

ಮತ್ತೆ ನಡೆದ ಸದನದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ತೆಲಂಗಾಣದ ಚುನಾವಣಾ ಪ್ರಚಾರದಲ್ಲಿ ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿಯವರು ಸಲಾಂ ಹೊಡೆಯುತ್ತಾರೆ ಅಂದಿದ್ದಾರೆ. ಈ ವೇಳೆ ಎದ್ದು ನಿಂತ ಜಮೀರ್ ತಮ್ಮ ಹೇಳಿಕೆಯನ್ನು ಪುನರುಚ್ಚಾರ ಮಾಡಿದರು. ನಾನು ಸಲಾಂ ಆಲೇಕುಂ ಅನ್ನಬೇಕು ಎಂದು ಹೇಳಿದ್ದೇನಾ? ನಾನು ಹೇಳಿದ್ದರಲ್ಲಿ ತಪ್ಪೇನಿದೆ? ಎಂದು ಸಚಿವ ಜಮೀರ್ ಅಹ್ಮದ್‌ ಖಾನ್ ಪ್ರಶ್ನೆ‌ ಮಾಡಿದರು.

ಈ ವೇಳೆ ಎದ್ದು ನಿಂತ ಕೋಟ ಶ್ರೀನಿವಾಸ್ ಪೂಜಾರಿ, ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿ ಸಲಾಂ ಹೊಡಿಯಬೇಕು ಅಂತ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆದಿದೆ. ಪರಸ್ಪರ ವಾಗ್ವಾದ ನಡಿದಿದೆ. ಸಚಿವ ಜಮೀರ್ ಅಹ್ಮದ್ ರಾಜಿನಾಮೆ ನೀಡಬೇಕು.‌ ಪೀಠಕ್ಕೆ ಅಗೌರವ ತೋರಿದವರನ್ನು ಸುಮ್ಮನೆ ಯಾಕೆ ಬಿಡುತ್ತೀರಾ? ರಾಜಿನಾಮೆ ಪಡೆಯಿರಿ ಎಂದು ಕೂಗಾಡಿದರು.

ಈ ವೇಳೆ ಎದ್ದು ನಿಂತ ಸಚಿವ ಸಂತೋಷ್ ಲಾಡ್, ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಭಿಕ್ಷೆ ಎಂದಿದ್ದ ಕಂಗನಾ ರಣಾವತ್ ಸಿನಿಮಾ ನೋಡೋಕೆ ಯುಪಿ ಸಿಎಂ ಆದಿತ್ಯನಾಥ್ ಹೋಗಿದ್ದರು. ಮೊದಲು ಅವರ ರಾಜಿನಾಮೆ ಪಡೆಯಿರಿ ಎಂದು ಹೇಳಿದರು. ಸಿಟ್ಟಿಗೆದ್ದ ಸಭಾಪತಿ ಬಸವರಾಜ ಹೊರಟ್ಟಿ, ಕಲಾಪವನ್ನ ಅನಿರ್ಧಿಷ್ಟಾವಧಿ ಮುಂದೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕವೂ ಪರಸ್ಪರ ಜಟಾಪಟಿ ಮುಂದುವರಿದಿದೆ.

ವಿಧಾನ ಪರಿಷತ್‌ ಸದಸ್ಯ ಜಮೀರ್ ಅಹ್ಮದ್‌ ಹೇಳಿಕೆ ವಿಚಾರವಾಗಿ ಮಾತನಾಡಿದ ಎನ್. ರವಿಕುಮಾರ್, ಜಮೀರ್ ರಾಜ್ಯದ ಮಂತ್ರಿಯಾಗಿದ್ದಾರೆ. ಅವರು ಯಾವುದೇ ಸಮುದಾಯಕ್ಕೆ ಮಾತ್ರ ಮಂತ್ರಿ ಅಲ್ಲ.

ರಾಜ್ಯದಲ್ಲಿ ಮುಸ್ಲಿಮರು‌ ಕಾಂಗ್ರೆಸ್‌ಗೆ ವೋಟ್ ಹಾಕುತ್ತಾರೆ ಸತ್ಯ. ಆದರೆ, 100% ಸತ್ಯ ಅಲ್ಲ. ಬಿಜೆಪಿ, ಜೆಡಿಎಸ್‌ಗೆ ಸಹ ವೋಟ್ ಹಾಕ್ತಾರೆ. ಸ್ಪೀಕರ್ ಸ್ಥಾನಕ್ಕೆ ಗೌರವ ಕೊಡಬೇಕು ಹೌದು. ಅದರಲ್ಲಿ ಸಂಶಯ ಬೇಡ. ಬಿಜೆಪಿಯವರನ್ನೂ ನಮಸ್ಕಾರ ಮಾಡುವ ಹಾಗೇ ಮಾಡಿದ್ದೇವೆ ಅಂದಿದ್ದಾರೆ. ಆದರೆ, ನಾವು ಮೊದಲು ಗೌರವ ಕೊಡುತ್ತಿರಲಿಲ್ವಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಸಚಿವ ಜಮೀರ್‌ ಅಹ್ಮದ್‌, ನಾನು ಹಾಗೇ ಹೇಳಿಲ್ಲ ಎಂದು ತಿಳಿಸಿದರು.

ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ ಎಂದು ಎದ್ದು ನಿಂತ ಜಮೀರ್, ನಾನು ನೀಡಿದ ಹೇಳಿಕೆಯ ವಿಡಿಯೊ ಪ್ಲೇ ಮಾಡಿ ಸದನಕ್ಕೆ ತಪ್ಪು ‌ಮಾಹಿತಿ ಕೊಡಬೇಡಿ ಎಂದು ಹೇಳಿದರು. ಆಗ ಕಲಾಪದಲ್ಲಿ ಮತ್ತೆ ಗದ್ದಲ ನಡೆದಿದೆ. ಇದರಿಂದ ಮತ್ತೆ ಕಲಾಪವನ್ನು ಹತ್ತು ನಿಮಿಷಗಳ ಕಾಲ ಸಭಾಪತಿ ಬಸವರಾಜ ಹೊರಟ್ಟಿ ಮುಂದೂಡಿದರು.

ಬಿಜೆಪಿ ತಂತ್ರಗಾರಿಕೆ

ಸದನವನ್ನು 10 ನಿಮಿಷಗಳ ಕಾಲ ಮುಂದೂಡುತ್ತಿದ್ದಂತೆ ಜಮೀರ್ ವಿರುದ್ಧದ ಹೋರಾಟಕ್ಕೆ ರಣತಂತ್ರ ರೂಪಿಸುವಲ್ಲಿ ಬಿಜೆಪಿ ಸದಸ್ಯರು ಒಂದೆಡೆ ಸೇರಿದರು. ಯಾವುದೇ ಕಾರಣಕ್ಕೂ ಪಟ್ಟು ಸಡಿಲಿಸದಿರುವ ತೀರ್ಮಾನಕ್ಕೆ ಬರಲಾಯಿತು.

ವಿಡಿಯೊ ತೋರಿಸಿ ಬಿಜೆಪಿ ಗದ್ದಲ

ಸಭಾಪತಿ ಕೊಠಡಿಯಲ್ಲಿ ಬಿಜೆಪಿ ಸದಸ್ಯರು ವಿಡಿಯೊ ತೋರಿಸಿದ್ದಾರೆ. ಅದರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ದೊಡ್ಡ ಬಿಜೆಪಿ ನಾಯಕರು ಸಲಾಂ ಹೊಡೆಯುವಂತೆ ಮಾಡಿದ್ದೇವೆ ಅಂತ ಹೇಳಿದ್ದಾರೆ. ಹೀಗಾಗಿ ಇದನ್ನು ಘೋರ ಅಪರಾಧ ಅಂತ ಪರಿಗಣಿಸಬೇಕು. ಜಮೀರ್ ಅವರ ರಾಜಿನಾಮೆ ಪಡೆಯಬೇಕು ಇಲ್ಲವೇ ಕ್ಷಮೆ ಕೇಳಬೇಕು ಎಂದು ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದರು. ಈ ವೇಳೆ ಪಾಯಿಂಟ್ ಆಫ್ ಆರ್ಡರ್ ಎಂದು ಎದ್ದು ನಿಂತ ಬಿಜೆಪಿಯ ನಾರಾಯಣಸ್ವಾಮಿ, ಪ್ರಮಾಣ ವಚನ ತೆಗೆದುಕೊಳ್ಳಬೇಕಾದರೆ ಬಳಸುವ ವಾಕ್ಯಗಳನ್ನು ಓದಿದರು. ಈ ವೇಳೆ ಎದ್ದು ನಿಂತ ಸಚಿವ ಜಮೀರ್ ಅಹಮದ್, ನಾನು ಸಲಾಂ ಹೊಡೆಯಬೇಕು ಅಂತ ಹೇಳಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ಆಗ ಸಭಾ ನಾಯಕ ಬೋಸರಾಜು ಮಾತನಾಡಿ, ಸಚಿವರು ಈಗಾಗಲೇ ಇದಕ್ಕೆ ಉತ್ತರ ನೀಡಿದ್ದಾರೆ. ಜಮೀರ್‌ ಅಹ್ಮದ್‌ ಖಾನ್‌ ಅವರ ಹೇಳಿಕೆಗೂ ಅಧಿವೇಶನಕ್ಕೂ ಸಂಬಂಧವಿಲ್ಲ. ಕೆಳಮನೆ ಸ್ಪೀಕರ್ ಬಗ್ಗೆ ಮಾತನಾಡಿದ್ದಾರೆ‌. ಬರಗಾಲದ, ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದರು.

ಹಕ್ಕು ಭಾದ್ಯತಾ ಸಮಿತಿಗೆ ವಹಿಸಲು ಸಮಿತಿಯನ್ನು ರಚನೆ ಮಾಡಿ

ಹಕ್ಕು ಭಾದ್ಯತಾ ಸಮಿತಿಗೆ ವಹಿಸಲು ಸಮಿತಿಯನ್ನು ರಚನೆ ಮಾಡಿ. ಜಮೀರ್ ಮಾತು ಸರಿಯೋ ತಪ್ಪು ಎಂಬುದನ್ನು ಆ ಸಮಿತಿ ನಿರ್ಧಾರ ಮಾಡಲಿ ಎಂದು ಬಿಜೆಪಿ ಆಗ್ರಹಿಸಿತು. ಈ ವೇಳೆ ಸಂವಿಧಾನಕ್ಕೆ ಅಪಮಾನ ಮಾಡಿದ ಜಮೀರ್‌ಗೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರ ಘೋಷಣೆ ಕೂಗಿದರು. ಘೋಷಣೆ ಕೂಗುತ್ತಾ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಬಿಜೆಪಿ ಸದಸ್ಯರ ಸಭಾತ್ಯಾಗ ನಡುವೆಯೂ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪ ಮುಂದುವರಿಯಿತು.

ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಜಮೀರ್‌ ಅಹ್ಮದ್‌ ಖಾನ್‌ ಅಸಂಬದ್ಧ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೋಟಾ ಶ್ರೀನಿವಾಸ ಪೂಜಾರಿ, ಸ್ಪೀಕರ್‌ ಸ್ಥಾನಕ್ಕೆ ಧರ್ಮ ಲೇಪನ‌ ಮಾಡಿ ಸಂವಿಧಾನ ಪೀಠಕ್ಕೆ ಅಪಮಾನ ಮಾಡಲಾಗಿದೆ. ಜಮೀರ್‌ ರಾಜೀನಾಮೆ ನೀಡುವಂತೆ ಸದನದಲ್ಲಿ ಒತ್ತಾಯ ಮಾಡಲಾಗಿದೆ. ಕನಿಷ್ಠ ಕ್ಷಮೆ ಕೇಳುವ ಸೌಜನ್ಯವನ್ನೂ ಜಮೀರ್ ಮಾಡಿಲ್ಲ.‌ ಇದು ಸಂವಿಧಾನ ಪೀಠಕ್ಕೆ ಮಾಡಿರುವ ಅಕ್ಷಮ್ಯ ಅಪಚಾರ ಹಾಗೂ ಅಪರಾಧವಾಗಿದೆ. ಈ ಬಗ್ಗೆ ಸರ್ಕಾರ ಮೊಂಡುವಾದ ಮುಂದಿಟ್ಟಿದೆ. ಸಭಾಪತಿ ಮೂಲಕ ಒಂದು ವಾರ ಸದನ‌ವನ್ನು ಮುಂದುವರಿಸುವಂತೆ ವಿನಂತಿ ಮಾಡುತ್ತೇವೆ. ಜಮೀರ್ ಹೇಳಿಕೆಯನ್ನು ಸಮರ್ಥಿಸುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.‌ ಕ್ಷಮೆ ಕೇಳುವ ಮನಸ್ಥಿತಿ‌ ಜಮೀರ್ ಅವರಲ್ಲಿ ಇಲ್ಲ. ದುರಂತ ಎಂದರೆ ಇಡಿ ಪಕ್ಷ ಜಮೀರ್‌ ಬೆಂಬಲಕ್ಕೆ ನಿಂತಿರುವುದಾಗಿದೆ. ಸದನದಲ್ಲಿ ಜಮೀರ್‌ ಕಾರ್ಯಕ್ರಮ, ಚಟುವಟಿಕೆಗೆ ಬಿಜೆಪಿ ಬಹಿಷ್ಕಾರ ಹಾಕಲಿದೆ. ಜಮೀರ್‌ ಅವರ ರಾಜೀನಾಮೆಯೇ ಈ ಸಮಸ್ಯೆಗೆ ಪರಿಹಾರವಾಗಿದೆ. ಸದನ ಸಮಿತಿ ತನಿಖೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Security Breach in Lok Sabha: ಪ್ರತಾಪ್‌ ಸಿಂಹಗೆ ಬುದ್ಧಿ ಹೇಳಿ ಎಂದ ಡಿಕೆಶಿ; ತಿರುಗಿಬಿದ್ದ ಬಿಜೆಪಿ

ಸುವರ್ಣ ಸೌಧದ ಪ್ರವೇಶ ದ್ವಾರದ ಮುಂದೆ ಪ್ರತಿಭಟನೆ

ಇದೇ ವೇಳೆ 10ಕ್ಕೂ ಹೆಚ್ಚು ಪರಿಷತ್ ಸದಸ್ಯರಿಂದ ಸುವರ್ಣಸೌಧ ಪ್ರವೇಶ ದ್ವಾರದ ಮುಂದೆ ಪ್ರತಿಭಟನೆ ಮಾಡಿದರು. ಸಚಿವ‌ ಸ್ಥಾನಕ್ಕೆ ಜಮೀರ್‌ ಅಹ್ಮದ್‌ ಖಾನ್ ರಾಜೀನಾಮೆ ‌‌ಕೊಡಬೇಕು ಎಂದು ಆಗ್ರಹಿಸಿದರು. ಕೋಟ ಶ್ರೀನಿವಾಸ್ ಪೂಜಾರಿ, ರವಿಕುಮಾರ್ ಸೇರಿ 10ಕ್ಕೂ ಹೆಚ್ಚು ಸದಸ್ಯರು ಘೋಷಣೆ ಕೂಗಿದ್ದಾರೆ.

Exit mobile version