ಬೆಳಗಾವಿ: ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ 2023 ಅನ್ನು ವಿಧಾನ ಪರಿಷತ್‌ನಲ್ಲಿ (Belagavi Winter Session) ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna ByreGowda) ಮಂಡಿಸಿದ್ದಾರೆ. ಅಲ್ಲದೆ, ಇದರಿಂದ ಮುದ್ರಾಂಕ ಶುಲ್ಕದಲ್ಲಿ (Stamp Duty) ಏರಿಕೆಯಾಗಲಿದೆಯೇ ಹೊರತು ನೋಂದಣಿ ಶುಲ್ಕ (Registration Fee) ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು 2000ನೇ ಇಸ್ವಿಯಲ್ಲಿ ಮುದ್ರಾಂಕ ಶುಲ್ಕವನ್ನು 20 ರೂಪಾಯಿ ನಿಗದಿ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಬರೋಬ್ಬರಿ 23 ವರ್ಷಗಳಾದರೂ ಇದರ ಪರಿಷ್ಕರಣೆ ಮಾಡಿಯೇ ಇರಲಿಲ್ಲ. ಹೀಗಾಗಿ ನಾವು ಈಗ ಈ ತರಹದ 33 ಸಬ್ ಆರ್ಟಿಕಲ್‌ಗಳನ್ನು (Sub Articles) ಪರಿಷ್ಕರಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ನೋಂದಣಿ ದರ ಹೆಚ್ಚಾಗುತ್ತದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಅದು ನಿಜವಲ್ಲ. ಇದು ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಅಲ್ಲ. ನಾನ್ ರಿಜಿಸ್ಟ್ರೇಬಲ್ ಮ್ಯಾಂಡೇಟ್ಸ್ ಆಗಿದೆ. 55 ಸ್ವರೂಪದ ಆರ್ಟಿಕಲ್ಸ್ ಇದಾವೆ. ಅದರ ಕೆಳಗಡೆ 181 ಸಬ್ ಆರ್ಟಿಕಲ್ಸ್ ಇವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಒಟ್ಟು 20 ಸಾವಿರ ಕೋಟಿ ರೂಪಾಯಿ ಆದಾಯ ಬರುತ್ತದೆ. ನಾನ್ ರಿಜಿಸ್ಟ್ರೇಬಲ್‌ನಿಂದ ನಮಗೆ ಕೇವಲ 10% ಆದಾಯ ಬರುತ್ತದೆ. ಒಟ್ಟು ಆದಾಯದ ಶೇ. 10ರಷ್ಟು ಮಾತ್ರ ನಮಗೆ ಇದರಿಂದ ಬರುತ್ತದೆ. ಇದು ಕೂಡ ನಮಗೆ ಮುಖ್ಯ. ಯಾರಾದರೂ ಸ್ಟಾಂಪ್ ಡ್ಯೂಟಿ ಕಟ್ಟಿದರೆ ಎನ್‌ಫೋರ್ಸೆಬಲ್ ಆಗುತ್ತದೆ. ಸ್ಟಾಂಪ್ ಡ್ಯೂಟಿ ಕಟ್ಟದೇ ಇದ್ದರೆ ಕಾಂಟ್ರಾಕ್ಟ್‌ಗೆ ಮಾನ್ಯತೆ ಇರುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಡಿಜಿಟಲ್ ಪೇಮೆಂಟ್ ಕೂಡ ಜಾರಿಗೆ ಚಿಂತನೆ
10-20 ವರ್ಷ ಹಿಂದೆ ನಿಗದಿ ಮಾಡಿದ್ದ ಸ್ಟಾಂಪ್ ಡ್ಯೂಟಿ ಈಗಲೂ ಹಾಗೇ ಇವೆ. ಸ್ಟಾಂಪ್ ಡ್ಯೂಟಿಯ ಪರಿಷ್ಕರಣೆ ಮಾಡಿ ಜನರಿಗೆ ಈ ಬಗ್ಗೆ ತಿಳಿಸುತ್ತೇವೆ. ಸೋರಿಕೆಯನ್ನು ಕೂಡ ತಡೆಗಟ್ಟಲು ಡಿಜಿಟಲ್ ಪೇಮೆಂಟ್ ಕೂಡ ಜಾರಿ ಮಾಡಲು ಚಿಂತನೆ ಇದೆ. ಕೇಂದ್ರ ಸರ್ಕಾರದ ಜತೆಗೂ ಮಾತುಕತೆ ನಡೆಯುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
23 ವರ್ಷಗಳ ಬಳಿಕ ಪರಿಷ್ಕರಣೆ
ಅಫಿಡವಿಟ್‌ಗೆ 2000ನೇ ಇಸ್ವಿಯಲ್ಲಿ 20 ರೂಪಾಯಿ ಮುದ್ರಾಂಕ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಅದಾಗಿ 23 ವರ್ಷ ಕಳೆದರೂ ಪರಿಷ್ಕರಣೆಯನ್ನು ಮಾಡಲಾಗಿಲ್ಲ. ಇದೇ ರೀತಿಯಾದಂತಹ 33 ಸಬ್ ಆರ್ಟಿಕಲ್‌ಗಳನ್ನು ನಾವು ಪರಿಷ್ಕರಣೆ ಮಾಡಿದ್ದೇವೆ. ಬೇರೆ ರಾಜ್ಯಗಳ ಮುದ್ರಾಂಕ ಶುಲ್ಕ ಮೀರದಂತೆ ನಾವು ಪರಿಷ್ಕರಣೆ ಮಾಡಿದ್ದೇವೆ. ಇದರಿಂದ ನಮಗೆ ವರ್ಷಕ್ಕೆ 2000 ಕೋಟಿ ರೂಪಾಯಿ ಆದಾಯ ಬರುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇದನ್ನೂ ಓದಿ: Caste Census: ಜಾತಿ ಗಣತಿಗೆ ನನ್ನ ವಿರೋಧವಿಲ್ಲ, ಸಮೀಕ್ಷೆ ವೈಜ್ಞಾನಿಕವಾಗಿರಬೇಕು: ಡಿ.ಕೆ. ಶಿವಕುಮಾರ್
ಸ್ಟಾಂಪ್ ಡ್ಯೂಟಿ ಕಟ್ಟಿದರೆ ಜನರಿಗೂ ಕಾನೂನಿನ ರಕ್ಷಣೆ
ಸಾಂಸ್ಥಿಕ ವ್ಯವಹಾರಸ್ಥರು ಹೆಚ್ಚು ಸ್ಟಾಂಪ್ ಡ್ಯೂಟಿ ಕಟ್ಟಬೇಕು. ಸೋರಿಕೆ ತಡೆಯಲು ಮುಂದಿನ ಹಂತದಲ್ಲಿ ಜನವರಿಯಲ್ಲಿ ವಿಧೇಯಕವನ್ನು ತರುತ್ತೇವೆ. ಸ್ಟಾಂಪ್ ಡ್ಯೂಟಿ ಕಟ್ಟಿದರೆ ಜನರಿಗೂ ಕಾನೂನಿನ ರಕ್ಷಣೆ ಸಿಗುತ್ತದೆ. ಹೀಗಾಗಿ ತಿದ್ದುಪಡಿ ತಂದಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.