Site icon Vistara News

Belagavi Winter Session: ಬರ ವೈಫಲ್ಯ ಬಗ್ಗೆ ವಿಪಕ್ಷಗಳಿಂದ ಮೊದಲ ದಿನವೇ ನಿಲುವಳಿ ನೋಟಿಸ್‌!

Belagavi Winter Session

ಬೆಂಗಳೂರು: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ (ಡಿ. 4) ಅಧಿವೇಶನ (Belagavi Winter Session) ಆರಂಭವಾಗಿದೆ. ಅಧಿವೇಶನದ ಮೊದಲ ದಿನವೇ ವಿಪಕ್ಷಗಳಿಂದ ನಿಲುವಳಿ ನೋಟಿಸ್ (Adjournment notice) ಜಾರಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಜಂಟಿ ನೋಟಿಸ್ ನೀಡಿದ್ದು, ಸದನದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ರಾಜ್ಯ ಸರ್ಕಾರದ (Congress Government) ವೈಫಲ್ಯ ಚರ್ಚಿಸಲು ಆಗ್ರಹಿಸಿವೆ.

ರಾಜ್ಯವು ಬರಗಾಲಕ್ಕೆ ತುತ್ತಾಗುವ ಸ್ಪಷ್ಟ ಸೂಚನೆ ಇದ್ದರೂ ಬರ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾಗಿದ್ದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಸರ್ಕಾರದ ವೈಫಲ್ಯದ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ನೀಡಬೇಕೆಂದು ಬಿಜೆಪಿ ಹಾಗೂ ಜೆಡಿಎಸ್‌ ತನ್ನ ನಿಲುವಳಿ ಸೂಚನೆಯಲ್ಲಿ ಕೋರಿವೆ.

ನಿಲುವಳಿ ಸೂಚನೆ ಪತ್ರದಲ್ಲೇನಿದೆ?

ರಾಜ್ಯಾದ್ಯಂತ ಬರಗಾಲ ಆವರಿಸಿದೆ. ಉಳುಮೆ ಮತ್ತು ಬಿತ್ತನೆ ಕಾಲದಲ್ಲಿ ಬೀಳಬೇಕಾಗಿದ್ದ ಮಳೆ ಕೈಕೊಟ್ಟ ಕಾರಣ 215 ತಾಲೂಕುಗಳು ತೀವ್ರ ಬರ ಪೀಡಿತವಾಗಿವೆ. ರೈತರು ಬಿತ್ತನೆ ಮಾಡಿದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸೇರಿ ಒಟ್ಟು 48 ಲಕ್ಷ ಹೆಕ್ಟೇರ್ ಬೆಳೆ ನಾಶ ಆಗಿದ್ದು, ಆತಂಕಗೊಂಡಿರುವ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ರಾಜ್ಯದಲ್ಲಿ ಬರಗಾಲ ಕಾಮಗಾರಿಗಳು ನಡೆಯುತ್ತಿಲ್ಲ. ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ದಿನಾಂಕ 13-09-2023 ರಂದೇ ಬರ ಪೀಡಿತ ತಾಲೂಕುಗಳನ್ನು ಪೋಷಣೆ ಮಾಡಲಾಗಿದೆ. ಹೀಗಿದ್ದರೂ ಸರ್ಕಾರ ಕಳೆದೆರಡು ದಿನಗಳ ಹಿಂದಷ್ಟೇ ಕೇವಲ 2000 ರೂ. ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ.

ಜಾನುವಾರುಗಳಿಗೆ ಮೇವಿಗೆ ತೊಂದರೆಯಾಗದಂತೆ ಮೇವು ಬ್ಯಾಂಕ್ ಸ್ಥಾಪಿಸಿ, ಗೋಶಾಲೆಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಂಡಿಲ್ಲ. ಜತೆಗೆ ಜನಸಾಮಾನ್ಯರಿಗೆ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿಲ್ಲ. ರಾಜ್ಯವು ಬರಗಾಲಕ್ಕೆ ತುತ್ತಾಗುವ ಸ್ಪಷ್ಟ ಸೂಚನೆ ಇದ್ದರೂ ಬರ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾಗಿದ್ದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಸರ್ಕಾರ ವಿಫಲವಾಗಿದೆ. ಈ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ನೀಡಬೇಕೆಂದು ಕೋರುತ್ತೇವೆ” ಎಂದು ಬಿಜೆಪಿ ಹಾಗೂ ಜೆಡಿಎಸ್‌ ತನ್ನ ನಿಲುವಳಿ ಸೂಚನೆ ಪತ್ರದಲ್ಲಿ ಉಲ್ಲೇಖಿಸಿವೆ.

ಇದನ್ನೂ ಓದಿ: Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

ಉತ್ತರ ಕೊಡಲಿವೆಯೇ ಸರ್ಕಾರ?

ಈ ಸಂಬಂಧ ಸದನದಲ್ಲಿ ಈ ಬಾರಿ ಬರ ನಿರ್ವಹಣೆ ಬಗ್ಗೆ ತೀವ್ರವಾಗಿ ಚರ್ಚೆ ನಡೆಸಲು, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಹಾಗೂ ಜೆಡಿಎಸ್‌ ಮುಂದಾಗಿದೆ. ಅಲ್ಲದೆ, ಈಗಾಗಲೇ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಬರ ಅಧ್ಯಯನ ನಡೆಸಿವೆ. ಅದರಲ್ಲೂ ಜೆಡಿಎಸ್‌ ಬರ ಅಧ್ಯಯನ ನಡೆಸಿ ಅದರ ವರದಿಯನ್ನು ಭಾನುವಾರ (ಡಿ. 3) ರಾಜ್ಯಪಾಲರಿಗೆ ಸಲ್ಲಿಸಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿ ಬನ್ನಿ ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ. ಇದರ ಜತೆಗೆ ಕೇಂದ್ರ ಸರ್ಕಾರದಿಂದ ಇನ್ನೂ ಅನುದಾನ ಬಂದಿಲ್ಲ ಎಂಬ ವಾದವನ್ನೂ ಮುಂದಿಡಲು ಮುಂದಾಗಲಾಗಿದೆ ಎನ್ನಲಾಗಿದೆ.

Exit mobile version