Site icon Vistara News

LK Advani: ಅಡ್ವಾಣಿಗೆ ಭಾರತ ರತ್ನ; ಕೊಟ್ಟುಕೊಳ್ಳಲಿ, ನಾವೇನು ಬೇಡ ಎಂದಿಲ್ಲ ; ಆದರೆ.., ಎಂದ ಸಿದ್ದರಾಮಯ್ಯ

CM Siddaramaiah

ದಾವಣಗೆರೆ: ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (LK Advani) ಅವರಿಗೆ ‘ಭಾರತ ರತ್ನ’ (Bharat Ratna) ಪ್ರಶಸ್ತಿ ಘೋಷಿಸಿದ ಕೇಂದ್ರ ಬಿಜೆಪಿ ಸರ್ಕಾರದ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಕೊಡಲಿ, ಬೇಡ ಎಂದು ನಾವು ಹೇಳಿಲ್ಲ ಎಂದು ಹೇಳಿದ್ದಾರೆ.

ದಾವಣಗೆರೆಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತ ರತ್ನವನ್ನು ಕೊಡುವುದು ಬೇಡ ಎಂದು ನಾವು ಹೇಳಿಲ್ಲ. ನಾನು ತುಮಕೂರು ಸಿದ್ಧಗಂಗ ಸ್ವಾಮಿಗಳಿಗೆ ಕೊಡಬೇಕು ಎಂದು ತಿಳಿಸಿ ಪತ್ರ ಬರೆದಿದ್ದೆ ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: LK Advani: ಅಡ್ವಾಣಿಗೆ ಭಾರತರತ್ನ; ವಿನಯವಂತ ರಾಜಕಾರಣಿಗೆ ಸಂದ ಗೌರವ; ಪೇಜಾವರ ಶ್ರೀ

ಗುತ್ತಿಗೆದಾರರ ಬಿಲ್ ಪಾಸ್‌ ಮಾಡಲು ತೊಂದರೆ: ದೂರು ನೀಡಿದರೆ ತನಿಖೆ

ನಗರೋತ್ಥಾನ ಯೋಜನೆಯಡಿ ಕಾಮಗಾರಿಯ ಬಿಲ್ ಪಾಸ್‌ ಮಾಡಲು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ದೂರು ನೀಡಿದರೆ ತನಿಖೆ ಕೈಗೊಂಡು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರೋತ್ಥಾನ ಯೋಜನೆಯಡಿ ಕಾಮಗಾರಿಯ ಬಿಲ್ ಪಾಸ್‌ ಮಾಡಲು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ 10 ಜಿಲ್ಲೆಗಳ ಗುತ್ತಿಗೆದಾರರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅವರು ಬಾಯಿ ಮಾತಿನಲ್ಲಿ ಹೇಳುವುದನ್ನು ಬಿಟ್ಟು, ಲಿಖಿತ ರೂಪದಲ್ಲಿ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶೀಘ್ರದಲ್ಲಿ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಶೀಘ್ರದಲ್ಲಿಯೇ ಸಿದ್ಧಪಡಿಸಲಾಗುವುದು. ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಯಾರಿಗೆ ಜನಪ್ರಿಯತೆ ಇದೆ? ಯಾರಿಗೆ ಕೊಟ್ಟರೆ ಅನುಕೂಲ ಎಂಬ ಬಗ್ಗೆ ಸಮೀಕ್ಷೆ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರನಿಗೆ ಟಿಕೆಟ್‌ ಬಗ್ಗೆ ಪ್ರತಿಕ್ರಿಯೆ

ಲೋಕಸಭಾ ಚುನಾವಣೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗನಿಗೆ ಟಿಕೆಟ್ ಕೊಡಿವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅವರು ಕೂಡ ಒಬ್ಬ ಟಿಕೆಟ್ ಆಕಾಂಕ್ಷಿಯಾಗಿ ಕೇಳುತ್ತಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಕೇಳುವವರ ಸಂಖ್ಯೆ ಜಾಸ್ತಿ ಇರುತ್ತದೆ. ಸ್ಥಳೀಯ ನಾಯಕರು, ಬ್ಲಾಕ್ ಸಮಿತಿ ಅಧ್ಯಕ್ಷರು, ಶಾಸಕರು, ಸಂಸದರ ಅಭಿಪ್ರಾಯ ಪಡೆದು ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: LK Advani: ಬಿಜೆಪಿಯ ಗುರು ಶಿಷ್ಯರಾದ ಆಡ್ವಾಣಿ- ಮೋದಿ ನಡುವಿನ ಬಾಂಧವ್ಯದ ಕ್ಷಣಗಳು ಇಲ್ಲಿವೆ ನೋಡಿ

ಬಾಗೂರು ಚನ್ನಕೇಶವ ದೇವಸ್ಥಾನದೊಳಗೆ ಈಶ್ವರಾನಂದ ಸ್ವಾಮೀಜಿ ಅವರನ್ನು ಬಿಟ್ಟಿಲ್ಲ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಗೊತ್ತಿಲ್ಲದ ವಿಚಾರದ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡುವುದು ಎಂದು ಹೇಳಿದರು.

Exit mobile version