Site icon Vistara News

LK Advani: ಅಡ್ವಾಣಿಗೆ ಭಾರತರತ್ನ; ವಿನಯವಂತ ರಾಜಕಾರಣಿಗೆ ಸಂದ ಗೌರವ; ಪೇಜಾವರ ಶ್ರೀ

Bharat Ratna for LK Advani tribute to a humble politician says Pejawar Sri

ಉಡುಪಿ: ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (LK Advani) ಅವರಿಗೆ ‘ಭಾರತ ರತ್ನ’ (Bharat Ratna) ಪ್ರಶಸ್ತಿ ಘೋಷಿಸಿದ ಕೇಂದ್ರ ಬಿಜೆಪಿ ಸರ್ಕಾರದ ಕ್ರಮಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ (Vishwa Prasanna Swamiji) ಸಂತಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಿಂದ ಸಂದೇಶ ನೀಡಿರುವ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ ಈ ವಿಚಾರ ಕೇಳಿ ತುಂಬಾ ಸಂತೋಷವಾಗಿದೆ. ಶ್ರೀರಾಮಚಂದ್ರನ ಭಕ್ತಿಯನ್ನು ದೇಶದಲ್ಲಿ ಜಾಗೃತವಾಗಿ ಇಟ್ಟವರು ಅಡ್ವಾಣಿಯಾಗಿದ್ದಾರೆ. ರಥಯಾತ್ರೆಯ ಮೂಲಕ ಸುಪ್ತವಾಗಿದ್ದ ರಾಮಮಂದಿರ ಹೋರಾಟಕ್ಕೆ ಬಲ ತುಂಬಿದವರು ಇವರು. ಹಿರಿಯ ಶ್ರೀಗಳಾಗಿರುವ ವಿಶ್ವೇಶ ತೀರ್ಥರ ಜತೆ ಅಡ್ವಾಣಿಯವರಿಗೆ ವಿಶೇಷ ಒಡನಾಟ ಇತ್ತು. ಈ ವಯಸ್ಸಿನಲ್ಲೂ ಅಡ್ವಾಣಿ ಅವರ ಶ್ರದ್ಧೆ ಮೆಚ್ಚುವಂಥದ್ದು ಎಂದು ಹೇಳಿದ್ದಾರೆ.

ಅಡ್ವಾಣಿ ದೇಶದ ರಾಜಕಾರಣಕ್ಕೆ ಉತ್ತಮ ಮಾರ್ಗದರ್ಶಿಯಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿ ಹುಟ್ಟಿ ದೊಡ್ಡ ರಾಜಕಾರಣಿಯಾಗಿ ಬೆಳೆದವರು ಅವರು. ಉಪ ಪ್ರಧಾನಿಯಾಗಿ ಗೃಹ ಇಲಾಖೆ ಹಾಗೂ ವಾರ್ತಾ ಸಚಿವರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಕೇವಲ ರಾಜಕೀಯ ಮಾತ್ರವಲ್ಲ ಧಾರ್ಮಿಕ ಪ್ರಜ್ಞೆ ಇರುವ ವ್ಯಕ್ತಿಯಾಗಿದ್ದಾರೆ. ನಾನು ಅಯೋಧ್ಯೆ ರಾಮ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಾಸ್ಥನಾದಾಗ ಆಡ್ವಾಣಿ ಅವರನ್ನು ಭೇಟಿಯಾಗಿದ್ದೆ. ಅವರ ಮನೆಗೆ ತೆರಳಿ ಅವರನ್ನು ಅಭಿನಂದಿಸಿ ಬಂದಿದ್ದೆ ಎಂದು ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ.

ಅಡ್ವಾಣಿ ಓರ್ವ ವಿನಯವಂತ ರಾಜಕಾರಣಿಯಾಗಿದ್ದಾರೆ. ಇಳಿ ವಯಸ್ಸಿನಲ್ಲೂ ಬಾಗಿಲವರೆಗೆ ಬಂದು ನನ್ನನ್ನು ಬೀಳ್ಕೊಟ್ಟು ಹೋಗಿದ್ದರು. ರಾಮ ಮತ್ತು ಕೃಷ್ಣದೇವರ ಅನುಗ್ರಹ ಆಡ್ವಾಣಿಯವರಿಗೆ ಸದಾ ಕಾಲ ಇರಲಿ ಎಂದು ವಿಶ್ವಪ್ರಸನ್ನ ಸ್ವಾಮೀಜಿ ಶುಭ ಹಾರೈಸಿದ್ದಾರೆ.

ವಿಜಯೇಂದ್ರ ಅಭಿನಂದನೆ

ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಪ್ರಕಟಿಸಿದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದು, ಇದಕ್ಕಾಗಿ ಮೋದಿ ಮತ್ತು ಅವರ ಸಂಪುಟದ ಸದಸ್ಯರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಅಲ್ಲದೆ, ಅಡ್ವಾಣಿ ಅವರಿಗೆ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಅಡ್ವಾಣಿ ಅವರು ಭಾರತದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಕೇಂದ್ರ ಗೃಹ ಸಚಿವ ಮತ್ತು ಮಾಹಿತಿ- ತಂತ್ರಜ್ಞಾನ ಸಚಿವರಾಗಿ ಅವರು ಸಮರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಂಸದೀಯ ನಡೆಯೂ ಆದರ್ಶಪ್ರಾಯವಾಗಿವೆ ಎಂದು ವಿಜಯೇಂದ್ರ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ: ಆರ್.‌ ಅಶೋಕ್

ಎಲ್‌.ಕೆ. ಅಡ್ವಾಣಿ ಅವರು ತಾವು ನಂಬಿರುವ ತತ್ವ ಸಿದ್ಧಾಂತಗಳಿಗೆ ಚ್ಯುತಿ ಬರದಂತೆ ನಡೆದುಕೊಂಡಿರುವ ವ್ಯಕ್ತಿಯಾಗಿದ್ದಾರೆ. ಮೂರು ಸಂದರ್ಭದಲ್ಲಿ ಅಡ್ವಾಣಿ ಜತೆ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಅದು ನನ್ನ ಪುಣ್ಯ. ದೇಶದ ನೆಚ್ಚಿನ ನಾಯಕ ಅಡ್ವಾಣಿಯವರಿಗೆ ಭಾರತ ರತ್ನ ಸಿಕ್ಕಿರುವುದು ಖುಷಿಯಾಗಿದೆ. ಅವರಿಗೆ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿ.ಎಸ್.‌ ಯಡಿಯೂರಪ್ಪ ಅಭಿನಂದನೆ

ಈ ಬಗ್ಗೆ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರು ಟ್ವೀಟ್‌ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ. “ಹಿರಿಯ ನೇತಾರ, ಧೀಮಂತ ನಾಯಕ ಆದರಣೀಯ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಲಾಗುತ್ತಿರುವುದು ಅತ್ಯಂತ ಹೆಮ್ಮೆಯ ಮತ್ತು ಅಭಿನಂದನೀಯ ಸಂಗತಿ. ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಅವರ ಪ್ರಯತ್ನ ಅಸಾಧಾರಣವಾದದ್ದು, ಹಲವಾರು ದಶಕಗಳ ಸಾರ್ವಜನಿಕ ಜೀವನದಲ್ಲಿ ಅವರ ನಾಯಕತ್ವ, ಸಂಸದರಾಗಿ, ಕೇಂದ್ರ ಸಚಿವರಾಗಿ, ಉಪ ಪ್ರಧಾನಿಗಳಾಗಿ ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲಾಗದು.

ವೈಯಕ್ತಿಕವಾಗಿ ಕೂಡ, ಅವರೊಂದಿಗಿನ ಒಡನಾಟ, ಸಂಘಟನಾ ಕಾರ್ಯಗಳಲ್ಲಿ ಅವರ ಮಾರ್ಗದರ್ಶನಗಳನ್ನು ನಾನು ಎಂದಿಗೂ ಮರೆಯಲಾರೆ. ಆ ಮೇರು ನಾಯಕನಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಸಲ್ಲಿಸಲಾಗುತ್ತಿರುವ ಈ ಸಾರ್ಥಕ ಸಂದರ್ಭದಲ್ಲಿ, ಪಕ್ಷದ ಕಾರ್ಯಕರ್ತರ ಹಾಗೂ ಅವರ ಅಭಿಮಾನಿಗಳ ಪರವಾಗಿ ಅವರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇನ್ನೂ ಸುದೀರ್ಘ ಕಾಲ ಆ ದೇವರು ಅವರಿಗೆ ಉತ್ತಮ ಆರೋಗ್ಯದೊಂದಿಗೆ ನಮಗೆ ಪ್ರೇರಣೆ ನೀಡುವ ಶಕ್ತಿಯನ್ನು ದಯಪಾಲಿಸಲಿ ಎಂದು ಕೋರುತ್ತೇನೆ” ಎಂದು ಹೇಳಿದ್ದಾರೆ.

ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಅಭಿನಂದನೆ

ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಗೌರವ ಪ್ರಕಟಿಸಿದೆ. ರಾಷ್ಟ್ರ ನಾಯಕನಿಗೆ ಭಾರತ ರತ್ನ ಗೌರವ ಪುರಸ್ಕಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ ಘೋಷಿಸಿದ್ದಾರೆ ಎಂದು ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಮ ಜನ್ಮಭೂಮಿ ಹೋರಾಟದ ನೇತೃತ್ವ ಸೇರಿದಂತೆ ದೇಶಕ್ಕೆ ಎಲ್.ಕೆ. ಅಡ್ವಾಣಿ ಅವರ ಕೊಡುಗೆ ಅವಿಸ್ಮರಣೀಯ. ರಾಷ್ಟ್ರದ ಒಬ್ಬ ಧೀಮಂತ ನಾಯಕನಿಗೆ ಭಾರತ ರತ್ನ ಗೌರವ ಸಂದಿದೆ ಎಂದು ಸಚಿವ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ವನ್ನು ನೀಡುತ್ತಿರುವುದು ಖುಷಿ ತಂದಿದೆ. ಅಡ್ವಾಣಿ ಅವರು ಅತ್ಯಂತ ಗೌರವಾನ್ವಿತ ರಾಜನೀತಿಜ್ಞರಲ್ಲಿ ಒಬ್ಬರು. ಭಾರತದ ಅಭಿವೃದ್ಧಿಗೆ ಈ ಮುತ್ಸದ್ಧಿಯ ಕೊಡುಗೆ ಅಪಾರವಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ, ಉಪ ಪ್ರಧಾನಿಯಾಗಿ ದೇಶಕ್ಕೆ ಅಮೋಘ ಸೇವೆ ಸಲ್ಲಿಸಿದ್ದಾರೆ. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಆದರ್ಶಪ್ರಾಯವಾಗಿವೆ ಎಂದು ಸಚಿವ ಜೋಶಿ ಬಣ್ಣಿಸಿದ್ದಾರೆ.

ಇಂದು ಅತ್ಯಂತ ಸಂತೋಷದ ಸಮಯ: ಸಂಸದ ಸದಾನಂದಗೌಡ

ಎಲ್‌.ಕೆ. ಅಡ್ವಾಣಿಯವರಿಗೆ ಭಾರತರತ್ನ ಗೌರವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ವಿ. ಸದಾನಂದಗೌಡ, ಇವತ್ತು ದೇಶದ 140 ಕೋಟಿ ಜನರು ಸಂತಸಪಡುವ ದಿನವಾಗಿದೆ. ಶ್ರೀರಾಮ ಮಂದಿರ ಹೋರಾಟವನ್ನು ಪ್ರಾರಂಭ ಮಾಡಿದ್ದೇ ಅಡ್ವಾಣಿಯವರು. ಭಾವನಾತ್ಮಕ ಸಂಬಂಧಗಳು ದೇಶವನ್ನು ಒಗ್ಗೂಡಿಸುತ್ತವೆ. ಆದರೆ, ಕಾಂಗ್ರೆಸ್ ದೇಶವನ್ನು ಒಡೆಯುವ ಕೆಲಸ ಮಾಡಿದ್ದರು. ಇದನ್ನು ಒಗ್ಗೂಡಿಸುವ ಕೆಲಸವನ್ನು ರಾಮ ಮಂದಿರ ಮಾಡಿತು. ಆದರೆ, ಈ ಹಿಂದೆ ರಾಮ ಮಂದಿರ ಕೆಲಸವು ಕಾಂಗ್ರೆಸ್‌ನಿಂದ ನನೆಗುದಿಗೆ ಬಿದ್ದಿತ್ತು. ಅಡ್ವಾಣಿಯವರಿಗೆ ಯಾವತ್ತೋ ಭಾರತರತ್ನ ಸಿಗಬೇಕಿತ್ತು. ಇವತ್ತು ಸಿಕ್ಕಿರುವುದು ಖುಷಿ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ: LK Advani : ಎಲ್.ಕೆ. ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ

ಕಾಂಗ್ರೆಸ್‌ನವರಿಗೆ ನೇರ ಹೊಡೆತ

ಯಾವ ಮನೆಗೆ ಅಕ್ಷತೆ ತೆಗೆದುಕೊಂಡು ಹೋದರೂ ಜೈ ಶ್ರೀರಾಮ್ ಅಂತಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಸಹ ಜೈ ಶ್ರೀರಾಮ್ ಅಂತಿದ್ದರು. ಈಗ ಅಡ್ವಾಣಿ ಅವರಿಗೆ ಭಾರತ ರತ್ನ ಕೊಟ್ಟಿರುವುದಕ್ಕೆ ಕಂಗಾಲಾಗುವ ವ್ಯಕ್ತಿಗಳು ಅಂದರೆ ಅದು ಕಾಂಗ್ರೆಸ್‌ನವರಾಗಿದ್ದಾರೆ. ಅವರನ್ನು ಬಿಜೆಪಿ ಕಡೆಗಣಿಸಿಲ್ಲ, ಕಡೆಗಣಿಸುವುದೂ ಇಲ್ಲ. ಭಾರತದ ಉನ್ನತ ಗೌರವವನ್ನು ಈಗ ಬಿಜೆಪಿಯಿಂದ ಕೊಟ್ಟಿದ್ದೇವೆ. ಕಾಂಗ್ರೆಸ್‌ನವರು ಇನ್ನೆರಡು ದಿನ ನಿಮ್ಮ ಕಣ್ಣಿಗೆ ಕಾಣೋದಿಲ್ಲ. ಯಾವ ಕಾಲಕ್ಕೆ ಏನು ಕೊಡಬೇಕು ಅಂತ ಮೋದಿಗೆ ಗೊತ್ತು. ಕಾಂಗ್ರೆಸ್‌ನವರಿಗೆ ನೇರ ಹೊಡೆತ ಇದು. ಇಂದು ಅತ್ಯಂತ ಸಂತೋಷದ ಸಮಯ ಎಂದು ಡಿ.ವಿ. ಸದಾನಂದ ಗೌಡ ಹೇಳಿದರು.

Exit mobile version