ಬೆಂಗಳೂರು: ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ (Prajwal Revanna) ಅನರ್ಹ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್ಗೆ (Supreme Court) ಮೇಲ್ಮನವಿ ಸಲ್ಲಿಸುವವರೆಗೆ ಆದೇಶಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಎರಡು ಅಂಶಗಳ ಆಧಾರದ ಮೇಲೆ ಹೈಕೋರ್ಟ್ (Karnataka High Court) ವಜಾಗೊಳಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಮಾಡಿದ ಹಾಗೂ ಸುಳ್ಳು ಅಫಿಡವಿಟ್ (False affidavit) ಸಂಬಂಧಪಟ್ಟಂತಹ ಪ್ರಕರಣದಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದ (Disqualification as MP) ಪ್ರಜ್ವಲ್ ರೇವಣ್ಣ ಅವರು ಆದೇಶಕ್ಕೆ ತಡೆ ಕೋರುವಂತೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಬಂದ ದಿನವೇ ಮೇಲ್ಮನವಿ ಸಲ್ಲಿಸಲು ತಡೆ ಕೋರಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಆ ಕೆಲಸವನ್ನು ಮಾಡಿಲ್ಲ. ಇನ್ನು ಎ. ಮಂಜು (A Manju) ಚುನಾವಣಾ ತಕರಾರು ಅರ್ಜಿಗೆ ಪೂರಕವಾಗಿ ಆದೇಶ ಬಂದಿದೆ. ಪ್ರಜ್ವಲ್ ರೇವಣ್ಣ ಅವರು ಎ ಮಂಜು ವಿರುದ್ಧ ಸಲ್ಲಿಸಿದ್ದ ಅರ್ಜಿಯ ತೀರ್ಪಿನಲ್ಲಿ ಎ. ಮಂಜು ಸಹ ಅನರ್ಹರಾಗಿದ್ದಾರೆ.
ಇದನ್ನೂ ಓದಿ: Karnataka Politics : ಜೆಡಿಎಸ್ಗೆ ʼಕಮಲದಳʼ ಎಂದು ಮರು ನಾಮಕರಣ ಮಾಡಿದ ಕಾಂಗ್ರೆಸ್; ಮೈತ್ರಿಗೆ ಕಿಡಿ!
ಈ ಹಿನ್ನೆಲೆಯಲ್ಲಿ ಆದೇಶ ನೀಡಿರುವ ನ್ಯಾಯಪೀಠವು ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಆದೇಶಕ್ಕೆ ತಡೆಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಇದು ಪ್ರಜ್ಞಲ್ಗೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ.
ಅನರ್ಹಗೊಳಿಸಿ ಆದೇಶಿಸಿದ್ದ ಹೈಕೋರ್ಟ್
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ಗೆ ದೊಡ್ಡ ಆಘಾತ ಉಂಟಾಗಿದೆ. ಪ್ರಜ್ವಲ್ ರೇವಣ್ಣ ಅವರ (Prajwal Revanna) ಸಂಸತ್ ಸದಸ್ಯತ್ವ ಅನರ್ಹಗೊಳಿಸಿ ಸೆಪ್ಟೆಂಬರ್ 1ರಂದು ಹೈಕೋರ್ಟ್ ಆದೇಶ ನೀಡಿತ್ತು. ಇದರಿಂದ ಇನ್ನು 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.
2019ರ ಲೋಕಸಭಾ ಚುನಾವಣೆ ವೇಳೆ ನಾಮಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಎ.ಮಂಜು ಮತ್ತು ದೇವರಾಜೇಗೌಡ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಜ್ವಲ್ ರೇವಣ್ಣ ಅವರ ಸಂಸತ್ ಸದಸ್ಯತ್ವ ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು.
ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅಸಿಂಧುಗೊಳಿಸಿ ತಮ್ಮನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸುವಂತೆ ಎ.ಮಂಜು ಮನವಿ ಮಾಡಿದ್ದರು. ಆದರೆ, ಮನವಿಯನ್ನು ನ್ಯಾ. ಕೆ. ನಟರಾಜನ್ ಅವರಿದ್ದ ಪೀಠದಿಂದ ವಜಾಗೊಳಿಸಿತ್ತು.
ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅನರ್ಹಕ್ಕೆ ಕಾರಣವೇನು?
ಪ್ರಜ್ವಲ್ ರೇವಣ್ಣ ಅವರು ಸರ್ಕಾರಿ ಜಮೀನು ಖರೀದಿಸಿದ್ದಾರೆ. ಆದಾಯ ತೆರಿಗೆ ವಂಚಿಸಿ ಬೇನಾಮಿ ಆಸ್ತಿ ಗಳಿಸಿದ್ದಾರೆ. ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕ ಕನ್ವೆನ್ಶನ್ ಸೆಂಟರ್ ಕಟ್ಟಡ ಕನಿಷ್ಠ 5 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ, ಅದರ ಮೌಲ್ಯವನ್ನು 14 ಲಕ್ಷ ರೂ. ಎಂದು ತೋರಿಸಲಾಗಿದೆ. ಬೆಂಗಳೂರಿನ ಮಿನರ್ವ ಸರ್ಕಲ್ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 48 ಲಕ್ಷ ರೂ. ಹೊಂದಿದ್ದರೂ ಕೇವಲ 5 ಲಕ್ಷ ಇದೆ ಎಂದು ನಾಮಪತ್ರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ದೇವರಾಜೇಗೌಡ ಆರೋಪಿಸಿದ್ದರು.
ಇದನ್ನೂ ಓದಿ: AR Rahman: ಸಿಟ್ಟಿನಿಂದ ಟಿಕೆಟ್ ಹರಿದು ಹಾಕಿದ ಫ್ಯಾನ್ಸ್; ಎ ಆರ್ ರೆಹಮಾನ್ ವಿರುದ್ಧ ಆಕ್ರೋಶ!
ಪ್ರಜ್ವಲ್ ಮುಂದಿರುವ ಆಯ್ಕೆಗಳೇನು?
2019ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ (Hassan Lok Sabha constituency) ಗೆದ್ದಿದ್ದ ಒಂದು ಸ್ಥಾನವೂ ಕಳೆದುಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಭಾರಿ ಹಿನ್ನಡೆಯಾಗಿದೆ. ಈಗ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿರುವುದು ಮತ್ತೊಂದು ಹಿನ್ನಡೆಗೆ ಕಾರಣವಾಗಿದೆ. ಈ ಮುಂದೆ ಸುಪ್ರೀಂ ಕೋರ್ಟ್ಗೆ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆರು ತಿಂಗಳ ಒಳಗೆ ಅನರ್ಹತೆ ರದ್ದಾಗದಿದ್ದರೆ ಮುಂದಿನ ಆರು ವರ್ಷಗಳ ಕಾಲ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧಿಸುವಂತಿಲ್ಲ. ಹೀಗಾಗಿ ಹೈಕೋರ್ಟ್ ಅನರ್ಹತೆ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ, ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.