ಬೆಂಗಳೂರು: ಕೇಂದ್ರ ಸರ್ಕಾರವು (Central Government) ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನದಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar protest) ಫೆಬ್ರವರಿ 7ರಂದು (ಬುಧವಾರ) ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆ (Congress Protest) ವಿರುದ್ಧ ರಾಜ್ಯ ಬಿಜೆಪಿ ನಾಯಕರು ಕಿಡಿಕಾರಿದ್ದರೆ, ಕಾಂಗ್ರೆಸ್ ಸಚಿವರು, ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಈಗಾಗಲೇ, ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ರಾಜ್ಯದ ಎಲ್ಲ ಸಂಸದರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವೈಯಕ್ತಿಕ ಪತ್ರ (Letter to MPs) ಬರೆದಿದ್ದಾರೆ. ಆದರೆ, ಇದು ರಾಜಕೀಯ ಪ್ರತಿಭಟನೆ ಎಂದು ಬಿಜೆಪಿ ಕಿಡಿಕಾರಿದರೆ, “ಕೇಂದ್ರದ ಅನ್ಯಾಯದ ವಿರುದ್ಧ ನಮ್ಮ ಧ್ವನಿ” ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ, ದೆಹಲಿಯಲ್ಲಿ ನಡೆಯುವ ಪ್ರತಿಭಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಸವಿಸ್ತಾರವಾಗಿ ಹೇಳಿದ್ದಾರೆ. ಯಾಕೆ ಹೋಗ್ತಾ ಇದ್ದೀವಿ? ಏನು ಕಾರಣ? ಎಷ್ಟು ದುಡ್ಡು ಬರಬೇಕು ಅಂತ ಹೇಳಿದ್ದಾರೆ. ನಮ್ಮ ಹಕ್ಕು ಪಡೆಯಲಿಕ್ಕೆ, ಕೇಂದ್ರ ಸರ್ಕಾರದ ಗಮನ ಸೆಳೆಯೋಕೆ ಪ್ರತಿಭಟನೆಯನ್ನು ಮಾಡುತ್ತಾ ಇದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: BJP Karnataka: ಫ್ರೀಡಂ ಪಾರ್ಕ್‌ನಲ್ಲಿ ಗೋವುಗಳ ಪ್ರತಿಭಟನೆ; ಹಾಲಿನ ಸಬ್ಸಿಡಿ ದುಡ್ಡು ಕೊಡಲು ಆಗ್ರಹ!
ಬರ ಪರಿಹಾರ ಇಲ್ಲಿಯವರೆಗೆ ಸಿಕ್ಕಿಲ್ಲ. ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೋಗಿ ಮನವಿ ಮಾಡಿದ್ದರು. ಆದರೆ, ಕೇಂದ್ರಿದಂದ ಪರಿಹಾರ ಸಿಕ್ಕಿಲ್ಲ. ಅಂತಿಮವಾಗಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ನಾಳೆ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಕೌಂಟರ್ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಬಿಜೆಪಿಯವರು ರಾಜಕೀಯವಾಗಿ ಹೇಳಬೇಕು. ರಿಯಾಲಿಟಿಗೆ ಬಿಜೆಪಿಯವರು ಬರಬೇಕು. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಸಾಕಷ್ಟು ಪ್ರಯತ್ನ ಮಾಡಿದರೂ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು.
ಈಗ ಹೋರಾಟ ಅನಿವಾರ್ಯ; ಲಕ್ಷ್ಮಣ ಸವದಿ
ಮಾಜಿ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿ, ಬಿಜೆಪಿಯ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಚಾರದಲ್ಲಿ ತಾರತಮ್ಯ ಆಗಿದೆ. ಬಿಜೆಪಿ ಸರ್ಕಾರ ಇದ್ದಾಗಲೂ ಅನುದಾನ ಕೊಡಲಿಲ್ಲ. ಈಗ ಹೋರಾಟ ಅನಿವಾರ್ಯವಾಗಿದೆ. ವಿಪಕ್ಷ ನಾಯಕ ಆರ್. ಅಶೋಕ್ ಅಂಕಿ-ಅಂಶಗಳನ್ನು ಇಟ್ಟುಕೊಂಡು ಮಾತನಾಡಬೇಕು. ಅವರು ಈಗ ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಇಷ್ಟು ದಿನ ಮಾತನಾಡುವ ರೀತಿ ಮಾತನಾಡುವುದು ಬೇಡ. ನಾನು ಕಾಂಗ್ರೆಸ್ ಬಿಡುವುದಿಲ್ಲ. ಬಿಜೆಪಿ ನಾಯಕರು ಸಂಪರ್ಕದಲ್ಲಿ ಇರೋದು ನಿಜ. ನನ್ನ ಹುಟ್ಟುಹಬ್ಬದ ಫ್ಲೆಕ್ಸ್‌ನಲ್ಲಿ ಎಂದೂ ಸಹ ಪಕ್ಷದ ಸಿಂಬಲ್ ಹಾಕಿಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.
ನಮ್ಮ ಪ್ರತಿಭಟನೆಯನ್ನು ಡೈವರ್ಟ್ ಮಾಡಲು ಬಿಜೆಪಿಯಿಂದ ಪ್ರತಿಭಟನೆ: ಪ್ರದೀಪ್ ಈಶ್ವರ್
ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹೇಗಿರಬೇಕು ಎಂದು ಸಂವಿಧಾನ ಹೇಳಿದೆ. ಬಿಜೆಪಿ ಸರ್ಕಾರಗಳು ಇರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಬರ ಪರಿಹಾರ, ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ ಹಣ ಕೊಟ್ಟಿಲ್ಲ. ನಾನು ಬಿಜೆಪಿಯವರಿಗೆ ಮನವಿ ಮಾಡುತ್ತೇನೆ. ಇಷ್ಟು ದಿನ ನೀವುಗಳು ಮಾತನಾಡಿಲ್ಲ. ಈಗ ಸುಮ್ಮನೆ ಇದ್ದು ಬಿಡಿ, ನಾವು ನ್ಯಾಯ ಕೇಳಲು ಹೋಗುತ್ತಿದ್ದೇವೆ. ನಮ್ಮ ಪ್ರತಿಭಟನೆಯನ್ನು ಡೈವರ್ಟ್ ಮಾಡಲು ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಪ್ರಧಾನಮಂತ್ರಿ ಹಾಗೂ ಹಣಕಾಸು ಸಚಿವರಿಗೆ ನಮ್ಮ ಪ್ರತಿಭಟನೆ ಉದ್ದೇಶ ಅರ್ಥವಾಗಲಿದೆ. ನಮ್ಮ ಪ್ರತಿಭಟನೆ ಯಶಸ್ವಿಯಾದರೆ ತಮಿಳುನಾಡು, ತೆಲಂಗಾಣ, ಕೇರಳದವರು ಕೈ ಜೋಡಿಸಬಹುದು. ನಾವು ಸತ್ಯವನ್ನು ಮಾತಾಡುತ್ತಿದ್ದೇವೆ. ಮಾತಾಡುತ್ತಿರುವುದು ಸುಳ್ಳು ಎಂದಾದರೆ ಬಿಜೆಪಿಯವರು ನಿರೂಪಿಸಲಿ ಎಂದು ಹೇಳಿದರು.
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಸರಿಯಲ್ಲ: ಟಿ.ಬಿ. ಜಯಚಂದ್ರ
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಮಾತನಾಡಿ, ನಮ್ಮ ರಾಜ್ಯಕ್ಕೆ ಅನುದಾನ ತಾರತಮ್ಯ ಆಗಿದೆ. ತಾರತಮ್ಯ ಆದಾಗ ಪ್ರತಿಭಟನೆ ಅಗತ್ಯವಿದೆ. ನಲವತ್ತು ವರ್ಷಗಳಿಂದ ನಾನು ಶಾಸಕನಾಗಿದ್ದೇನೆ. ಕೇಂದ್ರ ಸರ್ಕಾರದ ವಿರುದ್ಧ ಈ ರೀತಿ ಪ್ರತಿಭಟನೆ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ ಸರಿಯಲ್ಲ. ರಾಜ್ಯಗಳಿಂದ ದೇಶ, ದೇಶದಿಂದ ರಾಜ್ಯಗಳಲ್ಲ ಎಂಬುದನ್ನು ಪ್ರಧಾಣಿ ನರೇಂದ್ರ ಮೋದಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯಗಳನ್ನು ನಡೆಸಿಕೊಳ್ಳುವುದರ ಮೇಲೆ ಒಕ್ಕೂಟ ವ್ಯವಸ್ಥೆ ನಿಲ್ಲುತ್ತದೆ ಎಂದು ಹೇಳಿದರು.
ಮೋದಿಯಿಂದ ರಾಜ್ಯಕ್ಕೆ ಅನ್ಯಾಯ ಆಗಿಲ್ಲ: ಸಂಸದ ಮುನಿಸ್ವಾಮಿ
ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಮುನಿಸ್ವಾಮಿ, 25 ಬಿಜೆಪಿ ಸಂಸದರು ಏನು ಮಾಡಿದ್ದಾರೆ ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅಂತಹ ಭ್ರಷ್ಟರ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ. ಸಂಸದರು ಏನು ಮಾಡಿದ್ದಾರೆ ಅಂತ ನಮ್ಮ ಜನರಿಗೆ ಗೊತ್ತು. ಇವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ನರೇಂದ್ರ ಮೋದಿ ಕೊಟ್ಟಿರುವಷ್ಟು ಅನುದಾನವನ್ನು ರಾಜ್ಯಕ್ಕೆ ಯಾರು ಸಹ ಕೊಟ್ಟಿಲ್ಲ ಎಂದು ಹೇಳಿದರು.
ಈ ಪ್ರತಿಭಟನೆ ಕಾಂಗ್ರೆಸ್‌ನದ್ದು ಅಷ್ಟೇ: ಬಿ.ವೈ. ರಾಘವೇಂದ್ರ
ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ ನೀಡಿ, ಡಿ.ಕೆ. ಸುರೇಶ್ ದೇಶ ವಿಭಜನೆ ಹೇಳಿಕೆ ಸರಿಯಲ್ಲ. ಗ್ಯಾರಂಟಿ ಯೋಜನೆಗಳ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕದ ಮೇಲೆ ಪ್ರೀತಿ ಇರುವುದಕ್ಕೆ ಇಷ್ಟೊಂದು ಅನುದಾನ ಕೊಟ್ಟಿದ್ದಾರೆ. ಯುಪಿಎ ಸರ್ಕಾರಕ್ಕಿಂತ 3 ಪಟ್ಟು ಹೆಚ್ಚು ಅನುದಾನವನ್ನು ಮೋದಿ ನೀಡಿದ್ದಾರೆ. ಈ ಪ್ರತಿಭಟನೆ ಯಾವುದೇ ಜನರ ಪರವಾದದ್ದು ಅಲ್ಲ. ಈ ಪ್ರತಿಭಟನೆ ಕೇವಲ ಕಾಂಗ್ರೆಸ್‌ನದ್ದು ಅಷ್ಟೇ. ಅವರು ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲು ಪ್ರತಿಭಟನೆ ಮಾಡಿದ್ದಾರೆ. ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಯಾವುದೇ ತಾರತಮ್ಯ ಆಗಿಲ್ಲ. ತಾರತಮ್ಯ ಆಗಿದ್ದೆ ಆಗಿದ್ದರೆ ನಾವು ಸಹ ಜನರ ಹಿತದೃಷ್ಟಿಯಿಂದ ಭಾಗಿಯಾಗುತ್ತಿದ್ದೆವು. ಆದರೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: BJP Karnataka: ಪ್ರತಿಭಟನೆಗೆ ಹಸು ಬಳಸಬೇಡಿ ಎಂದ ಮಾನವ ಹಕ್ಕುಗಳ ಆಯೋಗ; ರೈತರ ಆಕ್ರೋಶ
ಕಾಂಗ್ರೆಸ್ ತಪ್ಪು ಮುಚ್ಚಿಕೊಳ್ಳಲು ಪ್ರತಿಭಟನೆ
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಟೇಕ್ ಆಫ್ ಆಗಿಲ್ಲ. ಕೊಟ್ಟ ಭರವಸೆ ಈಡೇರಿಸಿಲ್ಲ. ಇವರ ತಪ್ಪು ಮುಚ್ಚಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಸಂಸದರು ಕೆಲಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಬರೋದು ಖಚಿತ. ಮೋದಿ ಕೊಟ್ಟ ಐದು ಕೆಜಿ ಅಕ್ಕಿಯನ್ನು ಸಹ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ಬಿಡುಗಡೆ ಮಾಡಿರುವ ಅಂಕಿಅಂಶಗಳು ಸುಳ್ಳು. ಈ ಬಗ್ಗೆ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ. ಮೋದಿ ಬಂದ ಬಳಿಕ ಜನಧನ್, ಆಯುಷ್ಮಾನ್ ಭಾರತ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದಾರೆ. ಡಿ.ಕೆ. ಸುರೇಶ್ ಅವರು ನೀಡಿರುವ ದೇಶ ವಿರೋಧಿ ಹೇಳಿಕೆಯನ್ನು ಮರೆ ಮಾಚಲು ಸಹ ಕಾಂಗ್ರೆಸ್ ಈ ಪ್ರತಿಭಟನೆಯನ್ನು ಮಾಡುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.