Site icon Vistara News

Lok Sabha Election 2024: ಲೋಕಸಭೆ ಚುನಾವಣೆಗೆ ಬಿಜೆಪಿ ಹೈಕಮಾಂಡ್‌ ಟಾಸ್ಕ್;‌ ಕಾಂಗ್ರೆಸ್‌ ಹೈಕಮಾಂಡ್‌ಗೆ ಶಾಕ್!

BS Yediyurappa BY Vijayendra and BY Raghavendra in Delhi BJP working committee meeting

ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Election 2024) ಎಲ್ಲ ರಾಜಕೀಯ ಪಕ್ಷಗಳೂ ಸಜ್ಜಾಗುತ್ತಿವೆ. ಈಗಾಗಲೇ ಕೆಲವು ಕಡೆ ಇಂಥವರೇ ಕ್ಯಾಂಡಿಡೇಟ್‌ ಎಂಬುದರ ಕುರಿತು ನಿರ್ಧಾರವನ್ನು ಮಾಡಿರಲಾಗಿದೆ. ಇದೇ ರೀತಿಯಾಗಿ ಕರ್ನಾಟಕದಲ್ಲಿ ಲೋಕಸಭಾ ಕಣ ರಂಗೇರುತ್ತಿದೆ. 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಬಿಜೆಪಿಗೆ ಹೈಕಮಾಂಡ್‌ (BJP high command) ಟಾಸ್ಕ್‌ ನೀಡಲು ಮುಂದಾಗಿದೆ. ಇನ್ನು ಕಾಂಗ್ರೆಸ್‌ನಲ್ಲಿ ಸಹ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಈ ಮಧ್ಯೆ ಸಚಿವರನ್ನು ಕಣಕ್ಕಿಳಿಸುವ ಬಗ್ಗೆಯೂ ಕಾಂಗ್ರೆಸ್‌ ಹೈಕಮಾಂಡ್‌ (Congress High Command) ಒಲವು ತೋರಿದೆ. ಆದರೆ, ಇದಕ್ಕೆ ಸಚಿವರು ಒಲ್ಲೆ ಎನ್ನುವ ಮೂಲಕ ಶಾಕ್‌ ಕೊಟ್ಟಿದ್ದಾರೆ. ಇದು ಈಗ ಕೈಪಡೆಯ ಟೆನ್ಶನ್‌ಗೆ ಕಾರಣವಾಗಿದೆ.

ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯು ಈ ಬಾರಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗುತ್ತಿದೆ. ಇದಕ್ಕೆ ಬೇಕಾದ ತಯಾರಿಯನ್ನು ಒಂದೊಂದಾಗಿಯೇ ಮಾಡಿಕೊಳ್ಳುತ್ತಾ ಬರುತ್ತಿದೆ. ಯಾವ ಯಾವ ರಾಜ್ಯದಲ್ಲಿ ಬಿಜೆಪಿ ಗಟ್ಟಿ ಇದೆಯೋ ಅಲ್ಲೆಲ್ಲ ಗೆಲುವನ್ನು ಸಲುಭಗೊಳಿಸಲು ಯಾವೆಲ್ಲ ಕಾರ್ಯತಂತ್ರಗಳನ್ನು ಹೆಣೆಯಬೇಕು. ಜತೆಗೆ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನವನ್ನು ಹೇಗೆ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಹಲವು ಸೂಚನೆಗಳನ್ನು ರವಾನೆ ಮಾಡಿದ್ದಾರೆ. ಈ ಸಂಬಂಧ ನವ ದೆಹಲಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ ಎನ್ನಲಾಗಿದೆ.

ನವ ದೆಹಲಿಯಲ್ಲಿ ಭಾನುವಾರ ಎರಡನೇ ದಿನದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. “ಬಿಜೆಪಿಯ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮುಂದಿನ 100 ದಿನಗಳು ನಿರ್ಣಾಯಕವಾಗಿವೆ. ಮುಂದಿನ 100 ದಿನಗಳವರೆಗೆ ಮುಖಂಡರು ಹಾಗೂ ಕಾರ್ಯಕರ್ತರು ಮನೆಮನೆಗೆ ತೆರಳಬೇಕು. ಪ್ರತಿಯೊಬ್ಬರನ್ನೂ ಭೇಟಿ ಮಾಡಿ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಸಮಗ್ರ ಮಾಹಿತಿ ನೀಡಬೇಕು. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400, ಬಿಜೆಪಿಯು 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಸಾಕಾರಗೊಳಿಸಬೇಕು” ಎಂದು ಸೂಚನೆ ನೀಡಿದ್ದಾರೆ.

ನಿಮ್ಮ ರಾಜ್ಯ ನಿಮಗೆ ಟಾಸ್ಕ್‌

ಕೇಂದ್ರ ಸರ್ಕಾರದ ಸಾಧನೆಗಳನ್ನು ಬೂತ್‌ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಲಾಗಿದೆ. “ನಿಮ್ಮ ರಾಜ್ಯ ನಿಮಗೆ” ಎಂಬ ಟಾಸ್ಕ್‌ ನೀಡಲಾಗಿದ್ದು, ರಾಜ್ಯ ನಾಯಕರಿಗೂ ಸಂದೇಶ ರವಾನೆ ಮಾಡಲಾಗಿದೆ. ರಾಜ್ಯಕ್ಕೆ “ಟಾರ್ಗೆಟ್‌‌ 28″ರ ಗುರಿಯನ್ನು ನೀಡಲಾಗಿದೆ. ಏಕೆಂದರೆ ಕಳೆದ ಬಾರಿ 25 + 1 ಸೀಟನ್ನು ಬಿಜೆಪಿ ಗೆದ್ದುಕೊಂಡಿತ್ತು. ಉಳಿದ ಎರಡರಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ತಲಾ 1 ಸ್ಥಾನವನ್ನು ಗೆದ್ದುಕೊಂಡಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಜೆಡಿಎಸ್‌ ಬಿಜೆಪಿ ಜತೆ ಸೇರಿದೆ. ಎರಡೂ ಪಕ್ಷಗಳ ಮತಗಳು ಸಂಪೂರ್ಣವಾಗಿ ಮೈತ್ರಿ ಅಭ್ಯರ್ಥಿಗಳ ಪಾಲಾದರೆ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ಕಷ್ಟವಲ್ಲ. ಹೀಗಾಗಿ ಈ ಗುರಿಯತ್ತ ಗಮನ ಹರಿಸಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ನವ ದೆಹಲಿಯಲ್ಲಿ ವರಿಷ್ಠರು ಸಂದೇಶವನ್ನು ರವಾನೆ ಮಾಡಿದ್ದಾರೆ ಎನ್ನಲಾಗಿದೆ.

ಕೈಪಡೆಯಲ್ಲಿ ಶುರವಾಯ್ತಾ ಟೆನ್ಶನ್‌?

2024ರ ಲೋಕಸಭಾ ಚುನಾವಣೆ ಹೊತ್ತಲ್ಲಿ ಕೈ ಪಕ್ಷದಲ್ಲಿ ಟೆನ್ಶನ್‌ ಶುರುವಾದಂತೆ ಕಾಣಿಸುತ್ತಿದೆ. ಕಾರಣ, ಈ ಚುನಾವಣೆ ವೇಳೆ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿರುವ ಕಾಂಗ್ರೆಸ್‌ಗೆ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಗೆಲ್ಲುವ ಅವಕಾಶ ಇರುವ ಕಡೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬ ತಲೆನೋವು ಹೆಚ್ಚಿದ್ದರಿಂದ ಕೆಲವು ಕಡೆ ಸಚಿವರನ್ನೇ ಕಣಕ್ಕೆ ಇಳಿಸಲು ಕಾಂಗ್ರೆಸ್‌ ವರಿಷ್ಠರು ನಿರ್ಧಾರ ಮಾಡಿದ್ದರು. ಈ ಬಗ್ಗೆ ಡಿ.ಕೆ. ಶಿವಕುಮಾರ್‌ ಪ್ಲ್ಯಾನ್‌ ಮಾಡಿದ್ದು, ವರಿಷ್ಠರನ್ನು ಒಪ್ಪಿಸಿ, ಹೈಕಮಾಂಡ್‌ ನಾಯಕರಿಂದ ಹೇಳಿಸಿದ್ದಾರೆ. ಈ ಮೂಲಕ ಎರಡಂಕಿ ಸ್ಥಾನಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರವನ್ನು ಹಾಕಲಾಗಿತ್ತು. ಆದರೆ, ಈಗ ಕೈ ಪಕ್ಷಕ್ಕೆ ಡಬಲ್‌ ಟೆನ್ಶನ್‌ ಅನ್ನು ಹಿರಿಯ ಸಚಿವರು ಕೊಟ್ಟಿದ್ದಾರೆ. ತಾವು ಚುನಾವಣೆಗೆ ಸ್ಪರ್ಧೆ ಮಾಡಲು ಆಗುವುದಿಲ್ಲ ಎಂದು ಹಿಂದೇಟು ಹಾಕುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಲ್ಲ, ಹೈಕಮಾಂಡ್‌‌ ಕೇಳಿದರೂ ನಾವು ರೆಡಿ ಇಲ್ಲ ಎಂದು ಹೇಳಿದ್ದಾರೆ.

ಡಿಸಿಎಂ, ಸಿಎಂಗೆ ಟಕ್ಕರ್‌ ಕೊಟ್ಟ ಸಚಿವ ಎಚ್‌‌.ಸಿ. ಮಹದೇವಪ್ಪ

ಈ ಸಂಬಂಧ ಒಬ್ಬೊಬ್ಬರೇ ಸಚಿವರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಅಲ್ಲದೆ, ಲೋಕಸಭೆ ಸ್ಪರ್ಧೆ ಬಗ್ಗೆ ಎಚ್‌‌.ಸಿ. ಮಹದೇವಪ್ಪ, ನಾನು ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. ಅಲ್ಲದೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ನನಗಿಂತಲೂ ವರ್ಚಸ್ಸು ಇರುವವರು. ಅವರೇ ಅಭ್ಯರ್ಥಿ ಆಗಲಿ ಎಂದು ತಿರುಗೇಟು ಕೊಟ್ಟಿದ್ದರು.

ಇದನ್ನೂ ಓದಿ: Karnataka Budget 2024: ನಾಳೆ ಕಲಾಪದಲ್ಲಿ ಬಜೆಟ್‌ ಕಾದಾಟ; ಏಟು-ಎದುರೇಟಿಗೆ ವಿಪಕ್ಷ – ಆಡಳಿತ ಪಕ್ಷ ಸಜ್ಜು!

ಸಚಿವರು ಒಪ್ಪಿದಿದ್ದರೆ ಮುಂದೇನು?

ಸಚಿವರಾದ ಎಚ್‌.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಸತೀಶ್‌ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್‌, ಕೃಷ್ಣ ಬೈರೇಗೌಡ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಒಂದು ವೇಳೆ ಇವರು ಯಾರೂ ಸಹ ಸ್ಪರ್ಧೆಗೆ ಒಪ್ಪಿಲ್ಲವಾದರೆ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕುವ ಅನಿವಾರ್ಯತೆ ಕಾಂಗ್ರೆಸ್‌ ಪಕ್ಷಕ್ಕೆ ಬರಲಿದೆ.

Exit mobile version