ಬೆಂಗಳೂರು: ದಿನಕಳೆದಂತೆ ವಿವಿಧ ಸಮಾವೇಶಗಳು ಹಾಗೂ ಸರ್ಕಾರದ ವಿರುದ್ಧ ಆರೋಪಗಳ ಮೂಲಕ ಅಬ್ಬರ ಮಾಡುತ್ತಿರುವ ಕಾಂಗ್ರೆಸ್ ಇತ್ತೀಚೆಗೆ ಘೋಷಣೆ ಮಾಡಿದ ʼ200 ಯೂನಿಟ್ ಉಚಿತ ವಿದ್ಯುತ್ʼ ಘೋಷಣೆಯಿಂದ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದೀಗ ನೆಹರೂ ಕುಟುಂಬದ ಪ್ರಿಯಾಂಕಾ ಗಾಂಧಿ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದು, ಮತ್ತೆ ಯಾವ ಘೋಷಣೆ ಮಾಡಬಹುದು ಎಂಬ ಕುತೂಹಲದಲ್ಲಿ ಪ್ರಮುಖವಾಗಿ ಆಡಳಿತಾರೂಢ ಬಿಜೆಪಿ ಇದೆ.
ವಿಧಾನಸಭೆ ಚುನಾವಣೆ ಪ್ರಯುಕ್ತ 22 ಜಿಲ್ಲೆಗಳಿಗೆ ಸಾಗುವ ಪ್ರಜಾಧ್ವನಿ ಯಾತ್ರೆಗೆ ಕಾಂಗ್ರೆಸ್ ಜನವರಿ 11ರಂದು ಚಿಕ್ಕೋಡಿಯಲ್ಲಿ ಘೋಷಣೆ ಮಾಡಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡಿ ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಿತ್ತು.
ಈ ಘೋಷಣೆ ಕುರಿತು ಈಗಾಗಲೆ ಪರ ವಿರೋಧ ಚರ್ಚೆ ನಡೆದಿದೆ. ಉಚಿತ ನೀಡುವುದು ಒಳ್ಳೆಯದಲ್ಲ ಎಂದು ಕೆಲವರು ಹೇಳಿದರೆ, ರಾಜ್ಯದ ಹಣಕಾಸು ಸ್ಥಿತಿ ನೋಡಿದರೆ ಇದು ಅಸಾಧ್ಯ ಎಂಬ ವಾದವೂ ಇದೆ. ಇಂಧನ ಸಚಿವ ವಿ. ಸುನಿಲ್ ಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಅನೇಕ ಬಿಜೆಪಿ ನಾಯಕರು ಇದಕ್ಕೆ ಪ್ರತಿಕ್ರಿಯಿಸಿ ಟೀಕಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ವಾರ್ಷಿಕ 9 ಸಾವಿರ ಕೋಟಿ ರೂ.ನಿಂದ 23 ಸಾವಿರ ಕೋಟಿ ರೂ.ವರೆಗೆ ಹಣ ಬೇಕಾಗುತ್ತದೆ ಎಂಬ ಅಂದಾಜಿದೆ. ಪರ ವಿರೋಧ ಏನೇ ಇದ್ದರೂ ಈ ಘೋಷಣೆಯು ರಾಜ್ಯದ ಜನತೆಯ ಗಮನ ಸೆಳೆದಿರುವುದಂತೂ ಸತ್ಯ. ಜತೆಗೆ ಬಿಜೆಪಿ ವಲಯದಲ್ಲೂ ಸಂಚಲನವನ್ನು ಮೂಡಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇದು ಮೊದಲನೆ ಘೋಷಣೆ ಎಂದು ಹೇಳಿರುವುದು, ಇಂತಹ ಇನ್ನಷ್ಟು ಘೋಷಣೆಗಳು ಹೊರಬೀಳುವ ಮುನ್ಸೂಚನೆ ನೀಡಿದೆ.
ಮಹಿಳೆಯರಿಗಾಗಿ ರೂಪಿಸಿರುವ ನಾ ನಾಯಕಿ ಅಭಿಯಾನದ ಬೃಹತ್ ಸಮಾವೇಶವನ್ನು ಬೆಂಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಪ್ರಯಾಂಕ ಗಾಂಧಿ ವಾದ್ರಾ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಹಿಮಾಚಲ ಪ್ರದೇಶದಲ್ಲಿ ಪಕ್ಷವನ್ನು ಗೆಲ್ಲಿಸಿದ ಪ್ರಭಾವಳಿಯನ್ನೂ ಹೊಂದಿರುವ ಪ್ರಿಯಾಂಕಾ ಆಗಮನ ಕಾಂಗ್ರೆಸ್‌ಗೆ ಹೊಸ ಚೈತನ್ಯ ನೀಡಿದೆ.
ಅರಮನೆ ಮೈದಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೃಹತ್ ಕಟೌಟ್, ಬ್ಯಾನರ್, ಧ್ವಜಗಳ ಮೂಲಕ ಅಲಂಕರಿಸಲಾಗಿದೆ. ಈ ಸಮಾವೇಶದಲ್ಲಿಯೂ ಕಾಂಗ್ರೆಸ್ ಯಾವುದಾದರೂ, ಮಹಿಳಾಪರ ಘೋಷಣೆಯನ್ನು ಮಾಡಬಹುದೇ ಎಂಬ ಅನುಮಾನಗಳಿವೆ. ಈಗಾಗಲೆ ಉಚಿತ ವಿದ್ಯುತ್ ಘೋಷಣೆ ಸಾಕಷ್ಟು ಸದ್ದು ಮಾಡಿದ್ದು, ಮಹಿಳಾಪರ ಯೋಜನೆಯೇನಾದರೂ ಘೋಷಣೆ ಮಾಡಿದರೆ ಹೇಗೆ ಎಂಬ ಚರ್ಚೆ ನಡೆಯುತ್ತಿದೆ.
ಸೋಮವಾರದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಹಿಳಾ ನಾಯಕರುಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ | Karnataka Election | ಟಾರ್ಚ್ ಲೈಟಲ್ಲಿ ಬಜೆಟ್ ಓದಿದ ಸಿದ್ದರಾಮಯ್ಯ ಈಗ ಉಚಿತ ವಿದ್ಯುತ್ ಕೊಡ್ತಾರ?: ಪ್ರಶ್ನಿಸಿದ ಬಿಜೆಪಿ