Site icon Vistara News

BJP Politics : ನಾಗಲ್ಯಾಂಡ್, ಮೇಘಾಲಯ, ಪುದುಚೇರಿ ರಾಜ್ಯಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ! ಕರ್ನಾಟಕಕ್ಕೆ ಯಾವಾಗ?

Modi and amit sha

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government) ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಆಗಿದೆ. ಆದರೆ, ಇನ್ನೂ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ (BJP state president) ನೇಮಕ ಆಗಿಲ್ಲ. ಈ ಬಗ್ಗೆ ಹಲವು ಬಾರಿ, ಹಲವು ರೀತಿಯಲ್ಲಿ ರಾಜ್ಯ ನಾಯಕರು ಪ್ರಯತ್ನ ಪಟ್ಟರೂ ಬಿಜೆಪಿ ವರಿಷ್ಠರು ಮಾತ್ರ ಈ ಬಗ್ಗೆ ಗಮನ ಹರಿಸುತ್ತಲೇ ಇಲ್ಲ. ಈ ನಡುವೆ ಬಿಜೆಪಿ – ಜೆಡಿಎಸ್‌ ಮೈತ್ರಿಯನ್ನೂ (BJP and JDS alliance) ಮಾಡಿಕೊಳ್ಳಲಾಗಿದೆ. ಇಷ್ಟಾದರೂ ರಾಜ್ಯ ಬಿಜೆಪಿ ಬಗ್ಗೆ ಮಾತ್ರ ವರಿಷ್ಠರು ಅಸಡ್ಡೆ ಯಾಕೆ ತೋರುತ್ತಿದ್ದಾರೆ? ಇದರ ಹಿಂದೆ ಬೇರೆ ಯಾವುದಾದರೂ ಲೆಕ್ಕಾಚಾರ ಇದೆಯೇ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ. ಈ ಮಧ್ಯೆ ನಾಗಲ್ಯಾಂಡ್, ಮೇಘಾಲಯ, ಪುದುಚೇರಿ ರಾಜ್ಯಗಳಿಗೆ ಬಿಜೆಪಿ ಅಧ್ಯಕ್ಷರನ್ನು ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (BJP national president JP Nadda) ಆದೇಶವನ್ನು ಹೊರಡಿಸಿದ್ದಾರೆ. ಆದರೆ, ಕರ್ನಾಟಕದ ಬಗ್ಗೆ ಮಾತ್ರ ಈ ಬಾರಿಯೂ ಯಾವುದೇ ನಿರ್ಧಾರವನ್ನು ಕೈಗೊಳ್ಳದೇ ಇರುವುದು ಬಿಜೆಪಿ ಆಂತರಿಕ ವಲಯದಲ್ಲಿ (BJP Politics) ಕುತೂಹಲಕ್ಕೆ ಕಾರಣವಾಗಿದೆ.

ನಾಗಲ್ಯಾಂಡ್, ಮೇಘಾಲಯ, ಪುದುಚೇರಿ ರಾಜ್ಯಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ ಮಾಡಿ ಜೆ.ಪಿ. ನಡ್ಡಾ ಸೋಮವಾರ (ಸೆಪ್ಟೆಂಬರ್‌ 25) ಆದೇಶ ಹೊರಡಿಸಿದ್ದಾರೆ. ನಾಗಾಲ್ಯಾಂಡ್ ರಾಜ್ಯದ ನೂತನ ಅಧ್ಯಕ್ಷರಾಗಿ ಬೆಂಜಮಿನ್ ಎಪ್ತೋಮಿ ನೇಮಕವಾಗಿದ್ದರೆ, ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ರಿಕ್ಮನ್ ಮೊಮಿನ್, ಪುದುಚೇರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೆಲ್ವಗಣಬತಿ ನೇಮಕವಾಗಿದ್ದಾರೆ.

ಮೂರು ರಾಜ್ಯಗಳಿಗೂ ನೂತನ ಅಧ್ಯಕ್ಷರ ನೇಮಿಸಿದ ಜೆಪಿ ನಡ್ಡಾ ಅವರು, ಕರ್ನಾಟಕಕ್ಕೆ ಇನ್ನೂ ಅಧ್ಯಕ್ಷರನ್ನು ನೇಮಿಸಿಲ್ಲ. ಹೀಗಾಗಿ ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷರ ನೇಮಕ ಯಾವಾಗ ಎಂಬ ಪ್ರಶ್ನೆ ಮೂಡಿದೆ.

ಬಿಜೆಪಿ – ಜೆಡಿಎಸ್‌ ಮೈತ್ರಿಯೂ ಆಯಿತು!

ಇತ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಕಟ್ಟಿಹಾಕಲು ರಣತಂತ್ರ ರೂಪಿಸುತ್ತಿರುವ ಕೇಂದ್ರ ಬಿಜೆಪಿ, ಈ ಸಂಬಂಧ ಜೆಡಿಎಸ್‌ ಜತೆಗೆ ಮೈತ್ರಿಯನ್ನೂ ಮಾಡಿಕೊಂಡಿದೆ. ಆದರೆ, ಈ ಮೈತ್ರಿ ಮಾತುಕತೆ ವೇಳೆ ರಾಜ್ಯದ ಯಾವೊಬ್ಬ ನಾಯಕರೂ ಇರಲಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದಲ್ಲದೆ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿ ವರಿಷ್ಠರು ಭೇಟಿ ಮಾಡಿದ್ದ ವೇಳೆ ಕೆಲವು ಗೊಂದಲಗಳನ್ನು ಬಗೆಹರಿಸುವಂತೆ ಕೋರಿದ್ದರು.

ರಾಜ್ಯ ಬಿಜೆಪಿ ಈಗ ಒಡೆದ ಮನೆಯಾಗಿದೆ. ಇಲ್ಲಿ ಮೊದಲು ಒಗ್ಗಟ್ಟಿನ ಮಂತ್ರವನ್ನು ಜಪಿಸುವಂತೆ ಮಾಡಬೇಕು. ಬಣಗಳನ್ನು ಒಟ್ಟು ಮಾಡಬೇಕು. ಇದಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಬೇಕು. ಈ ಮೂಲಕ ರಾಜ್ಯ ಬಿಜೆಪಿಗೆ ಸ್ಪಷ್ಟ ಗುರಿಯನ್ನು ನೀಡಬೇಕು ಎಂದು ಅವರು ಈ ವೇಳೆ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದ್ದರು.

ಗ್ಯಾರಂಟಿ ಅಲೆ ದಾಟಲು ನೇಮಕದ ಅವಶ್ಯಕತೆ

ಕಾಂಗ್ರೆಸ್‌ ಈಗ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಈ ಗ್ಯಾರಂಟಿಗಳ ಮಧ್ಯೆ ಹೆಚ್ಚಿನ ಮತಗಳು ಹಾಗೂ ಸೀಟುಗಳನ್ನು ಪಡೆಯಬೇಕೆಂದರೆ ಈಗಿನಿಂದಲೇ ಕಾರ್ಯತಂತ್ರವನ್ನು ಹೆಣೆಯಬೇಕು ಎಂಬುದು ರಾಜ್ಯ ಬಿಜೆಪಿಯ ಹಲವು ನಾಯಕರ ಉದ್ದೇಶವಾಗಿತ್ತು. ಕೊನೇ ಘಳಿಗೆಯಲ್ಲಿ ಇಂಥವರು ನಾಯಕರು ಎಂದು ಸೂಚಿಸಿದರೆ, ಪಕ್ಷ ಸಂಘಟನೆ ಕಷ್ಟವಾಗುತ್ತದೆ. ಹೀಗಾಗಿ ಈಗಲೇ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದರೆ ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ. ಪಕ್ಷಕ್ಕೆ ಹೆಚ್ಚಿನ ಲಾಭವೂ ಆಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇದನ್ನೂ ಓದಿ: Cauvery water dispute : ಕಾವೇರಿ ವಿಷಯದಲ್ಲಿ ವಿಶಾಲ ಮನೋಭಾವ ಇರಲಿ; ಜೆಡಿಎಸ್‌, ಬಿಜೆಪಿಗೆ ಸಿಎಂ ಚಾಟಿ

ಬಿಎಸ್‌ವೈ ಸಹ ಮನವಿ ಮಾಡಿದ್ದರು

ಇನ್ನು ಈ ಹಿಂದೆ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಸಹ ನವ ದೆಹಲಿಗೆ ಭೇಟಿ ನೀಡಿದಾಗ ಶೀಘ್ರದಲ್ಲೇ ರಾಜ್ಯಾಧ್ಯಕ್ಷ ನೇಮಕ ಮಾಡುವಂತೆ ಮನವಿ ಮಾಡಿದ್ದರು ಎಂದು ಹೇಳಲಾಗಿತ್ತು. ಪಕ್ಷದ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗ ಆಯ್ಕೆ ನಡೆಯಲಿ ಎಂದು ಕೋರಿದ್ದರು. ಆದರೆ, ಈವರೆಗೆ ಆಯ್ಕೆ ಮಾಡದೇ ಇರುವುದು ರಾಜ್ಯ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ವರಿಷ್ಠರ ನಡೆ ಯಕ್ಷಪ್ರಶ್ನೆಯಾಗಿದೆ.

Exit mobile version