ಬೆಂಗಳೂರು: ಲೋಕಸಭಾ ಚುನಾವಣೆಗೆ (Parliament Elections) ಸಂಬಂಧಿಸಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಆಯ್ಕೆ (BJP Candidates Selection) ಪ್ರಕ್ರಿಯೆ ನಡೆಯುತ್ತಿದೆ. ಹೈಕಮಾಂಡ್ ನಾಯಕರು (BJP High Command) ರಾಜ್ಯದ ಅಭ್ಯರ್ಥಿಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಇವತ್ತು, ನಾಳೆಯೊಳಗೆ ಎಲ್ಲವೂ ಅಂತಿಮವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಅವರು ತಿಳಿಸಿದ್ದಾರೆ.
ನಗರದ ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅಭ್ಯರ್ಥಿಗಳ ವಿಚಾರ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ಮೂರ್ನಾಲ್ಕು ದಿನಗಳಲ್ಲಿ ಎಲ್ಲ ವಿವರ ಲಭಿಸಲಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಬಹುತೇಕ 2 ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಮೂರ್ನಾಲ್ಕು ದಿನಗಳಲ್ಲಿ ಉತ್ತರ ಲಭಿಸಲಿದೆ ಎಂದು ಅವರು ಹೇಳಿದರು
ರಾಜ್ಯದಲ್ಲಿ ಎಷ್ಟು ಸೀಟು ಗೆಲ್ಲುತ್ತೇವೆ ಎನ್ನುವುದು ಪ್ರಶ್ನೆಯೇ ಅಲ್ಲ. 22, 23, 24 ಕ್ಷೇತ್ರ ಗೆಲುವಿನ ಪ್ರಶ್ನೆ ಅಲ್ಲ. ಹೊಸ ಇತಿಹಾಸವನ್ನು ಬಿಜೆಪಿ ರಾಜ್ಯದಲ್ಲಿ ಸೃಷ್ಟಿಸಲಿದೆ ಎಂದು ರಾಜ್ಯಾಧ್ಯಕ್ಷನಾಗಿ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು. ಹಿಂದೆ ಬಾರದಂಥ ಅತ್ಯುತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು.
ರಾಜ್ಯದಲ್ಲಿ ಈಗ ಎಲ್ಲ ಕ್ಷೇತ್ರಗಳಲ್ಲಿ ನರೇಂದ್ರ ಮೋದಿಯವರ ಮತ್ತು ಬಿಜೆಪಿ ಪರ ವಾತಾವರಣ ಇದೆ ಎಂದರು. ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಸರಕಾರದ ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯೇ ಉತ್ತಮ ಮತ್ತು ನರೇಂದ್ರ ಮೋದಿಯವರ ಸರಕಾರ ಬೇಕೆಂಬ ತೀರ್ಮಾನಕ್ಕೆ ಜನರು ಬಂದಿದ್ದಾರೆ ಎಂದು ವಿಜಯೇಂದ್ರ ವಿಶ್ಲೇಷಿಸಿದರು.
ಬೆಂಗಳೂರು ಗ್ರಾಮಾಂತರಕ್ಕೆ ಮಾತ್ರ ನೋಡಲ್ ಆಫೀಸರ್ ಯಾಕೆ?
ಡಿ.ಕೆ.ಶಿವಕುಮಾರರ ನಡವಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ ಅವರು, ಬೆಂಗಳೂರಿನಲ್ಲಿ 15- 20 ದಿನಗಳಿಂದ ನೀರಿನ ತೀವ್ರ ಸಮಸ್ಯೆ ಇದೆ. ಇದರ ನಡುವೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ 14ಕ್ಕೂ ಹೆಚ್ಚು ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಅದರ ಅರ್ಥ ಏನು? ಬೆಂಗಳೂರಿನಲ್ಲಿ ಮನುಷ್ಯರೇ ಇಲ್ಲವೇ ಎಂದು ಕೇಳಿದರು.
ಇದನ್ನು ಓದಿ : BY Vijayendra : ಭೀಕರ ಬರಗಾಲ, 800ಕ್ಕೂ ಹೆಚ್ಚು ರೈತರ ಆತ್ಮಹತ್ಯೆ : ಬಿವೈ ವಿಜಯೇಂದ್ರ ಆಕ್ರೋಶ
ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರಿಗೆ ಸೂಚನೆ
ಕಾಳಜಿ ಇಲ್ಲದ ಸರಕಾರ ಇದು. ದರಿದ್ರ ಸರಕಾರ ಇದೆಂದು ಸಾಮಾನ್ಯ ಜನರು ಹೇಳುತ್ತಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಗರ ಜಿಲ್ಲಾಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ವಿಜಯೇಂದ್ರ ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿದ್ದಾರೆ. ಬೆಂಗಳೂರಿನ ನೀರಿನ ಸಮಸ್ಯೆಯತ್ತ ಗಮನ ಕೊಡುತ್ತಿಲ್ಲ. ಕುಡಿಯುವ ನೀರಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.
ಇದು ದೇಶದ ಭವಿಷ್ಯ ರೂಪಿಸುವ ಚುನಾವಣೆ. ರಾಜ್ಯದಲ್ಲಿ 28 ಕ್ಷೇತ್ರದಲ್ಲೂ ಬಿಜೆಪಿ- ಜೆಡಿಎಸ್ ಗೆಲ್ಲಿಸಲು ಪ್ರಜ್ಞಾವಂತ ಜನರು ನಿರ್ಧರಿಸಿದ್ದಾರೆ. ಸಾಮಾನ್ಯ ಜನರ ಅಭಿಪ್ರಾಯ, ವಿವಿಧ ಕ್ಷೇತ್ರಗಳ ಜನರ ಅಭಿಮತ ಪಡೆದು ಸಂಕಲ್ಪ ಪತ್ರ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ವಿಜಯೇಂದ್ರ ವಿವರಿಸಿದರು.