Site icon Vistara News

ಬಿ.ವೈ ವಿಜಯೇಂದ್ರಗೆ ಪರಿಷತ್‌ ಟಿಕೆಟ್ ಪಕ್ಕಾ

ವಿಜಯೇಂದ್ರಗೆ ವಿಧಾನ ಪರಿಷತ್‌ ಟಿಕೆಟ್

ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂದು ಕಡೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತುಗಳು ನಡೆಯುತ್ತಿರುವಂತೆಯೇ ಮತ್ತೊಂದು ಕಡೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಯೂ ದಟ್ಟವಾಗುತ್ತಿದೆ. ವಿಧಾನಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ವಿಜಯೇಂದ್ರ ಅವರ ಹೆಸರನ್ನು ಶಿಫಾರಸು ಮಾಡಲು ಶನಿವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆ ತೀರ್ಮಾನಿಸಿದೆ. ಬಿ.ವೈ ವಿಜಯೇಂದ್ರಗೆ ಪರಿಷತ್‌ ಟಿಕೆಟ್‌ ಪಕ್ಕಾ ಆಗುತ್ತಿದ್ದಂತೆಯೇ ಅವರ ಮಂತ್ರಿ ಸ್ಥಾನವೂ ಖಚಿತವಾಗಲಿದೆ.

ಕೋರ್‌ ಕಮಿಟಿಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿಜಯೇಂದ್ರ ಅವರ ಹೆಸರನ್ನು ಪ್ರಸ್ತಾಪ ಮಾಡಿದರು ಎನ್ನಲಾಗಿದೆ. ನಾವು ಹೈಕಮಾಂಡ್‌ಗೆ ಹೆಸರನ್ನು ಕಳುಹಿಸುತ್ತೇವೆ. ಟಿಕೆಟ್‌ ಕೊಡುವ ಬಗ್ಗೆ ಅಂತಿಮ ತೀರ್ಮಾನವನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಒಂದು ಸ್ಥಾನಕ್ಕೆ ಐದು ಹೆಸರು
ರಾಜ್ಯದಲ್ಲಿ ಪ್ರಸಕ್ತ ಏಳು ವಿಧಾನ ಪರಿಷತ್‌ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇವುಗಳಲ್ಲಿ ನಾಲ್ಕನ್ನು ಬಿಜೆಪಿ ಸ್ವಂತ ಬಲದಿಂದ ಗೆಲ್ಲಲು ಸಮರ್ಥವಾಗಿದೆ. ಇವುಗಳಲ್ಲಿ ಒಂದೊಂದು ಸ್ಥಾನಕ್ಕೆ ಐದೈದು ಹೆಸರುಗಳನ್ನು ಶಿಫಾರಸು ಮಾಡಿ ಕಳುಹಿಸುವಂತೆ ಹೈಕಮಾಂಡ್‌ ಸೂಚಿಸಿದೆ. ಶಿಫಾರಸು ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರಿಗೆ ವಹಿಸಲಾಗಿದೆ. ತಾವು ಮತ್ತು ರಾಜ್ಯಾಧ್ಯಕ್ಷರು ಸೇರಿಸಿ ಎಲ್ಲ ಮಹತ್ವದ ಅಂಶಗಳನ್ನು ಪರಿಗಣಿಸಿ ಹೈಕಮಾಂಡ್‌ಗೆ ಹೆಸರಿನ ಪಟ್ಟಿ ಸಲ್ಲಿಸುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಯಾವುದೇ ಚುನಾವಣೆ ಎದುರಿಸಲು ಬಿಜೆಪಿ ಸಂಪೂರ್ಣ ಸಿದ್ಧ: ನಳಿನ್ ಕುಮಾರ್ ಕಟೀಲ್

ರಾಜ್ಯಸಭೆಗೆ ಐದು ಹೆಸರು
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ರಾಜ್ಯದ ಎರಡು ಸ್ಥಾನಗಳಿಗೆ ಆಯ್ಕೆ ನಡೆಯಬೇಕಾಗಿದೆ. ಈ ಸ್ಥಾನಗಳಿಗೆ ಹಾಲಿ ಸದಸ್ಯರಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಕೆ.ಸಿ. ರಾಮಮೂರ್ತಿ ಅವರ ಹೆಸರನ್ನು ಮರು ಕಳುಹಿಸಲಾಗುವುದು. ಅದರ ಜತೆಗೆ ನಿರ್ಮಲ್‌ ಕುಮಾರ್‌ ಸುರಾನಾ ಸೇರಿದಂತೆ ಇನ್ನೂ ಮೂವರ ಹೆಸರನ್ನು ಕಳುಹಿಸಲಾಗುವುದು ಎಂದು ತಿಳಿದುಬಂದಿದೆ.

ಎರಡು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ನಿರ್ಮಲಾ ಸೀತಾರಾಮನ್‌ ಹೆಸರನ್ನು ಮಾತ್ರ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಎರಡನೇ ಸ್ಥಾನಕ್ಕೆ ಹಾಲಿ ಸದಸ್ಯ ಕೆ.ಸಿ. ರಾಮಮೂರ್ತಿ ಅವರ ಜತೆ ನಿರ್ಮಲ್‌ ಕುಮಾರ್‌ ಸುರಾನಾ, ವಿಧಾನ ಪರಿಷತ್‌ ಸದಸ್ಯ ಲೇಹರ್‌ ಸಿಂಗ್‌ ಹೆಸರು ಕೇಳಿಬಂದಿದೆ.

ಈ ಸರಕಾರದಲ್ಲೇ ಸಚಿವ ಪಟ್ಟ?
ಪ್ರತಿ ಬಾರಿ ವಿಧಾನ ಪರಿಷತ್‌ ಉಪಚುನಾವಣೆ ನಡೆದಾಗಲೂ ಯಾವುದೇ ಕ್ಷೇತ್ರವಿದ್ದರೂ ಬಿ.ವೈ ವಿಜಯೇಂದ್ರ ಅವರ ಹೆಸರು ಮುಂಚೂಣಿಯಲ್ಲಿ ಪ್ರಸ್ತಾಪ ಆಗುತ್ತಿತ್ತು. ವಿಜಯೇಂದ್ರ ಅವರು ಎಲ್ಲ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಇದಕ್ಕೆ ಒಂದು ಕಾರಣವಾದರೆ, ಅವರನ್ನು ಆದಷ್ಟು ಬೇಗನೆ ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕಾಗಿ ಉಪಚುನಾವಣೆಗೆ ನಿಲ್ಲುವ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಚರ್ಚೆ ಬಲವಾಗಿತ್ತು. ಈ ನಡುವೆ, ಬಹುತೇಕ ಎಲ್ಲ ಉಪಚುನಾವಣೆಗೆ ಮುಕ್ತಾಯವಾಗಿದ್ದು, ಮುಂದಿನ ವಿಧಾನಸಭೆಗೆ ಮುನ್ನ ಉಳಿದಿರುವ ಪ್ರಮುಖ ಮೇಲ್ಮನೆ ಚುನಾವಣೆ ಇದಾಗಿದೆ.

ಈ ಚುನಾವಣೆಯಲ್ಲಿ ಮೇಲ್ಮನೆ ಪ್ರವೇಶಿಸುವಂತೆ ಮಾಡಿ ಅವರಿಗೆ ಮಂತ್ರಿ ಪಟ್ಟ ನೀಡಬೇಕು ಎನ್ನುವ ಒತ್ತಡ ಜೋರಾಗಿದೆ. ಅಂದರೆ ಈ ಸರಕಾರದಲ್ಲೇ ಅವರನ್ನು ಮಂತ್ರಿ ಮಾಡಿದರೆ ಮುಂದಿನ ಸರಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ಪ್ರಯತ್ನಿಸಬಹುದು ಎನ್ನುವುದು ಬಿ.ಎಸ್‌. ಯಡಿಯೂರಪ್ಪ ಅವರ ಲೆಕ್ಕಾಚಾರ ಎನ್ನಲಾಗುತ್ತಿದೆ.

ಕಾಂಗ್ರೆಸ್‌ ತ್ಯಜಿಸುವ ಅನೇಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Exit mobile version