ಬೆಂಗಳೂರು: ರಾಜ್ಯದಲ್ಲಿ ಭಾರಿ ಚರ್ಚೆಯಲ್ಲಿರುವ ಆಪರೇಷನ್ ಹಸ್ತ (Operation Hasta) ಕಾರ್ಯಾಚರಣೆಯನ್ನು ಇದೇ ಮೊದಲ ಬಾರಿ ಬಿಜೆಪಿ ಹೈಕಮಾಂಡ್ (BJP High Command) ಗಂಭೀರವಾಗಿ ಪರಿಗಣಿಸಿದೆ. ಅದರಲ್ಲೂ ಮುಖ್ಯವಾಗಿ ಬಹುತೇಕ ಒಂದು ಕಾಲನ್ನು ಬಿಜೆಪಿಯಿಂದ ಹೊರಗಿಟ್ಟಿರುವ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ಅವರ ವಿಚಾರದಲ್ಲಿ ವಿಶೇಷ ಆಸಕ್ತಿಯನ್ನು ತಳೆದಿದೆ. ಸ್ವತಃ ಹೈಕಮಾಂಡ್ ಅವರನ್ನು ಮಾತುಕತೆಗೆ ಆಹ್ವಾನಿಸಿದೆ. ಹೀಗಾಗಿ ಸೋಮಶೇಖರ್ ಆ. 25ರಂದು ದಿಲ್ಲಿಗೆ ಹೋಗಬೇಕು.
2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ 17 ಶಾಸಕರಲ್ಲಿ ಈಗ ಕೆಲವರಷ್ಟೇ ಗೆದ್ದಿದ್ದಾರೆ. ಅವರನ್ನು ಮರಳಿ ಕಾಂಗ್ರೆಸ್‌ಗೆ ಸೇರಿಸುವ ಪ್ರಯತ್ನಗಳು ನಡೆದಿವೆ ಎಂದು ಹೇಳಲಾಗುತ್ತಿತ್ತು. ಅದರಲ್ಲಿ ಮುಖ್ಯವಾಗಿ ಕೇಳಿಬಂದ ಹೆಸರು ಎಸ್.ಟಿ. ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್. ಉಳಿದವರಲ್ಲಿ ಕೆಲವರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದರೂ ನಾಯಕರ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಅವರ ಅವಕಾಶದ ಬಾಗಿಲು ಮುಚ್ಚಿದಂತಿದೆ.
ಎಸ್.ಟಿ. ಸೋಮಶೇಖರ್ ಅವರಿಗೆ ಅವರ ಯಶವಂತಪುರ ಕ್ಷೇತ್ರದಲ್ಲೇ ಬಿಜೆಪಿ ನಾಯಕರ ಅಸಹಕಾರ ಇರುವುದಾಗಿ ಹೇಳಲಾಗಿದೆ. ಇದನ್ನು ಪಕ್ಷದ ನಾಯಕರ ಮುಂದೆ ಹೇಳಿದಾಗ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಅವರ ನೋವು. ಇದರ ಬದಲಾಗಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರೇ ವಾಸಿ ಎಂಬರ್ಥದಲ್ಲಿ ಸೋಮಶೇಖರ್ ಮಾತನಾಡಿದ್ದರು. ಜತೆಗೆ ಬಿಎಸ್ ಯಡಿಯೂರಪ್ಪ ಅವರು ಕರೆದ ಮಹತ್ವದ ಸಭೆಯನ್ನೇ ತಪ್ಪಿಸಿಕೊಂಡಿದ್ದರು.
ನೋವಿನಲ್ಲಿರುವ ಸೋಮಶೇಖರ್ ಅವರನ್ನು ಸಮಾಧಾನ ಮಾಡಿ ಪಕ್ಷದಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಬಿಎಸ್‌ವೈ ಅವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಿದ್ದರು. ಆದರೆ, ಅವರ ನಡುವೆ ಚರ್ಚೆ ನಡೆದಂತೆ ಇಲ್ಲ. ಮಾಜಿ ಸಚಿವ ಸಿ.ಟಿ. ರವಿ ಅವರು ಸೋಮಶೇಖರ್ ಅವರನ್ನು ಕರೆಸಿ ಮಾತನಾಡಿದ್ದರೂ ಯಾವುದೇ ಫಲ ಸಿಕ್ಕಿಲ್ಲ. ಸಿ.ಟಿ. ರವಿ ಅವರ ಭೇಟಿಯ ಬಳಿಕ ಸೋಮಶೇಖರ್ ಮತ್ತೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಯಶವಂತಪುರ ಕ್ಷೇತ್ರಕ್ಕೆ 7 ಕೋಟಿ ರೂ. ಅನುದಾನ ಕೂಡಾ ನೀಡಿದ್ದಾರೆ. ಜತೆಗೆ ಸೋಮಶೇಖರ್ ಅವರ ಹಲವು ಅನುಯಾಯಿಗಳನ್ನು ಆಗಲೇ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿದೆ.
ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದ ಬಳಿಕ ಈ ಹಂತದಲ್ಲಿ ಎಸ್.ಟಿ.ಸೋಮಶೇಖರ್ ಅವರಿಗೆ ದಿಲ್ಲಿ ಬುಲಾವ್ ಬಂದಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್. ಸಂತೋಷ್ ಅವರು ಸೋಮಶೇಖರ್ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.
ಇದನ್ನೂ ಓದಿ : ST Somashekhar : ಸೋಮಶೇಖರ್‌ಗೆ ಅತೃಪ್ತಿ ಇದೆ, ಆದರೆ ಪಕ್ಷ ಬಿಟ್ಟು ಹೋಗುವಷ್ಟಲ್ಲ ಎಂದ ಸಿ.ಟಿ. ರವಿ
ಸೋಮಶೇಖರ್ ಅವರನ್ನು ದಿಲ್ಲಿಗೆ ಕರೆತರುವ ಹೊಣೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾದ ನಿರ್ಮಲ್ ಕುಮಾರ್ ಸುರಾನ ಅವರಿಗೆ ವಹಿಸಲಾಗಿದೆ. ಆಗಸ್ಟ್ 25ರಂದು ದೆಹಲಿಗೆ ತೆರಳಿ ಬಿ.ಎಲ್.ಸಂತೋಷ್ ಭೇಟಿ ಮಾಡಲಿರುವ ಎಸ್‌ಟಿ ಸೋಮಶೇಖರ್ ಅವರು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಸೆಪ್ಟೆಂಬರ್ 2 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೂ ಸೋಮಶೇಖರ್ ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 2 ರಂದು ಅಮಿತ್ ಶಾ ಭೇಟಿಗೆ ಸಮಯ ನಿಗದಿಯೂ ಆಗಿದೆ ಎನ್ನಲಾಗಿದೆ.