ತುಮಕೂರು: ʻʻತುಮಕೂರಿನಿಂದ ದೇವೇಗೌಡರನ್ನು (HD Devegowda) ನಿಲ್ಲಿಸಲು ಹೊರಟಿದ್ದಾರಂತೆ. ದೇವೇಗೌಡರು ನಿಂತರೆ ತುಮಕೂರು ಜನ ಯಾವತ್ತಿದ್ದರೂ ವೋಟ್ ಹಾಕಲ್ಲʼʼ- ಹೀಗೆಂದು ಖಡಾಖಡಿಯಾಗಿ ಹೇಳಿದ್ದರು ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ (MP GS Basavaraj) ಅವರು.
ಅವರು ಮಾತನಾಡುತ್ತಿದ್ದುದು ಬಿಜೆಪಿ- ಜೆಡಿಎಸ್ ಮೈತ್ರಿ (BJP-JDS Alliance) ವಿಚಾರ. ʻʻನಮ್ಮ ಪಕ್ಷದವರು ಒಪ್ಪಿ ಮೈತ್ರಿ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ನಾನು ಏನೂ ಕಮೆಂಟ್ ಮಾಡಲ್ಲ. ಜೆಡಿಎಸ್‌ನವರು ಐದು ಸೀಟ್ ಕೇಳಿದ್ದಾರಂತೆ. ತುಮಕೂರನ್ನೂ ಜೆಡಿಎಸ್ ನವರು ಕೇಳಿದ್ದಾರಂತೆ. ಜನ ವೋಟ್ ಹಾಕ್ತಾರೋ ಏನೋ ಗೊತ್ತಿಲ್ಲ. ತುಮಕೂರಿನಿಂದ ದೇವೇಗೌಡರನ್ನು ನಿಲ್ಲಿಸಲು ಹೊರಟಿದ್ದಾರಂತೆ. ದೇವೇಗೌಡರು ನಿಂತರೇ ಜನ ಮತ ಹಾಕಲ್ಲʼʼ ಎಂದು ಹೇಳಿದರು ಬಸವರಾಜ್
ʻʻರಕ್ತ ಕೊಟ್ಟರೂ ಕೊಟ್ಟೆನೂ ತುಮಕೂರಿಗೆ ಹೇಮಾವತಿ ನೀರು ಕೊಡಲ್ಲ ಎಂದಿದ್ದ ದೇವೇಗೌಡರನ್ನು ಒಮ್ಮೆ ಜನ ಸೋಲಿಸಿದ್ದಾರೆ. ಅವರ ಸ್ವಂತ ನೆಂಟರೂ ವೋಟ್ ಹಾಕಲ್ಲ. ಒಬ್ಬ ಗೌಡರೂ ಅವರಿಗೆ ಮತ ಹಾಕಲ್ಲʼʼ ಎಂದು ಹೇಳಿದರು ಬಸವರಾಜ್.
ʻʻಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರು ತುಮಕೂರಿಗೆ ಎಂದೂ ಕಂಡಿರಿಯದ ಮೋಸ ಮಾಡಿದ್ದಾರೆ. ಯಾರಿಗಾದರೂ ವೋಟ್ ಹಾಕಲಿ, ದೇವೇಗೌಡರಿಗೆ ವೋಟ್ ಹಾಕಬಾರದು. ದೇವೇಗೌಡರಿಗೆ ವೋಟ್ ಹಾಕಿದರೆ ಜಿಲ್ಲೆಯ ಜನತೆ ಪಾಪ ಮಾಡಿದಂಗೆʼʼ ಎಂದು ನಿಷ್ಠುರವಾಗಿ ನುಡಿದರು.
ʻʻದೇವೇಗೌಡರು ಎಂದಾದರೂ ಜೀವಮಾನದಲ್ಲಿ ಈಲ್ಡ್ ಆಗಿಲ್ಲ. ಹಿಂದೆ ಜೆಡಿಎಸ್ ನಮ್ಮ ಜತೆ ಮೈತ್ರಿ ಮಾಡಿಕೊಂಡಿತ್ತು. ನಂತರ 2018ರಲ್ಲಿ 39 ಸೀಟ್ ಪಡೆದು ಕಾಂಗ್ರೆಸ್ ಜೊತೆ ಸೇರಿ ಕುಮಾರಸ್ವಾಮಿ ಸಿಎಂ ಆದ್ರುʼʼ ಎಂದು ನೆನಪಿಸಿಕೊಂಡರು ಬಸವರಾಜ್.
ಬಸವರಾಜ್ ಸೀಟು ಬಿಟ್ಟುಕೊಡುವುದು ಅನಿವಾರ್ಯ!
ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಮಾತುಕತೆಯಲ್ಲಿ ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕು ಎಂಬ ಮಾತುಕತೆ ಆಗಿದೆ ಎಂದು ಹೇಳಲಾಗಿದೆ. ಆದರೆ, ಇದ್ಯಾವುದೂ ಅಂತಿಮ ಆಗಿಲ್ಲ. ಈಗಿರುವ ಸುದ್ದಿಯಂತೆ ಅದು ನಿಜವಾದರೆ ತುಮಕೂರು ಜೆಡಿಎಸ್ ಪಾಲಾಗಲಿದೆ. ಆಗ ಅನಿವಾರ್ಯವಾಗಿ ಜಿ.ಎಸ್. ಬಸವರಾಜ್ ಅವರು ತಮ್ಮ ಸೀಟು ಬಿಟ್ಟುಕೊಡಬೇಕಾಗುತ್ತದೆ. ಅದಲ್ಲದೆ ಹೋದರೂ ಈಗ 82 ವರ್ಷ ಆಗಿರುವ ಬಸವರಾಜ್ ಅವರಿಗೆ ಮುಂದಿನ ಬಾರಿ ಟಿಕೆಟ್ ಸಿಗೋದು ಡೌಟು. ಅವರು ಆಗಲೇ ನಿವೃತ್ತಿ ಘೋಷಿಸಿದ್ದಾರೆ.
ಅಷ್ಟಾದರೂ ಬಸವರಾಜ್ ಅವರು ದೇವೇಗೌಡರು ಬರಲೇಬಾರದು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಜತೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಆಕ್ರೋಶ ಅವರ ಮಾತಿನಲ್ಲಿ ಕಾಣಿಸುತ್ತಿದೆ.
ತುಮಕೂರಿನಿಂದ ಸೋಮಣ್ಣ ಸ್ಪರ್ಧೆ ಮಾಡ್ತಾರಾ?
ಈ ನಡುವೆ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಬಿಜೆಪಿ ನಾಯಕರಾಗಿರುವ ವಿ ಸೋಮಣ್ಣ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹರಡಿದೆ. ಅದರ ಬಗ್ಗೆ ಪ್ರಶ್ನೆ ಮಾಡಿದರೆ, ʻʻಸೋಮಣ್ಣರನ್ನ ನಾನು ಕರೆದಿಲ್ಲ. ಅವರ ಭವಿಷ್ಯಕ್ಕೆ ನಾನು ಅಡ್ಡಿಯಾಗಿಲ್ಲ. ಅಪ್ಪಾ ನೀನು ಎಲ್ಲಿ ನಿಲ್ತೀಯಾ ಅಲ್ಲಿ ಸಪೋರ್ಟ್ ಮಾಡ್ತೀವಿ ಅಂದಿದ್ದೀನಿʼʼ ಎಂದು ಬಸವರಾಜ್ ಹೇಳಿದರು.
ʻʻಪಾರ್ಟಿಯೊಳಗೆ ಇದ್ದು ಕೆಲಸ ಮಾಡು ಅಂದಿದ್ದೇನೆ. ಏನು ಮಾಡ್ತಾರೋ ಗೊತ್ತಿಲ್ಲʼʼ ಎಂದ ಬಸವರಾಜ್, ʻʻಹಿಂದಿನ ಬಾರಿ ನಾನು ಗೆಲ್ಲಲು ವಿ.ಸೋಮಣ್ಣರೇ ಕಾರಣ. ನನ್ನತ್ರ ದುಡ್ಡೇ ಇರಲಿಲ್ಲ. ಸೋಮಣ್ಣರೇ ದುಡ್ಡು ಕೊಟ್ಟಿದ್ದುʼʼ ಎಂದು ಸತ್ಯ ಬಿಚ್ಚಿಟ್ಟರು!
ಇದನ್ನೂ ಓದಿ: BJP-JDS Alliance : ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭ!
ತುಮಕೂರಿನ ರಾಜಕೀಯ ಪರಿಸ್ಥಿತಿ ಹೇಗಿದೆ?
ತುಮಕೂರಿನಲ್ಲಿ ಕಳೆದ ಬಾರಿ ಬಿಜೆಪಿಯಿಂದ ಬಸವರಾಜ್ ಅವರು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗಿತ್ತು. ಅಲ್ಲಿ ದೇವೇಗೌಡರು ಸ್ಪರ್ಧೆ ಮಾಡಿದ್ದರು. ತುಮಕೂರಿನಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌ನಿಂದ ಕಣಕ್ಕಿಳಿಯುತ್ತಿದ್ದ ಮುದ್ದಹನುಮೇ ಗೌಡರು ಬೇಸರಗೊಂಡು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡರು. ಬಳಿಕ ಅಲ್ಲಿಯೂ ಭ್ರಮನಿರಸನಗೊಂಡು ಕಾಂಗ್ರೆಸ್‌ಗೆ ಮರಳಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ಕೊಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಇತ್ತ ಬಸವರಾಜ್ ಅವರಿಗೂ ಬಿಜೆಪಿಯಲ್ಲಿ ಅಷ್ಟೇನೂ ಹಿತಕರ ಅನಿಸುತ್ತಿಲ್ಲ ಎಂಬ ಮಾತಿದೆ. ಇತ್ತ ಸೋಮಣ್ಣ ಅವರು ತುಮಕೂರಿನ ಮೇಲೆ ಕಣ್ಣಿಟ್ಟಿದ್ದಾರೆ.
ಕಾಂಗ್ರೆಸ್ ನಿರ್ಲಕ್ಷ್ಯದಿಂದ ಕಾವೇರಿ ಜಲ ವಿವಾದ ಎಂದ ಬಸವರಾಜ್
ʻʻಕಾಂಗ್ರೆಸ್ ನವರ ನಿರ್ಲಕ್ಷ್ಯದಿಂದಾಗಿ ನಾವು ತಮಿಳುನಾಡಿಗೆ ನೀರು ಬಿಡಬೇಕಾದ ಪರಿಸ್ಥಿತಿ ಬಂದಿದೆ. ಅಚ್ಚುಕಟ್ಟಾಗಿ ಒಳ್ಳೆ ಲಾಯರ್ ಗೆ ಇಟ್ಟು ವಾದ ಮಾಡಬೇಕಿತ್ತು. ತಜ್ಞರನ್ನು ಕಳುಹಿಸಿ ನೀರಿನ ಲೆಕ್ಕಾಚಾರ ಮಾಡಬೇಕಿತ್ತುʼʼ ಎಂದು ಬಸವರಾಜ್ ಹೇಳಿದರು.
ʻʻಕಾಂಗ್ರೆಸ್ ನವರು ತಮಿಳುನಾಡಿನವರನ್ನು ಎದುರು ಹಾಕಿಕೊಳ್ಳಲು ಆಗುತ್ತಿಲ್ಲ. ತಮಿಳುನಾಡಿನ ನೆಂಟಸ್ತನ ಬೇಕಾಗಿದೆ. ಹಾಗಾಗಿ ನೀರು ಬಿಟ್ಟಿದೆʼʼ ಎಂದು ಕಾಂಗ್ರೆಸ್ ವಿರುದ್ಧ ಹರಿ ಹಾಯ್ದರು.