Site icon Vistara News

BJP-JDS Alliance : ಜೆಡಿಎಸ್‌ನ ಮುಸ್ಲಿಂ ನಾಯಕರು ಅತಂತ್ರ; ಸಿಎಂ ಇಬ್ರಾಹಿಂಗೆ ಮತ್ತೆ ಕಾಂಗ್ರೆಸ್‌ ಪಾದವೇ ಗತಿ?

CM Ibrahim in dialemma

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ (BJP-JDS Alliance) ಮಾಡಿಕೊಂಡಿರುವುದರಿಂದ ಜಾತ್ಯತೀತ ಜನತಾದಳ (Janatadal Secular) ಪಾಳಯದಲ್ಲಿದ್ದ ಮುಸ್ಲಿಂ ನಾಯಕರು (Muslim Leaders) ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಮುಖ್ಯವಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿರುವ (JDS State Presiden) ಸಿ.ಎಂ. ಇಬ್ರಾಹಿಂ (CM Ibrahim) ಅತಿ ಹೆಚ್ಚು ಸಂತ್ರಸ್ತರಾಗಿದ್ದು, ಅವರೀಗ ಮತ್ತೆ ಕಾಂಗ್ರೆಸ್‌ ಬಾಗಿಲು ತಟ್ಟುತ್ತಿದ್ದಾರೆ (CM Ibrahim at the door of Congress) ಎಂದು ತಿಳಿದುಬಂದಿದೆ.

ಜೆಡಿಎಸ್‌ ನಾಯಕರು ಪಕ್ಷದ ರಾಜ್ಯಾಧ್ಯಕ್ಷರನ್ನು ಕತ್ತಲಲ್ಲಿ ಇಟ್ಟೇ ಬಿಜೆಪಿ ಜತೆ ಮೈತ್ರಿ ಕುದುರಿಸಿಕೊಂಡಿದ್ದರು. ಅಥವಾ ಇಬ್ರಾಹಿಂ ಅವರು ರಾಜ್ಯಾಧ್ಯಕ್ಷರಾಗಿದ್ದರೂ ಅಸಹಾಯಕರಾಗಿ ನಿಂತು ಈ ಬೆಳವಣಿಗೆಗಳನ್ನು ಗಮನಿಸಿದ್ದರು. ಇದೀಗ ಅವರಿಗೆ ಜೆಡಿಎಸ್‌ನಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬ ಭಾವನೆ ಹುಟ್ಟಿಕೊಂಡಂತಿದೆ. ಹಾಗಾಗಿ ಅವರು ತಮ್ಮ ಮೊದಲ ಆಯ್ಕೆಯಾದ ಕಾಂಗ್ರೆಸ್‌ನ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಜೆಡಿಎಸ್‌ ಪಕ್ಷದಲ್ಲಿದ್ದಾಗ ಅವರು ಕಾಂಗ್ರೆಸ್‌ನ ಹಿರಿಯ ನಾಯಕರ ಬಗ್ಗೆ ತೋರಿದ ವರ್ತನೆಗಳು ಪಕ್ಷದಲ್ಲಿ ಅವರ ಸೇರ್ಪಡೆಗೆ ವಿರೋಧದ ಛಾಯೆಯನ್ನು ಮೂಡಿಸಿವೆ. ಅದನ್ನೂ ಮೀರಿ ಅವರಿಗೆ ಅವಕಾಶ ಸಿಗುತ್ತದಾ ಎಂದು ಕಾದು ನೋಡಬೇಕು.

ಅಕ್ಟೋಬರ್‌ 16ರಂದು ಸಭೆ ನಡೆಸಿ ತೀರ್ಮಾನ

ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನ ಸಿಕ್ಕಿಲ್ಲ ಎಂದು ಹೇಳಿ ಕಾಂಗ್ರೆಸ್‌ ನಾಯಕರನ್ನು ಹಳಿದು ತೆನೆ ಹೊತ್ತಿದ್ದ ಇಬ್ರಾಹಿಂ ಅವರು ಈಗ ಜೆಡಿಎಸ್‌ ಪಕ್ಷದ ಸಿದ್ಧಾಂತವೇ ಬದಲಾದ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದಾರೆ. ಇದೀಗ ಅವರು ಅಕ್ಟೋಬರ್‌ 16ರಂದು ಆಪ್ತರ, ಬೆಂಬಲಿಗರ ಸಭೆ ನಡೆಸಿದ್ದು, ಅಲ್ಲಿಂದ ಒಂದು ನಿರ್ಧಾರಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿಎಂ ಇಬ್ರಾಹಿಂ ಅವರನ್ನು ಮರಳಿ ಸೇರಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ನಲ್ಲಿ ಒಂದಷ್ಟು ಭಿನ್ನ ನಿಲುವುಗಳಿವೆ. ಹಿಂದೆ ಇಬ್ರಾಹಿಂ ಅವರನ್ನು ಬೆಂಬಲಿಸುತ್ತಿದ್ದ ಸಿದ್ದರಾಮಯ್ಯ ಅವರೇ ಈಗ ಅಷ್ಟೊಂದು ಹಿತವಾದ ಸಂಬಂಧದಲ್ಲಿ ಇಲ್ಲ. ಹೀಗಾಗಿ ಇಬ್ರಾಹಿಂ ಅವರು ರಾಜ್ಯದ ಪ್ರಭಾವಿ ಸಚಿವರೊಬ್ಬರ ಮೂಲಕ ಹೈಕಮಾಂಡ್‌ನ್ನು ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇಬ್ರಾಹಿಂದ ಅವರಿಗೆ ತಮ್ಮ ರಾಜಕೀಯ ಭವಿಷ್ಯ ಮಾತ್ರವಲ್ಲ, ಪುತ್ರನ ರಾಜಕೀಯ ಭವಿಷ್ಯವೂ ಕೂಡಾ ಮುಖ್ಯವಾಗಿರುವುದರಿಂದ ಅತಂತ್ರವಾಗಿ ಉಳಿಯುವುದು ಅಪಾಯಕಾರಿಯಾಗಿದೆ. ಹೀಗಾಗಿ ಅವರು ಯಾವುದಾದರೂ ಪಕ್ಷ ಸೇರಿಕೊಳ್ಳುವ ತರಾತುರಿಯಲ್ಲಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ನಲ್ಲಿ ಅವಕಾಶ ಸಿಗದಿದ್ದರೆ ಆಮ್‌ ಆದ್ಮಿ ಪಾರ್ಟಿ ಸೇರಬಹುದು. ಇನ್ನೊಂದು ಆಯ್ಕೆಯಾಗಿ ಎಸ್‌ಡಿಪಿಐ ಕೂಡಾ ಇದೆ.

ಇಬ್ರಾಹಿಂ ಅವರಿಗೆ ಎಲ್ಲ ವಿಷಯ ಹೇಳಿದ್ದೇನೆ ಎಂದಿದ್ದ ಎಚ್‌ಡಿಕೆ

ಬಿಜೆಪಿ-ಜೆಡಿಎಸ್‌ ಮೈತ್ರಿ ಎಂದಾಗ ಎಲ್ಲರಿಗೂ ಮೊದಲು ನೆನಪಾಗಿದ್ದು ಸಿಎಂ ಇಬ್ರಾಹಿಂ. ನಿಮ್ಮ ರಾಜ್ಯಾಧ್ಯಕ್ಷರು ಮೈತ್ರಿಗೆ ಒಪ್ಪಿದರಾ ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಅವರು, ʻʻಎಲ್ಲೆಲ್ಲ ಸೆಕ್ಯೂಲರಿಸಂ ಇತ್ತೋ ಅದನ್ನು ಕಾಂಗ್ರೆಸ್ ನವರೇ ನಾಶ ಮಾಡಿದ್ರು. ಅಧಿಕಾರಕ್ಕಾಗಿ ಏನೆನೆಲ್ಲಾ ಮಾಡಿದರು. ರಾಜ್ಯಸಭೆ ಚುನಾವಣೆಯಲ್ಲಿ ಬಿ.ಎಂ. ಫಾರೂಕ್ ಅವರನ್ನು ಸೋಲಿಸಿದರು. ಒಂದು ಸಮಾಜಕ್ಕೆ (ಮುಸ್ಲಿಂ) ಸಹಾಯ ಮಾಡಬೇಕು ಅಂತಾ ದೇವೇಗೌಡರು ಮಾಡಿದ್ದಂಗೆ ಯಾರೂ ಮಾಡಿಲ್ಲ. ಈಗಾಗಲೇ ಇಬ್ರಾಹಿಂ ಅವರಿಗೆ ಎಲ್ಲಾ ಮಾಹಿತಿ ಕೊಟ್ಟಿದ್ದೇವೆʼʼ ಎಂದು ಹೇಳಿದ್ದರು.

ʻʻಇಬ್ರಾಹಿಂ ಜೊತೆ ಹಲವು ವಿಷಯ ಚರ್ಚೆ ಮಾಡಿದ್ದೇನೆ. ಇನ್ನಷ್ಟು ವಿಷಯಗಳನ್ನು ಚರ್ಚೆ ಮಾಡಬೇಕಾಗಿದೆʼʼ ಎಂದಿದ್ದರು ಎಚ್‌.ಡಿ.ಕೆ.

ಸಿಎಂ ಇಬ್ರಾಹಿಂ ಅವರು ಜೆಡಿಎಸ್‌ ಅಧ್ಯಕ್ಷರಾದಾಗ..

ಇಬ್ರಾಹಿಂ ಮಾತ್ರವಲ್ಲ ಹಲವು ಮಂದಿ ಸಂಕಷ್ಟ

ಜೆಡಿಎಸ್‌ನಲ್ಲಿರುವ ಹಲವಾರು ಮುಸ್ಲಿಂ ನಾಯಕರು ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇಬ್ರಾಹಿಂ ಅವರಿಗೆ ಆಪ್ತರಾಗಿರುವವರೇ ಹಲವಾರು ಮಂದಿ ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದು ಕಾಂಗ್ರೆಸ್‌ ಪಕ್ಷ ಸೇರಲು ಪ್ರಯತ್ನ ಮಾಡುತ್ತಿದ್ದಾರೆ. ಶೀಘ್ರದಲ್ಲೇ ತಮ್ಮ ಮುಂದಿನ ನಡೆ ಕುರಿತು ಚರ್ಚಿಸಲು ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

ಮುಂದಿನ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಮುಸ್ಲಿಂ ನಾಯಕರ ಸಭೆ ಮತ್ತು ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಸಭೆ ಬಳಿಕ ಮುಸ್ಲಿಂ ನಾಯಕರು ತಮ್ಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮುಸ್ಲಿಂ ಮುಖಂಡ ಇಮ್ರಾನ್ ಪಾಷ ತಿಳಿಸಿದ್ದಾರೆ.

ನಜ್ಮಾ ನಜೀರ್‌ ಸಹಿತ ಹಲವು ಮುಸ್ಲಿಂ ನಾಯಕರಿಗೆ ಕಿರಿಕಿರಿ

ಬಿಜೆಪಿ ಜೆಡಿಎಸ್‌ ಮೈತ್ರಿಯಿಂದಾಗಿ ಜೆಡಿಎಸ್‌ನ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ನಜ್ಮಾ ಚಿಕ್ಕನೇರಳೆ ಸೇರಿದಂತೆ ಹಲವು ಮಹಿಳಾ ನಾಯಕರೂ ಸಮಸ್ಯೆಯಲ್ಲಿದ್ದಾರೆ. ಅವರೆಲ್ಲ ರಾಜೀನಾಮೆ ನೀಡುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ.

ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆಯಾಗಿರುವ ನಜ್ಮಾ ಚಿಕ್ಕ ನೇರಳೆ, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶಫಿ ಅಹಮದ್, ಸಾವೂದ್ ಖಾನ್, ರಫೀಕ್ ಅಹಮದ್, ರೇಷ್ಮಾ ಭಾನು ಅವರು ರಾಜೀನಾಮೆಗೆ ಮುಂದಾಗಿದ್ದಾರೆ.

Exit mobile version