ಬೆಂಗಳೂರು: ಎಲ್ಲೆಲ್ಲಿ ಸೆಕ್ಯುಲರಿಸಂ ಇತ್ತೋ ಅದನ್ನು ಕಾಂಗ್ರೆಸ್ನವರೇ ನಾಶ ಮಾಡಿದರು. ಅಧಿಕಾರಕ್ಕಾಗಿ ಏನನ್ನೆಲ್ಲ ಮಾಡಿದರು? ಫಾರೂಕ್ ಅಬ್ದುಲ್ಲ (Farooq Abdullah) ಅವರನ್ನು ಯಾವ ಸಿದ್ಧಾಂತ ಉಳಿಸುವುದಕ್ಕೆ ಅವರು ಸೋಲಿಸಿದರು? ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (Former Prime Minister HD DeveGowda) ಇದನ್ನೆಲ್ಲ ನೋಡಿ, ನೋವು ಅನುಭವಿಸಿದ್ದಾರೆ. ಒಂದು ಸಮಾಜಕ್ಕೆ ಸಹಾಯ ಮಾಡಬೇಕು ಅಂತ ದೇವೇಗೌಡರು ಮಾಡಿದ ಹಾಗೆ ಯಾರೂ ಮಾಡಿಲ್ಲ. ಈಗಾಗಲೇ ಇಬ್ರಾಹಿಂ ಅವರಿಗೆ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಮುಸ್ಲಿಮರಿಗೆ ನಾನು ಗೌರವ ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ಈ ಮೂಲಕ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS alliance) ಬಗ್ಗೆ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿದ್ದರೆ, ನನಗೆ ವೋಟ್ ಹಾಕುತ್ತಿರಲಿಲ್ಲ. ನಾನು ಯಾರಿಗೂ ಅಗೌರವಯುತವಾಗಿ ನಡೆದುಕೊಂಡಿಲ್ಲ. ಇಬ್ರಾಹಿಂ ಜೊತೆ ಹಲವು ವಿಷಯ ಚರ್ಚೆ ಮಾಡಿದ್ದೇನೆ. ಇವತ್ತು ದೇಶಕ್ಕೆ ಅವಶ್ಯಕತೆ ಇರುವ ಬಗ್ಗೆ ಲೆಕ್ಕ ಹಾಕಿದ್ದೇವೆ. ಹಾಗಾಗಿ ಈ ಮೈತ್ರಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಸಿಎಂ ಮಾಡಿ ಎಂದು ನಾವು ಕೇಳಿದ್ದೆವಾ?
ಈಗ ಬಿಜೆಪಿ ಬಿ ಟೀಂ ಅನ್ನೋದನ್ನು ದೇವೇಗೌಡರು ಪ್ರೂವ್ ಮಾಡಿದ್ದರು ಅಂತಿದ್ದಾರಲ್ಲ ಅವತ್ತು ದೇವೇಗೌಡರು ನಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬೇಡ ಅಂದಿದ್ದರು. ಆಗ ನಾವು ಅಧಿಕಾರಕ್ಕಾಗಿ ಕಾಂಗ್ರೆಸ್ ಜತೆ ಸೇರಿರಲಿಲ್ಲ. ಆದರೆ, ನನ್ನನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಮುಂದೆ ಬಂದಿದ್ದು ಯಾರು? ಅಂದು ನನಗೆ ಬಿಜೆಪಿಯಿಂದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ, ನಡ್ಡಾ ಅವರಿಂದ ಫೋನ್ ಬಂದಿತ್ತು. ಆಗ ನಾನು ಬಿಜೆಪಿ ಜತೆ ಸೇರಿದ್ದರೆ 5 ವರ್ಷದ ಆಡಳಿತ ನಮ್ಮದಾಗಿರುತ್ತಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಹಾಸನದಲ್ಲಿ ರಾಹುಲ್ ಗಾಂಧಿ ಕರೆದುಕೊಂಡು ಬಂದು ಭಾಷಣ ಮಾಡಿಸಿದ್ದರು. ಸಿದ್ದರಾಮಯ್ಯ ಅವರು ಜಾತ್ಯತೀತತೆಯನ್ನು ಉಳಿಸುತ್ತೇನೆ ಎಂದು ಹೇಳುತ್ತಾರೆ. ಆದರೆ, ಅಂದು ನನ್ನ ಸರ್ಕಾರವನ್ನು ಬೀಳಿಸುವಾಗ 5 ಶಾಸಕರನ್ನು ಕರೆತಂದರೆ, ಅತ್ತ ಕಡೆಯಿಂದ ಮತ್ತೆ ಐವರನ್ನು ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದವರು ಯಾರು? ಜಾತ್ಯತೀತತೆ ಉಳಿಸುವ ಕಾಂಗ್ರೆಸ್ ಸರ್ಕಾರವನ್ನು ಇದೀಗ ನೋಡುತ್ತಿದ್ದೀರಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಕಾವೇರಿ ತಟದಲ್ಲಿ ರೈತರ ಉಳಿವಿಗೆ ದೇವೇಗೌಡರೇ ಕಾರಣ
ನೀರಾವರಿ ಸಮಸ್ಯೆ ಬಗೆಹರಿಸಲು ದೇವೇಗೌಡರು ಹಳ್ಳಿ ಹಳ್ಳಿ ಸುತ್ತಿದ್ದಾರೆ. ನೀರಾವರಿಗೆ ದೇವೇಗೌಡರು ಮಾಡಿರುವುದನ್ನು ಯಾರೊಬ್ಬರೂ ಮಾಡಿಲ್ಲ. ಚರ್ಚೆ ಮಾಡುವ ಸಂಘಟನೆಗಳಿಗೆ ಒಂದು ಮಾತು ಹೇಳುತ್ತೇನೆ. ಕಾವೇರಿ ತಟದಲ್ಲಿ ರೈತರು ಉಳಿದಿರುವುದಕ್ಕೆ ದೇವೇಗೌಡರೇ ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪ್ರಿಯಾಂಕ್ ಖರ್ಗೆ ಮಾತಿಗೆ ತಿರುಗೇಟು
ನಮ್ಮ ಪಕ್ಷ ಉಳಿಸಿಕೊಳ್ಳಲು ಕಾಲು ಹಿಡಿದುಕೊಂಡರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಜನತಾದಳಕ್ಕೆ ಇನ್ನು ಆ ದುರ್ಗತಿ ಬಂದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಕಾವೇರಿ ಬಗ್ಗೆ ಧ್ವನಿ ಎತ್ತಲಿಲ್ಲ? ಕಾವೇರಿ ವಿಚಾರವಾಗಿ ಯಾಕೆ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ? ಕೆಆರ್ಎಸ್ ನೀರಿನ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ. ಈ ಸರ್ಕಾರ ಇಷ್ಟು ಕೇವಲವಾಗಿ ನಡೆದುಕೊಳ್ಳುತ್ತಿದೆ. ವಿಷಯವನ್ನು ಡೈವರ್ಟ್ ಮಾಡುತ್ತಿದೆ. ಪಕ್ಷದ ಬಗ್ಗೆ ಹೆಸರು ಕೆಡಿಸಲು ಹೊರಟಿದ್ದಾರೆ. ನನಗೇನೂ ಶಾಕ್ ಕೊಡುವ ವಿಷಯವಲ್ಲ ಇದು. ಈಗಾಗಲೇ ನನಗೆ ಸಾಕಷ್ಟು ಶಾಕ್ ಕೊಟ್ಟಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಮೈನಾರಿಟಿಗೆ ತೊಂದರೆ ಮಾಡಲ್ಲ: ಎಚ್.ಡಿ. ದೇವೇಗೌಡ
ನಾನು ಇವತ್ತು ನೀರಾವರಿ ಮಂತ್ರಿಗಳ ಯಾವ ಮಾತಿಗೂ ಗಮನ ಕೊಡಲ್ಲ. ಬಾಂಗ್ಲಾದೇಶದ ನೀರಿನ ಸಮಸ್ಯೆ ಬಗೆಹರಿಸಿದ್ದೆ. ನಮ್ಮ ಮುಂದೆ ಇರೋದು ಮೈನಾರಿಟಿ ಮಾತು ಅಷ್ಟೇ. ನಾವು ಮೈನಾರಿಟಿ ಎಲ್ಲೇ ಇದ್ದರೂ ತೊಂದರೆ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಎಚ್.ಡಿ. ಕುಮಾರಸ್ವಾಮಿ, ಮೈನಾರಿಟಿ ಮಾತ್ರ ಅಲ್ಲ ಇಡೀ ಕರ್ನಾಟಕದ ರಕ್ಷಣೆ ನಮ್ಮ ಗುರಿಯಾಗಿದೆ. ನಾಟ್ ಓನ್ಲಿ ಮೈನಾರಿಟಿ ಬ್ರದರ್, ಎಂಟೈರ್ ಕರ್ನಾಟಕ ರಕ್ಷಣೆ ಮಾಡುತ್ತೇವೆ ಎಂದು ಗುಡುಗಿದರು.
ಇದನ್ನೂ ಓದಿ: BJP JDS alliance : ವಿಜಯದಶಮಿ ನಂತರ ಜೆಡಿಎಸ್ ಸೀಟು ಹಂಚಿಕೆ ಅಂತಿಮ ಮಾತುಕತೆ!
ಕಾವೇರಿ ನೀರಿನ ವಿಷಯದಲ್ಲಿ ಈಗ ಬಂದಿರುವ ಆದೇಶವು ನನ್ನ ರಾಜ್ಯದ ಜನತೆಯ ಮರಣ ಶಾಸನವಾಗಿದೆ ಎಂದು ಎಚ್.ಡಿ. ದೇವೇಗೌಡ ಬೇಸರವನ್ನು ಹೊರಹಾಕಿದರು.