ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ (Parliament Election 2024) ಸಂಬಂಧಿಸಿ ಕೇಂದ್ರ ನಾಯಕರು ಮಾಡಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು (BJP-JDS Alliance) ರಾಜ್ಯದಲ್ಲಿ ಯಶಸ್ವಿಗೊಳಿಸುವ ಮಹತ್ತರ ಹೊಣೆಗಾರಿಕೆಯನ್ನು ಬಿಜೆಪಿ ಹೈಕಮಾಂಡ್ (BJP High command) ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ನೀಡಿದೆ.
ಭಾನುವಾರ ದಿಲ್ಲಿಯಲ್ಲಿ ನಡೆದ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ (BJP Central Election Committee) ಸಭೆಯಲ್ಲಿ ಭಾಗವಹಿಸಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೇಂದ್ರ ನಾಯಕರು ಮೈತ್ರಿಯ ಕುರಿತಂತೆ ಸಂಪೂರ್ಣ ವಿವರನ್ನು ಹಂಚಿಕೊಂಡಿದ್ದು, ಈ ಮೈತ್ರಿಯನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಅವರ ಹೆಗಲಿಗೆ ಹೊರಿಸಿದ್ದಾರೆ ಎಂಬ ಮಾಹಿತಿ ಇದೆ.
ಬಿಜೆಪಿ- ಜೆಡಿಎಸ್ ಮೈತ್ರಿ ಹೈಕಮಾಂಡ್ ಮಟ್ಟದಲ್ಲಿ ನಡೆದಿದ್ದು, ಇದರ ಬಗ್ಗೆ ರಾಜ್ಯದ ನಾಯಕರಿಗೆ ಎಳ್ಳಿನಿತೂ ಮಾಹಿತಿ ಇರಲಿಲ್ಲ. ಯಾವ ಅಂಶಗಳ ಆಧಾರದಲ್ಲಿ, ಯಾವ ಕ್ಷೇತ್ರ ಹಂಚಿಕೆಯ ಮಾದರಿಯಲ್ಲಿ ಈ ಮೈತ್ರಿ ನಡೆದಿದೆ. ಬಿಜೆಪಿ ನಾಯಕರು ಎಷ್ಟರ ಮಟ್ಟಿಗೆ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ನಡೆಯಬೇಕು, ಯಾವ ಮಟ್ಟದಲ್ಲಿರಬೇಕು ಎಂಬ ಬಗ್ಗೆ ಕ್ಲ್ಯಾರಿಟಿ ಇರಲಿಲ್ಲ. ಇದೀಗ ಬಿಎಸ್ ಯಡಿಯೂರಪ್ಪ ಅವರನ್ನು ಚುನಾವಣಾ ಸಮಿತಿ ನೆಪದಲ್ಲಿ ಕರೆಸಿಕೊಂಡಿರುವ ಕೇಂದ್ರ ನಾಯಕರು ಈ ಕುರಿತು ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಮೈತ್ರಿ ಯಶಸ್ವಿ, 25 ಸೀಟು ಪ್ರಧಾನ ಟಾರ್ಗೆಟ್
ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಕೂಟದ ಸಾರಥಿ ನೀವೇ ಆಗಿರುತ್ತೀರಿ. ನೀವು ಎರಡೂ ಪಕ್ಷಗಳ ಮೈತ್ರಿಯನ್ನು ಯಶಸ್ವಗೊಳಿಸಬೇಕು. ನಾಯಕರಿಗೆ ವಿಚಾರಗಳನ್ನು ಮನವರಿಕೆ ಮಾಡಿಕೊಡಬೇಕು, ಜಂಟಿ ಹೋರಾಟಗಳನ್ನು ಸಂಘಟಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ಹೈಕಮಾಂಡ್ ನೀಡಿದೆ. ಅದಕ್ಕಿಂತಲೂ ಮುಖ್ಯವಾಗಿ ಜಂಟಿ ಸಾರಥಿಯಾಗಿ 2024ರ ಚುನಾವಣೆಯಲ್ಲೂ ಬಿಜೆಪಿಗೆ 25 ಸ್ಥಾನಗಳನ್ನು (Target to reach 25 Seats) ಗೆದ್ದುಕೊಡಬೇಕು ಎಂಬ ಟಾರ್ಗೆಟ್ ಅನ್ನು ಬಿ.ಎಸ್ವೈ ಅವರಿಗೆ ನೀಡಲಾಗಿದೆ.
ಬಿಜೆಪಿಯ ಹಿರಿಯ ನಾಯಕರಾದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಅಮಿತ್ ಶಾ ಅವರು ಬಿಎಸ್ವೈ ಅವರ ಜತೆಗೆ ನಡೆಸಿದ ಮಾತುಕತೆಯ ವೇಳೆ, ಎರಡೂ ಪಕ್ಷಗಳ ಮೈತ್ರಿ ಬಳಿಕ ರಾಜ್ಯ ರಾಜಕಾರಣದಲ್ಲಿ ಆಗಿರುವ ವಿದ್ಯಮಾನಗಳು ಮತು ರಾಜ್ಯದಲ್ಲಿ ಲೋಕಸಭಾ ಚುನಾವಣೆ ತಯಾರಿ ಬಗ್ಗೆ ಮಾಹಿತಿ ಪಡೆದರೆನ್ನಲಾಗಿದೆ.
ಜೆಡಿಎಸ್ಗೆ ಎರಡರಿಂದ ಮೂರು ಲೋಕಸಭಾ ಸ್ಥಾನ?
ಮೈತ್ರಿಗೆ ಸಂಬಂಧಿಸಿ ಎಚ್.ಡಿ ಕುಮಾರಸ್ವಾಮಿ ಅವರ ಜತೆಗೆ ಏನೇನು ಮಾತುಕತೆ ಆಗಿದೆ ಎಂಬುದನ್ನು ವಿವರಿಸಿದ ವರಿಷ್ಠರು, ಜೆಡಿಎಸ್ ಗೆ ಎರಡರಿಂದ ಮೂರು ಸ್ಥಾನ ಕೊಡುವ ಬಗ್ಗೆ ಬಿಎಸ್ವೈ ಅವರ ಅಭಿಪ್ರಾಯ ಕೇಳಿದರು ಎನ್ನಲAಗಿದೆ. ಯಡಿಯೂರಪ್ಪ ಅವರು ವರಿಷ್ಠರ ನಿರ್ಧಾರಕ್ಕೆ ಓಕೆ ಎಂದು ಹೇಳಿದ್ದಾರೆನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರ ನೇಮಕಕ್ಕೆ ಮನವಿ
ಈ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ನೇಮಕ ತಡ ಮಾಡಬೇಡಿ ಎಂಬ ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಯಾರನ್ನು ಆಯ್ಕೆ ಮಾಡಿದರೂ ಅಭ್ಯಂತರವಿಲ್ಲ. ಆದರೆ, ಆದಷ್ಟು ಬೇಗ ಮಾಡಿ. ಯಾಕೆಂದರೆ ಕಾಂಗ್ರೆಸ್ನವರಿಗೆ ಇದೊಂದು ದೊಡ್ಡ ಅಸ್ತ್ರವಾಗಿದೆ ಎಂದು ಬಿಎಸ್ವೈ ಹೇಳಿದ್ದಾರೆನ್ನಲಾಗಿದೆ.
ಇದನ್ನೂ ಓದಿ: BJP-JDS Alliance: ಜೆಡಿಎಸ್ನಲ್ಲಿ ಭಿನ್ನBJಮತ ಶಮನಕ್ಕೆ ಅಖಾಡಕ್ಕಿಳಿದ ಎಚ್.ಡಿ.ದೇವೇಗೌಡ; ಮುಖಂಡರ ಸಭೆಗೆ ಇಬ್ರಾಹಿಂ ಗೈರು
ಯುವ ನಾಯಕನ ನೇಮಕದ ಸುಳಿವು ನೀಡಿದ ವರಿಷ್ಠರು
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡುವ ಮತ್ತು ಯುವ ನಾಯಕನನ್ನು ಆಯ್ಕೆ ಮಾಡುವ ಸುಳಿವನ್ನು ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ. ಬಿಎಸ್ವೈ ಅವರಿಗೆ 25 ಸ್ಥಾನ ಗೆಲ್ಲುವ ಟಾಸ್ಕ್ ನೀಡಿದ್ದಾರೆ ಎಂದರೆ ಅವರೊಂದಿಗೆ ಮಗ ವಿಜಯೇಂದ್ರ ಅವರು ಕೂಡಾ ಕೈಜೋಡಿಸಲಿದ್ದಾರೆ. ಈ ಜೋಡಿ ಏನಾದರೂ ಕೇಂದ್ರದ ಮಾತಿಗೆ ತಕ್ಕಂತೆ 25 ಸ್ಥಾನ ಗೆದ್ದು ಕೊಟ್ಟರೆ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಫಿಕ್ಸ್ ಎಂದು ಹೇಳಲಾಗುತ್ತಿದೆ.
ಇದೀಗ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಕ್ಕೆ ಬಂದು ಎರಡೂ ಪಕ್ಷಗಳನ್ನು ಬೆಸೆಯುವ, ತಳ ಹಂತದಲ್ಲಿ ಕಾರ್ಯಕರ್ತರ ನಡುವೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ಮಾಡುವ ಸಾಧ್ಯತೆಗಳಿವೆ.