ನವ ದೆಹಲಿ: ಕರ್ನಾಟಕ ರಾಜಕಾರಣದಲ್ಲಿ ಮೂರನೇ ನಿರ್ಣಾಯಕ ಶಕ್ತಿಯಾಗಿರುವ ಜಾತ್ಯತೀತ ಜನತಾದಳ (Janata dal Secular) ಇದೀಗ ರಾಷ್ಟ್ರೀಯ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷದೊಂದಿಗೆ ರಾಜಕೀಯ ಮೈತ್ರಿಯನ್ನು (BJP-JDS Alliance) ಅಧಿಕೃತವಾಡಿ ಮಾಡಿಕೊಳ್ಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭವಾಗುವ ಲಕ್ಷಣ ಕಾಣಿಸಿದೆ.
ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ (Amit shah) ಅವರ ದಿಲ್ಲಿಯ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರ ಸಮ್ಮುಖದಲ್ಲಿ ಜೆಡಿಎಸ್ನ ಹಿರಿಯ ನಾಯಕ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಈ ಮೈತ್ರಿಗೆ ಅಧಿಕೃತವಾಗಿ ಒಪ್ಪಿಗೆ ನೀಡಿದ್ದಾರೆ. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇದನ್ನು ಘೋಷಣೆ ಮಾಡಿದ್ದು ಇನ್ನು ಜೆಡಿಎಸ್ ಪಕ್ಷವು ಎನ್ಡಿಎ ಕೂಟದ ಮಿತ್ರ ಪಕ್ಷವಾಗಿರಲಿದೆ (JDS will be part of NDA) ಎಂದು ಪ್ರಕಟಿಸಿದ್ದಾರೆ.
ಇದರೊಂದಿಗೆ ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಕೇಳಿಬರುತ್ತಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಯ ಊಹಾಪೋಹ ಮತ್ತು ಚರ್ಚೆಗಳಿಗೆ ತೆರೆ ಬಿದ್ದಂತಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Election 2024) ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜತೆಯಾಗಿ ಸೆಣಸಲು ವೇದಿಕೆ ಸಜ್ಜಾದಂತಾಗಿದೆ.
ಮೈತ್ರಿ ಮಾತುಕತೆಗಾಗಿ ಎಚ್.ಡಿ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಗುರುವಾರವೇ ದಿಲ್ಲಿಗೆ ತೆರಳಿದ್ದರು. ಗುರುವಾರ ಸಂಜೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ನ ಆಂತರಿಕ ಸಭೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಮೈತ್ರಿಯ ಷರತ್ತಿನ ಬಗ್ಗೆ ಚರ್ಚೆಗಳು ನಡೆದಿದ್ದವು. ಬಳಿಕ ರಾತ್ರಿ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬಿಜೆಪಿಯ ರಾಯಭಾರಿಯಾಗಿ ದೇವೇಗೌಡರ ಮನೆಗೆ ಬಂದು ಚರ್ಚೆ ನಡೆಸಿದ್ದರು. ಇದಾದ ಬಳಿಕ ಶುಕ್ರವಾರ ಮಧ್ಯಾಹ್ನ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಅಮಿತ್ ಶಾ ಅವರ ನಿವಾಸಕ್ಕೆ ತೆರಳಿ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಮೈತ್ರಿಯ ಅಂತಿಮ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಮೈತ್ರಿಯನ್ನು ಘೋಷಣೆ ಮಾಡಲಾಗಿದೆ.
ಜಾತ್ಯತೀತ ಜನತಾದಳವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಲು ಬಯಸಿರುವುದು ನಮಗೆ ಖುಷಿ ತಂದಿದೆ. ನಾವು ಅವರನ್ನು ಅತ್ಯಂತ ಪ್ರೀತಿಯಿಂದ ಎನ್ಡಿಎ ಮಿತ್ರಕೂಟಕ್ಕೆ ಸ್ವಾಗತಿಸುತ್ತೇವೆ ಎಂದು ಜೆ.ಪಿ. ನಡ್ಡಾ ಅವರು ಟ್ವೀಟ್ ಮಾಡುವುದರೊಂದಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕೃತಗೊಂಡಂತಾಗಿದೆ.
ಮೈತ್ರಿಯನ್ನು ಘೋಷಣೆ ಮಾಡಿದ ಕುಮಾರಸ್ವಾಮಿ
ಈ ನಡುವೆ, ಎಚ್.ಡಿ ಕುಮಾರಸ್ವಾಮಿ ಅವರು ಕೂಡಾ ಬಿಜೆಪಿ ಜತೆಗಿನ ಮೈತ್ರಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಆದರೆ, ಮೈತ್ರಿಯ ಒಟ್ಟಾರೆ ಚೌಕಟ್ಟು, ಸೀಟು ಹಂಚಿಕೆ, ಇತರ ರಾಜಕೀಯ ಸ್ಥಾನಮಾನಗಳ ಬಗ್ಗೆ ಇನ್ನಷ್ಟೇ ಅಂತಿಮ ರೂಪ ಸಿಗಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಹಲವು ತಿಂಗಳ ಕುತೂಹಲಕ್ಕೆ ತೆರೆ, ಕಾಂಗ್ರೆಸ್ಗೆ ಠಕ್ಕರ್ ಕೊಡಲು ಮೈತ್ರಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಭರ್ಜರಿ ಬಹುಮತ ಪಡೆದಿರುವುದು ಬಿಜೆಪಿ ಮತ್ತು ಜಾತ್ಯತೀತ ಜನತಾ ದಳದಲ್ಲಿ ತಲ್ಲಣ ಉಂಟು ಮಾಡಿತ್ತು. ಆಗಿನಿಂದಲೇ ಬಿಜೆಪಿ ಹಾಗೂ ಜೆಡಿಎಸ್ಗಳು ಒಂದಾಗಿ ಕಾಂಗ್ರೆಸ್ನ್ನು ಎದುರಿಸುವ ಚರ್ಚೆಗಳು ಆರಂಭಗೊಂಡಿದ್ದವು.
ಒಂದು ಹಂತದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎನ್ನುವಷ್ಟು ಪ್ರಖರವಾಗಿ ಮಿಂಚಿದ್ದರು. ಇನ್ನೂ ಸದನ ನಾಯಕನ ಆಯ್ಕೆಯೇ ಆಗಿಲ್ಲದೆ ಇರುವುದರಿಂದ ಬಿಜೆಪಿಯೂ ಅವರನ್ನೇ ಮುಂದಾಳುವಾಗಿ ಮುಂಚೂಣಿಯಲ್ಲಿ ನಿಲ್ಲಿಸಿತ್ತು. ಜಂಟಿ ಪತ್ರಿಕಾಗೋಷ್ಠಿಯ ಮೂಲಕವೂ ಗಮನ ಸೆಳೆದಿತ್ತು.
ಬಿ.ಎಸ್. ಯಡಿಯೂರಪ್ಪ ಘೋಷಣೆಯ ಮೂಲಕ ಮರುಚಾಲನೆ
ವಿಧಾನಸಭಾ ಅಧಿವೇಶನದಲ್ಲಿ ಹುಟ್ಟಿಕೊಂಡ ಮೈತ್ರಿಯ ಚರ್ಚೆ ಅದರ ಮುಕ್ತಾಯದ ಬಳಿಕ ತಣ್ಣಗಾಗಿತ್ತು. ಕೆಲವು ವಾರದ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು ಸದ್ಯವೇ ಬಿಜೆಪಿ-ಜೆಡಿಎಸ್ ಮೈತ್ರಿ ಘೋಷಣೆಯಾಗಲಿದೆ ಎಂದು ಪ್ರಕಟಿಸಿದರು. ಬಿಎಸ್ವೈ ಅವರ ಈ ಪ್ರಕಟಣೆಯನ್ನು ಬಿಜೆಪಿ ಮತ್ತು ಜೆಡಿಎಸ್ನ ಬಹುತೇಕ ಎಲ್ಲ ನಾಯಕರು ಸ್ವಾಗತಿಸಿದರು. ಈಗಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಜೆಡಿಎಸ್ನಲ್ಲಿ ಕೆಲವು ನಾಯಕರು ಅದಕ್ಕೆ ಅಪಸ್ವರ ಹಾಡಿದ್ದರು. ಇದೀಗ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಅಧಿಕೃತ ಎನ್ನುವುದು ಘೋಷಣೆಯಾಗಿದೆ.
ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಮೈತ್ರಿ
ಜೆಡಿಎಸ್ನ ಕೆಲವು ನಾಯಕರು ಕಾಂಗ್ರೆಸ್ನ ಅಬ್ಬರದ ವಿರುದ್ಧ ಎದ್ದು ನಿಲ್ಲಲು ಬಿಜೆಪಿ ಜತೆ ಮೈತ್ರಿ ಅಗತ್ಯ ಎಂಬುದನ್ನು ಪ್ರತಿಪಾದಿಸಿದ್ದರು. ಆದರೆ ಬಿಜೆಪಿ ಪಾಲಿಗೂ ಈ ಮೈತ್ರಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಅಗತ್ಯದ್ದಾಗಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 25+1ನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿಯೂ ಅದನ್ನೇ ಮರುಸೃಷ್ಟಿಸಿರುವ ಅನಿವಾರ್ಯತೆ ಇದೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪರ ನಿಂತಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ ಫಲಿತಾಂಶದ ಮರು ಸೃಷ್ಟಿ ಕಷ್ಟವಾದೀತು ಎಂಬ ನೆಲೆಯಲ್ಲಿ ಅದು ಕೂಡಾ ಜೆಡಿಎಸ್ನ ಮೈತ್ರಿಯನ್ನು ಬಯಸಿದೆ. ಜೆಡಿಎಸ್ನ ಬೆಂಬಲವಿದ್ದರೆ ಬೆಂಗಳೂರು ಸೇರಿದಂತೆ ಹಳೆಮೈಸೂರು ಪ್ರಾಂತ್ಯದಲ್ಲಿ ಗೆಲ್ಲಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರೆ ದೇಶದಲ್ಲಿ ಹಿಂದೆ ಗೆದ್ದ ಬಹುತೇಕ ಎಲ್ಲ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲವಾದರೆ ಇಂಡಿಯಾ ಮೈತ್ರಿಕೂಟದ ಮುಂದೆ ಮಂಡಿಯೂರಬೇಕಾದೀತು ಎಂಬ ಆತಂಕವಿದೆ. ಹೀಗಾಗಿ ಕರ್ನಾಟಕದ ಬಲವನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿ ಮೈತ್ರಿಗೆ ಮುಂದಾಗಿದೆ.
ಇದು ಎರಡನೇ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ
ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಹಿಂದೆ 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ನ ಧರಂ ಸಿಂಗ್ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದು ಬಿಜೆಪಿಯೊಂದಿಗೆ ಮೈತ್ರಿ ಸರಕಾರವನ್ನು ನಡೆಸಿತ್ತು. 20-20 ಸರ್ಕಾರದ ಮೊದಲ ಅವಧಿಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ, ಅಧಿಕಾರ ಹಸ್ತಾಂತರ ಮಾಡದೆ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಹಾಗೆ ಮೈತ್ರಿ ಮುರಿದುಬಿದ್ದಿತ್ತು. ಇದೀಗ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಮೈತ್ರಿ ಇದಾಗಿದ್ದು, ಚುನಾವಣಾ ಪೂರ್ವ ಮೈತ್ರಿಯ ಮೂಲಕ ಜೆಡಿಎಸ್ ಅಧಿಕೃತವಾಗಿ ಎನ್ಡಿಎ ಕೂಟವನ್ನು ಸೇರಿಕೊಳ್ಳಲಿದೆ.
ಮೈತ್ರಿಯ ಬಳಿಕ ಸವಾಲುಗಳು
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಮೈತ್ರಿಯಲ್ಲಿ ಎರಡು ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಅತ್ಯಂತ ಮಹತ್ವದ ಹಂತದ್ದಾಗಿರುತ್ತದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಜೆಡಿಎಸ್ ಐದು ಲೋಕಸಭಾ ಕ್ಷೇತ್ರ (ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ), ಎರಡು ಎಂಎಲ್ಸಿ ಸ್ಥಾನ, ಒಂದು ಕೇಂದ್ರ ಮಂತ್ರಿ ಸ್ಥಾನವನ್ನು ಕೇಳಿದೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿ ಇಷ್ಟು ಸ್ಥಾನಗಳನ್ನು ಕೊಡುತ್ತದೆಯೇ ಎನ್ನುವುದು ಕಾದು ನೋಡಬೇಕಾಗಿದೆ. ಇದರ ವಿಚಾರ ಮುಂದಿನ ಚುನಾವಣೆಯ ಹಂತದಲ್ಲಿ ಅಂತಿಮವಾಗಲಿದೆ.
ಅಂತಿಮವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಧ್ಯಸ್ಥಿಕೆಯಲ್ಲೇ ಜೆಡಿಎಸ್ ಈ ಬಾರಿ ಅಧಿಕೃತವಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಂತಾಗಿದೆ. ಜಾತ್ಯತೀತ ಎಂಬ ಹೆಸರಿನೊಂದಿಗೇ ಇರುವ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜಕೀಯದಲ್ಲಿ ಯಾರೂ ಯಾರಿಗೂ ಅಸ್ಪೃಶ್ಯವಲ್ಲ ಎನ್ನುವುದು ಮತ್ತೆ ಋಜುವಾತಾಗಿದೆ.