Site icon Vistara News

BJP-JDS Alliance: ಮೈತ್ರಿ ಮಾತುಕತೆಗೆ ವೇದಿಕೆ ರೆಡಿ; ಆ ಆರು ಕ್ಷೇತ್ರ ಕೇಳಲು ಮುಂದಾದ ಜೆಡಿಎಸ್‌; ಬಿಜೆಪಿ ಒಪ್ಪುತ್ತಾ?

BJP JDS Alliance

ನವದೆಹಲಿ/ ಬೆಂಗಳೂರು: ಬಹುಸಮಯದಿಂದ ಸುದ್ದಿ ಮಾಡುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ (BJP-JDS Alliance) ಈಗ ನನಸಾಗುವ ಕಾಲ ಸನ್ನಿಹಿತವಾಗಿದೆ. 2024ರ ಲೋಕಸಭಾ ಚುನಾವಣೆಯನ್ನು (Parliament Elections 2024) ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್‌ನ್ನು ಮಣಿಸುವ ಉದ್ದೇಶದಿಂದ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಖಚಿತ ಎಂಬ ಬಗ್ಗೆ ಹಲವು ಸಮಯದಿಂದ ಕಾಣುತ್ತಿದ್ದ ಸಂಜ್ಞೆಗಳು ಈಗ ನಿಜವಾಗಿದೆ. ಮೈತ್ರಿ ಮತ್ತು ಸೀಟು ಹಂಚಿಕೆಯ ಮಹತ್ವದ ಮಾತುಕತೆಗಾಗಿ ವೇದಿಕೆ ಅಣಿಯಾಗಿದ್ದು, ಬಿಜೆಪಿ ಕಡೆಯಿಂದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಮತ್ತು ಹಿರಿಯ ನಾಯಕ ಅಮಿತ್‌ ಶಾ (Amit Shah), ಜೆಡಿಎಸ್‌ ಕಡೆಯಿಂದ ಎಚ್‌.ಡಿ ದೇವೇಗೌಡರು (HD Devegowda) ಮತ್ತು ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಮಾತುಕತೆ ನಡೆಸಲಿದ್ದಾರೆ. ಗುರುವಾರ ರಾತ್ರಿಯೇ ಈ ಮಾತುಕತೆ ನಡೆದು ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಯುವ ಸಾಧ್ಯತೆ ಇದೆ.

ಮೈತ್ರಿ ಮಾತುಕತೆಗಾಗಿ ಮಾಜಿ ಮುಖ್ಯಮಂತ್ರಿ ಎಚ್.‌ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರ ಜತೆ ಬೆಳಗ್ಗೆ ವಿಮಾನದಲ್ಲಿ ತೆರಳಿದರು. ಸಂಸತ್‌ ಅಧಿವೇಶನದ ಹಿನ್ನೆಲೆಯಲ್ಲಿ ಸಂಸದರಾದ ಎಚ್‌.ಡಿ ದೇವೇಗೌಡ ಮತ್ತು ಪ್ರಜ್ವಲ್‌ ರೇವಣ್ಣ ಅವರು ದಿಲ್ಲಿಯಲ್ಲೇ ಇದ್ದಾರೆ. ಉಳಿದಂತೆ ಹಲವು ನಾಯಕರು ದಿಲ್ಲಿಗೆ ಧಾವಿಸಿದ್ದು, ಅಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಜೆಡಿಎಸ್‌ ಮೈತ್ರಿ ಸಂದರ್ಭದಲ್ಲಿ ಕೇಳಬೇಕಾದ ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.

HD Kumaraswamy going to delhi

ಎಚ್‌.ಡಿ ದೇವೇಗೌಡರ ದಿಲ್ಲಿ ನಿವಾಸದಲ್ಲಿ ಸಭೆ

ಬಿಜೆಪಿ ನಾಯಕರನ್ನು ಭೇಟಿ ಮಾಡುವ ಮುನ್ನ ಪಕ್ಷ ಮೈತ್ರಿ ತಂತ್ರವನ್ನು ಅಂತಿಮಗೊಳಿಸುವುದಕ್ಕಾಗಿ ಎಚ್‌.ಡಿ.ದೇವೇಗೌಡರ ದಿಲ್ಲಿ ನಿವಾಸದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಎಚ್ ಡಿ ದೇವೆಗೌಡರು, ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸಾರಾ ಮಹೇಶ್ ಭಾಗಿಯಾಗಿದ್ದರು. ಬಿಜೆಪಿ ನಾಯಕರ ಜೊತೆ ಸಭೆಯಲ್ಲಿ ಎಷ್ಟು ಕ್ಷೇತ್ರದ ಬೇಡಿಕೆ ಇಡಬೇಕು, ಯಾವೆಲ್ಲ ಕ್ಷೇತ್ರವನ್ನು ಪಡೆಯಬೇಕು, ಇದರಿಂದ ಆಗುವ ಸಾಧಕಬಾಧಕದ ಬಗ್ಗೆ ಚರ್ಚೆ ನಡೆಯಿತು. ಈ ಸಭೆಯಲ್ಲಿ ತೀರ್ಮಾನ ಮಾಡಿದ ನಂತರ ನಾಯಕರು ಮೈತ್ರಿ ಮಾತುಕತೆಗೆ ತೆರಳಿದ್ದಾರೆ.

ಈ ನಡುವೆ ಸಭೆ ಮುಗಿಸಿ ಹೊರಬಂದ ಎಚ್.ಡಿ. ರೇವಣ್ಣ ಅವರು, ಮೈತ್ರಿ ವಿಚಾರ ನನಗೇನು ಗೊತ್ತಿಲ್ಲ. ದೇವೇ ಗೌಡ್ರು, ಕುಮಾರಣ್ಣ ಏನ್ ತೀರ್ಮಾನ ತಗೊಳ್ತಾರೊ ಅದಕ್ಕೆ ನಾನು ಬದ್ಧ ಎಂದರು. ಹಾಸನದಲ್ಲಿ ಬಿಜೆಪಿ ಜೊತೆ ಮೈತ್ರಿ ಅನಿವಾರ್ಯವೋ ಬೇಡವೋ ಅದೇನೋ ಗೊತ್ತಿಲ್ಲ ನನಗೆ ಎಂದು ತೆರಳಿದರು ರೇವಣ್ಣ. ʻನಾನು ಹಾಸನ ಜಿಲ್ಲೆಯಲ್ಲಿ ರೈಲ್ವೆ ಬ್ರಿಡ್ಜ್‌ಗಳ ಸಂಬಂಧ ದೇವೆಗೌಡರನ್ನು ಭೇಟಿಯಾಗಿದ್ದೆʼʼ ಎಂದರು!

HD Kumaraswamy going to delhi

ಆರು ಕ್ಷೇತ್ರಗಳನ್ನು ಕೇಳಲು ನಿರ್ಧರಿಸಿದ ಜೆಡಿಎಸ್‌

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯಾದರೆ ಜೆಡಿಎಸ್‌ಗೆ ಎಷ್ಟು ಸೀಟು ಸಿಗಬಹುದು, ಯಾವ ಸೀಟು, ಜೆಡಿಎಸ್‌ನ ಆಯ್ಕೆ ಯಾವುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದೀಗ ಒಂದು ಹಂತದ ಸ್ಪಷ್ಟತೆ ಸಿಕ್ಕಿದೆ. ಇದರ ಪ್ರಕಾರ, ಜೆಡಿಎಸ್‌ ಆರು ಕ್ಷೇತ್ರಗಳನ್ನು ಕೇಳಲು ನಿರ್ಧರಿಸಿದೆ.

ಹಳೆ ಮೈಸೂರು ಭಾಗದ ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಕೇಳಲು ಜೆಡಿಎಸ್ ಮುಂದಾಗಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: BJP-JDS Alliance: ತಮ್ಮ ಸರ್ಕಾರ ತೆಗೆದವರನ್ನೇ ತಬ್ಬಿಕೊಳ್ಳುವ ದುಸ್ಥಿತಿಗೆ ಕುಮಾರಸ್ವಾಮಿ ಇಳಿದಿದ್ದಾರೆ ಎಂದ ಡಿಕೆಶಿ

ಡಾ. ಸುಧಾಕರ್‌ ದೇವೇಗೌಡರ ಮನೆ ತನಕ ಬಂದು ಮರಳಿದ್ದೇಕೆ?

ಈ ನಡುವೆ, ಚಿಕ್ಕಬಳ್ಳಾಪುರದ ಮಾಜಿ ಶಾಸಕ ಡಾ. ಕೆ. ಸುಧಾಕರ್‌ ಅವರು ದಿಲ್ಲಿಯ ದೇವೇಗೌಡರ ಮನೆ ತನಕ ಬಂದವರು ಅಲ್ಲಿದ್ದ ಪತ್ರಕರ್ತರನ್ನು ನೋಡಿ ಕಾರಿನಿಂದ ಇಳಿಯದೇ ಹಾಗೆಯೆ ಮುಂದೆ ಹೋಗಿದ್ದು ಕುತೂಹಲ ಕೆರಳಿಸಿತು.

ಜೆಡಿಎಸ್‌ ಮೈತ್ರಿ ಮಾತುಕತೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನೂ ಕೇಳಲಿದೆ ಎಂಬ ಸುದ್ದಿ ತಿಳಿದ ಅವರು, ಅದನ್ನು ಕೇಳದಂತೆ ಮನವಿ ಮಾಡಲು ಬಂದಿದ್ದರು ಎನ್ನಲಾಗುತ್ತಿದೆ. ಯಾಕೆಂದರೆ ಡಾ. ಸುಧಾಕರ್‌ ಅವರು ಚಿಕ್ಕಬಳ್ಳಾಪುರದಿಂದ ಕಣಕ್ಕಿಳಿಯುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ.

Exit mobile version