Site icon Vistara News

BJP-JDS Coalition : BJP-JDS ಮೈತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ಸಿದ್ದರಾಮಯ್ಯ; ಜೆಡಿಎಸ್‌ ಶಾಸಕರ ಕಥೆ ಏನೆಂದು ಕೇಳಿದ ಡಿಕೆಶಿ!

DK Shivakumar Siddaramaiah

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ (Karnataka Politics) ಸಂಭವಿಸಿರುವ ಮೈತ್ರಿ ರಾಜಕಾರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DCM DK Shivakumar) ಮಾತನಾಡಿದ್ದಾರೆ. ಇಬ್ಬರೂ ಈ ಮೈತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ (BJP-JDS Coalition) ಪಕ್ಷಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Election 2023) ಹೊಂದಾಣಿಕೆ ಮಾಡಿಕೊಳ್ಳಲಿವೆ ಎಂದು ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ಶುಕ್ರವಾರ ಬೆಳಗ್ಗೆ ಅಧಿಕೃತವಾಗಿ ಪ್ರಕಟಿಸಿದ್ದರು.

ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಅಮಿತ್‌ ಶಾ ಅವರ ನಡುವೆ ಮಾತುಕತೆ ನಡೆದಿದೆ. ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗುತ್ತದೆ. ಉಳಿದ 23 ಕಡೆ ಬಿಜೆಪಿ ಮತ್ತು ಮಂಡ್ಯದಲ್ಲಿ ಸುಮಲತಾ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬರ್ಥದಲ್ಲಿ ಬಿಎಸ್.‌ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಒಂದು ಹಂತದಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ಹಿರಿಯ ನಾಯಕರ ಜತೆಗೆ ಮೈತ್ರಿ ಮಾತುಕತೆ ನಡೆಸಿದ್ದಷ್ಟೇ ಅಲ್ಲ, ವಿಧಾನಸಭೆಯಲ್ಲಿ ಬಿಜೆಪಿಯ ಹಿರಿಯಣ್ಣನಂತೆ ಕಾರ್ಯ ನಿರ್ವಹಿಸಿದ್ದರು. ಆದರೆ, ಈ ರೀತಿಯ ಮೈತ್ರಿಗೆ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಹೀಗಾಗಿ ಎಚ್‌.ಡಿ ಕುಮಾರಸ್ವಾಮಿ ಅವರು ಗೋಸ್ಲೋ ನೀತಿ ಅನುಸರಿಸಿದ್ದರು. ಇದೀಗ ಹೈಕಮಾಂಡ್‌ ದೇವೇಗೌಡರನ್ನೇ ಮಾತನಾಡಿಸಿ ಮೈತ್ರಿಯನ್ನು ಬಹುತೇಕ ಫೈನಲ್‌ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರಗಳನ್ನು ಬಿ.ಎಸ್‌. ಯಡಿಯೂರಪ್ಪ ಅವರು ಸೂಚ್ಯವಾಗಿ ಹೇಳಿದರು.

ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಲೋಕಸಭಾ ಚುನಾವಣೆಯಲ್ಲಿ ಯಾರು ಮೈತ್ರಿ ಮಾಡಿಕೊಳ್ಳುತ್ತಾರೆ, ಯಾರು ಪ್ರತ್ಯೇಕವಾಗಿ ಚುನಾವಣೆ ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ನಮಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ ಹೇಳಿದರು.

ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಜನರ ಹತ್ತಿರ ಮತ ಕೇಳುತ್ತೇವೆ. ಜನ ನಮ್ಮ ಪರವಾಗಿದ್ದಾರೆ ಎಂದು ಹೇಳಿದರು.

ಹೊಂದಾಣಿಕೆಗೆ ಆಲ್ ದಿ ಬೆಸ್ಟ್ ಎಂದ ಡಿಕೆಶಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಎಂದಿನ ದಾಟಿಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಆಲ್‌ ದ ಬೆಸ್ಟ್‌ ಎಂದಿದ್ದಾರೆ.

ದೇವೇಗೌಡರು ಹಾಗೂ ಅಮಿತ್ ಷಾ ಭೇಟಿಯಾಗಿ ಹೊಂದಾಣಿಕೆಯ ಮಾತುಗಳನ್ನಾಡಿದ್ದಾರೆ ಎಂಬ ಬಿಎಸ್‌ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಇದೇನು ಹೊಸ ವಿಚಾರವೇನಲ್ಲ, ಅವರ ಪಕ್ಷದ ಬಗ್ಗೆ ನಾನ್ಯಾಕೆ ಮಾತನಾಡಲಿ, ಒಂದಾಗಲಿ ಬಿಡಿ. ಅವರಿಗೆ ಒಳ್ಳೆಯದಾಗಲಿ, ಆಲ್ ದಿ ಬೆಸ್ಟ್” ಎಂದರು.

“ಕುಮಾರಸ್ವಾಮಿ ಹಾಗೂ ಆಶೋಕ್ ಅವರು ಒಂದಾಗಿದ್ದರು, ಈಗ ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಅವರು ಒಂದಾಗುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಯಾರೇ ಒಂದಾದರೂ ನಮಗೆ ಸಂತೋಷ” ಎಂದು ಹೇಳಿದರು.

ಇದನ್ನೂ ಓದಿ: Karnataka Politics : ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಫಿಕ್ಸ್;‌ 4 ಕ್ಷೇತ್ರ ದಳ ಪಾಲು ಎಂದ ಬಿಎಸ್‌ವೈ

ಜೆಡಿಎಸ್‌ ನಾಯಕರ ಕಥೆ ಏನು ಎಂದು ಕೇಳಿದ ಡಿಕೆಶಿ

“ಅವರವರ ಉಳಿವಿಗಾಗಿ, ಭವಿಷ್ಯಕ್ಕಾಗಿ ಏನು ಬೇಕಾದರೂ ಮಾಡಲಿ. ಆದರೆ ಅವರುಗಳ ಸಿದ್ಧಾಂತ ಏನಾಗುತ್ತದೆ ಎಂಬುದು ನನ್ನ ಕುತೂಹಲ” ಎಂದು ಡಿ.ಕೆ.ಶಿವಕುಮಾರ್‌ ನುಡಿದರು.

“ಹಿರಿಯರಾದ ದೇವೆಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗುವುದಿಲ್ಲ ಎಂದಿದ್ದರು. ಒಂದು ಸಿದ್ದಾಂತ ಇಟ್ಟುಕೊಂಡು ಪಕ್ಷ ಕಟ್ಟಿರುತ್ತಾರೆ, ಈಗ ಆ ಪಕ್ಷ ಉಳಿಯುತ್ತದೊ ಏನಾಗುತ್ತದೊ ಗೊತ್ತಿಲ್ಲ? ಹಾಲಿ ಶಾಸಕರು, ಮಾಜಿ ಶಾಸಕರು ಏನಾಗುತ್ತಾರೊ ಅದರ ಬಗ್ಗೆ ನನಗೆ ಗೊತ್ತಿಲ್ಲ” ಎಂದು ಹೇಳಿದರು ಡಿ.ಕೆ ಶಿವಕುಮಾರ್‌

Exit mobile version