ಬೆಂಗಳೂರು: ಮಾಜಿ ಸಚಿವ, ಹಿರಿಯ ರಾಜಕಾರಣಿ ಮನೋಹರ್ ತಹಸೀಲ್ದಾರ್ (Manohar Tahsildars) ಅವರು ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಸಮ್ಮುಖದಲ್ಲಿ ಬಿಜೆಪಿ (BJP Karnataka) ಸೇರ್ಪಡೆಗೊಂಡರು. 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ ಸೇರ್ಪಡೆಯಾಗಿದ್ದರು. ಈಗ ಅಲ್ಲಿಂದ ಬಿಜೆಪಿ ಸೇರಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆಯ ತಯಾರಿಯಲ್ಲಿರುವ ಬಿಜೆಪಿ ಈ ಮೂಲಕ ಹಾವೇರಿ ಕ್ಷೇತ್ರವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಿದೆ.
ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಜರಿದ್ದರು.
ಜೆಡಿಎಸ್‌ನಿಂದ ಬಿಜೆಪಿಯತ್ತ ಮನೋಹರ್ ತಹಶೀಲ್ದಾರ್
50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರಿಗೆ ಕಳೆದ ಚುನಾವಣೆಯಲ್ಲಿ ಹಾನಗಲ್ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಸಿಡಿದೆದ್ದಿದ್ದ ಮನೋಹರ್ ಅಲ್ಲಿಂದ ಜೆಡಿಎಸ್ ಸೇರ್ಪಡೆಯಾಗಿ ಸ್ಪರ್ಧೆ ಮಾಡಿದ್ದರು. ಅಲ್ಲದೆ, ಕಾಂಗ್ರೆಸ್ ತಮಗೆ ಅನ್ಯಾಯ ಮಾಡಿದೆ ಎಂದು ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು. ಆದರೆ, ಈಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಚಸ್ಸುಳ್ಳ ನಾಯಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಈ ಕಾರಣದಿಂದ ಮನೋಹರ್ ತಹಸೀಲ್ದಾರ್ ಸೇರ್ಪಡೆ ಹಾವೇರಿ ಬಿಜೆಪಿ ಪಾಲಿಗೆ ಮುಖ್ಯವಾಗಿದೆ.
ಮನೋಹರ್ ತಹಸೀಲ್ದಾರ್ ಅವರು ರೈತರ ಪರ ಹಾಗೂ ನಾಗರಿಕ ಸ್ನೇಹಿ ನಾಯಕರಾಗಿದ್ದಲ್ಲದೆ, ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರು. ಈ ಕಾರಣದಿಂದ ಅವರದ್ದೇ ಆದ ವೋಟ್ ಬ್ಯಾಂಕ್ ಇದೆ. ಅದೀಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತುಕತೆಯ ಫಲವಾಗಿ ಮನೋಹರ್ ತಹಸೀಲ್ದಾರ್ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗಿದೆ.
ಮನೋಹರ್‌ಗೆ ಪಕ್ಷದಲ್ಲಿ ಗೌರವ ಸಿಗಲಿದೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಹಾವೇರಿ ಜಿಲ್ಲೆಯ ನಾಯಕ ಮನೋಹರ್ ತಹಸೀಲ್ದಾರ್ ಪಕ್ಷಕ್ಕೆ ಆಗಮಿಸಿದ್ದಾರೆ. ಅವರಿಗೆ ಪಕ್ಷದಿಂದ ಏನೆಲ್ಲ ಗೌರವ ಕೊಡಬೇಕೋ ಅದನ್ನು ಖಂಡಿತವಾಗಿಯೂ ಕೊಡಲಾಗುವುದು ಎಂದು ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗಿದ್ದ ಮನೋಹರ್ ತಹಸೀಲ್ದಾರ್ ಅವರು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅವರನ್ನ ಪಕ್ಷಕ್ಕೆ ಹೃತ್ಪೂರ್ವಕವಾಗಿ ಸ್ವಾಗತ ಮಾಡುತ್ತೇನೆ. ಹಿಂದುಳಿದ ವರ್ಗದ ಧುರೀಣರು ಸೇರಿರುವುದರಿಂದ ನಮ್ಮ ಪಕ್ಷಕ್ಕೆ ಬಲ ಬಂದಿದೆ. ಇಡೀ ದೇಶದಲ್ಲಿ ಇಂದು ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಇಚ್ಛೆ ಇದೆ. ಮೋದಿ ಅವರು ಕೊಟ್ಟಿರುವ ಯೋಜನೆಗಳು, ಹಿಂದುಳಿದ, ದಲಿತರ ಪರವಾಗಿ ಕೊಟ್ಟ ಯೋಜನೆಗಳು ಅನೇಕ ಇವೆ. ಈ ಬಾರಿ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಪಣ ತೊಡೋಣ ಎಂದು ಕರೆ ನೀಡಿದರು.
ಬಳಿಕ ಮಾತನಾಡಿದ ಮನೋಹರ್ ತಹಸೀಲ್ದಾರ್, ಇಂದು ಬಹಳ ಸಂತೋಷದಿಂದ ಬಿಜೆಪಿ ಪಕ್ಷ ಸೇರ್ಪಡೆ ಆಗುತ್ತಿದ್ದೇನೆ. ಇದಕ್ಕೆ ಮುಖ್ಯ ಕಾರಣ ಬಸವರಾಜ ಬೊಮ್ಮಾಯಿ ಆಗಿದ್ದಾರೆ. ಅವರು ನನಗಾದ ಅನ್ಯಾಯ ಕಂಡು, ನೀವು ಅಲ್ಲಿರೋದು ಸರಿಯಲ್ಲ. ನಿಷ್ಠೆಯಿಂದ 45 ವರ್ಷ ಕಾಂಗ್ರೆಸ್‌ನಲ್ಲಿದ್ದರೂ ನಿಮ್ಮನ್ನು ಊಟ ಮಾಡಿ ಎಲೆಯನ್ನು ಬಿಸಾಡಿದ ಹಾಗೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಗೆ ಬನ್ನಿ ಎಂದು ಆಹ್ವಾನ ನೀಡಿದರು ಎಂದು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಕಾಂಗ್ರೆಸ್‌ನಲ್ಲಿ ನನ್ನ ಸೇವೆಯನ್ನು ಲೆಕ್ಕಕ್ಕೆ ಪರಿಗಣಿಸದೆ, ನಾನು ಸಿಟ್ಟಿಂಗ್ ಎಂಎಲ್‌ಎ ಇದ್ದರೂ ನನಗೆ ಟಿಕೆಟ್ ಕೊಡಲಿಲ್ಲ. ನಮ್ಮ ತಾಲೂಕಿನವರಿಗೆ ಕೊಟ್ಟಿದ್ದರೂ ಬೇಸರ ಇರಲಿಲ್ಲ. ಆದರೆ, ಹೊರಗಿನಿಂದ ತಂದು ನಿಲ್ಲಿಸಿದರು. 2018ರಲ್ಲಿ ಶ್ರೀನಿವಾಸ್ ಮಾನೆ ಪರವಾಗಿ ಕೆಲಸ ಮಾಡಿದೆ. ಅವರು ಸೋತರು. ನಾವೇ ಸೋಲಿಸಿದೆವು ಅಂತ ನಮ್ಮ ಮೇಲೆ ಗೂಬೆ ಕೂರಿಸಿದರು. ನನ್ನ ಮಗ ಜಿಲ್ಲಾ ಪಂಚಾಯಿತಿ ಸದಸ್ಯ ಇದ್ದ. ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿ ಎಂಬ ಚರ್ಚೆ ಕೇಳಿಬಂತು. ಒಂದೇ ಮನೆತನಕ್ಕೆ ಎಲ್ಲ ಕೊಟ್ಟಂತೆ ಆಗಲಿದೆ, ಬೇಡ ಅಂತ ಹೇಳಿದರು. ಪಕ್ಷದ ವರಿಷ್ಠರು ನಿರ್ದೇಶನ ಕೊಟ್ಟರೂ ಬೇರೆಯವರನ್ನ ಅಭ್ಯರ್ಥಿ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ – ಮಂಗಳೂರು ಬ್ಲಾಸ್ಟ್‌ಗೆ ಸಾಮ್ಯತೆ; ಇಲ್ಲ ಅಂದ್ರು ಸಿಎಂ, ಇದೆ ಅಂದ್ರು ಡಿಸಿಎಂ!
ನನಗೆ ಗೌರವ ಕೊಟ್ಟರೆ ಸಾಕು
ಬಸವರಾಜ ಬೊಮ್ಮಾಯಿ ಅವರು ಬಾ ಅಣ್ಣ ಅಂತ ಗೌರವ ಕೊಡ್ತಾರೆ. ಹಾಗಾಗಿ ಇರುವಷ್ಟು ಕಾಲ ಅವರ ಜತೆಯಲ್ಲಿ ಇರೋಣ ಅಂತ ಬಂದಿದ್ದೇನೆ. ನಾನು ಎಂಎಲ್‌ಎ, ಎಂಪಿ ಯಾವುದೇ ಟಿಕೆಟ್‌ಗೆ ಬೇಡಿಕೆ ಇಟ್ಟಿಲ್ಲ. ಪಕ್ಷದಲ್ಲಿ ಗೌರವ ಕೊಡಿ ಅಂತ ಅಷ್ಟೇ ಕೇಳಿದ್ದೇನೆ. ನಮ್ಮ ಪಕ್ಷಕ್ಕೆ ಬಂದರೆ ನಮ್ಮದೆಲ್ಲ ಕಿತ್ತುಕೊಳ್ತಾರೆ ಅನ್ನೋ ಭಾವನೆ ಬರೋದು ಬೇಡ ಎಂದು ಅವರನ್ನು ಕೇಳಿ ಅಂದೆ. ಎಲ್ಲರೂ ಒಪ್ಪಿದ್ದಕ್ಕೆ ಬಂದಿದ್ದೇನೆ. ಉದಾಸಿ ಅವರು ನನಗಿಂತ ಹಿರಿಯರು. ನಮ್ಮ ನಡುವೆ ಅಭಿವೃದ್ಧಿಗೆ ಪೈಪೋಟಿ ಇತ್ತೇ ವಿನಃ ವೈಯಕ್ತಿಕ ಪೈಪೋಟಿ ಇರಲಿಲ್ಲ ಎಂದು ಮನೋಹರ್ ತಹಸೀಲ್ದಾರ್ ಹೇಳಿದರು.