ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ರಾಜ್ಯ ಘಟಕದಲ್ಲಿ ಎರಡನೇ ಹಂತದ ಅಧಿಕಾರ ಹಂಚಿಕೆ (BJP Karnataka) ಮಾಡಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಪ್ರಮುಖ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದ್ದಾರೆ. ಮೇಲ್ಮನೆ ವಿಪಕ್ಷ ನಾಯಕನಾಗಿ (Opposition leader in Legislative Council) ಕೋಟ ಶ್ರೀನಿವಾಸ್ ಪೂಜಾರಿ (Kota Srinivas Poojari) ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಅರವಿಂದ್ ಬೆಲ್ಲದ್ (Aravind Bellad) ಅವರಿಗೂ ಸ್ಥಾನ ನೀಡಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಬಿ.ವೈ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರು, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು ಮತ್ತು ಕೆಲವು ಮೋರ್ಚಾಗಳಿಗೆ ನೇಮಕಾತಿಯನ್ನು ಪ್ರಕಟಿಸಿದ್ದರು. ಇದೀಗ ಎರಡನೇ ಹಂತದಲ್ಲಿ ವಿಧಾನ ಸಭೆ ಮತ್ತು ಪರಿಷತ್‌ನ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.
ಯಾರಿಗೆ ಯಾವ ಹುದ್ದೆ?
ಕೋಟ ಶ್ರೀನಿವಾಸ ಪೂಜಾರಿ: ಮೇಲ್ಮನೆ ವಿಪಕ್ಷ ನಾಯಕ
ಸುನೀಲ್ ವಲ್ಯಾಪುರೆ : ಪರಿಷತ್ ಉಪ ನಾಯಕ
ಅರವಿಂದ್ ಬೆಲ್ಲದ್: ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ
ಎನ್. ರವಿಕುಮಾರ್ ಕುಮಾರ್ : ವಿಧಾನ ಪರಿಷತ್ ಮುಖ್ಯ ಸಚೇತಕ
ದೊಡ್ಡನಗೌಡ ಪಾಟೀಲ್: ವಿಧಾನಸಭೆ ಮುಖ್ಯ ಸಚೇತಕ
ಇದನ್ನೂ ಓದಿ: BJP Karnataka : ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ; ವಿಜಯೇಂದ್ರ ಟೀಮಲ್ಲಿ ಯಾರೆಲ್ಲ?
ಮತ್ತೆ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ
ಆರ್. ಅಶೋಕ್ ಅವರನ್ನು ವಿಧಾನಭೆಯ ವಿಪಕ್ಷ ನಾಯಕರಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ಕೊಡಬೇಕು ಎಂಬ ಬೇಡಿಕೆ ಇತ್ತು. ಆದರೆ, ಕಳೆದ ಬಾರಿ ವಿಧಾನ ಪರಿಷತ್ ವಿಪಕ್ಷ ಸ್ಥಾನವನ್ನು ಚೆನ್ನಾಗಿ ನಿಭಾಯಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರಿಗೇ ಪಕ್ಷ ಮಣೆ ಹಾಕಿದೆ. ಉತ್ತರ ಕರ್ನಾಟಕ ಭಾಗದಿಂದ ವಿಪಕ್ಷ ಸ್ಥಾನಕ್ಕೆ ಕೇಳಿ ಬಂದಿದ್ದ ರಘುನಾಥ್ ಮಲ್ಕಾಪುರೆ ಅವರಿಗೆ ಉಪ ನಾಯಕನ ಸ್ಥಾನ ನೀಡಲಾಗಿದೆ.
ಅರವಿಂದ ಬೆಲ್ಲದ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ರಾಜ್ಯಾಧ್ಯಕ್ಷ ಸ್ಥಾನ ತಪ್ಪಿದಕ್ಕೆ ವರಿಷ್ಠರ ವಿರುದ್ಧ ಬೇಸರಗೊಂಡಿದ್ದ ಅರವಿಂದ ಬೆಲ್ಲದ್ ಅವರನ್ನು ಈಗ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಸ್ಥಾನ ನೀಡಲಾಗಿದೆ. ಈ ಮೂಲಕ ಅರವಿಂದ್ ಬೆಲ್ಲದ್ ಅವರನ್ನು ಸಮಾಧಾನ ಮಾಡುವ ಮತ್ತು ಉತ್ತರ ಕರ್ನಾಟಕಕ್ಕೆ ನ್ಯಾಯ ನೀಡುವ ಪ್ರಯತ್ನ ನಡೆಸಲಾಗಿದೆ.
ಉತ್ತರ-ದಕ್ಷಿಣ ತಾರತಮ್ಯ ನೀಗಿಸಲು ವಿಜಯೇಂದ್ರ ಪ್ಲ್ಯಾನ್
ವಿಧಾನ ಸಭೆ ಮತ್ತು ಪರಿಷತ್ ವಿಪಕ್ಷ ನಾಯಕರ ನೇಮಕ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ತಾರತಮ್ಯ ನೀಗಿಸಲು ವಿಜಯೇಂದ್ರ ಪ್ರಯತ್ನಿಸಿರುವುದು ಇಲ್ಲಿ ಕಾಣುತ್ತಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದುಆ ಭಾಗದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೊಸ ನೇಮಕಾತಿ ಬಳಿಕ ಈ ತಾರತಮ್ಯ ಸ್ವಲ್ಪ ಮಟ್ಟಿಗೆ ಸರಿಯಾದಂತಾಗಿದೆ.
- ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ – ಆರ್ ಆಶೋಕ್ – ಒಕ್ಕಲಿಗ – ಹಳೆ ಮೈಸೂರು ಭಾಗ
- ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕ – ಅರವಿಂದ್ ಬೆಲ್ಲದ್ – ಲಿಂಗಾಯತ – ಉತ್ತರ ಕರ್ನಾಟಕ
- ಮುಖ್ಯ ಸಚೇತಕ: ದೊಡ್ಡನಗೌಡ ಜಿ ಪಾಟೀಲ್ – ಲಿಂಗಾಯತ – ಉತ್ತರ ಕರ್ನಾಟಕ
(ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಸಮುದಾಯಕ್ಕೆ ಎರಡು ಸ್ಥಾನ. ದಕ್ಷಿಣ ಕರ್ನಾಟಕ ಭಾಗಕ್ಕೆ ಒಂದು ಸ್ಥಾನ – ಒಕ್ಕಲಿಗ) - ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕ ಸ್ಥಾನ – ಕೋಟಾ ಶ್ರೀನಿವಾಸ ಪೂಜಾರಿ – ಕರಾವಳಿ
- ಮೇಲ್ಮನೆ ಉಪನಾಯಕ – ಸುನಿಲ್ ವಲ್ಯಾಪುರೆ – ಉತ್ತರ ಕರ್ನಾಟಕ – ಲಿಂಗಾಯತ
- ಎನ್ ರವಿಕುಮಾರ್ – ದಲಿತ – ಪರಿಷತ್ ಮುಖ್ಯ ಸಚೇತಕರು