ಬೆಂಗಳೂರು: ಮಹಿಳಾ ಮೋರ್ಚಾದ (BJP Mahila Morcha) ನೇತೃತ್ವದಲ್ಲಿ ನಾಳೆ (ಮಾರ್ಚ್ 5) ರಾಜ್ಯದಾದ್ಯಂತ ನಾರಿಶಕ್ತಿ ಯಾತ್ರಾ (Naari Shakti Yatra) ನಡೆಸಲಾಗುವುದು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಕೂಟಿ, ಬೈಕ್, ಸೈಕಲ್ ಯಾತ್ರೆಗಳು ನಡೆಯಲಿದೆ ಎಂದು ಬಿಜೆಪಿ (BJP Karnataka) ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ. ಮಂಜುಳಾ (C Manjula) ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ದೇಶಾದ್ಯಂತ ಮೂರು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮೂರು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೊದಲ ದಿನ ನಗರ ಪ್ರದೇಶದ ಸ್ವ ಸಹಾಯ ಸಂಘಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂಜೀವಿನಿ ಒಕ್ಕೂಟದ ಮಹಿಳೆಯರು ಹಾಗೂ ಮಹಿಳಾ ಸಂಘಟನೆಗಳು, ರಾಜಕೀಯೇತರ ಸಂಸ್ಥೆಗಳು ಇವತ್ತಿನ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದರು.
ಸಂದೇಶ್ ಖಾಲಿ ದೌರ್ಜನ್ಯ ಪ್ರಕರಣದ ವಿರುದ್ಧ ಆಕ್ರೋಶ
ಪಶ್ಚಿಮ ಬಂಗಾಲದ ಸಂದೇಶ್‍ಖಾಲಿ ಎಂಬಲ್ಲಿ ಗರಿಷ್ಠ ಮಹಿಳಾ ದೌರ್ಜನ್ಯ ನಡೆಯುತ್ತಿದೆ. ಇದೇ ಮಾರ್ಚ್ 6ರಂದು ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳು, ಅನಾಚಾರಗಳು ಹಾಗೂ ಮಹಿಳೆಯರ ಮೇಲೆ ನಡೆದಂತಹ ಘನ ಘೋರ ಆಕ್ರಮಣವನ್ನು ಖಂಡಿಸಲಾಗುವುದು. ಶಹಜಹಾನ್ ಎಂಬ ಒಬ್ಬ ಪುಂಡನ ಬೆಂಬಲಕ್ಕೆ ಮಮತಾ ಬ್ಯಾನರ್ಜಿ ಸರ್ಕಾರ ನಿಂತಿದೆ. ಇದರ ವಿರುದ್ಧ ಹಾಗೂ ನಮ್ಮ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ನಿರಂತರವಾಗಿ ನಿರ್ಲಕ್ಷ್ಯ ವಹಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಂಜುಳಾ ಅವರು ತಿಳಿಸಿದರು.
ಇದನ್ನೂ ಓದಿ: Acid Attack : ಕಡಬದಲ್ಲಿ ಆ್ಯಸಿಡ್ ದಾಳಿ; ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಮಹಿಳಾ ಮೋರ್ಚಾ ದಾಳಿ!
ಮಾರ್ಚ್ 12ರಂದು ಮಹಿಳಾ ಸಮಾವೇಶ
ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾವು ಸಂದೇಶ್‍ಖಾಲಿಯಲ್ಲಿ ಒಂದು ಲಕ್ಷ ಮಹಿಳೆಯರ ಸಭೆಯನ್ನು ಆಯೋಜಿಸಲಿದೆ. ಈ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಜೀ ಅವರು ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.30ಕ್ಕೆ ದೇಶದ ಎಲ್ಲಾ ಮಂಡಲಗಳಲ್ಲಿ ಹಾಗೂ ಕರ್ನಾಟಕದ 312 ಸಂಘಟನಾತ್ಮಕ ಮಂಡಲಗಳಲ್ಲಿ ಎಲ್‍ಇಡಿ ಪರದೆ ಅಳವಡಿಸಿ ಪ್ರಧಾನಿಯವರ ಭಾಷಣವನ್ನು ನೇರ ಪ್ರಸಾರ ಮಾಡಲಾಗುತ್ತದೆ. ಇದನ್ನು ನಾವೆಲ್ಲರೂ ಕೇಳಲಿದ್ದೇವೆ. ನಂತರ 12ಕ್ಕೆ ಮಹಿಳಾ ಸಮಾವೇಶ ನಡೆಯಲಿವೆ ಎಂದು ತಿಳಿಸಿದರು.
ಸೋಮವಾರ ರಾಜ್ಯದ 28 ಜಿಲ್ಲೆಗಳಲ್ಲಿ ಬೆಳಗ್ಗೆ ‘ರನ್ ಫಾರ್ ನೇಶನ್, ರನ್ ಫಾರ್ ಮೋದಿ’ ಕಾರ್ಯಕ್ರಮ ನಡೆದಿದೆ. ಎರಡು ತಿಂಗಳಿನಿಂದ ಬಿಜೆಪಿ ಮಹಿಳಾ ಮೋರ್ಚಾ ಅಭಿಯಾನ, ನಾರಿಶಕ್ತಿ ವಂದನ್ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಕಡಬದಲ್ಲಿ ಇಂದು ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ಕ್ರಮವನ್ನು ತೆಗೆದುಕೊಳ್ಳಲು ಅವರು ಆಗ್ರಹಿಸಿದರು.
ಮಹಿಳಾ ಮೋರ್ಚಾದ ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷೆ ಆಶಾ ರಾವ್, ಮಹಿಳಾ ಮೋರ್ಚಾ ಕೇಂದ್ರ ಜಿಲ್ಲಾ ಅಧ್ಯಕ್ಷೆ ರೇಖಾ ಗೋವಿಂದ್, ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಆನಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.