Site icon Vistara News

BJP Karnataka: ಬಿ.ಎಸ್‌. ಯಡಿಯೂರಪ್ಪಗೆ ಮತ್ತೊಂದು ಉನ್ನತ ಸ್ಥಾನ?: ಬಿಜೆಪಿಯಲ್ಲಿ ಬಿಸಿಬಿಸಿ ಚರ್ಚೆ

bjp-karnataka-may-appoint-bs-yediyurappa-as-campaign-committee-chairmain

#image_title

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವಂತೆ ಮಹತ್ವದ ಬದಲಾವಣೆಗೆ ಬಿಜೆಪಿ (BJP Karnataka) ಮುಂದಾಗಿದ್ದು, ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲು ಮುಂದಾಗಿದೆ.

ಈ ಹಿಂದೆ ವಯಸ್ಸಿನ ಕಾರಣಕ್ಕೆ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದ ಬಿಜೆಪಿ, ನಂತರ ಅವರ ಜನಪ್ರಿಯತೆಗಾಗಿ ಪುನಃ ಕರೆತಂದಿತು. ರಾಷ್ಟ್ರೀಯ ಮಟ್ಟದಲ್ಲಿ ಚುನಾವಣಾ ಟಿಕೆಟ್‌ ಅಂತಿಮಗೊಳಿಸುವ ಸಂಸದೀಯ ಮಂಡಳಿಯ ಸದಸ್ಯರಾಗಿ ಯಡಿಯೂರಪ್ಪ ಅವರನ್ನು ನೇಮಿಸುವ ಮೂಲಕ ವೀರಶೈವ ಲಿಂಗಾಯತ ಸಮುದಾಯದಲ್ಲಿ ಮೂಡಿದ್ದ ಅಸಮಾಧಾನವನ್ನು ತಣಿಸುವ ಪ್ರಯತ್ನ ಮಾಡಿತ್ತು.

ಇತ್ತೀಚೆಗಷ್ಟೆ ಯಡಿಯೂರಪ್ಪ ಅವರ ಜನ್ಮದಿನದಂದೇ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಿ ವಿಮಾನ ನಿಲ್ದಾನ ಉದ್ಘಾಟನೆ ಮಾಡಿದರು. ಇಷ್ಟೆಲ್ಲದರ ನಂತರವೂ ವೀರಶೈವ ಲಿಂಗಾಯತ ಮತಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎಂಬ ಅಸ್ತ್ರವನ್ನು ಹಿಡಿದುಕೊಂಡು ವೀರಶೈವ ಲಿಂಗಾಯತ ಮತಗಳನ್ನು ತನ್ನ ಕಡೆಗೆ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ. ಸ್ವತಃ ಪ್ರಧಾನಿ ಮೋದಿ ಬೆಳಗಾವಿಯಲ್ಲಿ ಮಾತನಾಡುತ್ತ, ರಾಜ್ಯದ ನಾಯಕರಿಗೆ ಅವಮಾನ ಮಾಡುವುದೇನಿದ್ದರೂ ಕಾಂಗ್ರೆಸ್‌ ಎಂದು ಟೀಕಿಸಿದ್ದರು. ಇಷ್ಟೆಲ್ಲದ ನಂತರವೂ ಡ್ಯಾಮೇಜ್‌ ಕಂಟ್ರೋಲ್‌ ಆಗಿಲ್ಲ ಎಂದು ಬಿಜೆಪಿಗೆ ಮನವರಿಕೆ ಆದಂತಿದೆ.

ಕಾಂಗ್ರೆಸ್‌ನಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವೀರಶೈವ ಲಿಂಗಾಯತ ಸಮಿದಾಯದ ಎಂ.ಬಿ. ಪಾಟೀಲ್‌ ಅವರನ್ನು ನೇಮಿಸಲಾಗಿದೆ. ಇತ್ತ ಬಿಜೆಪಿಯಲ್ಲಿ ಇನ್ನೂ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನು ನೇಮಿಸಿಲ್ಲ. ಈ ಸ್ಥಾನಕ್ಕೆ ಯಡಿಯೂರಪ್ಪ ಅವರನ್ನು ನೇಮಿಸಿದರೆ ಒಟ್ಟಾರೆ ಚುನಾವಣೆ ಉಸ್ತುವಾರಿಯು ಯಡಿಯೂರಪ್ಪ ಅವರ ಕೈಯಲ್ಲೇ ಇರುತ್ತದೆ. ಆಗ ಕಡೆಗಣಿಸಿದ ಆರೋಪದಿಂದ ಮುಕ್ತವಾಗಬಹುದು ಎಂಬ ಲೆಕ್ಕಾಚಾರ ಪಕ್ಷದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಬಿಜೆಪಿ ನನ್ನನ್ನು ಮೂಲೆಗುಂಪು ಮಾಡಿಲ್ಲ, ಟಿಪ್ಪು-ಹಿಜಾಬ್​ಗಳೆಲ್ಲ ಅನಗತ್ಯ ವಿಚಾರಗಳು: ಬಿ.ಎಸ್​.ಯಡಿಯೂರಪ್ಪನವರ ಮಾತುಗಳಿವು

ಮುಂದಿನ ಎರಡು ಮೂರು ದಿನಗಳಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರ ನೇಮಕ ನಡೆಯುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಮಣೆ ಹಾಕುವ ಮೂಲಕ ಚುನಾವಣೆ ತಂತ್ರವನ್ನು ಬದಲು ಮಾಡುವ ಗಂಭೀರ ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.

Exit mobile version