ಬೆಂಗಳೂರು: 2047ಕ್ಕೆ ವಿಕಸಿತ ಭಾರತದ ಸಂಕಲ್ಪವನ್ನು ನರೇಂದ್ರ ಮೋದಿ (PM Narendra Modi) ಅವರು ಹೊಂದಿದ್ದಾರೆ. ಅದನ್ನು ಈಡೇರಿಸಲು ಮತ್ತೊಮ್ಮೆ ಮೋದಿ ಸಂಕಲ್ಪಕ್ಕೆ ಜನತೆ ಭಾರಿ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ (BJP Karnataka) ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಇವತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆ ಮೇರೆಗೆ ಗೋಡೆ ಬರಹ ಆರಂಭಿಸಲಾಗಿದೆ. ಪ್ರತಿ ಬೂತ್‍ನಲ್ಲಿ 5 ಕಡೆ ಗೋಡೆ ಬರಹಕ್ಕೆ ಚಾಲನೆ ಕೊಡಲಾಗುತ್ತದೆ. 2024ಕ್ಕೆ ಮತ್ತೊಮ್ಮೆ ಮೋದಿ ಎಂಬುದು ದೇಶದ ಅಪೇಕ್ಷೆಯಾಗಿದೆ ಎಂದು ತಿಳಿಸಿದರು.
ವಿಕಸಿತ ಭಾರತ ಸಂಕಲ್ಪದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳು ಜನರನ್ನು ತಲುಪುತ್ತಿವೆ. ರಾಜ್ಯದ ಜನತೆ ಕೂಡ ಬಿಜೆಪಿ, ನರೇಂದ್ರ ಮೋದಿ ಅವರ ಬಗ್ಗೆ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ವಿವರಿಸಿದರು.
ಹಾವೇರಿ ಮಹಿಳೆ ಮೇಲೆ ಅತ್ಯಾಚಾರ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಬಿ.ವೈ. ವಿಜಯೇಂದ್ರ, ನಾನು ಈ ವಿಷಯದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪದೇ ಪದೆ ಈ ರೀತಿಯ ಘಟನೆಗಳು ಆಗುತ್ತಿವೆ. ಬೆಳಗಾವಿ, ಹಾವೇರಿಯ ಮಹಿಳೆಯರ ಮೇಲಿನ ದೌರ್ಜನ್ಯದಂಥ ಘಟನೆಗಳು ನಾಚಿಕೆಗೇಡಿನ ಸಂಗತಿ. 7ರಂದು ಈ ಘಟನೆ ನಡೆದು ಒಂದು ವಾರ ಕಳೆದರೂ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ. ಎಫ್‍ಐಆರ್ ಕೂಡ ದಾಖಲಿಸಿಲ್ಲ. ಮತ್ತೊಂದು ಕಡೆ ಈ ದುರ್ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಆಗುತ್ತಿದೆ. ಇದು ಬೇಸರದ ಮತ್ತು ಖಂಡನೀಯ ವಿಚಾರ ಎಂದು ಹೇಳಿದರು.
ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಇದು ಗಂಭೀರವಾದ ವಿಚಾರ. ಆದರೆ, ರಾಜ್ಯ ಸರ್ಕಾರ ಇದನ್ನು ಹಗುರವಾಗಿ ಪರಿಗಣಿಸಿದೆ. ಪೊಲೀಸರು ರಾಜ್ಯ ಕಾಂಗ್ರೆಸ್ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ದುರ್ದೈವ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಈ ಪ್ರಕರಣವನ್ನು ಮುಚ್ಚಿಹಾಕದಿರಲಿ
ಬಿಜೆಪಿಯ ಹಿರಿಯರು ಅಲ್ಲಿಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದಾರೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಲು ಕೋರಿದ್ದೇವೆ. ರಾಜ್ಯ ಸರ್ಕಾರವು ಇದನ್ನು ಮುಚ್ಚಿ ಹಾಕಬಾರದು ಎಂದು ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.
ಎಸ್‍ಐಟಿ ರಚನೆ ಮಾಡಲಿ
ರಾಜ್ಯ ಸರ್ಕಾರ ಮತ್ತು ಸಚಿವರು ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ಇದು ಹೆಣ್ಣಿನ ಮಾನದ, ಗೌರವದ ಪ್ರಶ್ನೆ ಎಂದು ಬಿ.ವೈ. ವಿಜಯೇಂದ್ರ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‍ಐಟಿ ರಚಿಸಲು ಆಗ್ರಹಿಸದೆ, ವಿಪಕ್ಷವಾಗಿ ನಾವು ಇನ್ನೇನು ಮಾಡಲು ಸಾಧ್ಯ ಎಂದು ಅವರು ಮರುಪ್ರಶ್ನೆ ಹಾಕಿದರು.
2024ಕ್ಕೆ ಮತ್ತೊಮ್ಮೆ ಮೋದಿ ಗೋಡೆ ಬರಹಕ್ಕೆ ಚಾಲನೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೋಮವಾರ ಶೇಷಾದ್ರಿಪುರದ ಮಾರುತಿ ಆಸ್ಪತ್ರೆಯ ಬಳಿ ನಡೆದ “2024ಕ್ಕೆ ಮತ್ತೊಮ್ಮೆ ಮೋದಿ” ಗೋಡೆ ಬರಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಗೋಡೆ ಬರಹ ಅಭಿಯಾನವನ್ನು ನಡೆಸಲಾಗಿದೆ. ಇದರ ಭಾಗವಾಗಿ ಕರ್ನಾಟಕದಲ್ಲಿ ಬಿ.ವೈ. ವಿಜಯೇಂದ್ರ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: BJP Karnataka: ಬೆಂಗಳೂರಿನ ನೂತನ ಜಿಲ್ಲಾಧ್ಯಕ್ಷರಿಂದ ಬಿ.ವೈ. ವಿಜಯೇಂದ್ರಗೆ ಅಭಿನಂದನೆ
ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಪ್ರೀತಮ್ ಗೌಡ, ಪಿ ರಾಜೀವ್, ರಾಜ್ಯ ಕೋಶಾಧ್ಯಕ್ಷ ಸುಬ್ಬ ನರಸಿಂಹ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಹಾಗೂ ಪ್ರಮುಖರು ಉಪಸ್ಥಿತರಿದ್ದರು.