ಬೆಂಗಳೂರು: ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧದ ವಾಗ್ದಾಳಿಯನ್ನು ಬಿಜೆಪಿ ಮುಂದುವರಿಸಿದೆ. ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ಜನಸ್ಪಂದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹರಿಹಾಯ್ದಿದ್ದ ಬೆನ್ನಿಗೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಇದೀಗ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ..
ದೊಡ್ಡಬಳ್ಳಾಪುರದ ರ‍್ಯಾಲಿಯಲ್ಲಿ ʼಸಿದ್ದರಾಮಣ್ಣʼ ಸರ್ಕಾರ ಎನ್ನುತ್ತಲೇ ನಳಿನ್‌ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾನುವಾರ ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು.
ಜನಸ್ಪಂದನ ಕಾರ್ಯಕ್ರಮವನ್ನು ಜನಮರ್ದನ ಕಾರ್ಯಕ್ರಮ ಎಂದಿದ್ದ ಸಿದ್ದರಾಮಯ್ಯ, “ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ವೀರಾವೇಶದ ಭಾಷಣ ಕೇಳಿ ಖುಷಿಯಾಯಿತು. ಸಂಘ ಪರಿವಾರ ಇಂತಹ ಜೋರು ಮಾತುಗಳನ್ನು ಸಹಿಸವುದಿಲ್ಲ, ಇದೇ ರೀತಿ ಮಾತನಾಡಿಯೇ ಪಾಪ ಬಿ.ಎಸ್. ಯಡಿಯೂರಪ್ಪ ಜೈಲು ಸೇರಿದ್ದು ಎನ್ನುವುದು ನೆನಪಿರಲಿ”.
“ದಮ್ ಇದ್ದರೆ ಬಿಜೆಪಿ ಯಾತ್ರೆಯನ್ನು ಹಿಮ್ಮೆಟ್ಟಿಸಿ ಎಂದು ಬೊಮ್ಮಾಯಿ ಸವಾಲು ಹಾಕಿದ್ದಾರೆ. ನಾವು ಯಾಕೆ ಹಿಮ್ಮೆಟ್ಟಿಸಲು ಹೋಗ್ಬೇಕು? ಸಮಾವೇಶದಲ್ಲಿಯ ಖಾಲಿ ಕುರ್ಚಿಗಳನ್ನು ನೋಡಿದರೆ ನಿಮ್ಮ “ಜಾತ್ರೆ”ಯನ್ನು ನಮ್ಮ ಜನರೇ ಹಿಮ್ಮೆಟ್ಟಿಸಿದ್ದಾರೆ ಎಂದು ನಿಮಗೆ ಅನಿಸಲ್ವಾ?” ಎಂದಿದ್ದರು.
ತಮ್ಮ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸಿ ಎಂದಿದ್ದ ಸಿದ್ದರಾಮಯ್ಯ, “ನನ್ನ ಅಧಿಕಾರವಧಿಯ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರು ಧಮ್ಕಿ ಹಾಕುತ್ತಲೇ ಇದ್ದಾರೆ. ಧಮ್ ಇದ್ದರೆ ಮೊದಲು ಆ ಕೆಲಸ ಮಾಡಿ. ನಾನು ಅದನ್ನು ಎದುರಿಸಲು ಸದಾ ಸಿದ್ಧ. ಈ ಬ್ಲಾಕ್ ಮೇಲ್ ತಂತ್ರಗಳನ್ನೆಲ್ಲ ನಿಮ್ಮವರ ಮೇಲೆ ಬಳಸಿಕೊಳ್ಳಿ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ | BJP ಜನಸ್ಪಂದನ| ಯಡಿಯೂರಪ್ಪ ಕೃಷ್ಣ, ಬೊಮ್ಮಾಯಿ ಅರ್ಜುನ: ದಿಗ್ವಿಜಯ ಯಾತ್ರೆ ಹೊರಟಿದೆ, ಸಾಧ್ಯವಿದ್ದರೆ ತಡೆಯಿರಿ: ನಳಿನ್
ನಳಿನ್ ಕಟೀಲ್ ಪ್ರತ್ಯುತ್ತರ
ಸಿದ್ದರಾಮಯ್ಯ ಸರಣಿ ಟ್ವೀಟ್ ನಂತರ ನಳಿನ್ ಕುಮಾರ್ ಕಟೀಲ್ ಸುದೀರ್ಘ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಮತ್ತು ದೊಡ್ಡಬಳ್ಳಾಪುರದ ಜನಸ್ಪಂದನಕ್ಕೆ ಜನರ ಸ್ಪಂದನೆಯನ್ನು ಗಮನಿಸಿ ಸಿದ್ದರಾಮಯ್ಯರು ಸ್ಥಿಮಿತ ಕಳೆದುಕೊಂಡಂತಿದೆ. ಅದಕ್ಕಾಗಿಯೇ ಅವರು ತಮ್ಮ ಸುಳ್ಳಿನ ಸರಮಾಲೆ, ವ್ಯರ್ಥ ಆರೋಪಗಳ ಮೂಲಕ ನಾಟಕ ಮುಂದುವರಿಸಿದ್ದಾರೆ ಎಂದಿದ್ದಾರೆ.
ಸಿದ್ದರಾಮಯ್ಯ ಎಂದರೆ ಡೋಂಗಿತನ, ಹಿಂದೂ ವಿರೋಧಿತನದ ಸಂಕೇತ. ರಾಷ್ಟ್ರವಿರೋಧಿ ಶಕ್ತಿಗಳ ಜತೆ ಕೈ ಜೋಡಿಸುವ ಮತ್ತು ಧರ್ಮಗಳನ್ನು ಒಡೆಯುವ ಸಿದ್ದರಾಮಯ್ಯರ ಸ್ವಾರ್ಥ ರಾಜಕಾರಣ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ನೀವು ಟ್ವೀಟ್‍ಗಳ ಮೂಲಕ ಹಾಗೂ ಹೇಳಿಕೆಗಳ ಮೂಲಕ ನಿಮ್ಮನ್ನೇ ಜನರ ಮುಂದಿಟ್ಟು ಅಪಹಾಸ್ಯಕ್ಕೆ ಸಿಲುಕುತ್ತಿದ್ದೀರಿ. ಬಿಜೆಪಿ ಸರ್ಕಾರ ಜನಪರವಾಗಿದೆ. ಬಿಜೆಪಿ ಯಾವತ್ತೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಮತ್ತು ಸಶಕ್ತೀಕರಣದ ಪ್ರಯತ್ನದಲ್ಲಿರುವುದು ಜನರಿಗೆ ತಿಳಿದಿದೆ ಎಂದು ಅವರು ತಿಳಿಸಿದ್ದಾರೆ.
ಒಮ್ಮೆ ನಿರುದ್ಯೋಗ ಸಮಸ್ಯೆ ಎನ್ನುವ ಸಿದ್ದರಾಮಣ್ಣ, ಮತ್ತೆ ಪ್ಲೇಟ್ ಬದಲಿಸಿ ಶೇಕಡಾ 40 ಭ್ರಷ್ಟಾಚಾರ ಎಂದು ರಾಗ ಎಳೆಯುತ್ತಾರೆ. ಅರ್ಕಾವತಿ ಹಗರಣ ಸೇರಿ ವಿವಿಧ ಭ್ರಷ್ಟಾಚಾರ ಹಗರಣಗಳನ್ನು ಬಿಜೆಪಿ ಸರ್ಕಾರ ಬಯಲಿಗೆ ಎಳೆಯಲಿದೆ ಎಂದು ತಿಳಿಸಿದ ಬಳಿಕ ಸಿದ್ದರಾಮಣ್ಣನಿಗೆ ಚಳಿಜ್ವರ ಬಂದಂತಿದೆ; ಅದಕ್ಕಾಗಿಯೇ ಸದಾ ಪ್ರಚಾರದಲ್ಲಿರಲು ಸುಳ್ಳು ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯನವರೇ ನಿಮಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಗೌರವ ಮತ್ತು ಬದ್ಧತೆ ಇದ್ದರೆ ಜನರ ಆಶೋತ್ತರ ಮತ್ತು ಕಷ್ಟಕಾರ್ಪಣ್ಯಕ್ಕೆ ಸ್ಪಂದಿಸಬೇಕು. ಈ ಮೂಲಕ ನೀವು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಘನತೆಯನ್ನು ಎತ್ತಿ ಹಿಡಿಯಬೇಕು. ನೀವು ತಾಕತ್ತಿದ್ದರೆ ಈ ವಿಚಾರವಾಗಿ ಚರ್ಚೆಗೆ ಬಂದರೆ ನಾವೂ ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲೆಸೆದಿದ್ದಾರೆ.
ಇದನ್ನೂ ಓದಿ | Election 2023 | ಕಟೀಲ್ ಟೀಂ ಒಂದು ಕಡೆ, CM-BSY ಟೀಂ ಮತ್ತೊಂದು ಕಡೆ: ಪ್ರವಾಸಕ್ಕೆ ಸಜ್ಜಾದ BJP