ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯನ್ನೇ (Parliament Elections 2024) ಪ್ರಧಾನವಾಗಿಟ್ಟುಕೊಂಡು ಬಿಜೆಪಿ ರಾಜ್ಯ ಕಾರ್ಯಕಾರಿಣಿ (BJP State Executive meet) ವಿಶೇಷ ಸಭೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದು ಸಂಸತ್ ಚುನಾವಣೆಯ ಮಾಸ್ಟರ್ ಪ್ಲ್ಯಾನ್ (Master plan to Loksabha Elections) ಬಹುತೇಕ ಸಿದ್ಧಪಡಿಸಲಾಗಿದೆ. ಇದಕ್ಕೆ ಕಾರ್ಯಕಾರಿಣಿ ಒಪ್ಪಿಗೆಯನ್ನು ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕಾರಿಣಿಯನ್ನು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಉದ್ಘಾಟಿಸಿದರು. ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿಪಕ್ಷ ನಾಯಕ ಅಶೋಕ್ ಸೇರಿದಂತೆ 800ಕ್ಕೂ ಹೆಚ್ಚು ಪ್ರಮುಖರು ಕಾರ್ಯಕಾರಿಣಿಯಲ್ಲಿ ಭಾಗಿಯಾಗಿದ್ದರು (BJP Karnataka).
ಮುಖ್ಯ ವಕ್ತಾರ ಅಶ್ವಥ್ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಬೆಂಗಳೂರಿನ ಮೂರು ಜಿಲ್ಲಾ ಜಿಲ್ಲಾಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
BJP Karnataka ಕಾರ್ಯಕಾರಿಣಿಯಲ್ಲಿ ಎರಡು ನಿರ್ಣಯ ಅಂಗೀಕಾರ
ಕಾರ್ಯಕಾರಿಣಿ ಸಭೆಯಲ್ಲಿ ಎರಡು ನಿರ್ಣಯಗಳನ್ನು ಮಂಡಿಸಿ, ಅನುಮೋದನೆ ಪಡೆಯಲಾಗಿದೆ.
- 1. ಮೊದಲ ನಿರ್ಣಯವಾಗಿ 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದನ್ನ ಸ್ವಾಗತಿಸಲಾಯಿತು.. ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ನಿರ್ಣಯ ಮಾಡಲಾಯಿತು.
- 2. ಎರಡನೇ ನಿರ್ಣಯ ಖಂಡನಾ ನಿರ್ಣಯವಾಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಯಾವುದೇ ಹೊಸ ಅಭಿವೃದ್ಧಿ ಯೋಜನೆ ಮಾಡದೆ, ಗ್ಯಾರಂಟಿ ನೆಪ ಹೇಳಿ ಜನರಿಗೆ ಅನ್ಯಾಯ ಮಾಡಿದೆ.. ಮಹಿಳೆಯರಿಗೆ ರಕ್ಷಣೆ ಇಲ್ಲ, ರೈತರಿಗೆ ಬರ ಪರಿಹಾರ ನೀಡಿಲ್ಲ, ಕಾನೂನು ಸುವ್ಯವಸ್ಥೆ ಹಾಳಾಗಿದೆ ಮತ್ತು SCPTSP ಹಣ ದುರ್ಬಳಕೆ ಖಂಡಿಸಿ, ಖಂಡನಾ ನಿರ್ಣಯ ಮಂಡಿಸಿ ಅನುಮೋದಿಸಲಾಗಿದೆ.
BJP Karnataka ಸಭೆಯ ಇತರ ಪ್ರಮುಖ ನಿರ್ಣಯಗಳು
1. ಫೆಬ್ರವರಿ 3,4,5 ರಂದು ಜಿಲ್ಲೆಗಳಲ್ಲಿ ಕಾರ್ಯಕಾರಿ ಸಭೆ ನಡೆಸುವುದು.
2.ಕೇಂದ್ರದ ಯೋಜನೆಗಳನ್ನ ಪಡೆದಿರೋ ಫಲಾನುಭವಿಗಳನ್ನ ಭೇಟಿ ಮಾಡುವುದು, ಮಹಿಳಾ ಸ್ವ ಸಹಾಯ ಸಂಘ ಹಾಗೂ NGO ಮೂಲಕ ಫಲಾನುಭವಿಗಳ ಸಮಾವೇಶ ನಡೆಸುವುದು.
(ಶಶಿಕಲಾ ಜೊಲ್ಲೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಇದರ ಉಸ್ತುವಾರಿ)
ಜನವರಿ 30ರಿಂದ ಗೋಡೆ ಬರಹ ಅಭಿಯಾನ
3.ಲೋಕಸಭೆ ಚುನಾವಣೆ ದೃಷ್ಟಿಯಿಂದ ಪ್ರತೀ ಬೂತ್‌ಗೆ ಒಂದರಂತೆ, ಮೂರನೇ ಬಾರಿಗೆ ಮೋದಿ ಅಂತ ಗೋಡೆ ಬರಹ ಬರೆಯುವುದು. ಜನವರಿ 30ರಂದು ಗೋಡೆ ಬರಹಕ್ಕೆ ಚಾಲನೆ ನೀಡುವುದು. (ರಾಜ್ಯದಲ್ಲಿ 38 ಸಾವಿರ ಬೂತ್ ಇದೆ). ನಂದೀಶ್ ರೆಡ್ಡಿ ನೇತೃತ್ವದ ತಂಡ ನೋಡಿಕೊಳ್ಳಲಿದೆ.
ಫೆಬ್ರವರಿ 9ರಿಂದ ಮೂರು ದಿನ ಗ್ರಾಮ ಚಲೋ
4.ಪ್ರತೀ ಹಳ್ಳಿಗೆ ತಲುಪುವ ದೃಷ್ಟಿಯಿಂದ ಫೆಬ್ರವರಿ 9,10,11 ಮೂರು ದಿನ “ಗ್ರಾಮ್ ಚಲೋ” ಕಾರ್ಯಕ್ರಮ ನಡೆಸುವುದು. ರಾಜ್ಯ ಸರ್ಕಾರದ ವೈಫಲ್ಯಗಳನ್ನ ತಿಳಿಸಿ, ಕಾರ್ಯಕ್ರಮ ಯಶಸ್ವಿ ಮಾಡುವುದು. ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತ ಬಂದ ಬೂತ್‌ಗಳಲ್ಲಿ ಗಮನ ಹರಿಸಿ, ಹೆಚ್ಚು ಮತ ಪಡೆಯುವಂತೆ ಸಂಘಟಿಸುವುದು. ಮಾಜಿ ಸಚಿವ ಸುನಿಲ್ ಕುಮಾರ್, ವಿನಯ್ ಬಿದರೆ, ಸಂಜಯ್ ಪಾಟೀಲ್ ತಂಡ ಕೆಲಸ ಮಾಡಲಿದೆ.
ಇದನ್ನೂ ಓದಿ: ST Somashekhar :ಬಿಜೆಪಿ ಕಾರ್ಯಕಾರಿಣಿ ಬಿಟ್ಟು ಸಿದ್ದರಾಮಯ್ಯ ಜತೆ ಸುತ್ತಾಡಿದ ಎಸ್‌ಟಿ ಸೋಮಶೇಖರ್
ಅಯೋಧ್ಯೆಗೆ ಭಕ್ತರನ್ನು ಕಳುಹಿಸಿಕೊಡುವುದು
5.ರಾಜ್ಯದಿಂದ ಅಯೋಧ್ಯೆಗೆ ತೆರಳುವ ರಾಮಭಕ್ತರನ್ನು ಕಳಿಸಿಕೊಡುವುದು ಮತ್ತು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು.
6.’ವಿಸ್ತಾರಕ ಯೋಜನೆ’ ಮೂಲಕ ಪ್ರತೀ ಕ್ಷೇತ್ರದಲ್ಲಿ 125ಕ್ಕೂ ಹೆಚ್ಚು ಕಾರ್ಯಕರ್ತರು ಕೆಲಸ ಮಾಡುವುದು, ಕಾರ್ಯಕ್ರಮ ಮಾಡುವುದು ಮತ್ತು ಅತಿಥಿಗಳನ್ನ ಜೋಡಿಸುವ ಜವಾಬ್ದಾರಿ.
7. ಫೆಬ್ರವರಿಯಲ್ಲಿ ಕೇಂದ್ರದ ನಾಯಕರಾದ ಅಮಿತ್ ಶಾ, ಜೆ.ಪಿ ನಡ್ಡಾ ಮತ್ತು ರಾಜನಾಥ್ ಸಿಂಗ್ ಅವರನ್ನ ಜೋಡಿಸಿಕೊಂಡು ಕಾರ್ಯಕ್ರಮ ಮಾಡಲು ನಿರ್ಧಾರ. ಪ್ರತೀ ಕಾರ್ಯಕ್ರಮಕ್ಕೆ ಪ್ರಮುಖರನ್ನ ನೇಮಿಸಿದ್ದು, ಅವರ ಸಹಾಯಕ್ಕೆ ನಾಲ್ಕರಿಂದ ಐದು ಜನರನ್ನು ನೇಮಿಸಲಾಗಿದೆ.
ಕಾರ್ಯಕಾರಿಣಿಗೆ ಇಬ್ಬರು ಶಾಸಕರು ಗೈರು
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಬಿಜೆಪಿ ಇಬ್ಬರು ಶಾಸಕರಾದ ಎಸ್.ಟಿ. ಸೋಮಶೇಖರ್ (ಯಶವಂತಪುರ) ಮತ್ತು ಶಿವರಾಮ ಹೆಬ್ಬಾರ್ (ಯಲ್ಲಾಪುರ) ಅವರು ಬಂದಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಗೌಡ ಅವರು, ಹಿಂದೆಯೂ ಕಾರ್ಯಕಾರಿಣಿಗಳಿಗೆ ಕೆಲವರು ಗೈರು ಆಗಿದ್ದು ನಡೆದಿದೆ. ಅನೇಕರು ಗೈರಾಗೋದು ಸಾಮಾನ್ಯ.. ಸೋಮಶೇಖರ್ ಗೈರು ಗೊತ್ತಿಲ್ಲ. ಎಲ್ಲರಿಗೂ ಆಹ್ವಾನ ನೀಡಿದ್ದೇವೆ ಎಂದರು.