Site icon Vistara News

BJP Karnataka: ಈ ಸಾರಿ ಜೆಡಿಎಸ್ ಜತೆ ಬಿಲ್ಕುಲ್ ಒಳ ಒಪ್ಪಂದ ಇಲ್ಲ; ಪಕ್ಕಾ ಫೈಟ್: ಬಿಜೆಪಿ ಪಾಳೆಯದಲ್ಲಿ ಖಡಕ್ ಮಾತು

bjp-karnataka trying hard truly fight with JDS this election

#image_title

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಕ್ಷೇತ್ರವಾರು ಸೋಲು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ. ಈ ನಡುವೆ, ಉಳಿದ ಪಕ್ಷಗಳ ಹೋಲಿಕೆಯಲ್ಲಿ ತುಸು ತಡವಾಗಿ ಕಣಕ್ಕೆ ಇಳಿಯುತ್ತಿರುವಂತೆ ಕಾಣುತ್ತಿರುವ ಬಿಜೆಪಿ, 2018ರಲ್ಲಿ ಮಾಡಿದ ತಪ್ಪುಗಳು ಪುನರಾವರ್ತನೆ ಆಗದಂತೆ ತಡೆಯಲು ಮುಂದಾಗಿದೆ.
ಕಳೆದ ಚುನಾವಣೆಯಲ್ಲಿ ಇನ್ನು ಸ್ವಲ್ಪ ಕಷ್ಟಪಟ್ಟಿದ್ದರೆ ಸರಳ ಬಹುಮತದ ಸರ್ಕಾರ ರಚನೆ ಆಗುತ್ತಿತ್ತು ಎನ್ನುವುದು ಬಹುತೇಕ ಬಿಜೆಪಿಗರ ಮಾತು. ಇದರಲ್ಲಿ, ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಆಗಬಾರದಿತ್ತು ಎನ್ನುವುದೂ ಒಂದು. ಕಳೆದ ಚುನಾವಣೆಯಲ್ಲಿ ಸರಳ ಬಹುಮತವನ್ನು ಪಡೆಯದೇ ಇರಲು ಬಿಜೆಪಿ ವರಿಷ್ಠರು ಒಟ್ಟು ಏಳು ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ.

  1. 5B (ಬೆಂಗಳೂರು, ಬೆಳಗಾವಿ, ಬಳ್ಳಾರಿ, ಬಿಜಾಪುರ, ಬೀದರ್‌) ಜಿಲ್ಲೆಗಳನ್ನು ಸರಿಯಾಗಿ ನಿರ್ವಹಿಸಲಿಲ್ಲ. ಈ ಜಿಲ್ಲೆಗಳಲ್ಲಿ ಬಿಜೆಪಿ ಸೂಕ್ತ ಕಾರ್ಯತಂತ್ರ ಅನುಸರಿಸಲಿಲ್ಲ. ಕೆಲವೆಡೆ ಅಡ್ಜಸ್ಟ್‌ಮೆಂಟ್‌ ರಾಜಕಾರಣವಾದರೆ, ಕೆಲವೆಡೆ ಸ್ಥಳೀಯ ನಾಯಕರ ಒತ್ತಡಕ್ಕೆ ಮಣಿದು ಸಂಘಟನೆಯು ದೂರ ಉಳಿಯಿತು. ಇದರಿಂದ ಈ ಜಿಲ್ಲೆಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.
  2. ಅಭ್ಯರ್ಥಿಗಳ ಆಯ್ಕೆಯನ್ನು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಲಿಲ್ಲ. ಅನೇಕ ಸಂದರ್ಭಗಳಲ್ಲಿ ಪಕ್ಷದ ಕಾರ್ಯಕರ್ತ, ಇನ್ಯಾರೊ ನಾಯಕರಿಗೆ ಬೇಕಾದವರು, ಹೀಗೆ ಅನೇಕ ಕಾರಣಕ್ಕೆ ಟಿಕೆಟ್ ನೀಡಲಾಯಿತು. ನಮ್ಮಲ್ಲಿ ಗೆಲ್ಲುವ ಅಭ್ಯರ್ಥಿಯಿದ್ದರೂ ಬೇರೆಯವರಿಗೆ ಟಿಕೆಟ್ ನೀಡಲಾಯಿತು, ಸಿಟ್ಟಾದವರು ಬಂಡಾಯವಾಗಿ ಸ್ಪರ್ಧಿಸಿದರು. ಪಕ್ಷದ ಅಧಿಕೃತ ಅಭ್ಯರ್ಥಿ ಹಾಗೂ ಬಂಡಾಯ ಅಭ್ಯರ್ಥಿಯ ಒಟ್ಟು ಮತಕ್ಕಿಂತ ಸಾವಿರಾರು ಮತ ಕಡಿಮೆ ಪಡೆದ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದರು.
  3. ಕೊನೆಯ ಹಂತದ ಚುನಾವಣೆಯಲ್ಲಿ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದವರೆಗೂ ಟಿಕೆಟ್‌ ಘೋಷಣೆ ಮಾಡುತ್ತ, ತಡವಾಗಿದ್ದು. ಇದರಿಂದ ಅಭ್ಯರ್ಥಿಗಳು ಸಿದ್ಧತೆ ನಡೆಸಲು ಸಮಯಾವಕಾಶ ಸಿಗಲಿಲ್ಲ.
  4. ಸಂವಿಧಾನ ಬದಲಾವಣೆ ಬಗ್ಗೆ ಸಂಸದ ಅನಂತ ಕುಮಾರ್ ಹೆಗಡೆ ನೀಡಿದ ಹೇಳಿಕೆ. ಈ ಹೇಳಿಕೆಯನ್ನು ಆಧಾರವಾಗಿಸಿ ಕಾಂಗ್ರೆಸ್ ಪಕ್ಷವು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಸುಮಾರು 60 ಕ್ಷೇತ್ರಗಳಲ್ಲಿ ವ್ಯವಸ್ಥಿತವಾಗಿ ಪ್ರಚಾರ ನಡೆಸಿತು. ಬಿಜೆಪಿ ಎಂದರೆ ಸಂವಿಧಾನ ವಿರೋಧಿ, ಅಂಬೇಡ್ಕರ್ ವಿರೋಧಿ ಹಾಗೂ ದಲಿತ ವಿರೋಧಿ ಎಂದು ಜನರ ಮನಸ್ಸಿಗೆ ತುಂಬಿತು. ಇದರಿಂದಾಗಿ, ದಲಿತ ಮತಗಳು ಬಿಜೆಪಿಯಿಂದ ದೂರಾದವು.
  5. ಪಕ್ಷದಿಂದ ಅಭ್ಯರ್ಥಿಗಳ ವೆಚ್ಚಕ್ಕೆ ಹಣ ನೀಡುವಾಗ ಸರಿಯಾಗಿ ನಿರ್ವಹಣೆ ಆಗಲಿಲ್ಲ. ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ವೆಚ್ಚಕ್ಕೆ ಹಣ ನೀಡುವ ಸಂದರ್ಭದಲ್ಲಿ ಅಸಮರ್ಪಕ ನಿರ್ವಹಣೆ ಆಗಿದೆ.
  6. ಹಳೆ ಮೈಸೂರು- ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಮನ ನೀಡಲಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ತಕ್ಕಮಟ್ಟಿನ ಸಾಮರ್ಥ್ಯ ಇದ್ದರೂ ಅದನ್ನು ಬಳಸಿಕೊಳ್ಳಲು ಮುಂದಾಗಲಿಲ್ಲ.
  7. ಜೆಡಿಎಸ್‌ ಜತೆಗೆ ಹೊಂದಾಣಿಕೆ. ಬಿಜೆಪಿ ನಾಯಕರ ಪ್ರಕಾರ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಬಿಜೆಪಿ ಅನೇಕ ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿತ್ತು. ಪ್ರಾರಂಭದಲ್ಲಿ ಜೆಡಿಎಸ್ ವಿರುದ್ಧವೇ ಇದ್ದ ಪಕ್ಷ, ನಡಿನಲ್ಲಿ ಒಮ್ಮೆ, ಜೆಡಿಎಸ್ ಕಡೆಗೆ ವಾಲಿತು. ಜೆಡಿಎಸ್ ಇಲ್ಲದೆ ಇದ್ದರೆ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ತಿಳಿಯಿತು. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಹಾಡಿ ಹೊಗಳಿದರು. ಈ ಹೊಂದಾಣಿಕೆಯಿಂದ ಜೆಡಿಎಸ್ಗೆ ಸಾಕಷ್ಟು ಲಾಭವಾಯಿತಾದರೂ ಬಿಜೆಪಿಗೆ ಆಗಲಿಲ್ಲ.

ಹೀಗೆ, 2018ರಲ್ಲಿ ಸರಳ ಬಹುಮತ ಬಾರದಿರಲು ಕಾರಣಗಳನ್ನು ಬಿಜೆಪಿ ನಾಯಕರು ಪಟ್ಟಿ ಮಾಡಿದ್ದಾರೆ. ಈ ಬಾರಿ ಆ ತಪ್ಪುಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಜೆಡಿಎಸ್ ಜತೆಗೆ ಯಾವುದೇ ಕಾರಣಕ್ಕೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ನಾಯಕರು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Karnataka Election | ಹಳೆ ಮೈಸೂರಿನಲ್ಲಿ ಬಿಜೆಪಿ ಅಬ್ಬರಕ್ಕೆ ಬೆದರಿದ ಕಾಂಗ್ರೆಸ್‌-ಜೆಡಿಎಸ್‌?: ಹೌದೆನ್ನುತ್ತವೆ ಘಟನಾವಳಿಗಳು

ಜೆಡಿಎಸ್ ಜತೆಗೆ ಅಂತಿಮ ಹಂತದಲ್ಲಿ ಒಳ ಒಪ್ಪಂದ ಮಾಡಿಕೊಂಡುಬಿಟ್ಟರೆ ತಮಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಅನೇಕ ಸ್ಥಳೀಯ ಮುಖಂಡರು ಬಿಜೆಪಿ ಜತೆಗೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಸ್ಪಷ್ಟ ಸಂದೇಶವನ್ನು ರವಾನೆ ಮಾಡಲು ಬಿಜೆಪಿ ಮುಂದಾಗಿದೆ. ಈ ಬಾರಿ ಜೆಡಿಎಸ್‌ನೊಂದಿಗೆ ನಿಜವಾದ ಸ್ಪರ್ಧೆ ಮಾಡಲಾಗುತ್ತದೆ. ಬೇರೆ ಪಕ್ಷಗಳಿಂದ ನಾಯರು ಬರುವವರಿದ್ದರೆ ಕರೆತನ್ನಿ. ಸಂಪೂರ್ಣ ಶಕ್ತಿ ವ್ಯಯಿಸಿ ಸ್ಪರ್ಧೆ ಮಾಡಿ ಎಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೀಗೆಯೇ ಜೆಡಿಎಸ್ ಜತೆಗೆ ಒಪ್ಪಂದದೊಂದಿಗೆ ಮತ್ತಷ್ಟು ವರ್ಷ ನಡೆದರೆ ಪಕ್ಷವು ಈಗಿನ ಅಸ್ತಿತ್ವವನ್ನೂ ಕಳೆದುಕೊಳ್ಳುತ್ತದೆ. ಹಾಗಾಗಿ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅನೇಕ ಅಚ್ಚರಿಯ ಫಲಿತಾಂಶ ನೀಡುತ್ತದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಚುನಾವಣೆ ಹತ್ತಿರವಾದಂತೆ, ಸಂಪೂರ್ಣ ಚುನಾವಣೆಯ ಸೂತ್ರಧಾರರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ನಡೆ ಹೇಗಿರುತ್ತದೆ ಎನ್ನುವುದರ ಆಧಾರದಲ್ಲಿ ಚುನಾವಣೆ ನಡೆಯುತ್ತದೆ ಎನ್ನುವುದಂತೂ ಸತ್ಯ.

Exit mobile version