ಬೆಂಗಳೂರು: ಇಂದು ಕರ್ನಾಟಕಕ್ಕೆ ದೆಹಲಿಯಿಂದ ಹೈಕಮಾಂಡ್ (BJP High Command) ವೀಕ್ಷಕರು ಬಂದಿದ್ದರು. ರಾಜ್ಯದ ಬೆಳವಣಿಗೆ, ಕರ್ನಾಟಕದ ವಿಧಾನಸಭೆಯಲ್ಲಿ ಅಡ್ಜೆಸ್ಟ್ ಆಗಿದ್ದರ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದೇನೆ. ಎಷ್ಟೋ ವಿಷಯ ಅವರಿಗೆ ಗೊತ್ತಿರಲಿಲ್ಲ. ಏನು ನಡೆದಿದೆ ಅಂತ ಅವರಿಗೆ ಹೇಳಿದ್ದೇನೆ. ರಾಜ್ಯ ಬಿಜೆಪಿ (BJP Karnataka) ಒಂದೇ ಕುಟುಂಬಕ್ಕೆ ಸೀಮಿತ ಆಗಬಾರದು. ಇದನ್ನು ನಾವು ಒಪ್ಪುವುದಿಲ್ಲ ಎಂದು ಹಿಂದು ಫೈರ್‌ಬ್ರಾಂಡ್, ಮಾಜಿ ಸಚಿವ, ಬಿಜೆಪಿ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.
ಕೇಂದ್ರದಿಂದ ಬಿಜೆಪಿ ವೀಕ್ಷಕರಾಗಿ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹಾಗೂ ದುಷ್ಯಂತ್ ಕುಮಾರ್ ಗೌತಮ್ (Dushyant Kumar Gautam) ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನಾನು ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ. ನಾನು ಇವರ ರೀತಿ ಹಲ್ಕ ಅಲ್ಲ. ಅಧ್ಯಕ್ಷ ಬೇಕು, ವಿಪಕ್ಷ ನಾಯಕ ಸ್ಥಾನ ಬೇಕು ಅಂತ ಕೇಳಿಲ್ಲ. ರಾಜ್ಯದ ಅಡ್ಜೆಸ್ಟ್‌ಮೆಂಟ್ ಬಗ್ಗೆ ಹೇಳಿದ್ದೇನೆ ಎಂದು ತಿಳಿಸಿದರು.
ಕೆಲವೇ ಚೇಲಾಗಳ ಮಾತು ಕೇಳಿ ಕೇಂದ್ರ ನಾಯಕರು ತೀರ್ಮಾನ ಮಾಡಬಾರದು. ಕೆಲವರು ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ನಾನು ಅದಕ್ಕೆ ಭಯ ಬೀಳುವುದಿಲ್ಲ. ನಾನು ಎಲ್ಲವನ್ನೂ ಹೇಳಿದ್ದೇನೆ. ವೀಕ್ಷಕರು ನನ್ನ ಹೇಳಿಕೆಯಿಂದ ಖುಷಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನನ್ನನ್ನು ಯಾರೂ ಖರೀದಿ ಮಾಡಲು ಆಗಲ್ಲ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಈ ಬಸನಗೌಡ ಪಾಟೀಲ್ ಯತ್ನಾಳ್‌ನನ್ನು ಖರೀದಿ ಮಾಡೋಕೆ ಆಗುವುದಿಲ್ಲ. ನಿನ್ನೆ ಅವನ ಚೇಲಾ ಒಬ್ಬ ಬಂದಿದ್ದ. ನಾನು ನಾನು ನಿನ್ನಂತಹವರನ್ನು ಖರೀದಿ ಮಾಡ್ತೀನಿ ಅಂತ ಹೇಳಿದೆ. ಇವತ್ತು ಶಾಸಕಾಂಗ ಸಭೆಗೆ ಹೋಗುತ್ತೇನೆ. ಅಲ್ಲೂ ಕೂಡಾ ಧೈರ್ಯವಾಗಿ ಮಾತನಾಡುತ್ತೇನೆ ಎಂದು ಯತ್ನಾಳ್ ಹೇಳಿದರು.
ಪ್ರಧಾನಿ ಮತ್ತೊಮ್ಮೆ ಮೋದಿ ಆಗಲಿ
ನಾವು ಈ ದೇಶದಲ್ಲಿ ಉಳಿಯಬೇಕು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮತ್ತೆ ಬಾರದೇ ಹೋದರೆ ಭಾರತ ಉಳಿಯುವುದಿಲ್ಲ. ಹೀಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ನಾವೆಲ್ಲರೂ ಸೇರಿ ಅದಕ್ಕಾಗಿ ದುಡಿಯಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಇದನ್ನೂ ಓದಿ: Opposition Leader : ಆರ್. ಅಶೋಕ್‌ಗೆ ವಿಪಕ್ಷ ನಾಯಕ ಸ್ಥಾನ ಫಿಕ್ಸ್; ಸಮಾಧಾನಗೊಂಡರೇ ಯತ್ನಾಳ್?
ಪ್ರತಿಪಕ್ಷದ ನಾಯಕ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ಕೊಡಬೇಕು
ಪ್ರತಿಪಕ್ಷದ ನಾಯಕ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡಬೇಕು. ಈ ಜನರು ಊಟ ಹಾಕಿದ್ದಾರೆ. ಈ ಸ್ಥಾನವನ್ನು ಉ.ಕ. ಮಂದಿಗೆ ಕೊಡದೇ ಹೋದರೆ ಜನರೇ ತೀರ್ಮಾನ ಮಾಡುತ್ತಾರೆ. ನನಗೆ ಯಾರ ಭಯ ಇಲ್ಲ. ಉತ್ತರ ಕರ್ನಾಟಕ, ಹಿಂದುತ್ವದ ಹಿನ್ನೆಲೆಯಲ್ಲಿ ನಾನು ಕೇಳುತ್ತೇನೆ. ಶಾಸಕಾಂಗ ಸಭೆಯಲ್ಲಿ ಇದನ್ನು ಪ್ರಶ್ನೆ ಮಾಡುತ್ತೇನೆ. ಪಂಚಮಸಾಲಿಗಳಿಗೆ ಯಾವಾಗಲೂ ಅನ್ಯಾಯ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಬಂದಾಗಿನಿಂದ ಅನ್ಯಾಯ ಆಗಿದೆ. ದಲಿತರಿಗೆ, ಒಕ್ಕಲಿಗರಿಗೆ, ಎಸ್‌ಟಿಗೆ ಮೀಸಲಾತಿ ಕೊಟ್ಟಿರುವ ನಮ್ಮಿಂದ ಪಂಚಮಸಾಲಿಗೆ ಅನ್ಯಾಯ ಆಗಿದೆ. ಈ ಬಗ್ಗೆ ಬೊಮ್ಮಾಯಿ ಜತೆ ಮಾತನಾಡಿದ್ದೇನೆ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಡಬೇಕು ಅಂತ ಮಾತನಾಡಿದ್ದೇವೆ. ಈ ವಿಚಾರದಲ್ಲಿ ನಾವೆಲ್ಲ ಒಂದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.