ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯ (Parliament Election 2024) ಬಗ್ಗೆ ಚರ್ಚೆಗಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santhosh) ಅವರ ನೇತೃತ್ವದಲ್ಲಿ ಗುರುವಾರ ಆಯೋಜಿಸಲಾದ ಮಹತ್ವದ (BJP Meeting) ಸಂಘಟನಾತ್ಮಕ ಸಭೆಯಿಂದಲೂ (Organizational meeting) ಹಲವು ನಾಯಕರು ಅಂತರ ಕಾಪಾಡಿಕೊಳ್ಳುವ ಮೂಲಕ ಸ್ಪಷ್ಟ ಬಂಡಾಯವನ್ನು ಸಾರಿದ್ದಾರೆ. ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್ (ST Somashekhar), ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ (Shivarama Hebbar), ನವಲಗುಂದ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಸಭೆಗೆ ಬಂದಿಲ್ಲ. ಅದಕ್ಕಿಂತಲೂ ಅಚ್ಚರಿ ಮೂಡಿಸಿದ್ದು ಮಾಜಿ ಸಚಿವ ವಿ. ಸೋಮಣ್ಣ (V Somanna) ಅವರ ಅನುಪಸ್ಥಿತಿ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಬಿಎಲ್ ಸಂತೋಷ್ ನೇತೃತ್ವದಲ್ಲಿ ಸಂಘಟನಾತ್ಮಕ ಸಭೆಗೆ ರಾಜ್ಯದ ಎಲ್ಲ ಕಡೆಗಳಿಂದ ಪ್ರಮುಖ ನಾಯಕರು ಆಗಮಿಸಿದ್ದಾರೆ. ಶಾಸಕರು, ಎಂಎಲ್‌ಸಿಗಳು ಮಾಜಿ ಶಾಸಕರು ಈ ಸಭೆಗೆ ಆಹ್ವಾನಿತರಾಗಿದ್ದಾರೆ. ಬೆಳಗಾವಿಯಿಂದ ರಮೇಶ್ ಜಾರಕಿಹೊಳಿ ಟೀಮ್ ಸೇರಿದಂತೆ ಎಲ್ಲರೂ ಬಂದಿದ್ದರು. ಕೆಲವು ಪ್ರಮುಖ ನಾಯಕರು ಬಂದಿಲ್ಲವಾದರೂ ಅವರು ತಮ್ಮ ಗೈರುಹಾಜರಿಗೆ ಕಾರಣಗಳನ್ನು ನೀಡಿದ್ದಾರೆ.
ಕಟೀಲ್, ಬೊಮ್ಮಾಯಿ ಕೂಡಾ ಬಂದಿಲ್ಲ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಣ್ಣಿನ ಆಪರೇಷನ್ ಆಗಿದ್ದು ಈ ಕಾರಣಕ್ಕಾಗಿ ಅವರು ಬಂದಿಲ್ಲ. ದಕ್ಷಿಣ ಕನ್ನಡದಲ್ಲಿ ನಾರಾಯಣಗುರು ಜಯಂತಿ ಇರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗೈರುಹಾಜರಾಗಿದ್ದಾರೆ. ಶಿವಮೊಗ್ಗದಿಂದ ಮೊದಲ ವಿಮಾನ ಹಾರಾಟ ಉದ್ಘಾಟನೆಯಾಗಲಿರುವುದರಿಂದ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ, ಬಿವೈ ರಾಘವೇಂದ್ರ ಸೇರಿದಂತೆ ಶಿವಮೊಗ್ಗ ಜನಪ್ರತಿನಿಧಿಗಳು ಸಭೆಗೆ ಬಂದಿಲ್ಲ.
ಸೋಮಶೇಖರ್, ಹೆಬ್ಬಾರ್ ನಿರೀಕ್ಷಿತ
ಶಾಸಕ ಸೋಮಶೇಖರ್ ಅವರು ಕಳೆದ ಹಲವು ವಾರಗಳಿಂದ ಬಿಜೆಪಿಯ ಯಾವ ಸಭೆಗಲ್ಲೂ ಭಾಗಿಯಾಗುತ್ತಿಲ್ಲ. ಅವರು ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗಲೂ ಹೋಗಿರಲಿಲ್ಲ. ಹೀಗಾಗಿ ಅವರು ಬಿಜೆಪಿಯಿಂದ ಮಾನಸಿಕವಾಗಿ ದೂರವಾಗಿರುವುದು ಸ್ಪಷ್ಟವಾಗಿದೆ. ಇದೇ ವೇಳೆ ಶಿವರಾಮ್ ಹೆಬ್ಬಾರ್ ಅವರು ಕೂಡಾ ಬಿಜೆಪಿಗಿಂತ ಕಾಂಗ್ರೆಸ್ ನಾಯಕರ ಜತೆಗೇ ಒಡನಾಟ ಹೆಚ್ಚಿಸಿಕೊಂಡಿದ್ದಾರೆ. ಮೋದಿ ಅವರು ಆಗಮಿಸಿದ ದಿನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಮಾತುಕತೆಗೆ ತೆರಳಿದ್ದರು. ಶಂಕರ ಪಾಟೀಲ್ ಮುನೇನಕೊಪ್ಪ ಅವರು ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲದಂತೆ ಮಾತನಾಡುತ್ತಿದ್ದಾರೆ. ಆದರೆ, ಈ ಸಭೆಗೆ ಬಾರದೆ ಇರುವುದು ಅವರು ಬಿಜೆಪಿಯಿಂದ ಹೊರಹೋಗುವ ಸಾಧ್ಯತೆ ಕಂಡುಬರುತ್ತಿದೆ.
ಅಚ್ಚರಿ ಮೂಡಿಸಿದ ವಿ. ಸೋಮಣ್ಣ
ಬಿಜೆಪಿ ನಾಯಕತ್ವವನ್ನು ತಮ್ಮ ಹೇಳಿಕೆಗಳಿಂದ ಆಗಾಗ ಇರಸುಮುರಸಿಗೆ ಸಿಲುಕಿಸುವ ಮಾಜಿ ಸಚಿವ ವಿ. ಸೋಮಣ್ಣ ಅವರು ಸಭೆಗೆ ಗೈರುಹಾಜರಾಗಿರುವುದು ಅಚ್ಚರಿ ಮೂಡಿಸಿದೆ. ಅವರಿಗೆ ಪಕ್ಷದ ನಡೆಗಳು, ನಾಯಕರ ನಿಲುವುಗಳ ಬಗ್ಗೆ ತೀವ್ರವಾದ ಅಸಮಾಧಾನ ಇರುವುದನ್ನು ಅವರು ಸ್ಪಷ್ಟವಾಗಿಯೇ ಹೇಳಿದ್ದಾರೆ. ಆದರೆ ಪಕ್ಷ ಬಿಡುವವರ ಲಿಸ್ಟ್‌ನಲ್ಲಿ ಅವರಿಲ್ಲ. ಆದರೂ ಸಭೆಗೆ ಬಂದಿಲ್ಲ ಎನ್ನುವುದು ಪಕ್ಷದಲ್ಲಿ ಅಚ್ಚರಿ ಮೂಡಿಸಿದೆ.
ರೇಣುಕಾಚಾರ್ಯ ಬರಲ್ಲ ಎಂದು ಮೊದಲೇ ಹೇಳಿದ್ದರು
ಹೊನ್ನಾಳಿಯ ಮಾಜಿ ಶಾಸಕ ಮತ್ತು ಇತ್ತೀಚೆಗಷ್ಟೇ ಕರ್ನಾಟಕ ಬಿಜೆಪಿ ಮುಕ್ತವಾಗುವ ಹಾದಿಯಲ್ಲಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದ ಎಂ.ಪಿ. ರೇಣುಕಾಚಾರ್ಯ ಅವರೂ ಸಭೆಗೆ ಬಂದಿಲ್ಲ. ತಾನು ಯಾಕೆ ಸಭೆಯಲ್ಲಿ ಭಾಗವಹಿಸಿಲ್ಲ ಎನ್ನುವುದನ್ನು ಅವರೇ ಸ್ಪಷ್ಟವಾಗಿ ಹೇಳಿದ್ದಾರೆ.
ʻʻನನಗೆ ಪಕ್ಷದ ವತಿಯಿಂದ ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ನಾನು ಹೋಗಿಲ್ಲ. ಆ ನೋಟಿಸ್ ವಾಪಸ್ಸು ಪಡೆಯಬೇಕು. ಅಲ್ಲಿವರೆಗೆ ಹೋಗುವುದಿಲ್ಲ. ನಾನು ಏನ್ ಹೇಳಬೇಕೊ ಅದನ್ನ ಹೇಳಿದ್ದೇನೆ. ಇದರಿಂದ ನನಗೆ ವೈಯುಕ್ತಿಕವಾಗಿ ಯಾವುದೇ ಲಾಭನೂ ಇಲ್ಲ, ನಷ್ಟವೂ ಇಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತರ ಅಪೇಕ್ಷೆಯಂತೆ ಇರುವುದನ್ನು ನೇರವಾಗಿ ಹೇಳಿದ್ದೀನಿ. ಯಡಿಯೂರಪ್ಪ ಅವರಂತ ನಾಯಕರನ್ನ ಕಡೆಗಣಿಸಿದ್ದಾರೆ. ಇದು ಬಿಜೆಪಿಗೆ ಶಾಪವಾಗಿದೆʼʼ ಎಂದು ಅವರು ಬೆಂಗಳೂರಿನಲ್ಲಿ ಗುರುವಾರ ಹೇಳಿದರು.
ʻʻಪಕ್ಷದಲ್ಲಿ ವರ್ಚಸ್ಸು ಇರೋವವರನ್ನು ಬೆಳೆಯುವುದಕ್ಕೆ ಬಿಡುತ್ತಿಲ್ಲ. ವಿಜಯೇಂದ್ರ ಅಂತವರನ್ನು ಮೂಲೆಗುಂಪು ಮಾಡ್ತಿದ್ದಾರೆ. ನಾನು ನೇರವಾಗಿ ಮಾತನಾಡಿದ್ದೇನೆ. ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ನಾನು ಪಕ್ಷ, ಮೋದಿ, ನಡ್ಡಾ ಅಮಿತ್ ಶಾ ವಿರುದ್ದ ಮಾತಾಡಿಲ್ಲ. ನಾನು ಮಾತಾಡಿರೋದು ಕೆಲ ವ್ಯಕ್ತಿಗಳ ವಿರುದ್ಧ. ಅವರ ದೌರ್ಬಲ್ಯವನ್ನು ನೇರವಾಗಿ ಖಂಡಿಸಿದ್ದೇನೆʼʼ ಎಂದು ಹೇಳಿದ್ದಾರೆ. ಹಾಗಂತ ನಾನೇನೂ ಪಕ್ಷ ಬಿಡುವುದಿಲ್ಲ ಎಂದಿದ್ದಾರೆ ರೇಣುಕಾಚಾರ್ಯ.
ಇದನ್ನೂ ಓದಿ: ST Somashekhar: ಎಸ್ ಟಿ ಸೋಮಶೇಖರ್ ಬಿಜೆಪಿಗೆ ‘ಕೈ’ ಕೊಡೋದು ಪಕ್ಕಾ? ಡಿಸಿಎಂ ಜತೆ ಸಭೆಯಲ್ಲಿ ಭಾಗಿ!