ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದಾರೆ. ಅದರಲ್ಲಿ ಅಧಿಕೃತ ನಿಲುವು (Official stand) ಯಾವುದು ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆಗಳು ಅವರ ಪಕ್ಷದ ಅಧಿಕೃತ ನಿಲುವುಗಳೇ ಎನ್ನುವುದನ್ನು ಮೊದಲು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ (Lahar singh saroya) ಆಗ್ರಹಿಸಿದ್ದಾರೆ.
ಬಿಜೆಪಿ ಸಂಸತ್ ಸದಸ್ಯರಾದ ಲಹರ್ ಸಿಂಗ್ ಸಿರೋಯಾ ಅವರು, ಸನಾತನ ಧರ್ಮ, ಭಾರತ ಇತ್ಯಾದಿ ವಿಷಯಗಳ ಬಗ್ಗೆ ಕಾಂಗ್ರೆಸ್ ಪಕ್ಷದೊಳಗಿನ ವಿಭಿನ್ನ ಹೇಳಿಕೆಗಳ ಕುರಿತು ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಲಹರ್ ಸಿಂಗ್, ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ‘ಸನಾತನ ಧರ್ಮ’ದಿಂದ ‘ಭಾರತ’ದವರೆಗೆ ಎಲ್ಲ ವಿಷಯಗಳ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅವರ ಅಭಿಪ್ರಾಯಗಳನ್ನು ಅವರ ಪಕ್ಷದ ಅಧಿಕೃತ ನಿಲುವುಗಳು ಎಂದೇ ಜನರು ತಿಳಿದು ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗೆ ಹಲವರು ಬೇರೆ ಬೇರೆ ಧ್ವನಿಗಳಲ್ಲಿ ಮಾತನಾಡುತ್ತಿರುವುದರಿಂದ ಈ ವಿಷಯಗಳ ಬಗ್ಗೆ ಕಾಂಗ್ರೆಸ್ ತನ್ನ ಅಧಿಕೃತ ನಿಲುವನ್ನು ಮೊದಲು ತಿಳಿಸಲಿ ಎಂದಿರುವ ಅವರು, ಕಾಂಗ್ರೆಸ್ ಪಕ್ಷ ಏನನ್ನು ಯೋಚಿಸುತ್ತದೆ ಎಂದು ತಿಳಿಯಲು ರಾಹುಲ್ ಗಾಂಧಿ ಅವರು ತಮ್ಮ ಯುರೋಪ್ ಅಧ್ಯಯನದ ನಂತರ ಹಿಂತಿರುಗುವುದನ್ನು ಕಾಯಬೇಕೇ ಎಂದು ಟೀಕಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಟ್ವೀಟ್‌ಗಳಲ್ಲಿ ಹೇಳಿದ್ದೇನು?
ಸನಾತನ ಧರ್ಮಕ್ಕೆ ಸಂಬಂಧಿಸಿ ಡಿಎಂಕೆ ನಾಯಕ, ಸಚಿವ ಉದಯನಿಧಿ ಸ್ಟಾಲಿನ್ ಅವರು ನೀಡಿದ ಹೇಳಿಕೆ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಜಟಾಪಟಿ ನಡೆದಿತ್ತು.
ಬಿ.ಎಲ್. ಸಂತೋಷ್ ಅವರು ಹೊಟ್ಟೆ ನೋವು ಎಂದರೆ ತಲೆಯನ್ನು ಕಡಿಯಬೇಕೇ ಎಂದು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, ಬಿ.ಎಲ್. ಸಂತೋಷ್ ಅವರು ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.
“ದಯವಿಲ್ಲದ ಧರ್ಮವಾವುದಯ್ಯಾ ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.” ಎಂದು ಟ್ವೀಟ್ ಆರಂಭಿಸಿರುವ ಅವರು, ಬಿ.ಎಲ್.ಸಂತೋಷ್ ಅವರೇ ಟ್ರೀಟ್ ಮೆಂಟ್ ಮಾಡಬೇಕಾದ ಒಂದು ಸೋಂಕು ಇರುವುದನ್ನು ಒಪ್ಪಿಕೊಂಡಿರುವುದು ಸಂತೋಷದ ಸಂಗತಿ ಎಂದಿದ್ದಾರೆ.
ಕಳೆದ ಸಾವಿರಾರು ವರ್ಷಗಳಿಂದ ಹಲವಾರು ಸೋಂಕುಗಳು ಇದ್ದವು. ಈಗಲೂ ನಮ್ಮ ನಡುವೆ ಅವುಗಳು ಇವೆ. ಮನುಷ್ಯರ ನಡುವೆ ತಾರತಮ್ಯ ಮಾಡುವ ಸೋಂಕು, ಮನುಷ್ಯರಾಗಿ ಗೌರವವನು ನೀಡದ ಸೋಂಕು ಎಂದು ಪ್ರಿಯಾಂಕ್ ಹೇಳಿದ್ದಾರೆ.
ನಾನು ನಿಮ್ಮಷ್ಟು ಬುದ್ಧಿವಂತನಲ್ಲ.. ಹೀಗಾಗ ಕೆಲವು ವಿಚಾರಗಳಿಗೆ ಸಂಬಂಧಿಸಿ ನನಗೆ ಜ್ಞಾನ ಕೊಡಿ ಎಂದು ಕೇಳಿರುವ ಪ್ರಿಯಾಂಕ್ ಖರ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
- ಸಮಾಜದಲ್ಲಿ ಈ ನಿಯಮಗಳನ್ನು ಮಾಡಿದವರು ಯಾರು?
- ಕೆಲವರಿಗೆ ಇತರರಿಗೆ ಹೆಚ್ಚು ಹಕ್ಕುದಾರಿಕೆ ಸಿಗಲು ಕಾರಣವಾಗಿದ್ದು ಏನು?
- ನಮ್ಮನ್ನು ಜಾತಿಯ ಆಧಾರದಲ್ಲಿ ವಿಭಜನೆ ಮಾಡಿದವರು ಯಾರು?
- ಕೆಲವು ಮನುಷ್ಯರು ಯಾಕೆ ಅಸ್ಪೃಶ್ಯರು?
- ಅವರು ಇವತ್ತಿಗೂ ದೇವಸ್ಥಾನ ಪ್ರವೇಶಿಸುವಂತಿಲ್ಲ ಯಾಕೆ?
- ಮಹಿಳೆಯರನ್ನು ಕೀಳಾಗಿ ಕಾಣುವ ಪದ್ಧತಿಗಳನ್ನು ಆರಂಭ ಮಾಡಿದ್ದು ಯಾರು?
- ಅಸಮಾನತೆ ಮತ್ತು ದಮನಕಾರಿ ನೀತಿಗೆ ಕಾರಣವಾದ ಸಾಮಾಜಿಕ ಸ್ವರೂಪ ಆಧರಿತ ಜಾತಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಇಲ್ಲಿ ಯಾರೂ ತಲೆ ಕಡಿಯಿರಿ ಎಂದು ಹೇಳುತ್ತಿಲ್ಲ. ಈ ಸೋಂಕುಗಳನ್ನು ಸಮಾನ ಹಕ್ಕು ಮತ್ತು ಗೌರವಗಳ ಮೂಲಕ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಹೇಳುತ್ತಿದ್ದಾರೆ ಅಷ್ಟೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿರುವುದು ಸಂವಿಧಾನ ಮತ್ತು ನೀವು ಹಾಗೂ ನಿಮ್ಮ ಸಂಘಟನೆ ಅದಕ್ಕೆ ವಿರುದ್ಧವಾಗಿದ್ದೀರಿ.
ಸಂತೋಷ್ ಜಿ ಅವರೇ ನೀವು ಕರ್ನಾಟಕದವರಿದ್ದೀರಿ. ದಯವಿಟ್ಟು ಗುರು ಬಸವಣ್ಣರ ಸಂದೇಶವನ್ನು ಪ್ರಚಾರ ಮಾಡಿ. ಇದರಿಂದ ನಮಗೆ ಸಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. “ಇವನಾರವ, ಇವನಾರವ, ಇವನಾರವ ನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ನೆಂದೆನಿಸಯ್ಯಾ ಕೂಡಲ ಸಂಗಮದೇವ ನಿಮ್ಮ ಮಹಾ ಮನೆಯ ಮಗನೆಂದೆನಿಸಯ್ಯಾ.”
“ದಯವಿಲ್ಲದ ಧರ್ಮವಾವುದಯ್ಯಾ ?⁰ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ⁰ದಯವೇ ಧರ್ಮದ ಮೂಲವಯ್ಯಾ⁰ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.”
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 5, 2023
So glad that @blsanthosh avare agrees that there is an infection that needs treatment.
There have been many infections for over thousands of years & is still prevalent… https://t.co/tMxJK6kOoc
ಇದನ್ನೂ ಓದಿ : Udhayanidhi Stalin: ಯೋಗಿ ರಾಜ್ಯ ಉತ್ತರ ಪ್ರದೇಶದಲ್ಲಿ ಉದಯನಿಧಿ, ಪ್ರಿಯಾಂಕ್ ಖರ್ಗೆ ವಿರುದ್ಧ ಬಿತ್ತು ಕೇಸ್!
ಇಂಡಿಯಾ ಮತ್ತು ಭಾರತ್ ಬಗ್ಗೆ ಪ್ರಿಯಾಂಕ್ ಹೇಳಿದ್ದೇನು?
“ಗೇಮ್ ಚೇಂಜರ್ಸ್” ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೇವಲ “ನೇಮ್ ಚೇಂಜರ್ಸ್” ಆಗಿದೆ! 2014ರ ಮೊದಲು ಅಮೇರಿಕಾ, ಬ್ರಿಟನ್, ರಷ್ಯಾಗಳಂತಹ ಮುಂದುವರೆದ ದೇಶಗಳೊಂದಿಗೆ ಭಾರತದ ಸ್ಪರ್ಧೆ ಇತ್ತು. ಈಗ ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಹೆಸರಲ್ಲಿ ಜಾತಿ ಜನಾಂಗಗಳ ನಡುವೆ ದ್ವೇಷ ಬಿತ್ತಿ “ಮಣಿಪುರ್ ಮಾಡೆಲ್” ಸೃಷ್ಟಿಸಿದ್ದಾರೆ. ಯಕಶ್ಚಿತ್ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳೊಂದಿಗೆ ಭಾರತವನ್ನು ತುಲನೆ ಮಾಡಿಕೊಂಡು ಬೆನ್ನುತಟ್ಟಿಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿರುವ ಬಿಜೆಪಿಯಿಂದ ಹೆಸರುಗಳ ಬದಲಾವಣೆಗಳನ್ನಲ್ಲದೆ ಬೇರೆ ಇನ್ನೇನು ನಿರೀಕ್ಷಿಸಲು ಸಾಧ್ಯ? ಸಮರ್ಥ ಆಡಳಿತಗಾರರು ಭಾರತದಲ್ಲಿ ಬದಲಾವಣೆ ತರುತ್ತಾರೆಯೇ ಹೊರತು ಭಾರತದ ಹೆಸರಿನ ಬದಲಾವಣೆಯನ್ನಲ್ಲ! ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.
ಇವೆಲ್ಲವೂ ಪ್ರಿಯಾಂಕ್ ಅವರ ವೈಯಕ್ತಿಕ ಹೇಳಿಕೆಗಳೇ? ಅಥವಾ ಕಾಂಗ್ರೆಸ್‌ನ ಅಧಿಕೃತ ಹೇಳಿಕೆಗಳೇ ಎನ್ನುವುದು ಲಹರ್ ಸಿಂಗ್ ಅವರ ಪ್ರಶ್ನೆ.