Site icon Vistara News

BJP Politics : ಡಿವಿಎಸ್‌ ಬೆನ್ನಿಗೇ ಶ್ರೀನಿವಾಸ್‌ ಪ್ರಸಾದ್‌ ಕೂಡಾ ರಾಜಕೀಯ ನಿವೃತ್ತಿ ಘೋಷಣೆ

V Shrinivas prasad to take retirement from politics

ಮೈಸೂರು: ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದ ಗೌಡ (DV Sadananda Gowda) ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ (political Retirement) ಘೋಷಣೆ ಮಾಡಿದ ಬೆನ್ನಿಗೇ ಮತ್ತೊಬ್ಬ ಸಂಸದರು ಚುನಾವಣಾ ನಿವೃತ್ತಿ ಘೋಷಣೆಯ ದಿನಾಂಕ ಪ್ರಕಟಿಸಿದ್ದಾರೆ. ಚಾಮರಾಜನಗರ ಕ್ಷೇತ್ರದ (Chamarajanagara MP) ಸಂಸದರಾಗಿರುವ ವಿ. ಶ್ರೀನಿವಾಸ್‌ ಪ್ರಸಾದ್‌ (V Shrinivas Prasad) ಅವರು ತಾವು 2024ರ ಮಾರ್ಚ್‌ 17ರಂದು ದೊಡ್ಡ ಸಮಾವೇಶ ಏರ್ಪಡಿಸಿ ಅಂದೇ ನಿವೃತ್ತಿ ಘೋಷಿಸುವುದಾಗಿ ಮೈಸೂರಿನಲ್ಲಿ ತಿಳಿಸಿದರು. 2024ರ ಮಾರ್ಚ್‌ 17ಕ್ಕೆ ವಿ. ಶ್ರೀನಿವಾಸ್‌ ಪ್ರಸಾದ್‌ ಅವರು ರಾಜಕೀಯ ರಂಗ ಪ್ರವೇಶಿಸಿ ಐವತ್ತು ವರ್ಷಗಳಾಗಲಿವೆ (BJP Politics). ಅಂದು ದೊಡ್ಡ ಕಾರ್ಯಕ್ರಮವೊಂದು ಆಯೋಜನೆಯಾಗಲಿದೆ.

ವಿ. ಶ್ರೀನಿವಾಸ್‌ ಪ್ರಸಾದ್‌ ಅವರು ಇದು ತನ್ನ ಕೊನೆಯ ಚುನಾವಣೆ, ಇನ್ನು ಮುಂದೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ರಾಜಕೀಯ ಜೀವನದ ಸುವರ್ಣ ವರ್ಷಾಚರಣೆ ಕಾರ್ಯಕ್ರಮದ ಮೂಲಕ ನಿವೃತ್ತಿ ಪ್ರಕಟಿಸುವುದಾಗಿ ಅವರು ತಿಳಿಸಿದ್ದರು. ಇದೀಗ ಡಿ.ವಿ. ಸದಾನಂದ ಗೌಡರ ನಿವೃತ್ತಿ ಘೋಷಣೆಗೆ ಅವರು ಪ್ರತಿಕ್ರಿಯಿಸಿ ದಿನಾಂಕವನ್ನು ಮರು ಪ್ರಕಟಿಸಿದರು.

ಮಾರ್ಚ್ 17ಕ್ಕೆ ನಾನು ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ. ಮಾರ್ಚ್ 17 ರ ನಂತರ ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ. ಯಾವ ಪಕ್ಷಕ್ಕು ಸಲಹೆ ಸೂಚನೆ ನೀಡುವುದಿಲ್ಲ. ರಾಜಕೀಯದ ಎಲ್ಲಾ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿಯುತ್ತೇನೆ ಎಂದು ಶ್ರೀನಿವಾಸ್‌ ಪ್ರಸಾದ್‌ ಸ್ಪಷ್ಟವಾಗಿ ಹೇಳಿದರು.

ತುಮಕೂರು ಸಂಸದ ಬಸವರಾಜ್‌, ಚಿಕ್ಕಬಳ್ಳಾಪುರ ಸಂಸದ ಬಿ.ಎನ್‌. ಬಚ್ಚೇಗೌಡ ಅವರು ಕೂಡಾ ಈಗಾಗಲೇ ಚುನಾವಣಾ ರಾಜಕೀಯ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ ಇನ್ನೂ ಹಲವು ಸಂಸದರು ಇದ್ದಾರೆ. ಒಟ್ಟಾರೆಯಾಗಿ ಕಳೆದ ಚುನಾವಣೆಯಲ್ಲಿ ಗೆದ್ದಿದ್ದ 25 ಸಂಸದರಲ್ಲಿ 10ರಷ್ಟು ಮಂದಿ ಚುನಾವಣಾ ನಿವೃತ್ತಿ ಘೋಷಿಸುವ ಸಾಧ್ಯತೆ ಕಾಣಿಸುತ್ತಿದೆ.

ವಿಜಯೇಂದ್ರ ಮುಂದೆ ಬೆಟ್ಟದಂತ ಸವಾಲಿದೆ

ಇದೇ ವೇಳೆ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿ. ಶ್ರೀನಿವಾಸ್‌ ಪ್ರಸಾದ್‌ ಅವರು, ʻʻ ಬಿಜೆಪಿ ಹೈಕಮಾಂಡ್ ಕೊನೆಗೂ ಗಜಪ್ರಸವ ಮಾಡಿದೆ. ಇನ್ನು ವಿರೋಧ ಪಕ್ಷದ ನಾಯಕ ಸ್ಥಾನ ಆಯ್ಕೆ ಮಾಡಿ ಗಜೇಂದ್ರ ಮೋಕ್ಷ ಮಾಡಲಿʼʼ ಎಂದು ಹೇಳಿದರು.

ʻʻವಿಜಯೇಂದ್ರ ಅವರ ಮುಂದೆ ಬೆಟ್ಟದಂತ ಸವಾಲಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಬಿರುಸಿನಲ್ಲಿ ಓಡುತ್ತಿದೆ. ಅದನ್ನೆಲ್ಲ ತಡೆಯುವ ರೀತಿಯಲ್ಲಿ ಪಕ್ಷ ಸಂಘಟಿಸ ಬೇಕಿದೆʼʼ ಎಂದು ಹೇಳಿದರು.

ಬಿವೈ ವಿಜಯೇಂದ್ರ ಆಯ್ಕೆಯನ್ನು ಕುಟುಂಬ ರಾಜಕಾರಣ ಎಂದು ಹೇಳುವಂತಿಲ್ಲ. ಇದರಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆ ಇಲ್ಲ. ದೇವೇಗೌಡರು, ಸಿದ್ದರಾಮಯ್ಯ ಎಲ್ಲರೂ ಕುಟುಂಬ ರಾಜಕಾರಣ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರು ರಾಜಕಾರಣ ಮಾಡುತ್ತಾರೆ. ಆದರೆ ಎಲ್ಲರೂ ಒಳ್ಳೆಯ ರಾಜಕಾರಣ ಮಾಡಲಿ ಎಂದು ಹಾರೈಸೂತ್ತೇನೆ ಎಂದು ಹೇಳಿದ ಅವರು, ಇದರಿಂದ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗುತ್ತೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.

Exit mobile version