ಬೆಂಗಳೂರು: ಕರ್ನಾಟಕದ ಸುಮಾರು 40-45 ಶಾಸಕರು ನನ್ನ ಜತೆಗೇ ಸಂಪರ್ಕದಲ್ಲಿದ್ದಾರೆ (40-45 MLAs are in touch with me). ದೆಹಲಿಯ ನಾಯಕರು ಒಪ್ಪಿಗೆ ಕೊಟ್ಟರೆ ನನಗೆ ಒಂದು ದಿನ ಕೆಲಸ: ಹೀಗೆಂದು ಹೇಳಿದ್ದಾರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santhosh). ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿಯ ಸಂಘಟನಾ ಸಭೆಯಲ್ಲಿ (Organizational meeting) ಸಮಾರೋಪ ಭಾಷಣ ಮಾಡಿದ ಅವರು ಬಿಜೆಪಿಯಿಂದ ಕೆಲವರು ಕಾಂಗ್ರೆಸ್‌ನ ಆಪರೇಷನ್‌ಗೆ ಒಳಗಾಗುವ ಸಾಧ್ಯತೆಗಳ ಬಗ್ಗೆಯೂ ಮಾತನಾಡಿದರು.
ನಮ್ಮಲ್ಲಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ ಎಂದು ಹೇಳುವ ಮೂಲಕ ಪಕ್ಷದಲ್ಲಿ ಧೈರ್ಯ ತುಂಬುವ ಯತ್ನ ಮಾಡಿದ ಸಂತೋಷ್ ಅವರು, ನಮ್ಮ ಜತೆಗೆ ಬಂದವರನ್ನು ನಾವೇ ಬಾಂಬೇ ಬಾಯ್ಸ್ ಅಂತ ಹೇಳುವುದು ಬೇಡ. ಕಷ್ಟ ಕಾಲದಲ್ಲಿ ನಮ್ಮ ಜೊತೆಗೆ ಬಂದಿದ್ದಾರೆ. ಅವರು ಹೋಗುತ್ತಾರೆ ಅಂತ ನಾವೇ ಹೇಳುವುದು ಸರಿಯಲ್ಲ. ಹಾಗಂತ ಹೋಗುವವರ ಬಗ್ಗೆ ಚಿಂತೆ ಬೇಡ ಎಂದು ಹೇಳಿದರು ಸಂತೋಷ್.
ನಮ್ಮ ಪಕ್ಷದಿಂದ 10 ಜನ ಹೋದರೂ ಅದಕ್ಕೆ ಸಮನಾದ ಒಬ್ಬರನ್ನು ಕರೆತರಬಹುದು. ನನ್ನ ಜೊತೆಯೇ 40-45 ಮಂದಿ ಸಂಪರ್ಕದಲ್ಲಿ ಇದ್ದಾರೆ. ಹೈಕಮಾಂಡ್ ನಾಯಕರು ಒಪ್ಪಿದರೆ ನನಗೆ ಒಂದು ದಿನದ ಕೆಲಸ. ಆದರೆ ನಮಗೆ ಈಗ ಅಗತ್ಯವಿಲ್ಲ. ನಾವು ಈಗ ಸರ್ಕಾರ ಮಾಡಬೇಕಾಗಿಲ್ಲ ಎಂದು ಸಂತೋಷ್ ಹೇಳಿದರು.
ವಿಪಕ್ಷ ನಾಯಕ, ಅಧ್ಯಕ್ಷ ಸ್ಥಾನ ಚರ್ಚೆ ಬೇಡ: ಸಂತೋಷ್ ಖಡಕ್ ಉತ್ತರ
ಸಭೆಯಲ್ಲಿ ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆಯಾಗದಿರುವುದು, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿನ ವಿಳಂಬವನ್ನೂ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ, ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಚರ್ಚೆ ಬದಿಗಿಟ್ಟು ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿ ಎಂದು ಶಾಸಕರು, ಸಂಸದರು, ಕಾರ್ಯಕರ್ತರಿಗೆ ಸಂತೋಷ್ ಅವರು ಖಡಕ್ ಸಂದೇಶ ನೀಡಿದ್ದಾರೆ.
ʻʻರಾಜ್ಯ ಅಧ್ಯಕ್ಷ, ವಿಪಕ್ಷ ನಾಯಕ ಆಯ್ಕೆ ತಡವಾಗಿದೆ ಎನ್ನುವುದು ಗೊತ್ತು. ಸಂಘಟನಾ ಕಾರ್ಯದರ್ಶಿ ಆಗಿ ನನಗೆ ಹೆಚ್ಚು ಅರಿವಿದೆ. ನೇಮಕ ತಡವಾಗಿದೆ, ನೇಮಕ ಆಗುತ್ತದೆ. ನೇಮಕ ಆಗಿಲ್ಲ ಎನ್ನುವುದನ್ನೇ ದೊಡ್ಡದು ಮಾಡಿ ಚರ್ಚಿಸುವ ಅಗತ್ಯ ಏನಿದೆ? ಮನೆಯಲ್ಲಿ ಮದುವೆ ಆಗದ ಮಗಳು ಇದ್ದರೆ ಹೊರಗೆ ಹಾಕೋಕೆ ಆಗುತ್ತ? ಕೆಲಸ ಸಿಗದ ಮಗ ಇದ್ದರೆ ಮನೆಯಿಂದ ಹೊರಗೆ ಹಾಕ್ತೀರ? ತಡವಾಗಿದೆ ಎನ್ನುವುದು ಎಷ್ಟು ಸತ್ಯವೋ ನೇಮಕ ಆಗುತ್ತದೆ ಎನ್ನುವುದೂ ಅಷ್ಟೇ ಸತ್ಯ.ʼʼ ಎಂದು ಸಂತೋಷ್ ಕುಟುಕುವಂತೆ ಹೇಳಿದರು.
ʻʻಈ ಹಿಂದೆ ಪಕ್ಷ ಪೂರ್ಣ ನೆಲಸಮವಾಗುತ್ತದೆ ಎಂದಿದ್ದರು. ಆಗ 40 ಸ್ಥಾನ ಗೆದ್ದೆವು, ಈಗ 60 ಸ್ಥಾನ ಗೆದ್ದಿದ್ದೇವೆ. ಈಗ ವಿಪಕ್ಷವಾಗಿ ಇನ್ನಷ್ಟು ಶಕ್ತಿಯುತವಾಗಿದ್ದೇವೆʼʼ ಎಂದು ಸಂತೋಷ್ ನುಡಿದರು.
ಸೆಪ್ಟೆಂಬರ್ 6ರಿಂದ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ
ʻʻಸೆಪ್ಟೆಂಬರ್ 6ರಿಂದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟಿಸಲು ಸೂಚನೆ ನೀಡಲಾಯಿತು. ಬೂತ್ ಗಳನ್ನು ಸಂಘಟಿಸಿ ಬಲಗೊಳಿಸಲು ನಾಯಕರಿಗೆ ಟಾಸ್ಕ್ ಕೊಡಲಾಗಿದೆʼʼ ಎಂದು ಪಕ್ಷದ ಪದಾಧಿಕಾರಿ ಮಹೇಶ್ ಅವರು ಸಭೆಯ ಬಳಿಕ ತಿಳಿಸಿದರು.
ಮೋದಿ ಜನ್ಮದಿನದಿಂದ ಸೇವಾ ಪಾಕ್ಷಿಕ್ ಆಚರಣೆ
ಸೆ.17ರ ನರೇಂದ್ರ ಮೋದಿ ಜನ್ಮದಿನದಿಂದ ಅಕ್ಟೋಬರ್ 2ರ ಗಾಂಧಿ ಜಯಂತಿವರೆಗೆ ಸೇವಾ ಪಾಕ್ಷಿಕ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಮಹೇಶ್ ತಿಳಿಸಿದರು.